ಮಂಗಳವಾರ, ಮಾರ್ಚ್ 2, 2021
19 °C
ಜಿಎಸ್‌ಎಸ್‌, ಅನಂತಮೂರ್ತಿ ಅಂತ್ಯಕ್ರಿಯೆ ಕಟ್ಟೆ ಬಳಿ ಸ್ವಚ್ಛತೆ

ಕಲಾಗ್ರಾಮದಲ್ಲಿ ಶ್ರಮದಾನ ನಡೆಸಿದ ಸಾಹಿತಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಸಾಹಿತಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಮಂಗಳವಾರ ಶ್ರಮದಾನ ನಡೆಸಿದರು. ಈ ವೇಳೆ, ಯು.ಆರ್. ಅನಂತಮೂರ್ತಿ ಮತ್ತು ಜಿ.ಎಸ್. ಶಿವರುದ್ರಪ್ಪ ಅವರ ಅಂತ್ಯಸಂಸ್ಕಾರ ನಡೆದ ಕಟ್ಟೆಯ ಬಳಿ ಸ್ವಚ್ಛ ಮಾಡಿದರು.

ಯು.ಆರ್. ಅನಂತಮೂರ್ತಿ ಮತ್ತು ಜಿ.ಎಸ್‌. ಶಿವರುದ್ರಪ್ಪ ಅವರ ಅಂತ್ಯಕ್ರಿಯೆ ನಡೆದ ಸ್ಥಳವು ರಾಷ್ಟ್ರೀಯ ನಾಟಕ ಶಾಲೆಗೆ (ಎನ್‌ಎಸ್‌ಡಿ) ಸೇರಿದ್ದು, ಅಲ್ಲಿ ಕಟ್ಟೆಗಳನ್ನು ಕಟ್ಟಲಾಗಿತ್ತು. ನಿರ್ವಹಣೆ ಇಲ್ಲದ ಪರಿಣಾಮ ಅಲ್ಲಿ ಕಸದ ರಾಶಿಯ ಜತೆಗೆ ಗಿಡಗಂಟಿಗಳು ಬೆಳೆದಿದ್ದವು.

ಅದನ್ನು ಸ್ವಚ್ಛಗೊಳಿಸಲು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12 ಗಂಟೆಯವರೆಗೆ ನೂರಾರು ಮಂದಿ ಶ್ರಮದಾನ ನಡೆಸಿದರು. ಕಟ್ಟೆಯ ಸುತ್ತಲಿನ ಗಿಡಗಳನ್ನು ತೆರವುಗೊಳಿಸಿದ ಅವರು, ಅಲ್ಲಿ ನೇರಳೆ ಗಿಡಗಳನ್ನು ನೆಟ್ಟರು.

ಬಳಿಕ ಅಲ್ಲಿಯೇ ಗೀತಗಾಯನ ಹಾಗೂ ಗೀತಗೋಷ್ಠಿ ನಡೆಸಿದರು. ಇದೇ ರೀತಿ ಅಲ್ಲಿ ತಿಂಗಳಿಗೊಂದು ಕಾರ್ಯಕ್ರಮ ನಡೆಸಲು ಹಾಗೂ ಫಲಕ ಅಳವಡಿಸಲು ಅವರು ನಿರ್ಧರಿಸಿದರು.

ವಡ್ಡಗೆರೆ ನಾಗರಾಜಯ್ಯ, ಪುಸ್ತಕಮನೆ ಹರಿಹರಪ್ರಿಯ, ಮುಕುಂದರಾಜು, ಕೆ.ಎಚ್. ಕುಮಾರ್, ಕೆ.ಎಂ. ನಾಗೇಶ್, ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ, ಸಿ. ಚಂದ್ರಶೇಖರ್, ಕೆ. ಆನಂದ್ ಮಾಲೂರು, ಕಡಬಗೆರೆ ಮುನಿರಾಜು, ಆನಂದ ಮೊದಲಿಯರ್, ಅಜ್ಮಾ, ಪುಣ್ಯೇಶ್ ಕುಮಾರ್, ಎಲ್. ಲೋಕೇಶ್, ತಬಲಾ ಮಾರುತಿ, ಗಣೇಶ್ ಪ್ರಸಾದ್, ಪ್ರಕಾಶ್ ಮೂರ್ತಿ, ತ್ಯಾಗರಾಜ್, ಯೋಗೇಶ್ ಮಾಸ್ಟರ್ ಮತ್ತಿತರರು ಪಾಲ್ಗೊಂಡಿದ್ದರು.

ಸಮಾಧಿಗೆ ಅಪಚಾರ: ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಲಾಗ್ರಾಮದಲ್ಲಿರುವ ಸಮಾಧಿಗಳನ್ನು ಕಡೆಗಣಿಸಿದ್ದು, ಅಲ್ಲಿ ಸಮಾಧಿ ಇದೆ ಎಂದು ಗುರುತಿಸಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಗಿಡಗಂಟಿಗಳು ಕಟ್ಟೆಯ ಮೇಲೆ ಬೆಳೆದುಕೊಂಡಿತ್ತು. ಸುತ್ತಮುತ್ತಲೂ ಸ್ವಚ್ಛತೆ ನಡೆಸಿದರೂ ಸಮಾಧಿಗಳು ಇರುವ ಸ್ಥಳದಲ್ಲಿ ಕಸದ ರಾಶಿಗಳು ಇದ್ದವು. ಈ ಮೂಲಕ ಅಪಚಾರ ಎಸಗಲಾಗಿತ್ತು. ನಾವು ‘ನುಡಿಗಾರರ ಪರಿಷೆ’ ಹೆಸರಿನಲ್ಲಿ ಕಸವನ್ನು ಬೇರೆಡೆಗೆ ವಿಲೇವಾರಿ ಮಾಡಿ, ಅಲ್ಲಿಯೇ ಕಾರ್ಯಕ್ರಮ ನಡೆಸಿದೆವು’ ಎಂದು ವಡ್ಡಗೆರೆ ನಾಗರಾಜಯ್ಯ ತಿಳಿಸಿದರು.

‘ಸಮಾಧಿಯ ಸುತ್ತಲೂ ಕಲ್ಲು ಬೆಂಚುಗಳನ್ನು ಹಾಕಿ, ಉದ್ಯಾನದ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕು. ಅಲ್ಲಿ ನಿರಂತರವಾಗಿ ಸಾಹಿತ್ಯಿಕ ಕಾರ್ಯಕ್ರಮಗಳು ನಡೆಯಬೇಕು. ಇದೇ 24ಕ್ಕೆ ಸಮಾಧಿಯ ಮೇಲೆ ನಾಮಫಲಕ ಹಾಕಲು ನಿರ್ಧರಿಸಿದ್ದೇವೆ. ಈಗಾಗಲೇ ನಾಮಫಲಕ ಮಾಡಿಸಲು ಆದೇಶ ನೀಡಿದ್ದೇವೆ’ ಎಂದು ಹೇಳಿದರು.

‘ಕಲಾಗ್ರಾಮ ಸ್ಮಶಾನವಲ್ಲ’

‘ಕಲಾಗ್ರಾಮವು ಸಾಂಸ್ಕೃತಿಕ ಸಮುಚ್ಚಯ. ಅದನ್ನು ಸ್ಮಶಾನವಾಗಿ ಮಾರ್ಪಡಿಸಬಾರದು. ಕಟ್ಟೆಗಳನ್ನು ತಾತ್ಕಾಲಿಕವಾಗಿ ನಿರ್ಮಿಸಲಾಗಿತ್ತು. ಅದನ್ನು ಸಮಾಧಿಯೆಂದು ಪರಿಗಣಿಸಲು ಸಾಧ್ಯವಿಲ್ಲ. ಕುಟುಂಬದ ಸದಸ್ಯರೇ ಸಮಾಧಿ ಮಾಡಕೂಡದು ಎಂದು ಹೇಳಿದ್ದಾರೆ. ಯು.ಆರ್. ಅನಂತಮೂರ್ತಿ ಮತ್ತು ಜಿ.ಎಸ್. ಶಿವರುದ್ರಪ್ಪ ಅವರ ಹುಟ್ಟೂರಿನಲ್ಲಿ ಸಮಾಧಿ ಮಾಡಿದಲ್ಲಿ ಅರ್ಥವಿರುತ್ತದೆ. ಕಲಾಗ್ರಾಮದಲ್ಲಿ ಗ್ರಂಥಾಲಯ ಅಥವಾ ಸಭಾಂಗಣದಂತಹ ಕಟ್ಟಡ ನಿರ್ಮಿಸಿ, ಅವರ ಹೆಸರನ್ನು ಇಡುವುದು ಸೂಕ್ತ’ ಎಂದು ಎನ್‌ಎಸ್‌ಡಿ ಬೆಂಗಳೂರು ಕೇಂದ್ರದ ನಿರ್ದೇಶಕ ಸಿ. ಬಸವಲಿಂಗಯ್ಯ ತಿಳಿಸಿದರು.

‘ದಕ್ಷಿಣ ಭಾರತದಲ್ಲಿ ಎನ್‌ಎಸ್‌ಡಿಗೆ ಬೇಡಿಕೆ ಹೆಚ್ಚುತ್ತಿದೆ. ನಮ್ಮ ಕೇಂದ್ರದ ಜಾಗದಲ್ಲಿ ಸಮಾಧಿಗಳನ್ನು ನಿರ್ಮಿಸಲು ಪ್ರಾರಂಭಿಸಿದಲ್ಲಿ ಕೇಂದ್ರವು ಬೇರೆ ರಾಜ್ಯಕ್ಕೆ ಸ್ಥಳಾಂತರವಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು