ಮಂಗಳವಾರ, ಮೇ 17, 2022
28 °C
ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಪ್ರಶ್ನೆಗೆ ಕೇಂದ್ರ ಸಚಿವರ ಉತ್ತರ

‘ನಮ್ಮ ಮೆಟ್ರೊ’ದಲ್ಲಿ ಕನ್ನಡ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಮ್ಮ ಮೆಟ್ರೊ’ ಸೇರಿದಂತೆ ನಗರದ ಎಲ್ಲ ಮೆಟ್ರೊ ರೈಲುಗಳು ಮತ್ತು ನಿಲ್ದಾಣಗಳಲ್ಲಿನ ಸೂಚನಾ ಫಲಕಗಳಲ್ಲಿ ಆಯಾ ಸ್ಥಳೀಯ ಭಾಷೆಯನ್ನು ಕಡ್ಡಾಯವಾಗಿ ಬಳಸಬೇಕು ಎಂದು ರಾಜ್ಯಸಭೆಯ ಅಧ್ಯಕ್ಷ, ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಸೂಚನೆ ನೀಡಿದರು.

ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್‌, ‘ನಮ್ಮ ಮೆಟ್ರೊ’ ರೈಲಿನ ಒಳಗೆ ಮತ್ತು ನಿಲ್ದಾಣಗಳಲ್ಲಿ ಕನ್ನಡವನ್ನು ಹೆಚ್ಚು ಬಳಕೆ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಹರ್‌ದೀಪ್ ಸಿಂಗ್‌ ಪುರಿ ಉತ್ತರ ನೀಡಿದ ನಂತರ, ವೆಂಕಯ್ಯನಾಯ್ಡು ಈ ಸೂಚನೆ ನೀಡಿದರು.

‘ಮೆಟ್ರೊ ರೈಲುಗಳಲ್ಲಿ ಸ್ಥಳೀಯ ಭಾಷೆಯಲ್ಲಿ ಸೂಚನಾ ಫಲಕ ಇರಬೇಕು ಎಂದು ಸೂಚನೆ ನೀಡಲಾಗಿದೆ. ಆದರೆ, ‘ನಮ್ಮ ಮೆಟ್ರೊ’ದಲ್ಲಿ ಕನ್ನಡ ಬಳಸದಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಈ ಕುರಿತು ಸ್ಪಷ್ಟ ಸೂಚನೆ ನೀಡಲಾಗುವುದು’ ಎಂದು ಪುರಿ ಉತ್ತರಿಸಿದರು.

‘ಮೆಟ್ರೊ ರೈಲುಗಳಲ್ಲಿ ಸ್ಥಳೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುವುದರಿಂದ ಪ್ರಾದೇಶಿಕ ಭಾಷೆಯಲ್ಲಿ ಸೂಚನಾ ಫಲಕ ಇರಲೇಬೇಕು ಎಂದು ಉಪರಾಷ್ಟ್ರಪತಿ ಸೂಚಿಸಿದರು’ ಎಂದು ಜಿ.ಸಿ. ಚಂದ್ರಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶೀಘ್ರ ಅನುದಾನ ಬಿಡುಗಡೆ:

‘ಹೆಚ್ಚು ಸಂಚಾರದಟ್ಟಣೆ ಸಮಸ್ಯೆ ಎದುರಿಸುತ್ತಿರುವ ವಿಶ್ವದ ಮಹಾನಗರಗಳಲ್ಲಿ ಬೆಂಗಳೂರೂ ಒಂದು. ಸಂಚಾರ ದಟ್ಟಣೆ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ 2018–19ರಲ್ಲಿ ಉಪನಗರ ರೈಲು ಯೋಜನೆ ಘೋಷಿಸಿತು. ಆದರೆ, ಈ ಯೋಜನೆ ಈವರೆಗೆ ಪ್ರಾರಂಭವಾಗಿಲ್ಲ. ನಮ್ಮ ಮೆಟ್ರೊ ಎರಡನೇ ಹಂತದ ಯೋಜನೆಗಳೂ ವಿಳಂಬವಾಗುತ್ತಿವೆ. ಕೇಂದ್ರಸರ್ಕಾರ ಅನುದಾನ ಬಿಡುಗಡೆ ಮಾಡದಿರುವುದೇ ವಿಳಂಬಕ್ಕೆ ಕಾರಣ’ ಎಂದು ಚಂದ್ರಶೇಖರ್ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು.

‘ನಮ್ಮ ಮೆಟ್ರೊ’ದ ಎರಡನೇ ಹಂತದ ಯೋಜನೆಗೆ ₹8,445.63 ಕೋಟಿ ಅನುದಾನ ಘೋಷಿಸಲಾಗಿದೆ. ಹಂತ–ಹಂತವಾಗಿ ಹಣವನ್ನೂ ಬಿಡುಗಡೆ ಮಾಡಲಾಗುತ್ತಿದೆ. ಯೋಜನೆ ವಿಳಂಬವಾಗಲು ಅನುದಾನ ಬಿಡುಗಡೆ ಮಾಡದಿರುವುದು ಕಾರಣ ಎಂಬುದು ಸರಿಯಲ್ಲ. ಮೆಟ್ರೊದ ಎರಡು ವಿಸ್ತರಿತ ಮಾರ್ಗದಲ್ಲಿ ಅರಣ್ಯಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬೇಕಿದೆ. ಇದಕ್ಕಾಗಿ 4,266 ಮರಗಳನ್ನು ಕಡಿಯಬೇಕಾದ ಅನಿವಾರ್ಯತೆ ಇದೆ. ಈ ವಿಷಯಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿದೆ. ಪ್ರಕರಣ ಇತ್ಯರ್ಥವಾದ ನಂತರ, 2021–22ರ ಬಜೆಟ್‌ನಲ್ಲಿ ಘೋಷಿಸಿರುವ ಅನುದಾನವೂ ಸೇರಿದಂತೆ ಎಲ್ಲ ಹಣ ಬಿಡುಗಡೆ ಮಾಡಲಾಗುವುದು’ ಎಂದು ಹರ್‌ದೀಪ್ ಸಿಂಗ್ ಪುರಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು