ಮಂಗಳವಾರ, ಡಿಸೆಂಬರ್ 7, 2021
24 °C
ಸಾಮಾನ್ಯ ಕನ್ನಡಿಗನ ಉತ್ಸವವಾದ ‘ಲಕ್ಷ ಕಂಠ ಗೀತ ಗಾಯನ’ l ಆಟೊ, ಬಸ್‌, ರೈಲು, ವಿಮಾನ ನಿಲ್ದಾಣ, ಮೆಟ್ರೊ ನಿಲ್ದಾಣಗಳಲ್ಲೂ ಮಾರ್ದನಿ

ಕನ್ನಡದ ಗಾನ ಗಂಗೆಯಲ್ಲಿ ತೇಲಿದ ಉದ್ಯಾನ ನಗರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದಟ್ಟ ಮೋಡವನ್ನು ಪಕ್ಕಕ್ಕೆ ಸರಿಸಿ, ನೇಸರ ಬಿರು ಬಿಸಿಲನ್ನು ಸೂಸುವ ವೇಳೆಯಲ್ಲಿ ಮಾರ್ದನಿಸಿದ ‘ಜೋಗದ ಸಿರಿ ಬೆಳಕಿನಲ್ಲಿ... ತುಂಗೆಯ ಸಿರಿ ಬಳುಕಿನಲ್ಲಿ... ‘ಬಾರಿಸು ಕನ್ನಡ ಡಿಂಡಿಮವಾ..’ ಗೀತೆಗಳು ಉದ್ಯಾನ ನಗರಿಯಲ್ಲಿ ಅಸಂಖ್ಯಾತ ಮಂದಿಯ ಕಿವಿ ನೆಟ್ಟಗಾಗುವಂತೆ ಮಾಡಿದವು.

ಇಂಪಾದ ಕನ್ನಡ ಗೀತೆಗಳು ಬೀದಿ ಬೀದಿಗಳಲ್ಲಿ, ವೃತ್ತಗಳಲ್ಲಿ, ಸರ್ಕಾರಿ ಕಚೇರಿಗಳು, ಶಾಲಾ–ಕಾಲೇಜು, ವಿಶ್ವವಿದ್ಯಾಲಯಗಳ ಆವರಣ, ಬಸ್‌ ನಿಲ್ದಾಣಗಳು, ಮೆಟ್ರೊ ರೈಲಿನಲ್ಲಿ ಮೊಳಗಿದವು. ಹಾದಿ ಹೋಕ ಸಾಮಾನ್ಯ ಕನ್ನಡಿಗ ಗೀತೆಗಳನ್ನು ಕೇಳಿ, ಒಂದು ಕ್ಷಣ ನಿಂತು ಭಾವುಕರಾದರು. ಇಂತಹ ಅಸಂಖ್ಯಾತ ನಿದರ್ಶನಗಳಿಗೆ ‘ಸಿಲಿಕಾನ್ ಸಿಟಿ’ ಬೆಂಗಳೂರು ಗುರುವಾರ ಸಾಕ್ಷಿಯಾಯಿತು.

‘ಕಾಸ್ಮೊಪಾಲಿಟನ್’ ನಗರ ಎಂಬ ಬಿರುದು ಪಡೆದ ನಂತರ ಕನ್ನಡದ ವಾತಾವರಣ ಕರಗುತ್ತಿದೆಯೇನೋ ಎಂಬ ಆತಂಕ ಕನ್ನಡಿಗರದಾಗಿತ್ತು. ಆದರೆ, ಲಕ್ಷ ಕಂಠ ಗೀತ ಗಾಯನದಲ್ಲಿ ಸ್ವಯಂಪ್ರೇರಣೆಯಿಂದ ಸಾರ್ವಜನಿಕರು ಭಾಗವಹಿಸಿದ್ದು ಕಾರ್ಮೋಡದ ನಡುವಿನ ಮಿಂಚಿನಂತೆ ಗೋಚರಿಸಿತು. ಗಣ್ಯರು,ಅತಿ ಗಣ್ಯರು ಅಥವಾ ತಾರೆಯರಿಗಿಂತ ಸಾಮಾನ್ಯ ಕನ್ನಡಿಗರೇ ಆದ್ಯತೆ ಪಡೆದಿದ್ದು ವಿಶೇಷವಾಗಿತ್ತು.

ಈ ಅಭಿಯಾನಕ್ಕೆ ಆಟೋ ಚಾಲಕರ ಸಂಘ, ಗಾರ್ಮೆಂಟ್ಸ್‌ ಕಾರ್ಮಿಕರು, ಐಟಿ– ಬಿಟಿ ಉದ್ಯೋಗಿಗಳು ಕೈಜೋಡಿಸಿದ್ದು, ಕನ್ನಡದ ಕಲರವವನ್ನು ಹಬ್ಬಿಸುವಲ್ಲಿ ತಮ್ಮದೇ ಆದ ರೀತಿಯಲ್ಲಿ ಬೆಂಗಳೂರು ನಗರದಲ್ಲಿ ಪ್ರಯತ್ನ ಆರಂಭಿಸಿದ್ದಾರೆ. ಐಎಎಸ್‌ ಅಧಿಕಾರಿಗಳೂ ಹುಮ್ಮಸ್ಸಿನಿಂದ ಭಾಗವಹಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಿರಿಯ ಸಾಹಿತಿಗಳಾದ ಡಾ.ಬಿ.ಟಿ.ಲಲಿತಾ ನಾಯಕ್‌, ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್‌, ಬೈರಮಂಗಲ ರಾಮೇಗೌಡ, ಅಬ್ದುಲ್‌ ಬಷೀರ್‌, ನೊಣವಿನಕೆರೆ ರಾಮಕೃಷ್ಣಯ್ಯ, ವೇದಾವತಿ ಪ್ರಸನ್ನ, ಟಿ.ತಿಮ್ಮೇಶ್‌, ಕ.ಸಾ.ಪ ಗೌರವ ಸಲಹೆಗಾರ ಪದ್ಮರಾಜ ದಂಡಾವತಿ ಸಾಮೂಹಿಕ ಗಾಯನದಲ್ಲಿ ಪಾಲ್ಗೊಂಡರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ಗೀತಗಾಯನ ಕಾರ್ಯಕ್ರಮದ ಜತೆಗೆ ಸಂಕಲ್ಪವನ್ನು ತೆಗೆದುಕೊಳ್ಳಲಾಯಿತು.

ಹೇರೋಹಳ್ಳಿ ವಾರ್ಡ್‌ ಕಚೇರಿ ಮುಂಭಾಗ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಕನ್ನಡಕ್ಕಾಗಿ ನಾವು ಅಭಿಯಾನಕ್ಕೆ ಚಾಲನೆ ನೀಡಿದರು. ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ, 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪೌರಕಾರ್ಮಿಕರು ಮೂರು ಗೀತೆಗಳನ್ನು ಹಾಡಿದರು.

ಬಿಬಿಎಂಪಿ ಕೇಂದ್ರ ಕಚೇರಿ: ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸಾವಿರಕ್ಕೂ ಹೆಚ್ಚು ಅಧಿಕಾರಿ ಮತ್ತು ಸಿಬ್ಬಂದಿ ಗಾಯನದಲ್ಲಿ ಭಾಗವಹಿಸಿದ್ದರು. ಕನ್ನಡದಲ್ಲಿ ಮಾತನಾಡುವ, ಬರೆಯುವ, ವ್ಯವಹರಿಸುವಬಗ್ಗೆ ಸಂಕಲ್ಪ ದೀಕ್ಷೆ ತೊಟ್ಟರು. ಬಿಬಿಎಂಪಿಯ ಎಲ್ಲಾ ವಲಯ ಕಚೇರಿಗಳಲ್ಲಿಯೂ ‘ಮಾತಾಡ್ ಮಾತಾಡ್ ಕನ್ನಡ’ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕೆಎಸ್‌ಆರ್‌ಟಿಸಿಯಲ್ಲಿ: ಕರ್ನಾಟಕ ರಾಜ್ಯ‌ ರಸ್ತೆ ಸಾರಿಗೆ ನಿಗಮದ ಎಲ್ಲಾ ವಿಭಾಗೀಯ ಕಚೇರಿಗಳು, ವಿಭಾಗೀಯ ಕಾರ್ಯಾಗಾರ, ಕೇಂದ್ರ ಕಚೇರಿ ಮತ್ತು ಬಸ್‌ ನಿಲ್ದಾಣಗಳಲ್ಲಿ ‘ಕನ್ನಡಕ್ಕಾಗಿ ನಾವು’ ಅಭಿಯಾನದ ಅಂಗವಾಗಿ ಗೀತ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ, ನಿರ್ದೇಶಕ (ಸಿಬ್ಬಂದಿ ಮತ್ತು ಪರಿಸರ) ಟಿ.ವೆಂಕಟೇಶ್ ಮತ್ತು ಅಧಿಕಾರಿ ಸಿಬ್ಬಂದಿ ಹಾಜರಿದ್ದರು.

ಕಾಲೇಜುಗಳಲ್ಲಿ ಗೀತಗಾಯನ: ವಿವಿಧ ಶಾಲಾ ಕಾಲೇಜುಗಳಲ್ಲೂ ಕನ್ನಡ ಗೀತೆಗಳನ್ನು ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಸೇರಿ ಹಾಡಿದರು. ಮಲ್ಲೇಶ್ವರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪ್ರಾಂಶುಪಾಲ ರವಿ ಎ.ಎಸ್‌ ಅವರ ನೇತೃತ್ವದಲ್ಲಿ ಗೀತಗಾಯನದಲ್ಲಿ ಭಾಗಿಯಾದರು.

ನಮ್ಮ ಮೆಟ್ರೊದಲ್ಲಿ ಕನ್ನಡದ ಕಂಪು: ಬಿಎಂಆರ್‌ಸಿಎಲ್‌ ‘ಕನ್ನಡ ಗೀತ ಗಾಯನ’ವನ್ನು ವಿಶಿಷ್ಟವಾಗಿ ಆಯೋಜಿಸಿತ್ತು. ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ‘ನಮ್ಮ ಮೆಟ್ರೊ’ ನಿಲ್ದಾಣಗಳಲ್ಲಿ ಕನ್ನಡಮಯ ವಾತಾವರಣ ನಿರ್ಮಾಣವಾಗಿತ್ತು. ಎಲ್ಲ ನಿಲ್ದಾಣಗಳಲ್ಲೂ  ‘ಜೋಗದ ಸಿರಿ ಬೆಳಕಿನಲ್ಲಿ... ತುಂಗೆಯ ಸಿರಿ ಬಳುಕಿನಲ್ಲಿ... ‘ಬಾರಿಸು ಕನ್ನಡ ಡಿಂಡಿಮವಾ..’ ಮತ್ತು ‘ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು’ ಎಂಬ ಗೀತೆಗಳು ಮೊಳಗಿದವು. ಹಲವು ನಿಲ್ದಾಣಗಳಲ್ಲಿ ಸಿಬ್ಬಂದಿ ಮತ್ತು ಕನ್ನಡಾಭಿಮಾನಿಗಳು ಗೀತೆಯ ಧಾಟಿಗೆ ದನಿಗೂಡಿಸಿದರು. ಮೆಟ್ರೊ ರೈಲಿನಲ್ಲೂ ಕನ್ನಡ ಗೀತೆಗಳು ಕೇಳಿ ಬಂದವು. 

‘ಲಕ್ಷ ಕಂಠ ಗೀತ ಗಾಯನ ಇತ್ತೀಚಿನ ದಿನಗಳಲ್ಲಿ ಆಯೋಜಿಸಿದ ಕನ್ನಡದ ಅತ್ಯುತ್ತಮ ಕಾರ್ಯಕ್ರಮ. ಕನ್ನಡಿಗರ ವ್ಯಕ್ತಿತ್ವ ವಿಕಸನ, ನಡವಳಿಕೆ, ಸಂಸ್ಕೃತಿ, ಭಾಷೆ ಎಲ್ಲವನ್ನೂ ಮೇಳೈಸುವ ಅತ್ಯದ್ಭುತ ಕಾರ್ಯಕ್ರಮ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎನ್ನುವ ಕನ್ನಡಿಗರಾದ ನಮ್ಮೆಲ್ಲರ ಅಭಿಮಾನದ ಅಭಿವ್ಯಕ್ತಿಗೆ ಸರ್ಕಾರ ವೇದಿಕೆ ಕಲ್ಪಿಸಿದೆ’ ಎಂದು ಬಿಎಂಆರ್‌ಸಿಎಲ್‌ನ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದ ಕಾರ್ಯಕಾರಿ ನಿರ್ದೇಶಕ ಎಸ್‌.ಎನ್‌.ಶಂಕರ್‌ ತಿಳಿಸಿದರು.

ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣಗಳು, ಆಟೋನಿಲ್ದಾಣಗಳಲ್ಲಿ ಕನ್ನಡ ಗೀತ ಗಾಯನ ನಡೆಯಿತು.

ಸಾಮಾನ್ಯರ ಉತ್ಸಾಹ; ತಾರೆಯರ ನಿರಾಸಕ್ತಿ
‘ಕನ್ನಡಕ್ಕಾಗಿ ನಾನು’ ವಿಶೇಷ ಅಭಿಯಾನಕ್ಕೆ ಆಟೋ ಚಾಲಕರ ಸಂಘ, ಗಾರ್ಮೆಂಟ್ಸ್‌ ಕಾರ್ಖಾನೆಗಳ ಕಾರ್ಮಿಕರು, ಐಟಿ–ಬಿಟಿ ಉದ್ಯೋಗಿಗಳು, ಕಾಲೇಜು ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಆದರೆ, ಕನ್ನಡ ಚಲನಚಿತ್ರ ನಟ– ನಟಿಯರು ಈ ಅಭಿಯಾನದಿಂದ ದೂರ ಉಳಿದಿರುವುದು ಚರ್ಚೆಗೆ ಕಾರಣವಾಗಿದೆ. 

ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ರಾಜ್ಯ ಸರ್ಕಾರ ನಟ– ನಟಿಯರಿಗೆ ಮನವಿ ಮಾಡಿತ್ತು. ಆದರೆ, ಚಿತ್ರೋದ್ಯಮದಿಂದ ಯಾರೂ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಗಳು ತಿಳಿಸಿವೆ.

ಗುರುವಾರ ನಡೆದ ಗೀತ ಗಾಯನದಲ್ಲಿ ಚಿತ್ರನಟ ಜಗ್ಗೇಶ್, ನಿರ್ಮಾಪಕ ಸಾ.ರಾ.ಗೋವಿಂದು ಬೆಂಗಳೂರಿ ನಲ್ಲೂ, ಶ್ರುತಿ ಹುಬ್ಬಳ್ಳಿಯಲ್ಲಿ ಭಾಗವಹಿಸಿದ್ದರು. 

ಇತ್ತೀಚಿನ ವರ್ಷಗಳಲ್ಲಿ ಪ್ರಶಸ್ತಿ ಪ್ರದಾನ, ಮಾಸಾಶನ ವಿತರಣೆ ಮತ್ತು ವಿವಿಧ ಸಂಘಟನೆಗಳಿಗೆ ಅನುದಾನ ಒದಗಿಸುವುದಕ್ಕೆ ಸೀಮಿತವಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಲವು ವರ್ಷಗಳ ಬಳಿಕ ಮೊದಲ ಬಾರಿಗೆ ರಾಜ್ಯವ್ಯಾಪಿ ಹಾಗೂ ವಾರವಿಡೀ ಕನ್ನಡದ ಸಂಸ್ಕೃತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸಚಿವ ಸುನಿಲ್‌ ಕುಮಾರ್‌ ಒತ್ತಾಸೆಯಿಂದ ಅಧಿಕಾರಿಗಳು ಈಗ ರಾತ್ರಿ 10.30 ರವರೆಗೆ ಕಾರ್ಯನಿರ್ವಹಿಸಬೇಕಾಗಿದೆ. ಅಲ್ಲದೆ, ಪ್ರತಿ ದಿನ ಸಂಜೆ 7 ರ ವೇಳೆಗೆ ಆ ದಿನದ ವರದಿಯನ್ನೂ ಒಪ್ಪಿಸಬೇಕಾಗಿದೆ ಎಂದು ಇಲಾಖೆಯ ಮೂಲಗಳು ಹೇಳಿವೆ.

‘ಇಲಾಖೆಯಲ್ಲಿ ಹಣವಿಲ್ಲ, ಸಿಬ್ಬಂದಿ ಇಲ್ಲ ಎಂಬ ಮಾತು ಆರಂಭದಲ್ಲಿ ಕೇಳಿ ಬಂದಿತ್ತು. ಈ ಸಮಸ್ಯೆಯನ್ನು ನೀಗಿಸಲು ಸಚಿವರು ಉನ್ನತ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಬಿಬಿಎಂಪಿ ಜತೆ ಮಾತುಕತೆ ನಡೆಸಿ ಅವರ ಸಿಬ್ಬಂದಿ ಮತ್ತು ಸಂಪನ್ಮೂಲ ಬಳಸಿಕೊಳ್ಳಲಾಗುತ್ತಿದೆ. ಸಾಮಾಜಿಕ ಹೊಣೆಗಾರಿಕೆ ನಿಧಿಯೂ ಸಿಕ್ಕಿದೆ. ಹೀಗಾಗಿ ಹಣದ ಕೊರತೆ ನೀಗಿದೆ’ ಎಂದು ಮೂಲಗಳು ತಿಳಿಸಿವೆ.

‘ಐಟಿ ಮತ್ತು ಬಿಟಿ ಕಂಪನಿಗಳಲ್ಲಿ ಕನ್ನಡದ ವಾತಾವರಣವನ್ನು ವೃದ್ಧಿಗೊಳಿಸುವ ಉದ್ದೇಶದಿಂದ ಸಚಿವರು ಉಪಚುನಾವಣೆ ಬಳಿಕ ಒಂದೆರಡು ಐಟಿ ಕಂಪನಿಗಳಿಗೆ ಭೇಟಿ ನೀಡಿ ಕನ್ನಡೇತರರಿಗೆ ಕನ್ನಡ ಕಲಿಯುವ ಕೈಪಿಡಿ ವಿತರಿಸಲಿದ್ದಾರೆ’ ಎಂದು ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು