ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಮಫಲಕ: ಕನ್ನಡ ‘ಮೂಲೆ ಗುಂಪು’

ಹೋರಾಟ, ಸರ್ಕಾರದ ಎಚ್ಚರಿಕೆಯ ಬಳಿಕವೂ ಮಳಿಗೆಗಳ ಕೇಂದ್ರ ಸ್ಥಾನದಲ್ಲಿ ಕನ್ನಡಕ್ಕೆ ಸಿಗದ ಆದ್ಯತೆ
Published 16 ಫೆಬ್ರುವರಿ 2024, 0:30 IST
Last Updated 16 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಪರ ಹೋರಾಟಗಾರರ ಎಚ್ಚರಿಕೆ, ಸರ್ಕಾರದ ನಿರ್ದೇಶನದ ಬಳಿಕವೂ ನಗರದಲ್ಲಿನ ಬಹುತೇಕ ವಾಣಿಜ್ಯ ಮಳಿಗೆಗಳು ನಾಮಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಲು ಹಿಂದೇಟು ಹಾಕುತ್ತಿವೆ. ಆಂಗ್ಲ ನಾಮಫಲಕಗಳನ್ನು ಮಳಿಗೆಗಳ ಕೇಂದ್ರ ಸ್ಥಾನದಲ್ಲಿಯೇ ಉಳಿಸಿಕೊಂಡು, ಕನ್ನಡ ನಾಮಫಲಕಗಳನ್ನು ‘ಮೂಲೆ ಗುಂಪು’ ಮಾಡುತ್ತಿವೆ. 

ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ನಗರದಲ್ಲಿ ಕಳೆದ ಡಿಸೆಂಬರ್‌ನಲ್ಲಿ ಹೋರಾಟ ನಡೆಸಿತ್ತು. ಆ ವೇಳೆ ಕೆಲವೆಡೆ ಇಂಗ್ಲಿಷ್ ನಾಮಫಲಕಗಳಿಗೆ ಮಸಿ ಬಳಿದು, ಫಲಕಗಳನ್ನು ಧ್ವಂಸ ಮಾಡಲಾಗಿತ್ತು. ಕೀಳಲು ಸಾಧ್ಯವಾಗದ ನಾಮಫಲಕಗಳಿಗೆ ಹೋರಾಟಗಾರರು ಮಸಿ ಬಳಿದಿದ್ದರು. ಬಳಿಕ ಸರ್ಕಾರವು 2024ರ ಫೆ.28ರೊಳಗೆ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಭಾಷೆ ಅಳವಡಿಸಿಕೊಳ್ಳಬೇಕೆಂದು ಗಡುವು ನೀಡಿತ್ತು. ಆದರೆ, ವಾಣಿಜ್ಯ ಮಳಿಗೆಗಳು ನಾಮಫಲಕಗಳಲ್ಲಿ 60ರಷ್ಟು ಕನ್ನಡ ಭಾಷೆ ಅಳವಡಿಸಿಕೊಳ್ಳಲು ನಿರಾಸಕ್ತಿ ತಾಳಿವೆ.

ಬ್ರಿಗೇಡ್ ರಸ್ತೆ, ಎಂ.ಜಿ. ರಸ್ತೆ, ಕೆ.ಆರ್.ಪುರ, ವಿಜಯನಗರ, ಮೈಸೂರು ರಸ್ತೆ, ಚಿಕ್ಕಪೇಟೆ, ಗಾಂಧಿನಗರ, ರಾಜಾಜಿನಗರ, ಬನಶಂಕರಿ, ಜಯನಗರ, ಜೆ.ಪಿ. ನಗರ ಸೇರಿ ನಗರದ ವಿವಿಧೆಡೆಯ ಬಹುತೇಕ ವಾಣಿಜ್ಯ ಮಳಿಗೆಗಳಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ದೊರೆತಿಲ್ಲ. ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಭಾಷೆ ಬಳಕೆಗೆ ಸಂಬಂಧಿಸಿದಂತೆ ಬಿಬಿಎಂಪಿ 49 ಸಾವಿರಕ್ಕೂ ಅಧಿಕ ಮಳಿಗೆಗಳಿಗೆ ನೋಟಿಸ್ ನೀಡಿದೆ. ಬಿಬಿಎಂಪಿ ಪ್ರಕಾರ ಇನ್ನೂ 20 ಸಾವಿರಕ್ಕೂ ಅಧಿಕ ಮಳಿಗೆಗಳು ಶೇ 60ರಷ್ಟು ಕನ್ನಡ ಭಾಷೆ ಬಳಕೆಯ ನಾಮಫಲಕಗಳನ್ನು ಅಳವಡಿಸಿಕೊಂಡಿಲ್ಲ. ಸರ್ಕಾರ ಗಡುವು ನೀಡಿದ ಬಳಿಕ ಹಲವು ಮಳಿಗೆಗಳು ನಾಮಫಲಕಗಳಲ್ಲಿ ಕನ್ನಡ ಅಳವಡಿಸಿಕೊಂಡರೂ ಶೇ 60 ರಷ್ಟು ಆದ್ಯತೆ ನೀಡಿಲ್ಲ. ಇದು ಕನ್ನಡ ಪರ ಹೋರಾಟಗಾರರ ಅಸಮಾಧಾನಕ್ಕೆ ಕಾರಣವಾಗಿದೆ. 

ಅಕ್ಕಪಕ್ಕದಲ್ಲಿ ಅಳವಡಿಕೆ:

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ಮಸೂದೆ–2024ಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ದೊರೆತಿದೆ. ಇದರ ಪ್ರಕಾರ ನಾಮಫಲಕಗಳ ಒಟ್ಟಾರೆ ವಿಸ್ತೀರ್ಣದಲ್ಲಿ ಕನ್ನಡ ಭಾಷೆಯನ್ನು ಶೇ 60 ರಷ್ಟು ಪ್ರದರ್ಶಿಸುವುದು ಕಡ್ಡಾಯ. ಆದರೆ, ಸದ್ಯ ಬಹುತೇಕ ನಾಮಫಲಕಗಳಲ್ಲಿ ಶೇ 60 ರಷ್ಟು ಇಂಗ್ಲಿಷ್‌ ಇದ್ದು, ಶೇ 40 ಹಾಗೂ ಅದಕ್ಕಿಂತ ಕಡಿಮೆ ಪ್ರಮಾಣ ಕನ್ನಡಕ್ಕೆ ಆದ್ಯತೆ ನೀಡಲಾಗುತ್ತಿದೆ. ಈ ಮೊದಲಿದ್ದ ಇಂಗ್ಲಿಷ್‌ ನಾಮಫಲಕಗಳನ್ನು ಹಾಗೇ ಉಳಿಸಿಕೊಳ್ಳುತ್ತಿದ್ದು, ಅದರ ಮೇಲೆ ಅಥವಾ ಕೆಳಗೆ ಸಣ್ಣದಾಗಿ ಅಥವಾ ಸಮಾನವಾಗಿ ಕನ್ನಡದ ನಾಮಫಲಕಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವೆಡೆ ಹಾಲಿ ನಾಮಫಲಕದ ಪಕ್ಕದಲ್ಲಿ ಕನ್ನಡದ ನಾಮಫಲಕವನ್ನು ಹಾಕಲಾಗಿದೆ. 

‘ನಾಮಫಲಕಗಳಲ್ಲಿ ಏಕರೂಪತೆ ತರಬೇಕು. ಹೋರಾಟ, ಎಚ್ಚರಿಕೆಯ ಬಳಿಕವೂ ಮಳಿಗೆಗಳ ಮಾಲೀಕರು ಕನ್ನಡಕ್ಕೆ ಆದ್ಯತೆ ನೀಡುತ್ತಿಲ್ಲ. ಶೇ 60 ರಷ್ಟು ಕನ್ನಡ ಅಳವಡಿಕೆ ಕಟ್ಟುನಿಟ್ಟಾಗಿ ಅನುಷ್ಠಾನವಾಗಬೇಕು. ಇದನ್ನು ಪಾಲಿಸದವರಿಗೆ ದಂಡ ಹೆಚ್ಚಿಸಿ, ಕಾನೂನಿನ ಅಡಿಯಲ್ಲಿ ಕ್ರಮಕೈಗೊಳ್ಳಬೇಕು. ನಾಡು–ನುಡಿಯ ರಕ್ಷಣೆಗೆ ಸರ್ಕಾರ ಮುಂದಾಗಬೇಕು’ ಎಂಬ ಆಗ್ರಹ ಸಾಮಾಜಿಕ ಜಾಲತಾಣದಲ್ಲಿಯೂ ಕನ್ನಡಿಗರಿಂದ ವ್ಯಕ್ತವಾಗಿದೆ. 

****

ನಾಮಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಬಳಕೆಗೆ ಸಂಬಂಧಿಸಿದಂತೆ ಸರ್ಕಾರವೇ ಒಂದು ಮೇಲ್ವಿಚಾರಣಾ ಸಮಿತಿ ರಚಿಸಬೇಕು. ಆಗ ಕಾನೂನು ಉಲ್ಲಂಘಿಸಿದವರನ್ನು ಸರಿದಾರಿಗೆ ತರಲು ಸಾಧ್ಯ.

-ಎಸ್.ಜಿ. ಸಿದ್ಧರಾಮಯ್ಯ ಸಾಹಿತಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ

****

ನಾಮಫಲಕಗಳಲ್ಲಿ ತಪ್ಪಾಗಿ ಕನ್ನಡ ಬಳಸಿದರೆ ಮಳಿಗೆಗಳ ಪ್ರತಿನಿಧಿಗಳಿಗೆ ಕನ್ನಡಿಗರು ಜಾಗೃತಿ ಮೂಡಿಸಬೇಕು. ಕನ್ನಡ ಬಳಕೆಗೆ ನಿರಾಸಕ್ತಿ ತೋರಿದವರ ಮೇಲೆ ಕಾನೂನು ಅಡಿ ಕ್ರಮಕೈಗೊಳ್ಳಬೇಕು.

-ಅರುಣ್ ಜಾವಗಲ್ ಕನ್ನಡ ಪರ ಹೋರಾಟಗಾರ

ಗೂಗಲ್ ಅನುವಾದ

ಹೊಸದಾಗಿ ಕನ್ನಡದ ನಾಮಫಲಕ ಅಳವಡಿಸಿಕೊಳ್ಳುತ್ತಿರುವ ಮಳಿಗೆಗಳು ಆಂಗ್ಲ ಪದಗಳನ್ನು ಕನ್ನಡದಲ್ಲಿ ಬರೆಸಿ ಅಳವಡಿಸಿಕೊಳ್ಳುತ್ತಿವೆ. ‘ಮಳಿಗೆ’ ಎಂದು ಹಾಕುವ ಬದಲು ‘ಶಾಪ್’ ಎಂದೇ ಹಾಕಲಾಗುತ್ತಿದೆ. ಆಂಗ್ಲ ನಾಮಫಲಕಗಳನ್ನು ಯಥಾವತ್ ಕನ್ನಡ ಪದಗಳಲ್ಲಿ ಬಳಸುತ್ತಿರುವುದರಿಂದ ಒತ್ತಕ್ಷರಗಳು ಬಿಟ್ಟು ಅಭಾಸವಾಗುತ್ತಿರುವ ಬಗ್ಗೆಯೂ ಕನ್ನಡ ಪರ ಹೋರಾಟಗಾರರಿಂದ ಆಕ್ಷೇಪಗಳು ಕೇಳಿಬಂದಿವೆ. ಇನ್ನು ಮಳಿಗೆಗಳ ಹೆಸರನ್ನು ಗೂಗಲ್ ನೆರವಿನಿಂದ ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿ ಅಳವಡಿಸಿಕೊಳ್ಳಲಾಗುತ್ತಿದೆ. ‘ಫ್ರೆಂಡ್ಸ್‌ ಫುಡ್ ಕಾರ್ನರ್’ ಎಂಬ ಮಳಿಗೆಯ ಹೆಸರನ್ನು ‘ಸ್ನೇಹಿತರ ಆಹಾರ ಮೂಲೆಯಲ್ಲಿ’ ಎಂದು ಹಾಕಲಾಗಿದೆ. ಇದನ್ನು ಕೆಲವರು ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದಾರೆ.  ‘ನಾಮಫಲಕಗಳಲ್ಲಿ ಕನ್ನಡವನ್ನು ಸಾಯಿಸಲಾಗುತ್ತಿದೆ. ಆಂಗ್ಲ ಪದಗಳನ್ನು ಗೂಗಲ್‌ ಮೂಲಕ ಅನುದಾದ ಮಾಡಲಾಗುತ್ತಿದೆ. ‘ಬೀಸೋ ದೊಣ್ಣೆ ತಪ್ಪಿದರೆ ನೂರು ವರ್ಷ ಆಯಸ್ಸು’ ಎಂಬ ಮನೋಭಾವದಿಂದ ನಾಮಫಲಕ ಅಳವಡಿಸಿಕೊಳ್ಳಲಾಗುತ್ತಿದೆ’ ಎಂದು ರಜತ್‌ ಎನ್ನುವವರು ‘ಎಕ್ಸ್‌’ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT