ಮಂಗಳವಾರ, ಡಿಸೆಂಬರ್ 7, 2021
19 °C
ಪುನರುಜ್ಜೀವನಗೊಂಡು ವರ್ಷದೊಳಗೆ ತುಂಬಿದ ಜಲಕಾಯ

ಕೋಡಿ ಹರಿದ ಕನ್ನಮಂಗಲ ಕೆರೆ: ಪುನರುಜ್ಜೀವನಗೊಂಡು ವರ್ಷದೊಳಗೆ ತುಂಬಿದ ಜಲಕಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕನ್ನಮಂಗಲ ಕೆರೆಯ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡ ವರ್ಷದೊಳಗೆ ಈ ಕೆರೆಯು ಕೋಡಿ ಹರಿದಿದೆ. ತುಂಬಿ ಹರಿಯುತ್ತಿರುವ ಈ ಕೆರೆಗೆ ಬಾಗಿನ ಅರ್ಪಿಸುವ ಮೂಲಕ ಸಂಭ್ರಮ ಆಚರಿಸಲು ಗ್ರಾಮಸ್ಥರು ಸಜ್ಜಾಗಿದ್ದಾರೆ.

ಮಹದೇವಪುರ ಕ್ಷೇತ್ರದ ಬಿದರಹಳ್ಳಿ ಹೋಬಳಿಯ ಕನ್ನಮಂಗಲ ಗ್ರಾಮಪಂಚಾಯಿತಿ ವ್ಯಾಪ್ತಿಯ ಈ ಕೆರೆ ಒತ್ತುವರಿಯಾಗಿತ್ತು. ಸಮರ್ಪಕ ನಿರ್ವಹಣೆ ಇಲ್ಲದೇ ಈ ಕೆರೆ ಕಸ ತುಂಬುವ ತಾಣವಾಗಿ ಮಾರ್ಪಟ್ಟಿತ್ತು. ಕೊಳಚೆ ನೀರು ಕೂಡ ಇದರ ಒಡಲು ಸೇರುತ್ತಿತ್ತು. ಸಂಪೂರ್ಣ ಹದಗೆಟ್ಟಿದ್ದ ಈ ಕೆರೆಯನ್ನು ಸ್ಥಳೀಯ ನಿವಾಸಿಗಳ ಸ್ವಯಂಸೇವಕರ ಗುಂಪು ’ಫೋರ್ಸ್‌ ಜಿಡಬ್ಲ್ಯು’ ಹಾಗೂ ಮಹದೇವಪುರ ಪರಿಸರ ಕಾರ್ಯಪಡೆ ನೇತೃತ್ವದಲ್ಲಿ ಪುನರುಜ್ಜೀವನಗೊಳಿಸಿತ್ತು.

2019ರಲ್ಲಿ ಆರಂಭಗೊಂಡ ಪುನರುಜ್ಜೀವನ ಕಾರ್ಯ 2020ರಲ್ಲಿ ಪೂರ್ಣಗೊಂಡಿತ್ತು. ಶಾಸಕರ ನಿಧಿ, ದಾನಿಗಳು ಹಾಗೂ ಸ್ವಯಂಸೇವಕರು ನೀಡಿದ ದೇಣಿಗೆಯ ಮೂಲಕ ಪುನರುಜ್ಜೀವನ ಕಾರ್ಯದ ವೆಚ್ಚವನ್ನು ಭರಿಸಲಾಗಿತ್ತು.

‘ಒತ್ತುವರಿಯಾಗಿದ್ದ ಈ ಕೆರೆಯಲ್ಲಿ ಮೂರು ಎಕರೆಯಲ್ಲಷ್ಟೇ ನೀರು ನಿಲ್ಲುತ್ತಿತ್ತು. ಇದರಲ್ಲಿ ತುಂಬಿದ್ದ 400 ಟನ್‌ಗಳಷ್ಟು ಕಸವನ್ನು ಹೊರಗೆ ತೆಗೆಸಿ ಎಂಎಸ್‌ಜಿಪಿಎಲ್‌ ಕಸ ಸಂಸ್ಕರಣಾ ಘಟಕಕ್ಕೆ ಸಾಗಿಸಿದ್ದೇವೆ. ಕೆರೆ ಪುನರುಜ್ಜೀವನದ ಬಳಿಕ 10 ಎಕರೆ ಪ್ರದೇಶದಲ್ಲಿ ನೀರು ನಿಲ್ಲುತ್ತಿದೆ. ಜಲಕಾಯದ ಸುತ್ತ ಸುಮಾರು 2 ಕಿ.ಮೀ ಉದ್ದದ ನಡಿಗೆ ಪಥ ನಿರ್ಮಿಸಲಾಗಿದೆ. ಎರಡು ಕಡೆ ಸ್ಥಳೀಯ ಪ್ರಭೇದದ ಗಿಡಗಳಿರುವ ಮಿಯಾವಾಕಿ ಕಾಡನ್ನು ಬೆಳೆಸಲಾಗಿದೆ. ಮಕ್ಕಳು ಆಡಲು ಆಟಿಕೆಗಳನ್ನು ಅಳವಡಿಸಲಾಗಿದೆ. ಬಯಲು ವ್ಯಾಯಾಮ ಶಾಲೆ ನಿರ್ಮಿಸಲಾಗಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಲಿಂಗರಾಜು ಅರಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬಾಗಿನ ಅರ್ಪಣೆ: ‘25 ವರ್ಷಗಳಲ್ಲಿ ಈ ಕೆರೆ ಕೋಡಿ ಹರಿದಿದ್ದನ್ನು ನೋಡಿಲ್ಲ. ಒಂದು ವಾರದಿಂದ ಈಚೆಗೆ ಬಂದ ಮಳೆಯಿಂದಾಗಿ ಕೆರೆ ಭರ್ತಿಯಾಗಿ ಕೋಡಿ ಹರಿದಿರುವುದು ಸ್ಥಳೀಯರ ಸಡಗರಕ್ಕೆ ಕಾರಣವಾಗಿದೆ.  ಇದೇ 20ರಂದು ಕೆರೆಗೆ ಬಾಗಿನ ಅರ್ಪಿಸಲು ಸಿದ್ಧತೆ ನಡೆಸಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು. 

‘ನೈಸರ್ಗಿಕ ಸೋಸುವಿಕೆ’

‘ಈ ಕೆರೆಗೆ ಶುದ್ಧೀಕರಣಗೊಂಡ ಕೊಳಚೆ ನೀರು ಸೇರ್ಪಡೆಯಾಗುತ್ತದೆ. ನೀರು ಶುದ್ಧೀಕರಣಕ್ಕೆ ನೀರು 48 ಗಂಟೆ ಕಾಲ ನಿಂತು, ಜೌಗು ಪ್ರದೇಶದ ಮೂಲಕ ಹಾದು ಹೋಗುವ ನೈಸರ್ಗಿಕ ಸೋಸುವಿಕೆ ವಿಧಾನವನ್ನು ಅನುಸರಿಸಲಾಗುತ್ತಿದೆ’ ಎಂದು ಲಿಂಗರಾಜು ಅರಸ್‌ ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು