ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರಿಗಾಗಿ ‘ಕಪಡಾ ಬ್ಯಾಂಕ್’

ಭಟ್ಕಳದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗೆ ಬಟ್ಟೆಗಳೇ ಠೇವಣಿ
Last Updated 9 ಫೆಬ್ರುವರಿ 2020, 20:33 IST
ಅಕ್ಷರ ಗಾತ್ರ

ಭಟ್ಕಳ: ಈ ಬ್ಯಾಂಕ್‌ನಲ್ಲಿ ಸಾಲ, ಬಡ್ಡಿಯ ಸುಳಿವಿಲ್ಲ. ಬಡವರ ಮೈಮುಚ್ಚಲು ನೀಡುವ ಬಟ್ಟೆಯೇ ಠೇವಣಿ. ಇಂಥದ್ದೊಂದು ವಿಶಿಷ್ಟ ‘ಕಪಡಾ ಬ್ಯಾಂಕ್’ ಪಟ್ಟಣದಲ್ಲಿ ಐದು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ.

ನಗರ ಪ್ರದೇಶಗಳಲ್ಲಿ ಹಲವು ಶ್ರೀಮಂತರು ತಾವು ಧರಿಸುವ ಬಟ್ಟೆಗಳು ಸ್ವಲ್ಪ ಹಳೆಯದಾದರೆ ಮೂಲೆಗೆ ಎಸೆಯುತ್ತಾರೆ. ಅವುಗಳನ್ನು ವ್ಯರ್ಥ ಮಾಡದೇ ಬಡವರಿಗೆ ದಾನ ಮಾಡುವುದು ಈ ‘ಬ್ಯಾಂಕ್‌’ನ ಕಾರ್ಯ. ಪಟ್ಟಣದ ನವಾಯತ್ ಕಾಲೊನಿಯಲ್ಲಿ ಅಬ್ದುಲ್ ಮುನೈನ್ ಕೊಬಾಟೆ ಅವರ ನೇತೃತ್ವದಲ್ಲಿ ಇದನ್ನು ತೆರೆಯಲಾಗಿದೆ.

‘ಕಪಡಾ ಬ್ಯಾಂಕ್’ನಲ್ಲಿ ವ್ಯವಸ್ಥಾಪಕರೂ ಸೇರಿದಂತೆ 30 ಸದಸ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಐದು ವರ್ಷಗಳ ಅವಧಿಯಲ್ಲಿ ಸಾವಿರಾರು ಜನರಿಗೆ ನೆರವು ನೀಡಲಾಗಿದೆ.

ಅರಬ್ ರಾಷ್ಟ್ರಗಳಾದ ಸೌದಿ ಅರೇಬಿಯಾ, ಮಸ್ಕತ್ ಸೇರಿದಂತೆ ವಿವಿಧ ದೇಶಗಳಲ್ಲಿ ಇರುವ ಭಟ್ಕಳದ ಶ್ರೀಮಂತರು, ತಾವು ಧರಿಸಿದ, ಬೆಲೆ ಬಾಳುವ ಬಟ್ಟೆಗಳನ್ನು ಕಸದ ರಾಶಿಗೆ ಎಸೆಯುವುದಿಲ್ಲ. ಎಲ್ಲವನ್ನೂ ‘ಕಪಡಾ ಬ್ಯಾಂಕ್’ಗೆ ನೀಡುತ್ತಾರೆ. ಇದನ್ನು ‘ಕಪಡಾ ಠೇವಣಿ’ ಎಂದುಕರೆಯುತ್ತಾರೆ.

‘ಸ್ವಲ್ಪ ಹರಿದು ಹೋಗಿರುವ, ಗುಂಡಿ, ಕಾಲರ್‌ಗಳು ಇಲ್ಲದ ಬಟ್ಟೆಗಳನ್ನು ಸರಿಪಡಿಸಲಾಗುತ್ತದೆ. ಹೊಸ ಬಟ್ಟೆಯ ರೀತಿಯಲ್ಲಿ ಸಿದ್ಧಪಡಿಸಿ, ಶುಭ್ರಗೊಳಿಸಿ ಬಡವರಿಗೆ ಉಚಿತವಾಗಿ ವಿತರಿಸಲಾಗುತ್ತದೆ’ ಎಂದು ‘ಕಪಡಾ ಬ್ಯಾಂಕ್’ ನಿರ್ದೇಶಕ ಡಾ.ಅಬ್ದುಲ್ ಹಮೀದ್ ಅತ್ತಾರ್ ನದ್ವಿ ಹೇಳಿದರು.

ಭಟ್ಕಳ ತಾಲ್ಲೂಕಿನ ಸುತ್ತಮುತ್ತಲು ಇರುವ ಬಡವರ ಪಟ್ಟಿ ಮಾಡುವ ಈ ಬ್ಯಾಂಕ್ ಸದಸ್ಯರು, ಅವರು ಇರುವಲ್ಲಿಗೇ ತೆರಳಿ ಬಟ್ಟೆಗಳನ್ನು ವಿತರಿಸುತ್ತಾರೆ.

ತ್ಯಾಜ್ಯ ನಿರ್ವಹಣೆ ಕುರಿತಾಗಿ ಸುಪ್ರೀಂ ಕೋರ್ಟ್ ನಿಯೋಜಿತ ಸಮಿತಿಯಪ್ರಮುಖರಾದ ಅಲ್ ಮಿತ್ರ ಪಟೇಲ್ ಈಚೆಗೆ ಭಟ್ಕಳಕ್ಕೆ ಭೇಟಿ ನೀಡಿದ್ದರು. ಆಗಈ ಬ್ಯಾಂಕ್‌ಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೇದೇಶದೆಲ್ಲೆಡೆ ಈ ಮಾದರಿಯನ್ನು ಅನುಸರಿಸುವಂತೆ ಸೂಚಿಸುವುದಾಗಿ ಹೇಳಿದ್ದರು.

‘ಫುಡ್ ಬ್ಯಾಂಕ್’, ‘ಬುಕ್ ಬ್ಯಾಂಕ್’

‘ಕಪಡಾ ಬ್ಯಾಂಕ್’ನಿಂದ ಇದೀಗ ಹೊಸದಾಗಿ ‘ಫುಡ್ ಬ್ಯಾಂಕ್’ ಹಾಗೂ ‘ಬುಕ್ ಬ್ಯಾಂಕ್‌’ ಅನ್ನೂ ಆರಂಭಿಸಲಾಗಿದೆ. ಸಭೆ ಸಮಾರಂಭಗಳಲ್ಲಿ ಮಾಡಿದಆಹಾರ ಪದಾರ್ಥಗಳು ಹೆಚ್ಚಾಗಿದ್ದರೆ, ಅದನ್ನು ಚೆಲ್ಲದೇ ಫುಡ್ ಬ್ಯಾಂಕ್ ಗೆ ತಂದು ಕೊಡಲಾಗುತ್ತದೆ. ಅದನ್ನು ಬಡವರಿಗೆ ಹಂಚಲಾಗುತ್ತದೆ.

ಅದೇ ರೀತಿ ಬಳಸದೇ ಇರುವ ಪುಸ್ತಕಗಳನ್ನು ‘ಬುಕ್ ಬ್ಯಾಂಕ್’ಗೆ ತಂದುಕೊಡುತ್ತಾರೆ. ಅದನ್ನು ಮಾರಾಟ ಮಾಡಿ ಬಡಕುಟುಂಬಗಳ ಮಕ್ಕಳ ಶಾಲಾ ಶುಲ್ಕವನ್ನು ಭರಿಸಲಾಗುತ್ತದೆ ಎಂದು ಯೋಜನೆಯ ಬಗ್ಗೆ ಕಪಡಾ ಬ್ಯಾಂಕ್ ವ್ಯವಸ್ಥಾಪಕ ಅಬು ತಲ್ಹಾ ಹೇಳಿದರು.

‘ಕಪಡಾ ಬ್ಯಾಂಕ್’ನಿಂದ ಈವರೆಗೆಎಲ್ಲ ಸಮುದಾಯಗಳ ಲಕ್ಷಾಂತರ ಬಡಜನರಿಗೆ ನೆರವು ನೀಡಲಾಗಿದೆ. ಬಟ್ಟೆ, ಆಹಾರದ ಅಗತ್ಯವಿರುವ ಬಡವರುಇಲ್ಲಿಗೆ ಬರಬಹುದು
–ಡಾ.ಅಬ್ದುಲ್ ಹಮೀದ್ ಅತ್ತಾರ್ ನದ್ವಿ,‘ಕಪಡಾ ಬ್ಯಾಂಕ್’ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT