ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವೈಕ್ಯದ ಸಂದೇಶ ಸಾರಿದ ಐತಿಹಾಸಿಕ ಕರಗ: ತವಕ್ಕಲ್‌ ಮಸ್ತಾನ್‌ ದರ್ಗಾಕ್ಕೂ ಭೇಟಿ

ಹಳೆ ವೈಭವಕ್ಕೆ ಮರಳಿದ ಹಬ್ಬ
Last Updated 17 ಏಪ್ರಿಲ್ 2022, 14:25 IST
ಅಕ್ಷರ ಗಾತ್ರ

ಬೆಂಗಳೂರು: ಐತಿಹಾಸಿಕ ಧರ್ಮರಾಯ ಸ್ವಾಮಿ ಕರಗ ಉತ್ಸವ ಭಾನುವಾರ ನಸುಕಿನ ಜಾವ ವಿಜೃಂಭಣೆಯಿಂದ ನಡೆಯಿತು. ತವಕ್ಕಲ್‌ ಮಸ್ತಾನ್‌ ದರ್ಗಾಕ್ಕೆ ಭೇಟಿ ನೀಡುವ ಸಂಪ್ರದಾಯವನ್ನು ಪಾಲಿಸುವ ಮೂಲಕ ಈ ಹಬ್ಬವು ‘ನಾಡಿನ ಭಾವೈಕ್ಯಕ್ಕೆ ಧಕ್ಕೆ ತರುವ ತಂತ್ರಗಳು ಫಲಿಸುವುದಿಲ್ಲ’ ಎಂಬ ಸ್ಪಷ್ಟ ಸಂದೇಶವನ್ನು ಸಾರಿತು.

ಕೊರೊನಾ ಕಾರಣದಿಂದ ಕಳೆದ ಎರಡು ವರ್ಷ ಕರಗವನ್ನು ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ಮತ್ತೆ ಕಳೆಗಟ್ಟಿದ ಉತ್ಸವ ಹಳೆ ವೈಭವಕ್ಕೆ ಮರಳಿತು.

ಪರಂಪರಾನುಗತವಾಗಿ ಭೇಟಿ ನೀಡುತ್ತಿದ್ದ ಪ್ರದೇಶಗಳಿಲ್ಲೆಲ್ಲ ಕರಗ ಸಾಗಿತು. ಈ ಬಾರಿಯೂ ಚಿಕ್ಕಪೇಟೆಯ ಅಕ್ಕಿಪೇಟೆ ಮುಖ್ಯರಸ್ತೆಯ ಹಜ್ರತ್ ತವಕ್ಕಲ್ ಶಾ ಮಸ್ತಾನ್ ಸೋಹರ್ವಾರ್ಡಿ ರಹಮತುಲ್ಲಾ ದರ್ಗಾಕ್ಕೆ ಬೆಳಗಿನ ಜಾವ ಆರು ಗಂಟೆ ಸುಮಾರಿಗೆ ಕರಗ ಪ್ರವೇಶಿಸುವ ಮೂಲಕ ಈ ಪರಂಪರೆಗೆ ತಗಾದೆ ತೆಗೆದ ಟೀಕಾಕಾರರಿಗೆ ಉತ್ತರ ನೀಡಿತು. ದರ್ಗಾದಲ್ಲಿ ಮುಸ್ಲಿಂ ಸಮುದಾಯದವರು ಸಾಂಪ್ರದಾಯಿಕ ಸ್ವಾಗತ ನೀಡಿದರು. ಭಕ್ತಾದಿಗಳಿಗೆ ಸಿಹಿ ತಿಂಡಿ, ನೀರು, ಹಣ್ಣುಗಳನ್ನು ನೀಡಿ ಸ್ವಾಗತಿಸಿದರು.

ಕರಗ ನೋಡಲು ದರ್ಗಾ ಬಳಿ ಸಾಕಷ್ಟು ಸಂಖ್ಯೆಯಲ್ಲಿ ಮುಸ್ಲಿಮರು ಜಮಾಯಿಸಿದ್ದರು. ದರ್ಗಾದಲ್ಲಿ ಸೇರಿದ್ದವರು ‘ಗೋವಿಂದಾ ಗೋವಿಂದಾ...’ ಎಂದು ಕೂಗಿ ಕರಗದ ಸಂಭ್ರಮ ಹೆಚ್ಚಿಸಿದರು.

‘ಹಿಂದೂ ಮುಸ್ಲಿಮರ ಭಾವೈಕ್ಯತೆಯ ಪ್ರತೀಕ ಇದು. ಬೆಂಗಳೂರು ಕರಗ ಕರ್ನಾಟಕದ ದೊಡ್ಡ ಹಬ್ಬ. ಶಾಂತಿಯುತವಾಗಿ ಸಹೋದರ ಭಾವನೆಯಿಂದ ಎಲ್ಲ ಕಾರ್ಯಗಳು ನಡೆದಿವೆ. ಈ ಬಾರಿ ರಂಜಾನ್‌ ಮತ್ತು ಕರಗ ಒಟ್ಟಿಗೆ ಬಂದಿವೆ. ಹಿಂದೂ–ಮುಸ್ಲಿಮರು ಒಗ್ಗಟ್ಟಿನಿಂದ ಇರಬೇಕು. ಈ ಹಬ್ಬವು ಕೋಮು ಸಾಮರಸ್ಯದ ಸಂಕೇತ. ಸಂಪ್ರದಾಯದ ಪ್ರಕಾರ ಎಲ್ಲವೂ ಒಳ್ಳೆಯ ರೀತಿಯಲ್ಲಿ ನಡೆದಿದೆ. ದರ್ಗಾ ಸುತ್ತಲೂ ಮೂರು ಸುತ್ತು ಕರಗ ಪ್ರದಕ್ಷಿಣೆ ಹಾಕಿತು. ಕೆಲವರು ಕರಗ ಬರುವುದಿಲ್ಲ ಎಂದು ಹೇಳುತ್ತಿದ್ದರು. ಅದೆಲ್ಲವೂ ರಾಜಕೀಯ ಅಷ್ಟೇ’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ದರ್ಗಾ ಕಾರ್ಯದರ್ಶಿ ಮಹಮ್ಮದ್‌ ಇನಾಯತ್‌ ಉಲ್ಲಾ ಹೇಳಿದರು.

ಶನಿವಾರ ರಾತ್ರಿ ಮಳೆ ಸುರಿದರೂ ಭಕ್ತಾದಿಗಳ ಉತ್ಸಾಹ ಕುಂದಿಸಲಿಲ್ಲ. ಬೆಳಗಿನ ಜಾವ ಸುಮಾರು ಮೂರು ಗಂಟೆ ವೇಳೆಗೆ ದ್ರೌಪದಿ ದೇವಿಯ ಅಪ್ಪಣೆಯ ನಂತರ ಆರಂಭವಾದ ಕರಗವನ್ನು ಭಕ್ತರು ಕಣ್ತುಂಬಿಕೊಂಡರು. ಶ್ರದ್ಧೆ, ಭಕ್ತಿಯಿಂದ ನಡೆದ ಕರಗ ಶಕ್ತ್ಯೋತ್ಸವ ಭಕ್ತಾದಿಗಳ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು. ದುಂಡು ಮಲ್ಲಿಗೆಯ ಹೂವುಗಳಿಂದ ಕರಗವನ್ನು ಅಲಂಕೃತಗೊಳಿಸಲಾಗಿತ್ತು. ವೀರಕುಮಾರರು ಅಲಗು ಸೇವೆ ಮಾಡಿ ಗಮನಸೆಳೆದರು. ವೀರಕುಮಾರ ಜ್ಞಾನೇಂದ್ರ ಅವರೇ ಕರಗ ಹೊತ್ತಿದ್ದರು. ಬೆಳಗಿನ ಜಾವ ಆರಂಭವಾದ ಉತ್ಸವನ್ನ ನೋಡಲು ನಗರದ ಇಕ್ಕೆಲಗಳಲ್ಲಿ ಜನರು ಸೇರಿದ್ದರು.

ಚೈತ್ರ ಪೌರ್ಣಿಮಿಯಂದು ನಡೆದ ಈ ಕರಗ ಉತ್ಸವದಲ್ಲಿ ಪುನೀತ್‌ ರಾಜಕುಮಾರ್‌ ಚಿತ್ರಗಳು ಸಹ ರಾರಾಜಿಸಿದವು. ಅಭಿಮಾನಿಗಳು ಜೈಕಾರ ಹಾಕಿದರು.

ಕಬ್ಬನ್‍ಪೇಟೆ, ಆಂಜನೇಯ ಸ್ವಾಮಿ ದೇವಸ್ಥಾನ, ಗಣೇಶ ದೇವಸ್ಥಾನ, ಕಾಟನ್ ಪೇಟೆ, ಬಳೇ ಪೇಟೆ ಸರ್ಕಲ್, ಅಣ್ಣಮ್ಮ ದೇವಸ್ಥಾನ, ಕುಂಬಾರ ಪೇಟೆ, ಚೌಡೇಶ್ವರಿ ದೇವಸ್ಥಾನ, ತಿಗಳರ ಪೇಟೆ ಮೂಲಕ ದೇವಸ್ಥಾನಕ್ಕೆ ದ್ರೌಪದಿ ಕರಗ ಹಿಂತಿರುಗಿತು. ಕರಗ ಸಾಗುವ ಮಾರ್ಗದಲ್ಲಿ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT