ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಯವೈಶ್ಯ ಮಹಾಸಭಾ ಚುನಾವಣೆ: ಅಭ್ಯರ್ಥಿಗಳ ಜಟಾಪಟಿ

Last Updated 22 ಏಪ್ರಿಲ್ 2022, 16:20 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಆರ್ಯವೈಶ್ಯ ಮಹಾಸಭಾ ಚುನಾವಣೆ ಮೇ 1ಕ್ಕೆ ನಿಗದಿಯಾಗಿದ್ದು, ನಾಮಪತ್ರ ಪರಿಶೀಲನೆ ವೇಳೆ ಎರಡು ಗುಂಪುಗಳ ನಡುವೆ ಗುರುವಾರ ಜಟಾಪಟಿ ನಡೆದಿದೆ. ಹಾಲಿ ಅಧ್ಯಕ್ಷ ಆರ್‌.ಪಿ.ರವಿಶಂಕರ್‌, ಗೂಂಡಾ ವರ್ತನೆ ತೋರಿದ್ದಾರೆ ಎಂದು ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ಗೋವರ್ಧನ್‌ ಬಾಬು ದೂರಿದ್ದಾರೆ.

‘ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದವರೆಲ್ಲಾಕಚೇರಿಯ ಹೊರಗೆ ಸೇರಿದ್ದರು. ಚುನಾವಣಾ ಅಧಿಕಾರಿ ಕರೆದಾಗ ಮಾತ್ರ ಅಭ್ಯರ್ಥಿಗಳು ಕಚೇರಿಯೊಳಗೆ‍ಪ್ರವೇಶಿಸಬೇಕು ಎಂಬ ಫಲಕವನ್ನು ಮುಖ್ಯ ದ್ವಾರದ ಮುಂದೆ ಹಾಕಲಾಗಿತ್ತು. ಹೀಗಿದ್ದರೂ ಅಧ್ಯಕ್ಷರ ಕೊಠಡಿಯಲ್ಲಿ ಕೆಲವರು ಕುಳಿತಿದ್ದರು. ಇದನ್ನು ನಾವು ಪ್ರಶ್ನಿಸಿದ್ದೆವು. ಹಾಸನ ಜಿಲ್ಲೆಯವರನ್ನು ಒಳಗೆ ಕರೆಯಲು ಸಿಬ್ಬಂದಿ ಬಂದಾ‌ಗ ಅಧ್ಯಕ್ಷರ ಕೊಠಡಿಯಲ್ಲಿ ಕುಳಿತವರನ್ನು ಆಚೆ ಕಳಿಸುವಂತೆ ಪಟ್ಟುಹಿಡಿದೆವು. ಈ ವೇಳೆ ಏಕಾಏಕಿ ನುಗ್ಗಿ ಬಂದ ರವಿಶಂಕರ್‌, ನಮ್ಮನ್ನು ತಳ್ಳಿದರು’ ಎಂದು ಗೋವರ್ಧನ್‌ ಬಾಬು ಹೇಳಿದರು.

‘ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಆಗಲೇ ಅಧ್ಯಕ್ಷ ಸ್ಥಾನಕ್ಕೆ ತಾವು ಅವಿರೋಧ ಆಯ್ಕೆಯಾಗಿರುವುದಾಗಿ ರವಿಶಂಕರ್‌ ಹೇಳಿಕೊಳ್ಳುತ್ತಿದ್ದಾರೆ. 15 ಅಭ್ಯರ್ಥಿಗಳ ವಿರುದ್ಧ ನಾವು ತಕರಾರು ಸಲ್ಲಿಸಲು ಮುಂದಾಗಿದ್ದೆವು. ಅದಕ್ಕೆ ಅವಕಾಶ ನೀಡದೆ ಅಷ್ಟೂ ಮಂದಿಯ ನಾಮಪತ್ರ ಅಧಿಕೃತಗೊಳಿಸಿದ್ದಾರೆ’ ಎಂದು ಆರೋಪಿಸಿದರು.

ಆರ್‌.ಪಿ.ರವಿಶಂಕರ್‌, ‘ಚುನಾವಣಾಧಿಕಾರಿಗೆ ಪ್ರತ್ಯೇಕ ಕೊಠಡಿ ಇದೆ. ಅದರ ಪಕ್ಕದಲ್ಲೇ ನನ್ನ ಕಚೇರಿ ಇದೆ. ಅಲ್ಲಿ ಕುಳಿತಿದ್ದಾಗ ಕೆಲವರು ಭೇಟಿಯಾಗಲು ಬಂದಿದ್ದರು. ಅವರ‍್ಯಾರು ಅಭ್ಯರ್ಥಿಗಳಲ್ಲ. ಚುನಾವಣಾಧಿಕಾರಿ ಕರೆದರಷ್ಟೇ ಒಳಗೆ ಹೋಗಬೇಕು ಎಂದು ಅಭ್ಯರ್ಥಿಗಳಿಗೆ ಸೂಚಿಸಲಾಗಿತ್ತು. ಗೋವರ್ಧನ್‌ ಬಾಬು, ರಮೇಶ್‌ ಹಾಗೂ ನರಸಿಂಹ ಮೂರ್ತಿ ಅವರು ತಮ್ಮ ಸರತಿಗೂ ಮುನ್ನವೇ ಕಚೇರಿಯೊಳಗೆ ಪ್ರವೇಶಿಸಲು ಮುಂದಾದರು. ಅದಕ್ಕೆ ಅವಕಾಶ ನಿರಾಕರಿಸಿದ ಸಿಬ್ಬಂದಿಯನ್ನು ತಳ್ಳಿದರು. ಹೀಗಾಗಿ ನಾನೇ ಕೊಠಡಿಯಿಂದ ಆಚೆ ಬಂದು ಅವರನ್ನು ಹೊರಹಾಕಲು ಪ್ರಯತ್ನಿಸಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT