ಭಾನುವಾರ, ಮಾರ್ಚ್ 26, 2023
23 °C
ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ಕಿಟ್‌ಗಳು

ವಿಧಾನಸಭೆ ಚುನಾವಣೆ | ಗೋದಾಮು ಮೇಲೆ ದಾಳಿ: ಪಡಿತರ, ಸೀರೆಗಳ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ಪಡಿತರ ಹಾಗೂ ಸೀರೆ ಚೀಲಗಳನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದು, ಈ ಸಂಬಂಧ ಮಹಾಲಕ್ಷ್ಮಿ ಲೇಔಟ್ ಹಾಗೂ ಯಲಹಂಕ ಉಪನಗರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

‘ಆರ್‌.ಎಂ.ಸಿ ಯಾರ್ಡ್‌ನಲ್ಲಿರುವ ಗೋದಾಮಿನಲ್ಲಿ ಪಡಿತರ ಚೀಲಗಳು ಇರುವ ಬಗ್ಗೆ ಮಾಹಿತಿ ಬಂದಿತ್ತು. ಚುನಾವಣೆ ನೀತಿ ಸಂಹಿತೆ ಜಾರಿ ಜವಾಬ್ದಾರಿ ವಹಿಸಿಕೊಂಡಿರುವ ಅಧಿಕಾರಿಗಳು, ಗೋದಾಮು ಮೇಲೆ ದಾಳಿ ಮಾಡಿ ಪಡಿತರ ಜಪ್ತಿ ಮಾಡಿದ್ದಾರೆ’ ಎಂದು ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಹೇಳಿದರು.

‘ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಡಾ. ಕೆ. ಕೆಂಪರಾಜು ಭಾವಚಿತ್ರ ಪಡಿತರ ಚೀಲಗಳ ಮೇಲಿತ್ತು. ಯುಗಾದಿ ಹಬ್ಬದ ಶುಭಾಶಯ ಎಂಬುದಾಗಿ ಬರೆಯಲಾಗಿದೆ. ತಮ್ಮ ಕ್ಷೇತ್ರದ ಮತದಾರರಿಗೆ ಹಂಚುವ ಉದ್ದೇಶದಿಂದ ಪಡಿತರ ಚೀಲಗಳನ್ನು ಸಿದ್ಧಪಡಿಸಿ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದರೆಂಬ ಆರೋಪವಿದೆ. ಅಧಿಕಾರಿ ಜಿ.ಟಿ. ಧನಂಜಯ್ ನೀಡಿರುವ ದೂರು ಆಧರಿಸಿ ಕೆಂಪರಾಜು ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಪಡಿತರ ಕಿಟ್‌ಗಳ 50 ಚೀಲಗಳು (ಚೀಲವೊಂದರಲ್ಲಿ 20ರಿಂದ 30 ಕಿಟ್), 14 ದೊಡ್ಡ ಚೀಲಗಳು (ಒಂದು ಚೀಲದಲ್ಲಿ 1,000 ಕಿಟ್‌ಗಳು), ಗೋಧಿ ಹಿಟ್ಟಿನ 415 ಚೀಲಗಳು, ಮೈದಾ ಹಿಟ್ಟಿನ 1350 ಚೀಲಗಳು, ಬೆಲ್ಲ 1010 ಬಾಕ್ಸ್‌, ಕಡ್ಲೆ ಹಿಟ್ಟು 200 ಚೀಲಗಳು, ರವೆ 700 ಚೀಲಗಳು, ಹಪ್ಪಳ 32 ಬಾಕ್ಸ್ ಹಾಗೂ ಉಪ್ಪು 1950 ಚೀಲಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಹೇಳಿದರು.

13 ಸೀರೆ ಬ್ಯಾಗ್ ಜಪ್ತಿ: ‘ಯಲಹಂಕ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಆಕಾಂಕ್ಷಿ ಮುನೇಗೌಡ ಅವರ ಹುಟ್ಟುಹಬ್ಬ ಸಮಾವೇಶ ಹಾಗೂ ಧ್ವನಿಸುರುಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ಮತದಾರರಿಗೆ ಹಂಚಲು ತಂದಿದ್ದ 13 ಸೀರೆ ಬ್ಯಾಗ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಯಲಹಂಕ ಉಪನಗರ ಠಾಣೆ ಪೊಲೀಸರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು