ಶುಕ್ರವಾರ, ಮಾರ್ಚ್ 24, 2023
30 °C
ಕರ್ನಾಟಕ ವಿಧಾನಸಭಾ ಚುನಾವಣೆ – 2023

ಸರ್ವಜ್ಞನಗರ ಕ್ಷೇತ್ರ ಸ್ಥಿತಿಗತಿ| ಜಾರ್ಜ್‌ ಸರಿಸಾಟಿ ಯಾರು?

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಾಂಗ್ರೆಸ್‌ನ ಪ್ರಭಾವಿ, ಹಿರಿಯ ನಾಯಕ ಕೆ.ಜೆ. ಜಾರ್ಜ್ (ಕೇಳಚಂದ್ರ ಜೋಸೆಫ್ ಜಾರ್ಜ್) ಪ್ರತಿನಿಧಿಸುವ ಕ್ಷೇತ್ರ– ಸರ್ವಜ್ಞನಗರ. 2004ರ ವಿಧಾನಸಭೆ ಚುನಾವಣೆಯಲ್ಲಿ ಭಾರತೀನಗರ ಕ್ಷೇತ್ರದಿಂದ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದ್ದ ಜಾರ್ಜ್, ಕ್ಷೇತ್ರ ಮರುವಿಂಗಡಣೆಯಿಂದಾಗಿ 2008ರಲ್ಲಿ ಸರ್ವಜ್ಞ ನಗರ ಕ್ಷೇತ್ರದಿಂದ ಸ್ಪರ್ಧಿಸುವಂತಾಯಿತು.

ಮೂರು ಚುನಾವಣೆಗಳಲ್ಲಿ (2008, 2013, 2018) ಗೆಲ್ಲುತ್ತಲೇ ಬಂದಿರುವ ಜಾರ್ಜ್‌, ಕ್ಷೇತ್ರದಲ್ಲಿ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ. ಹೀಗಾಗಿ, ಬಿಜೆಪಿ, ಜೆಡಿಎಸ್‌ ಸೇರಿದಂತೆ ಇತರ ಯಾವುದೇ ಪಕ್ಷಗಳಿಗೆ ಅವರ ಸವಾಲು ಎದುರಲ್ಲಿದೆ.

ನಾಗವಾರ, ಎಚ್‌ಬಿಆರ್‌ ಬಡಾವಣೆ, ಬಾಣಸವಾಡಿ, ಕಮ್ಮನಹಳ್ಳಿ, ಕಾಚರಕನಹಳ್ಳಿ, ಕಾಡುಗೊಂಡನಹಳ್ಳಿ, ಲಿಂಗರಾಜಪುರ, ಮಾರುತಿ ಸೇವಾನಗರ ಸೇರಿದ ವಿಶಾಲ ಕ್ಷೇತ್ರವಿದು. ನೆರೆ ರಾಜ್ಯಗಳಿಂದ ಕೆಲಸ ಅರಸಿ ಬರುವ ಹೆಚ್ಚಿನ ಮಂದಿ ಆಶ್ರಯ ಪಡೆದುಕೊಳ್ಳುವುದು ಈ ಭಾಗದಲ್ಲಿಯೇ. ಹೀಗಾಗಿ ಜನಸಂಖ್ಯೆಯ ಒತ್ತಡ, ಕಿರಿದಾದ ರಸ್ತೆಗಳು, ಅಡ್ಡಾದಿಡ್ಡಿ ಬೆಳೆದಿರುವ ಗಲ್ಲಿಗಳು, ಸಂಚಾರ ದಟ್ಟಣೆ, ಕುಡಿಯುವ ನೀರಿನ ಅಸಮರ್ಪಕ ಪೂರೈಕೆ ಹೀಗೆ ಸಮಸ್ಯೆಗಳ ದೊಡ್ಡ ಪಟ್ಟಿಯೇ ತೆರೆದುಕೊಳ್ಳುತ್ತದೆ. ಅಭಿವೃದ್ಧಿ ಕಡಿಮೆ, ಸಮಸ್ಯೆಗಳು ಜಾಸ್ತಿ ಎನ್ನುವುದು ಸ್ಥಳೀಯರ ಆರೋಪ. ಹಲವು ಸೂಕ್ಷ್ಮಪ್ರದೇಶಗಳನ್ನು ಹೊಂದಿರುವುದರಿಂದ ಕ್ಷೇತ್ರದಲ್ಲಿ ಅಪರಾಧ ಚಟುವಟಿಕೆಗಳೂ ಹೆಚ್ಚು ಎನ್ನುವ ಅಪಖ್ಯಾತಿಯೂ ಇದೆ.

ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಗೃಹ, ನಗರಾಭಿವೃದ್ಧಿ ಖಾತೆಗಳನ್ನು ಜಾರ್ಜ್‌ ನಿಭಾಯಿಸಿದ್ದಾರೆ. ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ, ಸಲಹೆಗಾರರನ್ನಾಗಿ ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ ನೇಮಕ ಸೇರಿ ಹಲವು ವಿವಾದಗಳೂ ಗೃಹ ಸಚಿವರಾಗಿದ್ದಾಗ ಜಾರ್ಜ್‌ ಅವರನ್ನು ಸುತ್ತಿಕೊಂಡಿದ್ದವು.‌ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಅಸ್ತ್ರವನ್ನಾಗಿ ಮಾಡಿಕೊಂಡಿದ್ದ ಪ್ರತಿಪಕ್ಷಗಳು ರಾಜೀನಾಮೆಗೆ ಒತ್ತಾಯಿಸಿದ್ದರಿಂದ ಪದತ್ಯಾಗ ಮಾಡಬೇಕಾಗಿಯೂ ಬಂದಿತ್ತು. ಆದರೆ, ಜಾರ್ಜ್‌ ವಿರುದ್ಧ ಅನೇಕ ಆರೋಪಗಳನ್ನು ಹೊರಿಸಿದರೂ ಅವುಗಳನ್ನು ಸಾಬೀತುಪಡಿಸಲು ಸಾಧ್ಯವಾಗಿರಲಿಲ್ಲ. ಈ ಎಲ್ಲದರ ಮಧ್ಯೆ, ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳೂ ಆಗಿವೆ.

ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಮತ‌ಗಳು ನಿರ್ಣಾಯಕ. ಹೀಗಾಗಿ, ಈ ಕೋಟೆಯನ್ನು ಹೇಗೆ ಒಡೆಯುವುದು ಎಂಬ ಚಿಂತೆ ಬಿಜೆಪಿಯನ್ನು ಕಾಡುತ್ತಿದೆ. ಈ ಬಾರಿ ಕೂಡಾ ಜಾರ್ಜ್ ಅವರೇ ಕಾಂಗ್ರೆಸ್ ಹುರಿಯಾಳಾಗುವುದು ನಿಶ್ಚಿತ. ಏಕೆಂದರೆ, ಕ್ಷೇತ್ರದಲ್ಲಿ ‘ಕೈ’ ಪಕ್ಷದಿಂದ ಅವರು ಏಕಮೇವ ಆಕಾಂಕ್ಷಿ. ಅವರಿಗೆ ಸರಿಸಾಟಿಯಾದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಬಿಜೆಪಿ ಮುಂದಿರುವ ಸವಾಲು. 2013ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಪದ್ಮನಾಭ ರೆಡ್ಡಿ, 2018ರಲ್ಲಿಯೂ ಕಣಕ್ಕಿಳಿಯಲು ತಯಾರಿ ನಡೆಸಿದ್ದರು. ಆದರೆ, ಕೊನೆ ಗಳಿಗೆಯಲ್ಲಿ ಎಂ.ಎನ್‌. ರೆಡ್ಡಿಗೆ ಬಿಜೆಪಿ ಟಿಕೆಟ್‌ ನೀಡಿತ್ತು. ಹೀಗಾಗಿ ಈ ಬಾರಿ, ಜಾರ್ಜ್‌ ಎದುರು ಬಿಜೆಪಿಯಿಂದ ತೊಡೆ ತಟ್ಟುವವರು ಯಾರು ಎನ್ನುವುದು ಕುತೂಹಲ ಮೂಡಿಸಿದೆ. ಪ್ರಾಬಲ್ಯ ಇಲ್ಲದೇ ಇದ್ದರೂ ಪೈಪೋಟಿ ನೀಡಲು ಜೆಡಿಎಸ್‌, ಆಮ್ ಆದ್ಮಿ ಪಕ್ಷ ಕೂಡ ಸಜ್ಜಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು