ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ನಡೆಸುವುದು ಕಿರಾಣಿ ಅಂಗಡಿಯಂತಲ್ಲ: ಎಚ್‌.ಎನ್‌.ನಾಗಮೋಹನದಾಸ್‌

Last Updated 30 ಜೂನ್ 2018, 19:22 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್ಕಾರ ನಡೆಸುವುದೆಂದರೆ ಕಿರಾಣಿ ಅಂಗಡಿ ತೆರೆದಂತಲ್ಲ’ ಎಂದು ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಶನಿವಾರ ಬಸವಶಾಂತಿ ಮಿಷನ್‌ ಟ್ರಸ್ಟ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಭಕ್ತಿ ಪಂಥ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜಕಾರಣದಲ್ಲಿ ಒಂದಿಷ್ಟು ಲಜ್ಜೆ ಇರಬೇಕು. ಲಜ್ಜೆಯೂ ಒಂದು ಮೌಲ್ಯ. ಆದರೆ, ಇಂದು ಪಂಚಾಯಿತಿ ಚುನಾವಣೆಗೂ ಜಾತಿ ಲೆಕ್ಕಾಚಾರ ಹಾಕುತ್ತಿದ್ದಾರೆ. ಪ್ರತಿ ಕ್ಷೇತ್ರದಲ್ಲಿ ಜಾತಿಯ ಅಸಮಾನತೆ ಎದ್ದು ಕಾಣುತ್ತಿದೆ. ಅದು ನಮ್ಮನ್ನು ಪಾತಾಳದತ್ತ ಒಯ್ಯುತ್ತಿದೆ. ಈ ಎಲ್ಲ ಬೆಳವಣಿಗೆಗಳ ನಡುವೆಯೂ ಜನರು ಬಹುತ್ವ ಮತ್ತು ಜಾತ್ಯತೀತತೆಯನ್ನು ಕಾಪಾಡುತ್ತಾರೆ ಎಂಬ ವಿಶ್ವಾಸವಿದೆ’ ಎಂದರು.

‘ದೇಶದಲ್ಲಿ ಸಂವಿಧಾನವೇ ಶ್ರೇಷ್ಠ ಗ್ರಂಥ. ಅದರಲ್ಲಿ ದೇಶದ ಬಹುತ್ವವನ್ನು ಗಟ್ಟಿಗೊಳಿಸಲು ಆದ್ಯತೆ ನೀಡಲಾಗಿದೆ. ದೇಶದಲ್ಲಿ ಅಶಾಂತಿ, ಗೊಂದಲ ಸೃಷ್ಟಿಯಾದಾಗ ಸಹಬಾಳ್ವೆಯ ಸಂದೇಶವನ್ನು ಸೂಫಿ ಸಂತರು ಸಾರಿದರು. ಒಂದು ಧರ್ಮ ಇನ್ನೊಂದು ಧರ್ಮವನ್ನು ಪ್ರೀತಿಸಬೇಕು ಎಂದು ಸಂತರು ಹೇಳಿದರು. ಬುದ್ಧ, ಬಸವರಿಂದ ಹಿಡಿದು ಅನೇಕರು ಬಹುತ್ವದ ಉಳಿವಿಗೆ ಕೊಡುಗೆ ಕೊಟ್ಟಿದ್ದಾರೆ’ ಎಂದು
ಅವರು ನುಡಿದರು.

‘ದೇಶಕ್ಕೆ ಹೊರಗಿನಿಂದ ಬೇರೆ ಬೇರೆ ಉದ್ದೇಶಕ್ಕಾಗಿ ಹಲವರು ಬಂದರು. ಹಾಗೆ ಬಂದ ಅನೇಕರು ವಾಪಸ್‌ ಹೋಗಲಿಲ್ಲ. ಇಲ್ಲಿನವರೊಂದಿಗೆ ಬೆರೆತರು. ಅದರ ಪರಿಣಾಮ ಎಲ್ಲ ಧರ್ಮಗಳು ಇಲ್ಲಿ ಉಳಿದವು. ಹೀಗೆ ಎಲ್ಲರೂ ಸಹಬಾಳ್ವೆಯಿಂದ ಬಾಳಿದ್ದೇ ಬಹುತ್ವ ಸಂಸ್ಕೃತಿ’ ಎಂದು
ಹೇಳಿದರು.

ಪ್ರೇಮಾ ಹೊರಟ್ಟಿ ಅವರ ‘ಅನುಭಾವ’ ಕೃತಿಯನ್ನು ಇಬ್ರಾಹಿಂ ಸುತಾರಾ ಬಿಡುಗಡೆಗೊಳಿಸಿದರು. ನಿವೃತ್ತ ಪೊಲೀಸ್‌ ಮಹಾ ನಿರ್ದೇಶಕ ಡಾ.ಅಜಯ್‌ಕುಮಾರ್‌ಸಿಂಗ್‌ ಸೂಫಿ ಭಕ್ತಿಪಂಥದ ಕುರಿತು ಮಾತನಾಡಿದರು. ಪಂಡರಾಪುರ ಗೊಂದಿಯ ಸ್ವಾಮಿ ನಾಮದೇವಾನಂದ ಭಾರತಿ ಮಹಾರಾಷ್ಟ್ರದ ಭಕ್ತಿಪಂಥದ ಕುರಿತು ಮಾತನಾಡಿದರು. ಸಾಹಿತಿ ರಂಜಾನ್‌ ದರ್ಗಾ ಕರ್ನಾಟಕ ಭಕ್ತಿಪಂಥದ ಕುರಿತು ಮಾತನಾಡಿದರು. ಪ್ರೊ.ಎಸ್‌.ಎನ್‌.ಕಾತರಕಿ ಸ್ವಾಗತಿಸಿದರು. ಟ್ರಸ್ಟ್‌ ಅಧ್ಯಕ್ಷ ಮಹಾದೇವ ಹೊರಟ್ಟಿ ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಭಕ್ತಿ ಗೀತೆಗಳ ಗಾಯನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT