ಭಾನುವಾರ, ಮೇ 29, 2022
30 °C
ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಸೂದೆ ಮಂಡಿಸಿದರು

ಬಿಬಿಎಂಪಿ: ಶುಲ್ಕ ಸಂಗ್ರಹಕ್ಕೆ ಮಸೂದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ (ಸುವರ್ಣ ವಿಧಾನಸೌಧ): ಬಿಬಿಎಂಪಿ ಕಟ್ಟಡ ನಕ್ಷೆಯ ಮಂಜೂರಾತಿ, ಕಟ್ಟಡ ಪ್ರಾರಂಭ ಪ್ರಮಾಣಪತ್ರ ಮತ್ತು ಕಟ್ಟಡ ಮುಕ್ತಾಯ ಪ್ರಮಾಣ ಪತ್ರವನ್ನು ಮಂಜೂರು ಮಾಡುವಾಗ ಸಂಗ್ರಹಿಸಿದ ಶುಲ್ಕ ಮತ್ತು ದಂಡಗಳನ್ನು ಸಿಂಧುಗೊಳಿಸಲು ‘ಕರ್ನಾಟಕ ನಗರಪಾಲಿಕೆಗಳ ಮತ್ತು ಕೆಲವು ಇತರ ಕಾನೂನು ತಿದ್ದುಪಡಿ ಮಸೂದೆ 2021’ ಅನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.

ಈ ತಿದ್ದುಪಡಿಯನ್ನು ಈಗಾಗಲೇ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗಿದ್ದು ವಿಧಾನಮಂಡಲದ ಉಭಯ ಸದನಗಳ ಒಪ್ಪಿಗೆಗಾಗಿ ಮುಖ್ಯಮಂತ್ರಿಯ ಪರವಾಗಿ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಸೂದೆಯನ್ನು ಶುಕ್ರವಾರ ಮಂಡಿಸಿದರು.

ಈ ತಿದ್ದುಪಡಿಯ ಮೂಲಕ ಬಿಬಿಎಂಪಿಯ ಬೈ–ಲಾದಲ್ಲಿ ಶುಲ್ಕ ಪಡೆಯುವುದಕ್ಕೆ ಅವಕಾಶ ಕಲ್ಪಿಸಲಾಗುವುದು. ಈವರೆಗೂ ಇದಕ್ಕೆ ಪೂರಕವಾದ ಕಾನೂನು ರಚಿಸಿರಲಿಲ್ಲ. ಸೂಕ್ತ ಕಾನೂನು ರೂಪಿಸಲು ಹೈಕೋರ್ಟ್‌ ಸೂಚಿಸಿರುವ ಕಾರಣ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಕಾನೂನು ರಚಿಸದೇ ಸುಮಾರು ₹ 2,362 ಕೋಟಿ ಸಂಗ್ರಹಿಸಿದ್ದು, ಇದನ್ನು ವಾಪಸ್‌ ಮಾಡಬೇಕು ಎಂದು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಇಷ್ಟು ದೊಡ್ಡ ಮೊತ್ತವನ್ನು ವಾಪಸ್‌ ಮಾಡುವುದನ್ನು ತಡೆಯಲು ಸರ್ಕಾರ ಕಾಯ್ದೆಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಿತ್ತು.

ಬಿಬಿಎಂಪಿ ಸಂಗ್ರಹಿಸಿದ ₹ 2,362 ಕೋಟಿ ಶುಲ್ಕವನ್ನು ವಿವಿಧ ಅಭಿವೃದ್ಧಿ ಕೆಲಸಗಳಿಗೆ ಉಪಯೋಗ ಮಾಡಿದ್ದರಿಂದ ಬಿಬಿಎಂಪಿ ಅದನ್ನು ಮರುಪಾವತಿಸುವುದು ಆರ್ಥಿಕವಾಗಿ ಹೊರೆ ಉಂಟಾಗುವುದರಿಂದ ತಿದ್ದುಪಡಿ ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ.

ಬಿಸಿಎಂ ವಿದ್ಯಾರ್ಥಿ ನಿಲಯ: 1.5 ಲಕ್ಷ ಹೆಚ್ಚುವರಿ ಅರ್ಜಿ
ರಾಜ್ಯದಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿ ಲಭ್ಯವಿರುವ ಸೀಟುಗಳಿಗೆ ಹೋಲಿಸಿದರೆ 1.5 ಲಕ್ಷ ಹೆಚ್ಚುವರಿ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಬಿಜೆಪಿಯ ಭಾರತಿ ಶೆಟ್ಟಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ಕೋರಿ ಹೆಚ್ಚಿನ ಬೇಡಿಕೆ ಬಂದಿರುವ ಕುರಿತು ಮುಖ್ಯಮಂತ್ರಿಯವರ ಜತೆ ಚರ್ಚಿಸಲಾಗಿದೆ. ಬಾಡಿಗೆ ಕಟ್ಟಡಗಳಲ್ಲಿ ಹೊಸ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸುವ ಕುರಿತು ಪರಿಶೀಲಿಸಲಾಗುತ್ತಿದೆ’ ಎಂದರು.

ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ 1,867 ವಿದ್ಯಾರ್ಥಿ ನಿಲಯಗಳು, 68 ವಸತಿ ಶಾಲೆಗಳಿವೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ 826 ವಸತಿ ಶಾಲೆಗಳಿವೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ 2,438 ವಿದ್ಯಾರ್ಥಿ ನಿಲಯಗಳು ಮತ್ತು 18 ಆಶ್ರಮ ಶಾಲೆಗಳಿವೆ. ಹೊಸವಿದ್ಯಾರ್ಥಿ ನಿಲಯಗಳ ಆರಂಭ ಹಾಗೂ ಕಟ್ಟಡ ನಿರ್ಮಾಣದ ಕುರಿತು ಈಗಾಗಲೇ ಚರ್ಚೆ ನಡೆಸಲಾಗಿದೆ ಎಂದರು.

ಬಾಲಕಿಯರು ವಿದ್ಯಾರ್ಥಿ ನಿಲಯಗಳು ಹಾಗೂ ವಸತಿ ಶಾಲೆಗಳಲ್ಲಿ ಭದ್ರತಾ ಸಮಸ್ಯೆ ಪರಿಹರಿಸುವಂತೆ ಭಾರತಿ ಶೆಟ್ಟಿ ಆಗ್ರಹಿಸಿದರು. ಶೀಘ್ರದಲ್ಲಿ ಈ ಸಂಬಂಧ ಸಭೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.

ಶಿವಪ್ಪನಾಯಕ ಕೃಷಿ ವಿ.ವಿ
ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ (ತಿದ್ದುಪಡಿ) ಮಸೂದೆಯನ್ನು ವಿಧಾನಸಭೆಯಲ್ಲಿ ಶುಕ್ರವಾರ ಮಂಡಿಸಲಾಯಿತು.

ಅಲ್ಲದೆ, ಇಂಗ್ಲಿಷ್‌ ಭಾಷಾ ಅಧಿನಿಯಮ 2009 ರಲ್ಲಿ ‘ಶಿಮೊಗ್ಗ’ ಎಂಬ ಪದ ಬಳಕೆಯಾಗಿತ್ತು. ಅದನ್ನು ‘ಶಿವಮೊಗ್ಗ’ ಎಂದು ಮರು ಹೆಸರಿಸಲಾಗಿದೆ. ಕೃಷಿ ಸಚಿವ ಬಿ.ಸಿ.ಪಾಟೀಲ ಮಸೂದೆ ಮಂಡಿಸಿದರು.

4ನೇ ಹಂತದ ನಗರೋತ್ಥಾನ ವಿಸ್ತರಣೆ
ರಾಜ್ಯದಲ್ಲಿ 315 ನಗರಸಭೆ, ಪುರಸಭೆಗಳಿಗೂ ನಗರೋತ್ಥಾನ 4ನೇ ಹಂತದ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಸಚಿವ ಪೌರಾಡಳಿತ ಎಂ.ಟಿ.ಬಿ.ನಾಗರಾಜ್ ಹೇಳಿದರು.

10 ಮಹಾನಗರ ಪಾಲಿಕೆಗಳಲ್ಲಿ ನಗರೋತ್ಥಾನ 4ನೇ ಹಂತದ ಯೋಜನೆಯು ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ಎಂಬ ನಾಮಕರಣದಿಂದ ಅನುಷ್ಠಾನಗೊಳ್ಳುತ್ತಿದೆ, ಇದನ್ನು ವಿಸ್ತರಿಸಲಾಗುವುದು. ಈ ಸಂಬಂಧ ತಯಾರಿ ನಡೆದಿದೆ. ಆರ್ಥಿಕ ಇಲಾಖೆ ಅಧಿಕಾರಿಗಳ ಚರ್ಚಿಸಿ ಅವರ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು ಎಂದೂ ವಿಧಾನಸಭೆಯಲ್ಲಿ ಹೇಳಿದರು.

ಬೊಕ್ಕಸಕ್ಕೆ ನಷ್ಟ: ಸ್ಥಳೀಯ ಸಂಸ್ಥೆಗಳಿಂದ ಕಟ್ಟಡ ನಕ್ಷೆಯನ್ನು ಅನುಮೋದನೆ ಪಡೆಯದೇ ರಾಜ್ಯಾದ್ಯಂತ ಮನೆಗಳನ್ನು ನಿರ್ಮಿಸುತ್ತಿರುವುದರಿಂದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ ಎಂದು ಸಚಿವ ನಾಗರಾಜ್ ಹೇಳಿದರು.

ಜೆಡಿಎಸ್‌ನ ಸದಸ್ಯ ಮಂಜುನಾಥ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಹಾನಗರಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳು ಅನಧಿಕೃತ ನಿರ್ಮಾಣ ತಡೆಗಟ್ಟಲು ನಿಯಮಿತವಾಗಿ 15 ದಿನಗಳಿಗೊಮ್ಮೆ ಸ್ಥಳ ಪರಿಶೀಲನೆ ಮಾಡಿ, ಅಕ್ರಮಗಳು ಕಂಡುಬಂದಲ್ಲಿ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ ಎಂದರು.

ಸಮಿತಿಯಿಂದ ತಿಂಗಳಲ್ಲಿ ವರದಿ: ‘ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಬಗೆಹರಿಸಲು ಹಿರಿಯ ಅಧಿಕಾರಿಗಳ ಸಮಿತಿ ರಚಿಸಲಾಗಿದೆ. ಇನ್ನೊಂದು ತಿಂಗಳಲ್ಲಿ ವರದಿ ನೀಡಲಿದ್ದು, ಅದರಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಶೂನ್ಯವೇಳೆಯಲ್ಲಿ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್‌ನ ಲಿಂಗೇಶ್‌ ಅವರ ಪ್ರಸ್ತಾವಕ್ಕೆ ಸಚಿವರು ಉತ್ತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು