ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜರಾಜೇಶ್ವರಿ ನಗರ: ಕೆಂಚೇನಹಳ್ಳಿ ಕೆರೆ ಇದೀಗ ಕೊಳಚೆ ತಾಣ

ಶತಮಾನದ ಇತಿಹಾಸ ಇರುವ ಕೆರೆ ಬಗ್ಗೆ ರಾಜಕಾರಣಿ, ಅಧಿಕಾರಿಗಳ ನಿರ್ಲಕ್ಷ್ಯ
Last Updated 17 ಫೆಬ್ರುವರಿ 2021, 22:32 IST
ಅಕ್ಷರ ಗಾತ್ರ

ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿ ಒಂದು ಶತಮಾನಕ್ಕೂ ಹಿಂದೆ ನಿರ್ಮಾಣವಾಗಿರುವ ಕೆಂಚೇನಹಳ್ಳಿ ಕೆರೆ ಇಂದು ಕೊಳಚೆ, ಕಟ್ಟಡ ತ್ಯಾಜ್ಯ ತುಂಬಿಕೊಂಡಿದೆ. ಒಂದು ಕಾಲದಲ್ಲಿ ಕುಡಿಯಲು ನೀರು ಕೊಡುತ್ತಿದ್ದ ಕೆರೆ ಇದೀಗ ಒಳಚರಂಡಿ ನೀರಿನ ತಾಣವಾಗಿದೆ.

ಕೆಂಚೇನಹಳ್ಳಿ ಕೆರೆ ಸುತ್ತಲೂ ರಾಜರಾಜೇಶ್ವರಿ ದೇವಸ್ಥಾನ ಹಾಗೂ ಹಲವು ಖಾಸಗಿ ಬಡಾವಣೆಗಳಿವೆ. ಸ್ಥಳೀಯರಿಗೆ ಪರಿಸರಯುಕ್ತ ಪ್ರದೇಶವಾಗಬೇಕಿದ್ದ ಕೆರೆ, ಕಟ್ಟಡ ತ್ಯಾಜ್ಯ ಸೇರಿದಂತೆ ಎಲ್ಲ ರೀತಿಯ ಕೊಳಕಿನ ಗುಂಡಿಯಾಗಿದೆ. ಕೊಳಕಿನಿಂದ ದುರ್ವಾಸನೆ ಬೀರುತ್ತಿದ್ದು, ಹಂದಿ ಹಾಗೂ ಸೊಳ್ಳೆಗಳ ಕಾಟ ಅತಿಯಾಗಿದೆ ಎಂದು ಸ್ಥಳೀಯರು ದೂರುತ್ತಾರೆ.‌

‘ಕೆರೆಯನ್ನು ಸ್ವಚ್ಛಗೊಳಿಸಿ, ಕೊಳಚೆ ನೀರು ಬರದಂತೆ ತಡೆದು ಜನರಿಗೆ ನಡಿಗೆ ಪಥ ಮಾಡಿದರೆ ಅತ್ಯಂತ ಪರಿ ಸರಯುಕ್ತ ಪ್ರದೇಶವಾಗುತ್ತದೆ. ಮಳೆ ನೀರು ನಿಲ್ಲುವಂತೆ ಮಾಡಿದರೆ ಅಂತರ್ಜಲ ಪುನಶ್ಚೇತನಗೊಳ್ಳುತ್ತದೆ. ಸರ್ಕಾರ ಕೆರೆಗಳನ್ನು ಉಳಿಸಿಕೊಳ್ಳಲು ಹಲವು ಯೋಜನೆಗಳನ್ನು ಮಾಡುತ್ತಿದೆ. ಇಂತಹ ಪ್ರಮುಖ ಕೆರೆ ಯನ್ನು ಉಳಿಸಿಕೊಳ್ಳುವತ್ತ ಸ್ಥಳೀಯ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಹೆಚ್ಚಿನ ಆಸಕ್ತಿ ವಹಿಸ ಬೇಕು’ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಶ್ರೀನಿವಾಸಗೌಡ ಅಭಿಪ್ರಾಯಪಟ್ಟರು.

‘ಕೆರೆಯ ಹೂಳು ತೆಗೆದು ಹೆಚ್ಚಿನ ಮಳೆ ನೀರನ್ನು ನಿಲ್ಲಿಸಬೇಕಿದೆ. ಪರಿಸರ ರಕ್ಷಣೆಯ ಜೊತೆಗೆ, ಸ್ಥಳೀಯರಿಗೆ ಅನು ಕೂಲವಾಗುವ ನಿಟ್ಟಿನಲ್ಲಿ ಅಭಿವೃದ್ಧಿ ಮಾಡಬೇಕಿದೆ’ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಟಿ. ತಿಮ್ಮೇಗೌಡ ಹೇಳಿದರು.

ಅಧಿಕಾರಿಗಳ ನಿರ್ಲಕ್ಷ್ಯ: ‘ಪಟ್ಟಣಗೆರೆ ಹಾಗೂ ಕೆಂಚೇನಹಳ್ಳಿಗೆ ಸೇರಿರುವ ಕೆಂಚೇನಹಳ್ಳಿ ಕೆರೆಯಲ್ಲಿ ನಾವು ಚಿಕ್ಕ ವಯಸ್ಸಿನಲ್ಲಿ ಈಜಾಡಿ, ಆಟವಾಡುತ್ತಿದ್ದೆವು. ಹಲಗೆವಡೇರಹಳ್ಳಿ ಕೆರೆ ತುಂಬಿದ ನಂತರ ಈ ಕೆರೆ ತುಂಬುತ್ತಿತ್ತು. ಇದೀಗ ಎಲ್ಲ ಒಳಚರಂಡಿ ನೀರು ಬರುತ್ತಿದೆ. ಕೊಳಕು ತುಂಬಿಕೊಂಡಿದೆ. ಬೆಂಗಳೂರಿನಲ್ಲಿ ಎಲ್ಲ ಕೆರೆಗಳ ಅಭಿವೃದ್ಧಿ ಆಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಎಷ್ಟು ಹೇಳಿದರೂ ಬಿಬಿಎಂಪಿ ಅಧಿಕಾರಿಗಳು ಈ ಕೆರೆಯತ್ತ ಸುಳಿದೇ ಇಲ್ಲ. ಎಲ್ಲರೂ ನಿರ್ಲಕ್ಷ್ಯ ತಳೆದಿದ್ದಾರೆ’ ಎಂದು ಸ್ಥಳೀಯ ಮುಖಂಡ ಪಟ್ಟಣಗೆರೆ ಜಯಣ್ಣ ದೂರಿದರು.

ರಾಜರಾಜೇಶ್ವರಿ ನಗರದಲ್ಲಿರುವ ಕೆಂಚೇನಹಳ್ಳಿ ಕೆರೆ ಸುತ್ತ ರಾಶಿ ರಾಶಿ ತ್ಯಾಜ್ಯ (ಎಡಚಿತ್ರ), ಒಳಚರಂಡಿ ಕೊಳಚೆ, ಜಲಕಳೆ ತುಂಬಿಕೊಂಡಿರುವ ಕೆರೆಯ ದುಃಸ್ಥಿತಿ
ರಾಜರಾಜೇಶ್ವರಿ ನಗರದಲ್ಲಿರುವ ಕೆಂಚೇನಹಳ್ಳಿ ಕೆರೆ ಸುತ್ತ ರಾಶಿ ರಾಶಿ ತ್ಯಾಜ್ಯ (ಎಡಚಿತ್ರ), ಒಳಚರಂಡಿ ಕೊಳಚೆ, ಜಲಕಳೆ ತುಂಬಿಕೊಂಡಿರುವ ಕೆರೆಯ ದುಃಸ್ಥಿತಿ

ಶೇ 1ರಷ್ಟು ಒತ್ತುವರಿ: ರಾಜರಾಜೇಶ್ವರಿ ದೇವಸ್ಥಾನದ ಕಾಂಪೌಂಡ್‌ಗೆ ಹೊಂದಿ ಕೊಂಡಂತೆ ಇರುವ ಕೆಂಚೇನಹಳ್ಳಿ ಕೆರೆ 1903ರಲ್ಲಿ ನಿರ್ಮಾಣವಾಗಿದೆ. ಕೆಂಚೇನಹಳ್ಳಿ ಸರ್ವೆ ನಂ.33ರಲ್ಲಿ 3 ಎಕರೆ 39 ಗುಂಟೆ ಹಾಗೂ ಪಟ್ಟಣಗೆರೆ ಸರ್ವೆ ನಂ.43ರಲ್ಲಿ 31 ಗುಂಟೆ ಸೇರಿದಂತೆ ಒಟ್ಟು 4 ಎಕರೆ 30 ಗುಂಟೆ ವಿಸ್ತೀರ್ಣದಲ್ಲಿದೆ. ಶೇ 1ರಷ್ಟು ಅಂದರೆ 2 ಗುಂಟೆ ಒತ್ತುವರಿಯಾಗಿದೆ ಎಂದು ಅರಣ್ಯ ಇಲಾಖೆಯ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ‍್ರಿ) 2016ರಲ್ಲೇ ವರದಿ ನೀಡಿದೆ.

***

ಕೆಂಚೇನಹಳ್ಳಿ ಕೆರೆ ಕೊಳಚೆಯಿಂದ ತುಂಬಿಹೋಗಿದ್ದು, ಅದನ್ನು ಅಭಿವೃದ್ಧಿ ಪಡಿಸಬೇಕು. ಪರಿಸರ ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕಿದೆ.
-ಶ್ರೀನಿವಾಸಗೌಡ, ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ

***

ನಾವು ಚಿಕ್ಕವಯಸ್ಸಿನಲ್ಲಿ ಕೆಂಚೇನಹಳ್ಳಿ ಕೆರೆಯಲ್ಲಿ ಈಜಾಡುತ್ತಿದ್ದೆವು. ಆದರೆ ಇದೀಗ ಅದರತ್ತ ಹೋಗಲೂ ಅಸಹ್ಯ ವಾಗುವ ಸ್ಥಿತಿಯಲ್ಲಿದೆ.
-ಪಟ್ಟಣಗೆರೆ ಕೆ. ಜಯಣ್ಣ, ಸ್ಥಳೀಯ ಮುಖಂಡ

***

ರಾಜರಾಜೇಶ್ವರಿ ದೇವಸ್ಥಾನದ ಹಿಂಭಾಗವೇ ಕೆಂಚೇನಹಳ್ಳಿ ಕೆರೆ ಇದ್ದು, ಇದನ್ನು ಅಭಿವೃದ್ಧಿ ಪಡಿಸಿದರೆ ಪ್ರವಾಸಿ ತಾಣವೇ ಆಗಲಿದೆ.
-ಟಿ. ತಿಮ್ಮೇಗೌಡ, ಐಎಎಸ್‌ ನಿವೃತ್ತ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT