ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕನ ಮನೆಯಲ್ಲಿ ಕಳವು | ಖಾರದ ಪುಡಿ ಎರಚಿ ಸಾಕ್ಷ್ಯ ನಾಶ: ಯುವತಿ ಬಂಧನ

ಕೆಂಗೇರಿ ಠಾಣೆ ಪೊಲೀಸರ ಕಾರ್ಯಾಚರಣೆ– ₹ 51.90 ಲಕ್ಷ ನಗದು ಜಪ್ತಿ
Published 8 ಮೇ 2024, 0:05 IST
Last Updated 8 ಮೇ 2024, 0:05 IST
ಅಕ್ಷರ ಗಾತ್ರ

ಬೆಂಗಳೂರು: ನಾಗದೇವನಹಳ್ಳಿಯ ಆರ್.ಆರ್. ಬಡಾವಣೆಯ ಮನೆಯೊಂದರಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಸಂಬಂಧ ಆರೋಪಿ ಉಮಾ (22) ಎಂಬುವವರನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದು, ₹ 52 ಲಕ್ಷ ನಗದು ಜಪ್ತಿ ಮಾಡಿದ್ದಾರೆ.

‘ಹುಲಿಯೂರುದುರ್ಗದ ಉಮಾ, ಬೆಂಗಳೂರಿನ ಆಟೊ ಕನ್ಸ್‌ಲ್ಟೆಂಟ್ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಲಗ್ಗೆರೆಯಲ್ಲಿ ವಾಸವಿದ್ದರು. ಆರ್.ಆರ್. ಬಡಾವಣೆಯಲ್ಲಿದ್ದ ಅಕ್ಕನ ಮನೆಯಲ್ಲಿ ಕಳ್ಳತನ ಮಾಡಿದ್ದ ಬಗ್ಗೆ ದೂರು ದಾಖಲಾಗಿತ್ತು. ಪುರಾವೆಗಳನ್ನು ಸಂಗ್ರಹಿಸಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ’ ಎಂದು ನಗರ ಕಮಿಷನರ್ ಬಿ.ದಯಾನಂದ್ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಆರೋಪಿ ಬಳಿ ₹ 5 ಲಕ್ಷ ನಗದು, 30 ಚಿನ್ನದ ನಾಣ್ಯಗಳು ಹಾಗೂ ಆರೋಪಿ ಕೆಲಸ ಮಾಡುತ್ತಿದ್ದ ಕಚೇರಿಯ ಮಾಲೀಕರ ಮನೆಯಲ್ಲಿರಿಸಿದ್ದ ₹46.90 ಲಕ್ಷ ನಗದು, 46 ಚಿನ್ನದ ನಾಣ್ಯಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಹೇಳಿದರು.

ಸಾಲ ತೀರಿಸಲು ಸಂಚು: ‘ಆರೋಪಿ ಉಮಾ, ಅವಿವಾಹಿತೆ. ಐಷಾರಾಮಿ ಜೀವನ ನಡೆಸಲು ಇಚ್ಛಿಸುತ್ತಿದ್ದರು. ಕೆಲಸದಿಂದ ಬರುತ್ತಿದ್ದ ಸಂಬಳ ಜೀವನ ನಿರ್ವಹಣೆಗೆ ಸಾಲುತ್ತಿರಲಿಲ್ಲ. ಹೀಗಾಗಿ, ಹಲವು ಕಡೆಗಳಲ್ಲಿ ಸುಮಾರು ₹6 ಲಕ್ಷ ಸಾಲ ಮಾಡಿದ್ದರು. ಅದನ್ನು ತೀರಿಸಲು ಸಾಧ್ಯವಾಗದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು’ ಎಂದು ಪೊಲೀಸರು ತಿಳಿಸಿದರು.

‘ನಾಗದೇವನಹಳ್ಳಿಯಲ್ಲಿ ವಾಸವಿದ್ದ ಅಕ್ಕ ಹಾಗೂ ಅವರ ಪತಿ ಬಳಿಯೂ ಆರೋಪಿ ಹಣ ಕೇಳಿದ್ದರು. ಆದರೆ, ಅವರು ಕೊಟ್ಟಿರಲಿಲ್ಲ. ಅಕ್ಕನ ಪತಿ, ಸಿಮೆಂಟ್ ವ್ಯಾಪಾರಿ. ಸಿಮೆಂಟ್ ವ್ಯವಹಾರದಿಂದ ಬಂದ ಹಣವನ್ನು ಮನೆಯಲ್ಲಿ ಇಟ್ಟುಕೊಂಡಿದ್ದರು. ಹಣವಿದ್ದರೂ ತನ್ನ ಕಷ್ಟಕ್ಕೆ ಕೊಡಲಿಲ್ಲವೆಂಬ ಕಾರಣಕ್ಕೆ ಕಳ್ಳತನ ಮಾಡಲು ಸಂಚು ರೂಪಿಸಿದ್ದರು’ ಎಂದು ಹೇಳಿದರು.

ನಕಲಿ ಕೀ, ಖಾರದ ಪುಡಿ: ‘ಮನೆಯ ಬೀಗದ ಕೀ ಕದ್ದುಕೊಂಡು ಮಳಿಗೆಯೊಂದಕ್ಕೆ ಹೋಗಿದ್ದ ಉಮಾ, ನಕಲಿ ಕೀ ಮಾಡಿಸಿಟ್ಟುಕೊಂಡಿದ್ದರು. ಏಪ್ರಿಲ್ 22ರಂದು ಅಕ್ಕ ಹಾಗೂ ಮನೆಯವರು, ಜಾತ್ರೆ ನಿಮಿತ್ತ ಊರಿಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇರಲಿಲ್ಲ. ಅಂದು ರಾತ್ರಿ ಮನೆಯ ಬೀಗ ತೆರೆದು ಒಳಗೆ ಹೋಗಿದ್ದ ಆರೋಪಿ, ನಗದು ಹಾಗೂ ಚಿನ್ನದ ನಾಣ್ಯಗಳನ್ನು ಕದ್ದಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಕಳ್ಳತನದ ಸಾಕ್ಷ್ಯ ಸಿಗಬಾರದೆಂದು ಮನೆಯಲ್ಲೆಲ್ಲ ಖಾರದ ಪುಡಿ ಚೆಲ್ಲಿದ್ದರು. ಬೆರಳಚ್ಚು ಸ್ಥಳಗಳನ್ನೂ ಸ್ವಚ್ಛಗೊಳಿಸಿ, ಮನೆಯಿಂದ ಪರಾರಿಯಾಗಿದ್ದರು. ಕಳ್ಳತನ ಮಾಡಿದ್ದ ಹಣದಲ್ಲಿ ₹ 5 ಲಕ್ಷವನ್ನು ಮಾತ್ರ ಆರೋಪಿ ತಮ್ಮ ಬಳಿ ಇಟ್ಟುಕೊಂಡಿದ್ದರು. ‘ಅಕ್ಕನ ಮನೆಯಲ್ಲಿ ಯಾರೂ ಇಲ್ಲ. ಸ್ವಲ್ಪ ದಿನ ಹಣವನ್ನು ನಿಮ್ಮ ಬಳಿ ಇಟ್ಟುಕೊಳ್ಳಿ’ ಎಂಬುದಾಗಿ ಹೇಳಿ ಮಾಲೀಕರ ಮನೆಯಲ್ಲಿ ಇರಿಸಿದ್ದರು. ಚಿನ್ನದ ನಾಣ್ಯಗಳನ್ನೂ ನೀಡಿದ್ದರು’ ಎಂದರು.

‘ಏಪ್ರಿಲ್ 24ರಂದು ಕಳ್ಳತನದ ಸಂಗತಿ ಅಕ್ಕನಿಗೆ ಗೊತ್ತಾಗಿತ್ತು. ಠಾಣೆಗೆ ದೂರು ನೀಡಿದ್ದರು. ಈ ಸಂದರ್ಭದಲ್ಲಿ ಆರೋಪಿ ಸಹ ಜೊತೆಗಿದ್ದರು. ಸ್ಥಳ ಪರಿಶೀಲನೆ ನಡೆಸಿದಾಗ, ಸಂಬಂಧಿಕರೇ ಕೃತ್ಯ ಎಸಗಿದ್ದ ಸುಳಿವು ಸಿಕ್ಕಿತ್ತು. ಉಮಾ ಅವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ತಪ್ಪೊಪ್ಪಿಕೊಂಡರು. ಆದರೆ, ₹ 5 ಲಕ್ಷ ಮಾತ್ರ ಕದ್ದಿದ್ದಾಗಿ ಹೇಳಿ ದಿಕ್ಕು ತಪ್ಪಿಸಲು ಯತ್ನಿಸಿದ್ದರು. ಹಲವು ಪುರಾವೆಗಳ ಸಮೇತ ವಿಚಾರಿಸಿದಾಗ, ಎಲ್ಲ ಹಣ ಹಾಗೂ ಚಿನ್ನದ ನಾಣ್ಯಗಳ ಮಾಹಿತಿ ಬಾಯ್ಬಿಟ್ಟರು’ ಎಂದು ಪೊಲೀಸರು ಹೇಳಿದರು.

‘ವಿಡಿಯೊ ನೋಡಿ ಖಾರದ ಪುಡಿ ಬಳಕೆ’
‘ಮನೆಯಲ್ಲಿ ಕಳ್ಳತನ ಮಾಡಿದ ನಂತರ ಸಾಕ್ಷ್ಯ ನಾಶ ಮಾಡುವುದು ಹೇಗೆ ? ಪೊಲೀಸರಿಗೆ ಸುಳಿವು ಸಿಗದಂತೆ ಮಾಡಲು ಏನು ಮಾಡಬೇಕು ? ಎಂಬಿತ್ಯಾದಿ ಮಾಹಿತಿಯನ್ನು ಆರೋಪಿ ಯೂಟ್ಯೂಬ್‌ನಲ್ಲಿ ವಿಡಿಯೊ ನೋಡಿ ಕಲಿತುಕೊಂಡಿದ್ದರು. ಅದರಂತೆ ಮನೆಯಲ್ಲಿ ಖಾರದ ಪುಡಿ ಚೆಲ್ಲಿದ್ದರು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT