ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ದರ ಏರಿಕೆಗೆ ಗ್ರಾಹಕರ ಆಕ್ರೋಶ

Published 15 ಫೆಬ್ರುವರಿ 2024, 16:28 IST
Last Updated 15 ಫೆಬ್ರುವರಿ 2024, 16:28 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರತಿ ತಿಂಗಳು ವಿದ್ಯುತ್ ದರ ಹೆಚ್ಚಿಸುತ್ತೀರಿ. ಜೊತೆಗೆ ನಿಗದಿತ ಶುಲ್ಕವನ್ನೂ ಹೆಚ್ಚಳ ಮಾಡುತ್ತಿದ್ದೀರಿ. ಇದರಿಂದ ಜನಸಾಮಾನ್ಯರಿಗೆ, ಉದ್ಯಮಿಗಳಿಗೆ ತೀವ್ರ ತೊಂದರೆಯಾಗಿದೆ. ಈಗಿರುವ ದರವೇ ಹೊರೆಯಾಗಿದೆ. ಈಗ ಮತ್ತೊಮ್ಮೆ ದರ ಹೆಚ್ಚಿಸಬೇಡಿ…’

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಗುರುವಾರ ವಿದ್ಯುತ್ ದರ ಪರಿಷ್ಕರಣೆ ಸಂಬಂಧ ಕರೆದಿದ್ದ ಬೆಸ್ಕಾಂ ಗ್ರಾಹಕರ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯಲ್ಲಿ ಕೇಳಿಬಂದ ವಿವಿಧ ಗ್ರಾಹಕರ ಆಕ್ರೋಶದ ನುಡಿಗಳಿವು. ಸಭೆಯಲ್ಲಿ ಭಾಗವಹಿಸಿದ್ದ ನಿವೃತ್ತ ಎಂಜಿನಿಯರ್, ಸಣ್ಣ ಮತ್ತು ಬೃಹತ್ ಉದ್ಯಮಗಳ ಪ್ರತಿನಿಧಿಗಳು ಯಾವುದೇ ಕಾರಣಕ್ಕೂ ವಿದ್ಯುತ್ ದರ ಹೆಚ್ಚಿಸದಂತೆ ಆಯೋಗವನ್ನು ಒಕ್ಕೊರಲಿನಿಂದ ಒತ್ತಾಯಿಸಿದರು.

ಆರಂಭದಲ್ಲಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಂತೇಶ ಬೀಳಗಿಯವರು, ವಿದ್ಯುತ್‌ ದರವನ್ನು ಪ್ರತಿ ಯೂನಿಟ್‌ಗೆ 49 ಪೈಸೆ ಹೆಚ್ಚಿಸಿಕೊಡಬೇಕೆಂದು ಆಯೋಗಕ್ಕೆ ಮನವಿ ಮಾಡಿದರು. ‘ವಿದ್ಯುತ್ ಖರೀದಿ ದರ, ನೌಕರರ ವೇತನ– ಸಾರಿಗೆ ಹೆಚ್ಚಾಗಿದೆ. ನಾವು ತೆಗೆದುಕೊಂಡ ಸಾಲದ ಮೇಲಿನ ಬಡ್ಡಿ ದರವೂ ಹೆಚ್ಚಿದ್ದು, ಆಸ್ತಿಯಲ್ಲಿನ ಸವಕಳಿ ಪ್ರಮಾಣವೂ ಅಧಿಕವಾಗಿದೆ. ಇವೆಲ್ಲವನ್ನೂ ದರ ಏರಿಕೆ ಮೂಲಕ ಸರಿದೂಗಿಸಬಹುದು‘ ಎಂದು ವಿವರಿಸಿದರು.

ಸರಿಯಾದ ಕ್ರಮವಲ್ಲ: ‘ಬೆಸ್ಕಾಂ ವಿದ್ಯುತ್ ಸರಬರಾಜು ಸಮರ್ಪಕವಾಗಿಲ್ಲ ಎಂಬ ಕಾರಣದಿಂದ ಹಲವು ಉದ್ಯಮಿಗಳು ಮುಕ್ತ ಮಾರುಕಟ್ಟೆ ಮೂಲಕ ವಿದ್ಯುತ್ ಖರೀದಿಸುತ್ತಾರೆ. ಅವರ ಮೇಲೂ ನಿಗದಿತ ಶುಲ್ಕ ವಿಧಿಸಲಾಗುತ್ತಿದೆ. ಅದನ್ನು ಪ್ರತಿ ವರ್ಷ ಹೆಚ್ಚಿಸಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ’ ಎಂದು ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಮಹಾಸಂಸ್ಥೆಯ ಪರವಾಗಿ ಹಾಜರಿದ್ದ ಶ್ರೀಧರ ಪ್ರಭು ಮತ್ತು ಎಂ.ಜಿ. ಪ್ರಭಾಕರ್ ಹೇಳಿದರು.‘ಸರ್ಕಾರ ಯಾರಿಗೆ ಬೇಕಾದರೂ ಉಚಿತ ವಿದ್ಯುತ್ ಸೌಲಭ್ಯ ನೀಡಲಿ. ಆದರೆ ಬೇರೆ ಗ್ರಾಹಕರ ಹಿತವನ್ನು ಬಲಿಕೊಡಬೇಡಿ‘ ಎಂದರು. ಎಲ್ಲರಿಗೂ ಟಿಓಡಿ ಮೀಟರ್ ಅಳವಡಿಸುವುದು ಸರಿಯಲ್ಲ. ಇದರಿಂದ ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ನಷ್ಟ ಸಂಭವಿಸುತ್ತದೆ. ಟಿಓಡಿ ಮೀಟರ್ ಕಡ್ಡಾಯ ಮಾಡಬೇಡಿ ಎಂದರು. 

ಸ್ಥಿರಗೊಳಿಸಿ: ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ(ಕಾಸಿಯಾ)ದ ವಿದ್ಯುತ್ ಸಮಿತಿಯ ಎಸ್‌.ಎಂ. ಹುಸೇನ್, ‘ಇಂಧನ ಮತ್ತು ವಿದ್ಯುತ್‌ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕ (ಎಫ್‌ಪಿಪಿಸಿಎ) ಆಧರಿಸಿ ಪ್ರತಿ ತಿಂಗಳು ವಿದ್ಯುತ್ ದರ ಪರಿಷ್ಕರಿಸುತ್ತಿರುವಾಗ, ಈಗ ಮತ್ತೆ 49 ಪೈಸೆ ಏರಿಕೆ ಏಕೆ ಮಾಡಬೇಕು’ ಎಂದು ಕೇಳಿದರು. ‘ನಿಗದಿತ ಶುಲ್ಕ’ವನ್ನು ಫ್ಲೆಕ್ಸಿಬಲ್ ಶುಲ್ಕವನ್ನಾಗಿಸಲಾಗಿದೆ. ಈ ಶುಲ್ಕವನ್ನು ಸ್ಥಿರವಾಗಿಸಬೇಕು’ ಎಂದು ತಿಳಿಸಿದರು.

ಪ್ರತಿ ಗ್ರಾಹಕರಿಗೆ ಹೊಸ ವಿದ್ಯುತ್ ಸಂಪರ್ಕ ಕಲ್ಪಿಸುವಾಗ ಪಡೆಯುವುದು ನಿಗದಿತ ಶುಲ್ಕ. ಅದು ಪ್ರತಿ ವರ್ಷ ಹೆಚ್ಚಾಗಬಾರದು. 10-15 ವರ್ಷಗಳ ನಂತರವೂ ಹೆಚ್ಚಿನ ನಿಗದಿತ ಶುಲ್ಕ ವಿಧಿಸುವುದು ಯಾವ ನ್ಯಾಯ ಎಂದು ಕೆ.ಎಸ್. ಮಲ್ಲಪ್ಪ ಗೌಡ ಪ್ರಶ್ನಿಸಿದರು. ನಿಗದಿತ ಶುಲ್ಕದಿಂದ ವಿದ್ಯುತ್ ಬಿಲ್ ದುಪ್ಪಟ್ಟಾಗಿರುವುದನ್ನೂ ಅವರು ಉದಾಹರಿಸಿದರು.

‘ಗ್ರಾಹಕರು ಅನುಷ್ಠಾನಗೊಳಿಸಿಕೊಂಡು ನಿರ್ವಹಿಸುತ್ತಿರುವ ಟ್ರಾನ್ಸ್‌ಫರ್ಮರ್‌ಗಳು ದೀರ್ಘಕಾಲ ರಿಪೇರಿ ಬರುವುದಿಲ್ಲ. ಆದರೆ, ಬೆಸ್ಕಾಂ ಅಳವಡಿಸುವ ವಿದ್ಯುತ್ ಪರಿವರ್ತಕಗಳು ಪದೇ ಪದೇ ರಿಪೇರಿಗೆ ಬರ್ತವೆ. ಇಂಥ ನಿರ್ವಹಣಾ ಕ್ರಮಗಳನ್ನು ಸಮರ್ಪಕವಾಗಿ ಕೈಗೊಂಡರೆ, ನಷ್ಟವನ್ನು ತಪ್ಪಿಸಬಹುದು. ವಿದ್ಯುತ್ ದರ ಏರಿಸುವ ಪ್ರಮೇಯವೇ ಬರುವುದಿಲ್ಲ‘ ಎಂದು ಎನರ್ಜಿ ಎಂಜಿನಿಯರಿಂಗ್ ಕಂಪನಿಯ ಜಿ.ಎನ್. ಕೃಷ್ಣಪ್ಪ ತಿಳಿಸಿದರು.

ಆಯೋಗದ ಅಧ್ಯಕ್ಷ ರವಿಕುಮಾರ್, ಸದಸ್ಯ ರವಿ ಅವರು ಗ್ರಾಹಕರಿಂದ ಅಹವಾಲು ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT