ಗುರುವಾರ , ಜುಲೈ 16, 2020
24 °C
ಲಾಕ್‌ಡೌನ್‌ ನಂತರದ ಕಾರ್ಯಾಚರಣೆಗೆ ಸಕಲ ಸಿದ್ಧತೆ * ಸಂಪರ್ಕ ರಹಿತ ವ್ಯವಸ್ಥೆಗೆ ಆದ್ಯತೆ

ವೈಮಾನಿಕ ಸೇವೆಗೆ ಬೆಂಗಳೂರು ವಿಮಾನನಿಲ್ದಾಣ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಲಾಕ್‌ಡೌನ್‌ ನಂತರ ಕಾರ್ಯಾಚರಣೆಗೆ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಸಜ್ಜಾಗಿದೆ. ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ವ್ಯಕ್ತಿಗಳ ನಡುವೆ ಸಂಪರ್ಕವನ್ನು ಆದಷ್ಟು ಕಡಿಮೆ ಮಾಡುವ ಕ್ರಮಗಳನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಗಮ (ಬಿಐಎಎಲ್‌) ತೆಗೆದುಕೊಂಡಿದೆ. 

ಬೆಂಗಳೂರಿನಿಂದ ದೇಶದ ಎಲ್ಲ ಮೆಟ್ರೊ ನಗರಗಳು ಹಾಗೂ ಎರಡನೇ ಹಂತದ ನಗರಗಳಿಗೆ ವಿಮಾನಗಳು ಹಾರಾಟ ನಡೆಸುವುದರಿಂದ ಪ್ರಯಾಣಿಕರ ಆರೋಗ್ಯ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ವಿಮಾನ ನಿಲ್ದಾಣದಲ್ಲಿನ ಆಹಾರ ಮತ್ತು ಪೇಯಗಳ ಮಳಿಗೆ ಹಾಗೂ ರಿಟೇಲ್‌ ಮಳಿಗೆಗಳಲ್ಲಿ ಸಂಪರ್ಕ ರಹಿತ ವ್ಯವಸ್ಥೆ ಕಲ್ಪಿಸಲಾಗಿದ್ದು, ಪಾರ್ಸೆಲ್‌ ತೆಗೆದುಕೊಳ್ಳಲು ಮಾತ್ರ ಅವಕಾಶ ನೀಡಲಾಗಿದೆ. ಆದರೆ, ಟರ್ಮಿನಲ್‌ನಲ್ಲಿ ಪ್ರಯಾಣಿಕರು ಇರುವ ಸ್ಥಳಕ್ಕೇ ಆಹಾರ ವಿತರಿಸಲು ತೀರ್ಮಾನಿಸಲಾಗಿದೆ. 

ಪ್ರತಿ ಬಳಕೆಯ ನಂತರ ಉತ್ಪನ್ನಗಳು ಮತ್ತು ಮೇಲ್ಮೈ ಸ್ಥಳಗಳನ್ನು ಮತ್ತು ಪ್ರತಿ 30 ನಿಮಿಷಗಳಿಗೊಮ್ಮೆ ಎಲ್ಲ ಮಳಿಗೆಗಳನ್ನು ಸೋಂಕು ನಿವಾರಕಗಳಿಂದ ಸ್ವಚ್ಛಗೊಳಿಸಲಾಗುತ್ತದೆ. 

ಕಾಯುವ ಸಮಯ ಕಡಿತ: ನಿಲ್ದಾಣದೊಳಗೆ ಯಾವುದೇ ಸೇವೆ ಪಡೆಯಲು ಕಾಯುವ ಸಮಯವನ್ನು ಕಡಿತಗೊಳಿಸಲು ಬಿಐಎಎಲ್‌ ಮುಂದಾಗಿದೆ. ಪ್ರಯಾಣಿಕರು ತಮ್ಮ ಸ್ಮಾರ್ಟ್‌ಫೋನ್‌ಗಳ ಮೂಲಕ ಮುಂಚಿತವಾಗಿಯೇ ಆಹಾರ ಪದಾರ್ಥಗಳಿಗೆ ಆರ್ಡರ್‌ ಮಾಡಬಹುದು. ಇದರಿಂದ ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ.

ಎಫ್‌ಎಸ್‌ಟಿಆರ್ ಬಳಸುವ‌ ಮೂಲಕ ಅಥವಾ ನಿಲ್ದಾಣದೊಳಗಿನ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ ಆರ್ಡರ್‌ ಮಾಡಬಹುದಾಗಿದೆ. ಮಾಹಿತಿಗೆ,  www.bengaluruairport. com ಸಂಪರ್ಕಿಸಬಹುದು. ಡಿಜಿಟಲ್‌ ವ್ಯವಸ್ಥೆ ಮೂಲಕ ಹಣ ಪಾವತಿಸಬಹುದು. 

ಇತರೆ ಕ್ರಮಗಳು: ಸಿಬ್ಬಂದಿಗೆ ಎಲ್ಲರಿಗೂ ಮುಖ–ಕೈಗವಸು ನೀಡಲಾಗಿದೆ. ಕರ್ತವ್ಯಕ್ಕೆ ಹಾಜರಾಗುವ ಮುನ್ನ ಥರ್ಮಲ್‌ ಸ್ಕ್ರೀನಿಂಗ್‌ ಮಾಡಲಾಗುತ್ತದೆ. ಪ್ರಯಾಣಿಕರಿಂದ ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವ ಬಗ್ಗೆ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದು ಬಿಐಎಎಲ್‌ ಹೇಳಿದೆ. 

215 ವಿಮಾನಗಳ ಸಂಚಾರ

ದೇಶದ ಮೂರನೇ ಅತಿ ದಟ್ಟಣೆಯ ನಿಲ್ದಾಣ ಎನಿಸಿಕೊಂಡಿರುವ ಕೆಐಎನಲ್ಲಿ ಸೋಮವಾರ 215 ವಿಮಾನಗಳು ಹಾರಾಟ ನಡೆಸಲಿವೆ. ಇದರಲ್ಲಿ, 108 ವಿಮಾನಗಳು ದೇಶದ ವಿವಿಧ ನಗರಗಳಿಗೆ ಸಂಚರಿಸಿದರೆ, 107 ವಿಮಾನಗಳು ದೇಶ ಮತ್ತು ರಾಜ್ಯದ ವಿವಿಧ ನಗರಗಳಿಂದ ಬೆಂಗಳೂರಿಗೆ ಬರಲಿವೆ. ಆದರೆ, ಪ್ರಯಾಣಿಕರ ಮುಂಗಡ ಟಿಕೆಟ್‌ ಕಾಯ್ದಿರಿಸುವ ಆಧಾರದ ಮೇಲೆ ಈ ಸಂಖ್ಯೆಯಲ್ಲಿ ವ್ಯತ್ಯಾಸವಾಗಬಹುದು ಎಂದು ಬಿಐಎಎಲ್‌ ತಿಳಿಸಿದೆ.

ಯಾವ ವಿಮಾನಯಾನ ಸಂಸ್ಥೆಗಳಿಗೆ ನಾಗರಿಕ ವಿಮಾನಯಾನ ಸಚಿವಾಲಯವು ಸೇವೆ ನೀಡಲು ಅವಕಾಶ ನೀಡುತ್ತದೆ ಎಂಬುದರ ಆಧಾರದ ಮೇಲೆಯೂ ಪ್ರಯಾಣಿಕರ ಸಂಖ್ಯೆ ಅವಲಂಬಿತವಾಗಿದೆ.

ಕೆಐಎನಿಂದ ಇಂಡಿಗೊ ಸಂಸ್ಥೆಯು ಶೇ 47, ಏರ್‌ ಏಷ್ಯಾ ಇಂಡಿಯಾ ಶೇ 16 ಹಾಗೂ ಸ್ಪೈಸ್‌ ಜೆಟ್‌ನಿಂದ ಶೇ 14ರಷ್ಟು ವಿಮಾನಗಳು ಪ್ರಯಾಣಿಕರಿಗೆ ಸೇವೆ ನೀಡುತ್ತಿದ್ದವು.

ಹುಬ್ಬಳ್ಳಿಯಿಂದ ಬೆಂಗಳೂರು–ದೆಹಲಿಗೆ ಸೌಲಭ್ಯ

ಹುಬ್ಬಳ್ಳಿ: ಸ್ಟಾರ್‌ ಏರ್‌ ಸಂಸ್ಥೆ ಸೋಮವಾರ (ಮೇ 25) ವಾಣಿಜ್ಯ ನಗರಿಯಿಂದ ಬೆಂಗಳೂರು ಮತ್ತು ದೆಹಲಿಗೆ (ಹಿಂಡನ್‌) ವಿಮಾನ ಸೌಲಭ್ಯ ಆರಂಭಿಸಲಿದೆ.

ಬೆಂಗಳೂರಿನಿಂದ ಮಧ್ಯಾಹ್ನ 12ಕ್ಕೆ ಹೊರಡುವ ವಿಮಾನ 1 ಗಂಟೆಗೆ ಇಲ್ಲಿಗೆ ಬರಲಿದೆ. ರಾತ್ರಿ 7.55ಕ್ಕೆ ಹುಬ್ಬಳ್ಳಿಯಿಂದ ಹೊರಟು 8.50ಕ್ಕೆ ಬೆಂಗಳೂರು ತಲುಪಲಿದೆ. ಇನ್ನೊಂದು ವಿಮಾನ ಮಧ್ಯಾಹ್ನ 1.30ಕ್ಕೆ ಇಲ್ಲಿಂದ ಹೊರಟು 4.10ಕ್ಕೆ ದೆಹಲಿ ತಲುಪಲಿದ್ದು, ದೆಹಲಿಯಿಂದ 4.45ಕ್ಕೆ ಹೊರಟು ರಾತ್ರಿ 7.25ಕ್ಕೆ ಹುಬ್ಬಳ್ಳಿಗೆ ಬರಲಿದೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ ಠಾಕರೆ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು