ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತ ವೈದ್ಯರ ಸೇವೆಗೆ ಬೇಡಿಕೆ!

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಚಿಕಿತ್ಸೆಗೆ ತೊಡಕಾದ ಸರ್ಕಾರಿ ಆದೇಶ
Published 4 ಮೇ 2024, 22:34 IST
Last Updated 4 ಮೇ 2024, 22:34 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಆದೇಶದ ಅನ್ವಯ ಸೇವೆಯಿಂದ ಬಿಡುಗಡೆ ಹೊಂದಿದ್ದ ನಿವೃತ್ತ ವೈದ್ಯರನ್ನು ಮತ್ತೆ ಕರೆತರಬೇಕೆಂಬ ಬೇಡಿಕೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ವೈದ್ಯರು ಹಾಗೂ ಸಿಬ್ಬಂದಿ ವಲಯದಲ್ಲಿ ವ್ಯಕ್ತವಾಗಿದೆ.

ಗುತ್ತಿಗೆ ಹಾಗೂ ಹೊರಗುತ್ತಿಗೆಯಡಿ ಕಾರ್ಯನಿರ್ವಹಿಸುತ್ತಿರುವ ನಿವೃತ್ತ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರನ್ನು ಸೇವಿಯಿಂದ ಬಿಡುಗಡೆ ಮಾಡಬೇಕೆಂದು ವೈದ್ಯಕೀಯ ಶಿಕ್ಷಣ ಇಲಾಖೆಯು ಜನವರಿ ತಿಂಗಳಲ್ಲಿ ಆದೇಶ ಹೊರಡಿಸಿತ್ತು. ಇಲಾಖೆಯಡಿ ಬರುವ ಎಲ್ಲಾ ವೈದ್ಯಕೀಯ ವಿಜ್ಞಾನ ಕಾಲೇಜು, ವಿಶ್ವವಿದ್ಯಾಲಯ ಹಾಗೂ ಆಸ್ಪತ್ರೆಗಳನ್ನೂ ಆದೇಶದಲ್ಲಿ ಸೇರಿಸಲಾಗಿತ್ತು. ಅದರಂತೆ ಆಸ್ಪತ್ರೆಗಳು  ವೈದ್ಯರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿದ್ದವು.

ಇದರಲ್ಲಿ ಇಲ್ಲಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ವೈದ್ಯರೂ ಸೇರಿದ್ದರು. ತಮ್ಮ ಕಾರ್ಯಶೈಲಿ ಮೂಲಕವೇ ಹೆಸರಾಗಿದ್ದ ಡಾ.ಅಪ್ಪಾಜಿ ಎಲ್. ಹಾಗೂ ಡಾ.ಅರುಣ ಕುಮಾರಿ ಅವರನ್ನು ಮತ್ತೆ ಕರೆತರಬೇಕೆಂಬ ಕೂಗು ಎದ್ದಿದೆ. 

ಈ ಇಬ್ಬರು ವೈದ್ಯರು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಮಕ್ಕಳ ಗಂಥಿಶಾಸ್ತ್ರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ನಿವೃತ್ತಿ ನಂತರವೂ ಕ್ಯಾನ್ಸರ್ ಪೀಡಿತ ಮಕ್ಕಳ ಆರೈಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇವರಿಬ್ಬರ ಸೇವೆ ಹಾಗೂ ಕರ್ತವ್ಯವನ್ನು ಪರಿಗಣಿಸಿದ ಸರ್ಕಾರ, ನಿವೃತ್ತಿ ಬಳಿಕವೂ ಅವರನ್ನು ಮುಂದುವರಿಸಿತ್ತು. ಆದರೆ, ಈಗ ಅವರ ಅನುಪಸ್ಥಿತಿ ಸಂಸ್ಥೆಗೆ ಕಾಡುತ್ತಿದೆ.

ಬೋಧಕರ ಕೊರತೆ: ಸಂಸ್ಥೆಯಲ್ಲಿ ಚಿಕಿತ್ಸೆ ಜತೆಗೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಬೋಧನೆಯನ್ನೂ ಮಾಡಲಾಗುತ್ತಿದೆ. ಸಂಸ್ಥೆಗೆ ಮಂಜೂರಾಗಿದ್ದ 202 ಹುದ್ದೆಗಳಲ್ಲಿ 111 ಹುದ್ದೆಗಳು ಭರ್ತಿಯಾಗಿದ್ದು, ಇನ್ನುಳಿದ 91 ಹುದ್ದೆಗಳಿಗೆ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ಭರ್ತಿ ಮಾಡಿಕೊಳ್ಳಲಾಗಿತ್ತು. ಈಗ ನಿವೃತ್ತರನ್ನು ಕೈಬಿಟ್ಟಿದ್ದರಿಂದ ವೈದ್ಯರ ಕೊರತೆ ಎದುರಾಗಿದೆ. 

‘ಸಂಸ್ಥೆಗೆ ಕ್ಯಾನ್ಸರ್ ಚಿಕಿತ್ಸೆಗೆ ಬರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಚಿಕ್ಕ ಮಕ್ಕಳಲ್ಲಿಯೂ ಕ್ಯಾನ್ಸರ್ ಕಾಣಿಸಿ ಕೊಳ್ಳುತ್ತಿದೆ. ಡಾ.ಅಪ್ಪಾಜಿ ಹಾಗೂ ಡಾ.ಅರುಣ ಕುಮಾರಿ ಅವರು ಕಾಳಜಿಯಿಂದ ಚಿಕಿತ್ಸೆ ಒದಗಿಸುತ್ತಿದ್ದರು. ಅವರ ಮಾರ್ಗದರ್ಶನ, ಅನುಭವ ಸಂಸ್ಥೆಗೆ ಅಗತ್ಯವಿದೆ. ಅವರನ್ನು ಮತ್ತೆ ಕರೆತರಬೇಕು’ ಎಂದು ಸಂಸ್ಥೆಯ ವೈದ್ಯರು ಮತ್ತು ಸಿಬ್ಬಂದಿ ಒತ್ತಾಯಿಸಿದ್ದಾರೆ.

‘ವೈದ್ಯಕೀಯ ಶಿಕ್ಷಣ ಇಲಾಖೆಯ ಆದೇಶದ ಅನುಸಾರ ನಿವೃತ್ತ ವೈದ್ಯರನ್ನು ಬಿಡುಗಡೆ ಮಾಡಲಾಗಿದೆ. ಇಲ್ಲವಾದಲ್ಲಿ ಅವರನ್ನು ಮುಂದುವರಿಸಲಾಗುತ್ತಿತ್ತು. ಅವರ ಸೇವೆ ಅಗತ್ಯವಿತ್ತು’ ಎಂದು ಸಂಸ್ಥೆಯ ವೈದ್ಯರೊಬ್ಬರು ಹೇಳಿದರು.

ಹೊರ ರೋಗಿಗಳ ಸಂಖ್ಯೆ ಏರಿಕೆ

ಕ್ಯಾನ್ಸರ್ ಚಿಕಿತ್ಸೆಗಾಗಿ ಸಂಸ್ಥೆಗೆ ಸ್ಥಳೀಯ ರೋಗಿಗಳ ಜತೆಗೆ ವಿವಿಧ ರಾಜ್ಯಗಳು ವಿದೇಶಗಳಿಂದಲೂ ಬರುತ್ತಿದ್ದಾರೆ. ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್ಆರ್) ನೆರವಿನಿಂದ ಅಧುನಿಕ ಸೌಲಭ್ಯ ಹೊಂದಿದ ಹೊರರೋಗಿ ಘಟಕ (ಒಪಿಡಿ) ವಿವಿಧ ಚಿಕಿತ್ಸಾ ಘಟಕಗಳು ಸಂಸ್ಥೆಗೆ ಇತ್ತೀಚಿನ ವರ್ಷಗಳಲ್ಲಿ ಸೇರ್ಪಡೆಗೊಂಡಿವೆ. ಇದರಿಂದಾಗಿ ಚಿಕಿತ್ಸೆಗೆ ಬರುವ ರೋಗಿಗಳ ಸಂಖ್ಯೆಯೂ ಏರಿಕೆ ಕಂಡಿದ್ದು ನಿತ್ಯ ಸರಾಸರಿ 1400 ಹೊರರೋಗಿಗಳು ಚಿಕಿತ್ಸೆಗೆ ಬರುತ್ತಿದ್ದಾರೆ. ಆದರೆ ಅಗತ್ಯ ಪ್ರಮಾಣದಲ್ಲಿ ವೈದ್ಯರ ಜತೆಗೆ ಸಿಬ್ಬಂದಿ ಇಲ್ಲದಿರುವುದರಿಂದ ರೋಗಿಗಳ ನಿರ್ವಹಣೆ ಸಂಸ್ಥೆಗೆ ಸವಾಲಾಗಿದೆ. ಸಂಸ್ಥೆಯಲ್ಲಿ ಪ್ರತಿವರ್ಷ 3 ಲಕ್ಷಕ್ಕೂ ಅಧಿಕ ಮಂದಿ ಬಾಯಿ ಜಠರ ಸ್ತನ ಅನ್ನನಾಳ ಸೇರಿ ವಿವಿಧ ಪ್ರಕಾರಗಳ ಕ್ಯಾನ್ಸರ್‌ಗಳಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸಂಸ್ಥೆಗೆ ಚಿಕಿತ್ಸೆ ಸಂಬಂಧ ದಾಖಲಾಗಿದ್ದವರಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 3294 ಮಂದಿ ಮೃತಪಟ್ಟಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT