ಶನಿವಾರ, ಮೇ 28, 2022
31 °C
ಕೆಆರ್‌ಐಡಿಎಲ್‌ಗೆ ಕಾಮಗಾರಿ ಹೊಣೆ *₹27 ಲಕ್ಷ ಹೆಚ್ಚುವರಿ ಪಾವತಿ?

ರಸ್ತೆ ಕಾಮಗಾರಿ: ಕಡಿಮೆ ವೆಚ್ಚ ಬಿಟ್ಟು ದುಬಾರಿ ವೆಚ್ಚಕ್ಕೆ ಮೊರೆ!

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಂದಾಜು ವೆಚ್ಚಕ್ಕಿಂತ ಶೇ 15ರಷ್ಟು ಕಡಿಮೆ ಮೊತ್ತದಲ್ಲಿ ಅಭಿವೃದ್ಧಿಯಾಗುತ್ತಿದ್ದ ರಸ್ತೆಗೆ ಶೇ 12ರಷ್ಟು ಹೆಚ್ಚುವರಿ ಮೊತ್ತ ಪಾವತಿಸಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್) ಮೂಲಕ ಅಭಿವೃದ್ಧಿಪಡಿಸಲು ಸಮಾಜ ಕಲ್ಯಾಣ ಇಲಾಖೆ ಮುಂದಾಗಿದೆ.

‍ಪರಿಶಿಷ್ಟ ಜಾತಿಗಳ ಉಪಯೋಜನೆ (ಎಸ್‌ಸಿಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆ (ಟಿಎಸ್‌ಪಿ) ಅನುದಾನದಲ್ಲಿ ಸಿ.ವಿ. ರಾಮನ್‌ನಗರ ವ್ಯಾಪ್ತಿಯಲ್ಲಿ ₹3 ಕೋಟಿ ಮೊತ್ತದಲ್ಲಿ ಆರು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮೊದಲಿಗೆ ಪಂಚಾಯತ್ ರಾಜ್ ಇಲಾಖೆಯ ಎಂಜಿನಿಯರಿಂಗ್ ವಿಭಾಗದ ಮೂಲಕ ಟೆಂಡರ್ ಪ್ರಕ್ರಿಯೆ ನಡೆಸಲಾಗಿತ್ತು.

ತಲಾ ₹50 ಲಕ್ಷ ಮೊತ್ತದ ಆರು ಕಾಮಗಾರಿಗಳಿಗೆ ಗುತ್ತಿಗೆದಾರರು ಟೆಂಡರ್ ಸಲ್ಲಿಸಿದ್ದರು. ಅಂದಾಜು ಮೊತ್ತಕ್ಕಿಂತ ಶೇ 15ರಿಂದ ಶೇ 18ರಷ್ಟು ಕಡಿಮೆ ದರದಲ್ಲಿ ಕಾಮಗಾರಿ ನಿರ್ವಹಿಸಲು ಗುತ್ತಿಗೆದಾರರು ಮುಂದೆ ಬಂದಿದ್ದರು. ಆದರೆ, ಈ ಟೆಂಡರ್ ಪ್ರಕ್ರಿಯೆ ರದ್ದುಗೊಳಿಸಿ ಈಗ ಅಷ್ಟೂ ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ಗೆ ವಹಿಸಲಾಗಿದೆ. ಕಾಮಗಾರಿ ನಿರ್ವಹಿಸಲು ಇದೇ ಮೊತ್ತದಲ್ಲಿ ಶೇ 12ರಷ್ಟನ್ನು ಸೇವಾ ಶುಲ್ಕವಾಗಿ ನೀಡಬೇಕಾಗುತ್ತದೆ. ಈ ಮೊತ್ತವನ್ನು ಕಡಿತಗೊಳಿಸಿಯೇ ಯೋಜನೆಯ ಅಂದಾಜು ರೂಪಿಸಲಾಗುತ್ತದೆ.

‘ಉದಾಹರಣೆಗೆ ₹1 ಕೋಟಿ ಅಂದಾಜು ಮೊತ್ತದ ಕಾಮಗಾರಿಯನ್ನು ₹85 ಲಕ್ಷ ಮೊತ್ತದಲ್ಲಿ ಪೂರ್ಣಗೊಳಿಸಲು ಗುತ್ತಿಗೆದಾರರು ಮುಂದೆ ಬರುತ್ತಾರೆ. ಅದನ್ನು ಬಿಟ್ಟು ಕೆಆರ್‌ಐಡಿಎಲ್‌ಗೆ ಹೆಚ್ಚುವರಿಯಾಗಿ ₹12 ಲಕ್ಷ ಸೇವಾ ಶುಲ್ಕ ಪಾವತಿಸಿ ಕಾಮಗಾರಿ ವಹಿಸಲಾಗಿದೆ. ಹೀಗೆ ಮಾಡುವುದರಿಂದ ಸರ್ಕಾರಕ್ಕೆ ಒಟ್ಟಾರೆ ₹27 ಲಕ್ಷ ನಷ್ಟವಾಗುತ್ತದೆ’ ಎಂಬುದು ಗುತ್ತಿಗೆದಾರರ ಆಕ್ಷೇಪ.

‘ಕೆಆರ್‌ಐಡಿಎಲ್ ಮತ್ತು ಜಿಲ್ಲಾ ನಿರ್ಮಿತಿ ಕೇಂದ್ರಗಳು ಗುಣಮಟ್ಟದ ಕಾಮಗಾರಿ ನಿರ್ವಹಿಸುತ್ತಿಲ್ಲ. ಅನಗತ್ಯವಾಗಿ ವಿಳಂಬ ಮಾಡುತ್ತಿವೆ. ಆದ್ದರಿಂದ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿನ ಯಾವುದೇ ಕಾಮಗಾರಿಗಳನ್ನು ವಹಿಸಬಾರದು ಎಂದು 2018ರಲ್ಲಿ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಶಾಸಕರು ಮತ್ತು ಕೆಲ ಸಚಿವರ ಒತ್ತಡಕ್ಕೆ ಮಣಿದು ಆ ನಿರ್ಧಾರವನ್ನು ಕೆಲವೇ ತಿಂಗಳಲ್ಲಿ ವಾಪಸ್ ಪಡೆಯಿತು. ಗುಣಮಟ್ಟದ ಕಾಮಗಾರಿ ನಿರ್ವಹಿಸುತ್ತಿಲ್ಲ ಎಂದು ಸರ್ಕಾರವೇ ಒಪ್ಪಿಕೊಂಡು ಮತ್ತೆ ಆ ನಿರ್ಧಾರ ಬದಲಿಸಿದ್ದು ಎಷ್ಟು ಸರಿ’ ಎಂಬುದು ಗುತ್ತಿಗೆದಾರರ ಪ್ರಶ್ನೆ.

‘ಕಾಮಗಾರಿಗಳನ್ನು ಕಡಿಮೆ ಮೊತ್ತಕ್ಕೆ ವಿಭಜಿಸದೆ ಒಂದೇ ಪ್ಯಾಕೇಜ್‌ನಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಬೇಕು ಎಂಬ ಸುತ್ತೋಲೆಯೂ ಇದೆ. ಆದರೆ, ವಾರ್ಡ್‌ ಸಂಖ್ಯೆ 57ರಲ್ಲಿ(ಸಿ.ವಿ.ರಾಮನ್‌ನಗರ) ₹3 ಕೋಟಿ ಮೊತ್ತದ ಒಂದೇ ಕಾಮಗಾರಿಯನ್ನು ತಲಾ ₹50 ಲಕ್ಷದ ಆರು ಭಾಗವಾಗಿ ವಿಭಜಿಸಲಾಗಿದೆ. ಒಟ್ಟು ಆರು ಕಾಮಗಾರಿಗಲ್ಲಿ ಎರಡು ಗುತ್ತಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರಿಗೆ ದೊರೆತಿತ್ತು. ಇದನ್ನು ತಪ್ಪಿಸಲು ಕೆಆರ್‌ಐಡಿಎಲ್‌ಗೆ ವಹಿಸಲಾಗಿದೆ’ ಎಂಬುದು ಈ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಗುತ್ತಿಗೆದಾರರ ಆರೋಪ.

‘ಕೆಆರ್‌ಐಡಿಎಲ್‌ ಅಥವಾ ನಿರ್ಮಿತಿ ಕೇಂದ್ರಕ್ಕೆ ವಹಿಸಿದರೆ ಕಾಮಗಾರಿಗಳನ್ನು ತಮ್ಮ ಹಿಂಬಾಲಕರ ಮೂಲಕ ತಾವೇ ನಿರ್ವಹಿಸಲು ಅನುಕೂಲ ಆಗಲಿದೆ ಎಂಬ ಲೆಕ್ಕಾಚಾರದಲ್ಲಿ ಜನಪ್ರತಿನಿಧಿಗಳು ಈ ರೀತಿ ಒತ್ತಡ ಹೇರುತ್ತಿದ್ದಾರೆ. ಸಿ.ವಿ.ರಾಮನ್‌ನಗರದ ಕಾಮಗಾರಿಗಳು ಕೇವಲ ಉದಾಹರಣೆಯಷ್ಟೆ, ರಾಜ್ಯದ ಎಲ್ಲ ಕಡೆಯೂ ಇದೇ ರೀತಿ ಎಸ್‌ಸಿಪಿ, ಟಿಎಸ್‌ಪಿ ಅನುದಾನ ಪೋಲು ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಬೀಳಬೇಕು’ ಎಂಬುದು ಅವರ ಒತ್ತಾಯ.

ನಿಯಮ ಉಲ್ಲಂಘಿಸಿ ಕಾಮಗಾರಿ
ಎಸ್‌ಸಿಪಿ ಅನುದಾನದಲ್ಲಿ ಕಾಮಗಾರಿ ಅನುಷ್ಠಾನಗೊಳ್ಳುವ ಜಾಗದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಶೇ 50ಕ್ಕಿಂತ ಹೆಚ್ಚಿನ ಜನಸಂಖ್ಯೆ ಇರಬೇಕು. ಆದರೆ, ಸಿ.ವಿ.ರಾಮನ್‌ನಗರ ವಾರ್ಡ್‌ನಲ್ಲಿ ಈ ನಿಯಮ ಉಲ್ಲಂಘಿಸಲಾಗಿದೆ ಎಂದು ರಾಜ್ಯ ಎಸ್‌ಸಿಎಸ್‌ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎನ್. ಮಹದೇವಸ್ವಾಮಿ ಆರೋಪಿಸಿದ್ದಾರೆ.

‘2011ರ ಜನಗಣತಿ ಪ್ರಕಾರ ಇಡೀ ವಾರ್ಡ್‌ನಲ್ಲಿ 58,815 ಜನಸಂಖ್ಯೆ ಇದ್ದರೆ, ಪರಿಶಿಷ್ಟ ಜಾತಿಯ 4,516(ಶೇ 7.68) ಮತ್ತು ಪರಿಶಿಷ್ಟ ಪಂಗಡದ 943(ಶೇ1.60) ಜನಸಂಖ್ಯೆ ಇದೆ. ಆದರೂ ಇಲ್ಲಿ ಎಸ್‌ಸಿಪಿ ಅನುದಾನದಲ್ಲಿ ಕಾಮಗಾರಿ ನಿರ್ವಹಿಸಲಾಗುತ್ತಿದೆ’ ಎಂದು ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು