ಸೋಮವಾರ, ಮೇ 17, 2021
29 °C

ಇಸ್ರೇಲ್‌ಗೆ ದೊಡ್ಡ ಮೆಣಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಾದರಿ ಕೃಷಿ ಪದ್ಧತಿಗೆ ಇಸ್ರೇಲ್‌ ಉದಾಹರಣೆ ನೀಡಲಾಗುತ್ತದೆ. ಆದರೆ ರಾಮನಗರ ಜಿಲ್ಲೆ ಮಾಯಗಾನ
ಹಳ್ಳಿಯಲ್ಲಿ ಬೆಳೆದ ದೊಣ್ಣೆಮೆಣಸಿನ ಕಾಯಿ (ಕ್ಯಾಪ್ಸಿಕಂ) ಇಸ್ರೇಲ್‌ ತಲುಪುತ್ತಿದೆ. 10 ಎಕರೆ ಭೂಮಿಯಲ್ಲಿ ಸಮಗ್ರ ಕೃಷಿ ಕೈಗೊಂಡಿರುವ ಕಮಲಮ್ಮ, ಈ ಭಾಗದಲ್ಲಿ ‘ಕ್ಯಾಪ್ಸಿಕಂ ಕಮಲಮ್ಮ’ ಎಂದೇ ಖ್ಯಾತರಾಗಿದ್ದಾರೆ. 

ಎಸ್ಸೆಸ್ಸೆಲ್ಸಿಯವರೆಗೆ ಓದಿರುವ ಕಮಲಮ್ಮ, ಅರ್ಧ ಎಕರೆ ಭೂಮಿಯಲ್ಲಿ ಬೆಳೆಯುತ್ತಿರುವ ದೊಣ್ಣೆಮೆಣಸಿನಕಾಯಿ
ಕೃಷಿಯಿಂದಲೇ ವರ್ಷಕ್ಕೆ ₹12ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುತ್ತಿದ್ದಾರೆ. ಇದಲ್ಲದೆ ರಾಗಿ, ಭತ್ತ, ತೊಗರಿ, ಅಲಸಂದಿ, ನೆಲಗಡಲೆ, ಅವರೆ, ಸಿರಿಧಾನ್ಯಗಳಾದ ನವಣೆ, ಸಾಮೆ ಬೆಳೆ ಅನ್ನು ಸಾಲು ಪದ್ಧತಿಯಲ್ಲಿ ಬೆಳೆದಿದ್ದಾರೆ. 

ತೋಟಗಾರಿಕಾ ಬೆಳೆಗಳಾದ ಮಾವು, ಬಾಳೆ, ಸೀತಾಫಲ, ತೆಂಗು, ಹಲಸು ಹಾಗೂ ಹುಣಸೆ ಬೆಳೆಯುತ್ತಿದ್ದಾರೆ. ದೊಣ್ಣೆ ಮೆಣಸಿನಕಾಯಿ ಬೆಳೆದು ಉತ್ತಮ ಇಳುವರಿ ಪಡೆದಿರುವುದಲ್ಲದೆ ಸ್ವತಃ ಗ್ರೇಡಿಂಗ್‌ ಮತ್ತು ಪ್ಯಾಕಿಂಗ್‌ ಮಾಡಿ ವಿವಿಧ ರಾಜ್ಯಗಳು ಹಾಗೂ ಇಸ್ರೇಲ್‌ಗೂ ರಫ್ತು ಮಾಡುತ್ತಿದ್ದಾರೆ. 

ರೇಷ್ಮೆ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿದ್ದು, ವಾರ್ಷಿಕ  ₹2.10 ಲಕ್ಷ ಆದಾಯ ಗಳಿಸುತ್ತಿದ್ದಾರೆ. ತೇಗು, ಬೇವು, ಹೆಬ್ಬೇವು, ಹೊಂಗೆ ಮರಗಳನ್ನು ಬೆಳೆದು ಪೋಷಿಸುತ್ತಿದ್ದಾರೆ. ಕುರಿ, ಕೋಳಿ, ಮೀನು ಸಾಕಣೆ ಮಾಡುತ್ತಿದ್ದಾರೆ.

ಎರೆಹುಳು ಘಟಕ, ಜೀವಸಾರ ಘಟಕ, ಜಪಾನ್‌ ಮಾದರಿ ಕಾಂಪೋಸ್ಟ್‌ ಘಟಕ ಹಾಗೂ ಜೈವಿಕ ಅನಿಲ ಘಟಕಗಳನ್ನು ಹೊಂದಿದ್ದಾರೆ. ನಿಯಮಿತವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ, ಕೃಷಿ ತಜ್ಞರ ಸಲಹೆಯಂತೆ ಮಣ್ಣಿಗೆ ಸಾವಯವ ಹಾಗೂ ಜೈವಿಕ ಗೊಬ್ಬರಗಳನ್ನು ಹಾಕಿ ಅದರ ಫಲವತ್ತತೆ ಹೆಚ್ಚಿಸಲು ವಿಶೇಷ ಗಮನ ನೀಡಿದ್ದಾರೆ. 

‘ಕೃಷಿ ವಿ.ವಿ.ಗಳು ಆಯೋಜಿಸುವ ತರಬೇತಿ ಶಿಬಿರಗಳಿಗೆ ಹಾಜರಾಗುತ್ತೇನೆ. ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳ ಸಲಹೆಯನ್ನು ಅಳವಡಿಸಿಕೊಂಡು ಶ್ರಮ ಹಾಕಿದ್ದರ ಫಲ ಈಗ ಸಿಗುತ್ತಿದೆ’ ಎಂದು ಕಮಲಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು. 

ಕೃಷಿ ಕ್ಷೇತ್ರದ ಸಾಧನೆಗಾಗಿ ಹಲವು ಪುರಸ್ಕಾರ ಲಭಿಸಿವೆ. ಕೃಷಿಮೇಳದಲ್ಲಿ ಭಾನುವಾರ ‘ಎಚ್‌.ಡಿ. ದೇವೇಗೌಡ ರಾಜ್ಯಮಟ್ಟದ ಅತ್ಯುತ್ತಮ ರೈತ ಮಹಿಳೆ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಮುತ್ತು ಕೃಷಿ ಆಕರ್ಷಣೆ
ಬೆಂಗಳೂರು:
ಕಪ್ಪೆಚಿಪ್ಪುಗಳಿಂದ ಮುತ್ತುಗಳನ್ನು ಉತ್ಪಾದಿಸುವ ನವೀನ ತಂತ್ರಜ್ಞಾನ ಮೇಳದಲ್ಲಿ ಗಮನ ಸೆಳೆಯಿತು. 

ಜಿಕೆವಿಕೆಯಲ್ಲಿ ಇರುವ ಒಳನಾಡು ಮೀನುಗಾರಿಕೆ ಘಟಕ ಈ ವಿನೂತನ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ. ಮುತ್ತು ಆಭರಣಗಳಲ್ಲಿ ಆಕರ್ಷಣೆಯಾದರೂ ಉತ್ಪಾದನೆ ಕುಗ್ಗಿದೆ. ಜತೆಗೆ ಅಸಲಿ ಮುತ್ತುಗಳು ಸಿಗುವುದು ಕಷ್ಟ. ಹೀಗಾಗಿ ಸ್ಥಳೀಯವಾಗಿ ಲಭ್ಯವಿರುವ ಜೀವಂತ ಕಪ್ಪೆ ಚಿಪ್ಪುಗಳಿಂದ ಮುತ್ತುಗಳ ಉತ್ಪಾದಿಸುವ ವಿಧಾನ ಸಂಶೋಧನೆ ಮಾಡಲಾಗಿದೆ. ಇವುಗಳನ್ನು ಸಿಹಿನೀರಿ
ನಿಂದ ಮಾತ್ರ ತಯಾರಿಸಲು ಸಾಧ್ಯ’ ಎಂದು ಸಂಶೋಧಕರು ಹೇಳುತ್ತಾರೆ.

‘ಕಪ್ಪೆಚಿಪ್ಪುಗಳು ಸಮುದ್ರ, ಸಿಹಿನೀರಿನಲ್ಲಿ ಸಿಗುತ್ತವೆ. ನೀರಿನಲ್ಲಿರುವ ಸೂಕ್ಷ್ಮ ಜೀವಿಗಳಾದ ಸಸ್ಯ ಹಾಗೂ ಏಕಕೋಶ ಪಾಚಿಗಳನ್ನು ಶೋಧಿಸಿ, ಅವುಗಳನ್ನು ಆಹಾರವನ್ನಾಗಿ ಬಳಸಲಾಗುತ್ತದೆ. ನೀರಿನ ಜೊತೆಗೆ ಮರಳು, ಸಣ್ಣ ಹರಳು ಚಿಪ್ಪಿನೊಳಗೆ ಪ್ರವೇಶಿಸಬಹುದು. ಆ ಹೊರ ವಸ್ತುಗಳನ್ನು ಹೊರ ಹಾಕಲು ಆಗದಿದ್ದಾಗ ಕಪ್ಪೆಚಿಪ್ಪು ಜೀವಿಗಳು ಹೊರ ವಸ್ತುಗಳಿಂದ ಆಗುವ ತುರಿಕೆ ತಪ್ಪಿಸಿಕೊಳ್ಳಲು ಹೊಳಪುಳ್ಳ ದ್ರವವನ್ನು ಹೊರವಸ್ತುಗಳ ಮೂಲಕ ಮೇಲೆ ಸ್ರವಿಸುತ್ತವೆ. ಕಾಲಾನಂತರ ಈ ಹೊದಿಕೆಯುಳ್ಳ ವಸ್ತುಗಳನ್ನು ಮುತ್ತು ಎನ್ನುತ್ತಾರೆ’ ಎಂದು ಸಂಶೋಧನಾ ಕೇಂದ್ರದ ಮುಖ್ಯ ವಿಜ್ಞಾನಾಧಿಕಾರಿ ಡಾ. ಬಿ.ವಿ. ಕೃಷ್ಣಮೂರ್ತಿ ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು