ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ಸಾರಿಗೆ ನೌಕರರ ಮುಷ್ಕರ: ತಪ್ಪದ ಪ್ರಯಾಣಿಕರ ಪರದಾಟ

Last Updated 12 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ಯುಗಾದಿ ಹಿಂದಿನ ದಿನ ಊರುಗಳಿಗೆ ಹೋಗಲು ಹೊರಟಿದ್ದ ಪ್ರಯಾಣಿಕರು ಸಾರಿಗೆ ಮುಷ್ಕರದಿಂದ ಸೋಮವಾರವೂ ಪರದಾಡಿದರು. ದುಪ್ಪಟ್ಟು ದರ ಇದ್ದರೂ ನಿವಾರ್ಯವಾಗಿ ಖಾಸಗಿ ಬಸ್‌ಗಳನ್ನೇ ಏರಿ ಸಾಗಿದರು.

ಸಾರಿಗೆ ನಿಗಮಗಳ ಬಸ್ ಇಲ್ಲದ ಕಾರಣ ದೂರದ ಊರುಗಳಿಗೆ ಹಲವರು ತಮ್ಮ ಸ್ವಂತ ವಾಹನಗಳಲ್ಲಿ ಹೋದರೆ, ಇನ್ನು ಅನೇಕರು ಬಸ್‌ಗಳಿಗಾಗಿ ಕಾದರು. ಸಾರಿಗೆ ಸಂಸ್ಥೆಯ ಬಸ್‌ಗಳು ಕಡಿಮೆ ಇದ್ದ ಕಾರಣ ದುಬಾರಿಯಾದರೂ ಖಾಸಗಿ ಬಸ್‌ಗಳಲ್ಲೇ ಪ್ರಯಾಣ ಮಾಡಿದರು. ಭಾನುವಾರಕ್ಕೆ ಹೋಲಿಸಿದರೆ ರಸ್ತೆಗಿಳಿದ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಖ್ಯೆಯಲ್ಲಿ ಏರಿಕೆಯಾಗಿತ್ತು.

ಬಿಎಂಟಿಸಿ ಬಸ್‌ಗಳ ಸಂಚಾರದಲ್ಲೂ ಸೋಮವಾರ ಸ್ವಲ್ಪ ಏರಿಕೆಯಾಗಿತ್ತು. ಮೆಜೆಸ್ಟಿಕ್ ಮತ್ತು ಕೆ.ಆರ್. ಮಾರುಕಟ್ಟೆಯಿಂದ ನಗರದ ವಿವಿಧೆಡೆಗೆ ಸೋಮವಾರ ಸಂಜೆ ತನಕ 452 ಬಸ್‌ಗಳು ಕಾರ್ಯಾಚರಣೆ ಮಾಡಿದವು.

ಕೆ.ಆರ್‌.ಮಾರುಕಟ್ಟೆಯಿಂದ ವಿಜಯನಗರ, ಮೈಸೂರು ರಸ್ತೆ, ನಾಯಂಡಹಳ್ಳಿ, ಕೆಂಗೇರಿ, ಮಲತ್ತಹಳ್ಳಿ, ಚಂದ್ರಾಲೇಔಟ್, ಜಂಬೂಸವಾರಿ ದಿಣ್ಣೆ, ಕೊಟ್ಟಿಗೆಪಾಳ್ಯ, ಪೀಣ್ಯ, ಕೆ.ಆರ್.ಪುರ, ಶಿವಾಜಿನಗರ ಸೇರಿ ಹಲವು ಮಾರ್ಗಗಳಲ್ಲಿ ಬಿಎಂಟಿಸಿ ಬಸ್‌ ಸಂಚರಿಸಿದವು.

ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣದಿಂದ ಚಂದ್ರಾ ಲೇಔಟ್, ವಿಜಯನಗರ, ಅಂಬೇಡ್ಕರ್ ಕಾಲೇಜು, ಯಲಹಂಕ, ಕೆ.ಆರ್.ಪುರ ಮಾರ್ಗದ ಬಸ್‌ಗಳು ಕಾರ್ಯಾಚರಣೆಯಲ್ಲಿ ಇದ್ದವು.

ಖಾಸಗಿ ಬಸ್‌ಗಳ ಜತೆಗೆ ಬಿಎಂಟಿಸಿ ಬಸ್‌ಗಳೂ ರಸ್ತೆಗೆ ಇಳಿದಿದ್ದರಿಂದ ಹಬ್ಬದ ಸಾಮಗ್ರಿ ಖರೀದಿಯಲ್ಲಿದ್ದ ಜನ ಸ್ವಲ್ಪ ನಿರಾಳರಾಗಿದ್ದರು. ಕೆಲ ಮಾರ್ಗಗಳಲ್ಲಿ ಗಂಟೆಗಟ್ಟಲೆ ಜನ ಕಾದು ನಿಂತಿದ್ದರು.

ಹಬ್ಬದ ಕಾರಣ ಮೆಟ್ರೊ ರೈಲಿನಲ್ಲೂ ಪ್ರಯಾಣಿಕರ ಸಂಖ್ಯೆ ಸ್ವಲ್ಪ ಹೆಚ್ಚಳವಾಗಿತ್ತು. ಮಾಸ್ಕ್ ಧರಿಸದವರಿಗೆ ದಂಡ ಪ್ರಯೋಗವನ್ನು ಮೆಟ್ರೊ ಅಧಿಕಾರಿಗಳು ಮಾಡಿದರು. ಮಾಸ್ಕ್ ಇದ್ದರೂ ಅದನ್ನು ಸರಿಯಾಗಿ ಧರಿಸದವರಿಗೆ ₹250 ದಂಡ ವಿಧಿಸಲಾಗುತ್ತಿದೆ ಎಂದು ಹೇಳಿದರು.

ತಟ್ಟೆ, ಲೋಟ ಚಳವಳಿ: ವಶಕ್ಕೆ ಪಡೆದ ಪೊಲೀಸರು

ನಗರ ಜಿಲ್ಲಾಧಿಕಾರಿ ಕಚೇರಿ ಎದುರು ತಟ್ಟೆ, ಲೋಟ ಚಳವಳಿ ನಡೆಸಲು ಮುಂದಾಗಿದ್ದ 50ಕ್ಕೂ ಹೆಚ್ಚು ಮಂದಿ ಸಾರಿಗೆ ನೌಕರರ ಕುಟುಂಬ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದರು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ತಟ್ಟೆ, ಲೋಟಗಳೊಂದಿಗೆ ಬಂದಿದ್ದ ನೌಕರರ ಕುಟುಂಬ ಸದಸ್ಯರು, ಅವುಗಳನ್ನು ಬಡಿದು ಜೋರಾಗಿ ಶಬ್ಧ ಮಾಡಿದರು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು, ವಶಕ್ಕೆ ಪಡೆದರು.

ಮಕ್ಕಳೊಂದಿಗೆ ಬಂದಿದ್ದ ಮಹಿಳೆಯರು ಚಳವಳಿಗೆ ಅವಕಾಶ ನೀಡದ ಪೊಲೀಸರ ವಿರುದ್ಧ ಕಿಡಿ ಕಾರಿದರು. ತಾಯಂದಿರನ್ನು ಪೊಲೀಸರು ವಶಕ್ಕೆ ಪಡೆದಾಗ ಮಕ್ಕಳು ಕಣ್ಣೀರಿಟ್ಟವು. ಪೊಲೀಸರು ಮಕ್ಕಳನ್ನು ಅವರ ಅಮ್ಮಂದಿರ ಬಳಿಗೆ ಕರೆದೊಯ್ದು ಬಿಟ್ಟರು.

ಯಾವುದೇ ಪ್ರತಿಭಟನೆ ನಡೆಸಲು ಅನುಮತಿ ಇಲ್ಲದ ಕಾರಣ ಅವರನ್ನು ವಶಕ್ಕೆ ಪಡೆಯಲಾಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.

ನೌಕರರ ಮನವೊಲಿಸಿ ನಿಯೋಜನೆ

ವೈದ್ಯಕೀಯ ಹಾಗೂ ದೈಹಿಕ ಕ್ಷಮತೆಯ ಪ್ರಮಾಣಪತ್ರ ಸಲ್ಲಿಸಲು ಬಂದ ಸಾರಿಗೆ ಸಿಬ್ಬಂದಿಯ ಮನವೊಲಿಸಿ ಅಧಿಕಾರಿಗಳು ಕರ್ತವ್ಯಕ್ಕೆ ನಿಯೋಜಿಸಿದರು.

55 ವರ್ಷ ಮೇಲ್ಪಟ್ಟ ನೌಕರರು ಸೋಮವಾರ ಸಂಜೆಯ ವೇಳೆಗೆ (ಏ.12) ವೈದ್ಯಕೀಯ ಮತ್ತು ದೈಹಿಕ ಕ್ಷಮತೆಯ ಪ್ರಮಾಣಪತ್ರ ನೀಡಬೇಕು ಎಂದು ಬಿಎಂಟಿಸಿ ಸೂಚನೆ ಹೊರಡಿಸಿತ್ತು. ಸಲ್ಲಿಸಲು ಕಚೇರಿಗೆ ಬಂದವರಲ್ಲಿ ಹಲವರ ಮನವೊಲಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾದರು.

‘ಬಲವಂತ ಮಾಡಿಲ್ಲ. ಅವರಿಗೆ ವಸ್ತುಸ್ಥಿತಿಯ ಮನವರಿಕೆ ಮಾಡಲಾಗುತ್ತಿದೆ. ಬಳಿಕ ಅವರೇ ಸ್ವಂತ ಇಚ್ಛೆಯಿಂದ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ’ ಎಂದು ಅಧಿಕಾರಿಗಳು ಹೇಳಿದರು.

‘ಕೆಲ ಸಿಬ್ಬಂದಿ ಸೋಮವಾರ ಕರ್ತವ್ಯಕ್ಕೆ ಹಾಜರಾಗಿದ್ದ ಕಾರಣ ನಗರದಲ್ಲಿ 500 ಬಸ್‌ಗಳ ಕಾರ್ಯಾಚರಣೆ ಸಾಧ್ಯವಾಯಿತು’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ‘‍ಪ್ರಜಾವಾಣಿ’ಗೆ ತಿಳಿಸಿದರು.

ಹಿರಿಯ ನೌಕರರಿಗೆ ನೋಟಿಸ್

ಕರ್ತವ್ಯಕ್ಕೆ ಹಾಜರಾಗುವಂತೆ 2,237 ಹಿರಿಯ ನೌಕರರಿಗೆ ಬಿಎಂಟಿಸಿ ನೋಟಿಸ್ ನೀಡಿದೆ.

50ರಿಂದ 55 ವರ್ಷದೊಳಗಿನ ಸಿಬ್ಬಂದಿಗೆ ಪ್ರತ್ಯೇಕವಾಗಿ ನೋಟಿಸ್ ಕಳುಹಿಸಿರುವ ಬಿಎಂಟಿಸಿ ಅಧಿಕಾರಿಗಳು, ‘ಏ.15ರೊಳಗೆ ಕರ್ತವ್ಯಕ್ಕೆ ಹಾಜರಾಗಬೇಕು. ಇಲ್ಲದಿದ್ದರೆ ತೊಂದರೆಗೆ ಸಿಲುಕುತ್ತೀರಿ’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಹಿರಿಯ ನೌಕರರಾದ ನಿಮಗೆ ಸಂಸ್ಥೆಯ ಆಗುಹೋಗುಗಳ ಬಗ್ಗೆ ಅರಿವಿದೆ. ಹೀಗಾಗಿ, ಹಠ ಮಾಡದೆ ಕರ್ತವ್ಯಕ್ಕೆ ಹಾಜರಾಗಬೇಕು’ ಎಂದು ತಿಳಿಸಿದ್ದಾರೆ.

ಅಂಕಿ-ಅಂಶ

3,399-ಸೋಮವಾರ ಕಾರ್ಯಾಚರಣೆ ಮಾಡಿದ ಬಸ್‌ಗಳು

14,286 -ನಾಲ್ಕು ನಿಗಮಗಳ ವ್ಯಾಪ್ತಿಯಲ್ಲಿ ಖಾಸಗಿ ಬಸ್‌ಗಳ ಕಾರ್ಯಾಚರಣೆ

9 -ಹಾನಿಗೀಡಾದ ಸರ್ಕಾರಿ ಬಸ್‌ಗಳು

965 -ರಾಜ್ಯದಲ್ಲಿ ಕಾರ್ಯಾಚರಣೆ ಮಾಡಿದ ಹೊರರಾಜ್ಯದ ಬಸ್‌ಗಳು

* 124 ನೌಕರರನ್ನು ಸೋಮವಾರ ವಜಾ ಮಾಡಲಾಗಿದೆ

* ಕಳೆದ ಆರು ದಿನಗಳಲ್ಲಿ580 ನೌಕರರು ವಜಾಗೊಂಡಿದ್ದಾರೆ

* 260 ನೌಕರರ ಅಮನಾತು

* 55 ವರ್ಷ ಮೇಲ್ಪಟ್ಟ 7 ನೌಕರರ ನಿವೃತ್ತಿ

* ಚಾಲಕನ ಮೇಲೆ ಹಲ್ಲೆ ಮಾಡಿದ ಮೂವರ ಬಂಧನ

* 10,430 ಸಿಬ್ಬಂದಿಗೆ ಮಾರ್ಚ್ ತಿಂಗಳ ವೇತನ ಬಿಡುಗಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT