ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ನೌಕರರ ಮುಷ್ಕರ: ಪ್ರಯಾಣಿಕರು ವಿರಳ, ಪ್ರಯಾಣ ದರ ಹೆಚ್ಚಳ

Last Updated 8 ಏಪ್ರಿಲ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಸಾರಿಗೆ ನೌಕರರ ಮುಷ್ಕರದ ಎರಡನೇ ದಿನವಾದ ಗುರುವಾರವೂ ಖಾಸಗಿ ಬಸ್‌ಗಳು ಕಾರ್ಯಾಚಣೆ ಮಾಡಿದ್ದರಿಂದ ಪ್ರಯಾಣಿಕರ ಪರದಾಟ ಕಡಿಮೆಯಾಗಿತ್ತು. ಆದರೆ, ಕೆಎಸ್‌ಆರ್‌ಟಿಸಿ ದರ ಪಟ್ಟಿ ನೀಡಿದ್ದರೂ, ಅದನ್ನೂ ಲೆಕ್ಕಿಸದೆ ಪ್ರಯಾಣಿಕರಿಂದ ಹೆಚ್ಚಿನ ದರ ವಸೂಲಿ ಮಾಡಿದವು.

ಬುಧವಾರದಂತೆಯೇ ಮೆಜೆಸ್ಟಿಕ್ ಕೆಂಪೇಗೌಡ ಬಸ್‌ ನಿಲ್ದಾಣ ಕೆಂಪು ಬಸ್‌ಗಳಿಲ್ಲದೆ ಬಿಕೋ ಎನ್ನುತ್ತಿತ್ತು. ಖಾಸಗಿ ಬಸ್‌ಗಳು, ಆಟೋರಿಕ್ಷಾಗಳೇ ನಿಲ್ದಾಣವನ್ನು ಆವರಿಸಿಕೊಂಡಿದ್ದವು. ಆದರೆ, ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ನಿಲ್ದಾಣಕ್ಕೆ ಬರುವ ಪ್ರಯಾಣಿಕರನ್ನು ಅಡ್ಡಗಟ್ಟಿ ಯಾವ ಊರಿಗೆ ಎಂದು ಕೇಳಿ ಕರೆದೊಯ್ದು ತಮ್ಮ ವಾಹನಗಳಿಗೆ ಚಾಲಕರು ಕೂರಿಸಿಕೊಳ್ಳುತ್ತಿದ್ದರು.

ಪ್ರಯಾಣ ದರದ ಪಟ್ಟಿಯನ್ನು ಕೆಎಸ್‌ಆರ್‌ಟಿಸಿ ಕೊಟ್ಟಿತ್ತು. ಆದರೂ, ಅದಕ್ಕೂ ಮೀರಿ ₹50ರಿಂದ ₹100 ಹೆಚ್ಚಿನ ದರ ಪಡೆದುಕೊಳ್ಳುವುದು ಸಾಮಾನ್ಯವಾಗಿತ್ತು. ‘ಮ್ಯಾಕ್ಸಿಕ್ಯಾಬ್‌ಗಳಿಗೆ ಕೆಎಸ್‌ಆರ್‌ಟಿಸಿಯ ‘ಕರ್ನಾಟಕ ಸಾರಿಗೆ(ಕೆಂಪು)’ ಬಸ್‌ಗಳ ದರ ಪಡೆಯಲು ಆಗುವುದಿಲ್ಲ. ಸೀಟಿನಲ್ಲಿ ಹಿಂದಕ್ಕೆ ವಾಲುವ ಅವಕಾಶ(ಪುಷ್‌ ಬ್ಯಾಕ್) ಇದೆ. ಹೀಗಾಗಿ, ‘ರಾಜಹಂಸ’ ಬಸ್‌ಗಳಲ್ಲಿನ ಪ್ರಯಾಣ ದರ ಪಡೆಯಲಾಗುವುದು’ ಎಂದು ಚಾಲಕರು ಸಮಜಾಯಿಷಿ ನೀಡುತ್ತಿದ್ದರು.

ದರಪಟ್ಟಿ ಹಿಡಿದು ನಿಲ್ದಾಣದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದರು. ಆದರೂ, ಅವರ ಮಾತಿಗೂ ಕಿವಿಗೊಡದೆ ನಿಲ್ದಾಣದಿಂದ ಹೊರಗೆ ಬಂದ ಬಳಿಕ ಹೆಚ್ಚಿನ ದರ ಪಡೆಯಲಾಗುತ್ತಿದೆ ಎಂದು ಪ್ರಯಾಣಿಕರು ದೂರಿದರು.

‘ರಾಜಹಂಸ’ ಬಸ್‌ಗಳಲ್ಲಿ ಕುಳಿತುಕೊಳ್ಳಲು ಸ್ವಲ್ಪ ವಿಶಾಲವಾದ ಜಾಗ ಇರುತ್ತದೆ. ಆದರೆ, ಮ್ಯಾಕ್ಸಿಕ್ಯಾಬ್‌ಗಳಲ್ಲಿ ಪುಷ್ ಬ್ಯಾಕ್ ಸೀಟುಗಳಿದ್ದರೂ, ಇಕ್ಕಟ್ಟಿನಲ್ಲೇ ಕುಳಿತುಕೊಳ್ಳಬೇಕು. ‘ಕರ್ನಾಟಕ ಸಾರಿಗೆ’ ಬಸ್‌ಗಳಲ್ಲಿ ಕೂರುವಷ್ಟು ಅರಾಮದಾಯಕವಾಗಿಲ್ಲ. ಆದರೆ, ದುಪಟ್ಟು ಪ್ರಯಾಣ ದರ ನೀಡಬೇಕಾಗಿದೆ. ಖಾಸಗಿ ಬಸ್‌ಗಳಿಂದ ನಮಗೆ ಹೊರೆಯಾಗುತ್ತಿದೆ’ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು ಬಿಎಂಟಿಸಿ ಬಸ್‌ ನಿಲ್ದಾಣದಲ್ಲಿ ನಿಗಮದ ಕೆಲ ಬಸ್‌ಗಳು ಕಾಣಿಸಿಕೊಂಡವು. ಖಾಸಗಿ ಬಸ್‌ಗಳು ಇದ್ದರೂ ಜನರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಇತ್ತು.

ಅಧಿಕಾರಿಗಳಿಗೆ ಕೂಟ ಪ್ರಶ್ನೆ
‘ನೌಕರರ ಅಳಿವು–ಉಳಿವಿನ ಪ್ರಶ್ನೆ ಆಗಿರುವ ಮುಷ್ಕರದಲ್ಲಿ ಸಾರಿಗೆ ನಿಗಮಗಳ ಅಧಿಕಾರಿ ಮತ್ತು ಭದ್ರತಾ ಸಿಬ್ಬಂದಿ ಪಾಲ್ಗೊಳ್ಳಬೇಕು’ ಎಂದು ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ಮನವಿ ಮಾಡಿದ್ದಾರೆ.

‘ಬೇರೆ ನಿಗಮ ಮತ್ತು ಇಲಾಖೆಗಳ ಅಧಿಕಾರಿಗಳಿಗೆ ಹೋಲಿಸಿದರೆ ನಿಮ್ಮ ವೇತನ ಹಾಗೂ ಇತರ ಸೌಲಭ್ಯಗಳು ಎಷ್ಟಿವೆ ಎಂಬುದನ್ನು ಪರಿಶೀಲಿಸಿಕೊಳ್ಳಿ. ಮನಸಿನಲ್ಲೇ ವ್ಯಥೆಪಡುವುದನ್ನು ಬಿಟ್ಟು ನಮ್ಮೊಂದಿಗೆ ಕೈಜೋಡಿಸಿ. ಎಲ್ಲರು ಒಗ್ಗಟ್ಟಿನಿಂದ ಹೋರಾಟ ಮಾಡಲು ಮುಂದೆ ಬನ್ನಿ’ ಎಂದು ಕೋರಿ ವಿಡಿಯೊ ಮಾಡಿ ಬಿಡುಗಡೆ ಮಾಡಿದ್ದಾರೆ.

‘ಕೇವಲ ನೈತಿಕ ಬೆಂಬಲ ಸೂಚಿಸುವುದರಿಂದ ಪ್ರಯೋಜನ ಇಲ್ಲ. ನಮ್ಮ ಹೋರಾಟ ಕೆಳ ಹಂತದ ನೌಕರರ ಪರ ಮಾತ್ರ ಅಲ್ಲ. ನಿಮ್ಮ ಪರವೂ ಇದೆ. ನಿಮ್ಮ ಮತ್ತು ಇತರ ಇಲಾಖೆ ಅಧಿಕಾರಿಗಳ ವೇತನದಲ್ಲಿ ಇರುವ ತಾರತಮ್ಯವೂ ನಿವಾರಣೆ ಆಗಬೇಕು. ಬೀದಿಗೆ ಬನ್ನಿ’ ಎಂದು ಮನವಿ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಅಧಿಕಾರಿಯೊಬ್ಬರು, ‘ನಾವು ಕೆಲಸಕ್ಕೆ ಸೇರುವಾಗಲೇ ನಮ್ಮ ಕೆಲಸ, ಸಂಬಳ, ಸಂಸ್ಥೆಯಲ್ಲಿ ದೊರೆಯುವ ಸೌಲಭ್ಯದ ಬಗ್ಗೆ ಅರಿವಿತ್ತು. ಆದರೂ, ಪ್ರಸ್ತುತ ಸ್ಥಿತಿಯಲ್ಲಿ ಬರುತ್ತಿರುವ ಸಂಬಳ ಮತ್ತು ಇತರೆ ಭತ್ಯೆಗಳು ಬೇರೆ ಇಲಾಖೆಗಳಿಗೆ ಹೋಲಿಸಿದಾಗ ಕಡಿಮೆ ಎನಿಸಿದೆ. ಕೋವಿಡ್ ಸಂದರ್ಭದಲ್ಲಿ 6ನೇ ವೇತನ ಆಯೋಗದ ಶಿಫಾರಸು ಅಳವಡಿಕೆ ಬಗ್ಗೆಯಾಗಲಿ, ಸಾರಿಗೆ ಬಂದ್ ಮಾಡುವುದಕ್ಕೆ ನಮ್ಮ ಸಹಮತವಿಲ್ಲ’ ಎಂದರು.

‘ಅತ್ಯಂತ ಕ್ಲಿಷ್ಟಕರ ಸಮಯದಲ್ಲಿ ಸರ್ಕಾರ ನಮ್ಮ ನೆರವಿಗೆ ಬಂದಿದೆ. ಮುಷ್ಕರ ಕೈಬಿಟ್ಟು ಸರ್ಕಾರದ ಜತೆ ಮಾತುಕತೆ ನಡೆಸಿಕೊಂಡು ವೇತನ ಹೆಚ್ಚಳಕ್ಕೆ ಒತ್ತಾಯಿಸಬಹುದಾಗಿದೆ’ ಎಂದು ಹೇಳಿದರು.

ಅಂಕಿ–ಅಂಶ

456: ಕಾರ್ಯಾಚರಣೆ ಮಾಡಿದ ಸಾರಿಗೆ ನಿಗಮಗಳ ಬಸ್‌ಗಳು

14,278: ಕಾರ್ಯಾಚರಣೆ ಮಾಡಿದ ಒಟ್ಟು ಖಾಸಗಿ ಬಸ್‌ಗಳು

6: ವಿವಿಧೆಡೆ ಹಾನಿಯಾಗಿರುವ ಕೆಎಸ್‌ಆರ್‌ಟಿಸಿ ಬಸ್‌ಗಳು

896: ರಾಜ್ಯದಲ್ಲಿ ಕಾರ್ಯಾಚರಣೆ ಮಾಡಿದ ಹೊರ ರಾಜ್ಯದ ಬಸ್‌ಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT