ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರೀಯ ವಿಭಾಗದ ಕಚೇರಿ ನವೀಕರಿಸಲು ಸೂಚನೆ

Last Updated 12 ಜನವರಿ 2019, 19:39 IST
ಅಕ್ಷರ ಗಾತ್ರ

ಬೆಂಗಳೂರು: ಕೆಎಸ್‌ಆರ್‌ಟಿಸಿಯ ಕೇಂದ್ರೀಯ ವಿಭಾಗದ ಕಚೇರಿಯ ಕಟ್ಟಡವನ್ನು ನವೀಕರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಅವರು ವಿಭಾಗೀಯ ನಿಯಂತ್ರಣಾಧಿಕಾರಿಗೆ ಸೂಚಿಸಿದರು.

ಕೇಂದ್ರೀಯ ವಿಭಾಗದ ಕಚೇರಿಯ ಆರ್ಥಿಕ ಭೌತಿಕ ಅಂಶಗಳ ಕುರಿತು ಶುಕ್ರವಾರ ವಿಶ್ಲೇಷಣೆ ನಡೆಸಿದ ಅವರು, ‘ಕಟ್ಟಡ 60 ವರ್ಷಗಳಷ್ಟು ಹಳೆಯದಾಗಿದ್ದು ಶಿಥಿಲಾವಸ್ಥೆಯಲ್ಲಿದೆ. ಒಂದೋ ಕಟ್ಟಡವನ್ನು ನವೀಕರಿಸಬೇಕು. ಇಲ್ಲವಾದರೆ ಅದನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ಕಚೇರಿಯಲ್ಲಿರುವ ಸಿ.ಸಿ. ಟಿ.ವಿ. ಕ್ಯಾಮೆರಾದ ನಿಯಂತ್ರಣ ಕೇಂದ್ರದ ಬಗ್ಗೆ ಪ್ರಶಂಸಿಸಿದ ಅವರು ಇಂಥದ್ದೇ ಕೇಂದ್ರವನ್ನು ಕೇಂದ್ರ ಕಚೇರಿಯಲ್ಲೂ ಸ್ಥಾಪಿಸಬೇಕು ಎಂದು ಹೇಳಿದರು.

‘ಬಸ್‌ ಸಂಚಾರ ಸಂಬಂಧಿಸಿ ಅಂತರರಾಜ್ಯ ಕರಾರು ಒಪ್ಪಂದವನ್ನು ಆದ್ಯತೆ ಮೇಲೆ ತೆಗೆದುಕೊಳ್ಳಬೇಕು.ಊಟಿ-ಬೆಂಗಳೂರು ಮಾರ್ಗಕ್ಕೆ ಕೇಂದ್ರ ವಿಭಾಗದಿಂದ ಪರ್ಯಾಯ ಮಾರ್ಗವನ್ನು ನೋಡಲಾಗಿದೆ. ಈ ಮಾರ್ಗವನ್ನು ಮುಂದಿನ ಅಂತರರಾಜ್ಯ ಒಪ್ಪಂದದಲ್ಲಿ ಸೇರಿಸಬೇಕು. ಇದರಿಂದ ಪ್ರಯಾಣದ ಅವಧಿಯನ್ನು 2 ಗಂಟೆಗಳ ಕಾಲ ಕಡಿಮೆ ಮಾಡಬಹುದು’ ಎಂದು ಅವರು ಅಭಿಪ್ರಾಯಪಟ್ಟರು.

ಶಾಂತಿನಗರದ ಘಟಕ-4ರ ಮುಂಭಾಗ ಶಾಶ್ವತವಾಗಿ ಪ್ರಯಾಣಿಕರಿಗೆ ತಂಗುದಾಣ ಮತ್ತು ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಲು ತಿಳಿಸಿದರು.

ಬಯೋಮೆಟ್ರಿಕ್‌ ಹಾಜರಾತಿ ವ್ಯವಸ್ಥೆ, ಜನದಟ್ಟಣೆಯ ಅವಧಿಯಲ್ಲಿ 25 ದಿನಗಳಿಗಿಂತ ಹೆಚ್ಚಿನ ಹಾಜರಾತಿ ಹೊಂದಿರುವ ಚಾಲನಾ ಸಿಬ್ಬಂದಿಗೆ ನಗದು ಪುರಸ್ಕಾರ, ದಿನನಿತ್ಯ ಪ್ರಮುಖ ಬಸ್‍ನಿಲ್ದಾಣಗಳ ಭೇಟಿ, ತೀವ್ರತರನಾದ ತನಿಖಾ ತಪಾಸಣೆ ಕಾರ್ಯ, ಇಂಧನದ ಟರ್ಮಿನಲ್‌ನಿಂದ ಘಟಕದವರೆಗೆ ಡೀಸೆಲ್‌ ಟ್ಯಾಂಕರ್ ಹಿಂಬಾಲಿಸುವುದು, ಮೂರು ತಿಂಗಳಿಗೊಮ್ಮೆ ಸಿಬ್ಬಂದಿ ಖಾತೆಯಲ್ಲಿ ಬಾಕಿ ಇರುವ ರಜೆಯ ವಿವರಗಳನ್ನು ಘಟಕದ ಸೂಚನಾ ಫಲಕದಲ್ಲಿ ಪ್ರದರ್ಶಿಸುವ ಕ್ರಮಗಳಿಗೆ ಅವರು ಪ್ರಶಂಸೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT