ಮಂಗಳವಾರ, ಆಗಸ್ಟ್ 16, 2022
29 °C
ಕರ್ತವ್ಯಕ್ಕೆ ಹಾಜರಾಗುವಂತೆ ಸದಸ್ಯರಿಗೆ ಸುತ್ತೋಲೆ

ಮುಷ್ಕರ ಕೈಬಿಡಲು ಎಐಟಿಯುಸಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾರಿಗೆ ಸಚಿವರ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಕೈಗೊಂಡ ತೀರ್ಮಾನದ ಪ್ರಕಾರ ಮುಷ್ಕರ ಅಂತ್ಯಗೊಳಿಸಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಎಐಟಿಯುಸಿ ಸಂಯೋಜಿತ ಕೆಎಸ್‌ಆರ್‌ಟಿಸಿ ಸ್ಟಾಫ್‌ ಅಂಡ್‌ ವರ್ಕರ್ಸ್‌ ಫೆಡರೇಷನ್‌ ತನ್ನ ಸದಸ್ಯರಿಗೆ ಸೂಚನೆ ನೀಡಿದೆ.

ಭಾನುವಾರ ರಾತ್ರಿ ಸುತ್ತೋಲೆ ಹೊರಡಿಸಿರುವ ಸಂಘಟನೆಯ ಪ್ರಧಾನ ಕಾರ್ಯದರ್ಶಿಡಿ.ಎ. ವಿಜಯಭಾಸ್ಕರ್‌, ‘ಮುಷ್ಕರ ಅಂತ್ಯಗೊಳಿಸುವ ಸಂಬಂಧ ಸಾರಿಗೆ ಸಚಿವರು ಎಲ್ಲಾ ಕಾರ್ಮಿಕ ಸಂಘಟನೆಗಳ ಜತೆ ಎರಡನೆ ಬಾರಿ ಸಭೆ ನಡೆಸಿದ್ದರು. ಎಂಟು ಬೇಡಿಕೆಗಳ ಈಡೇರಿಕೆಗೆ ಸಚಿವರು ಒಪ್ಪಿಗೆ ಸೂಚಿಸಿದ್ದರು. ಈ ಪೈಕಿ ಏಳು ಬೇಡಿಕೆಗಳ ಈಡೇರಿಕೆಯನ್ನು ಎಲ್ಲ ಕಾರ್ಮಿಕ ಸಂಘಟನೆಗಳ ಮುಖಂಡರು ಒಪ್ಪಿಕೊಂಡಿದ್ದು, ನೌಕರರು ಕರ್ತವ್ಯಕ್ಕೆ ಹಾಜರಾಗಲು ಒಪ್ಪಿಕೊಂಡಿದ್ದೆವು‘ ಎಂದು ತಿಳಿಸಿದ್ದಾರೆ.

‘ಆರನೇ ವೇತನ ಆಯೋಗದ ಶಿಫಾರಸು ಜಾರಿಯ ವಿಚಾರವನ್ನು ನಾವು ಒಪ್ಪಿಲ್ಲ. ಈ ಹಿಂದಿನಂತೆ ನಾಲ್ಕು ವರ್ಷಗಳಿಗೊಮ್ಮೆ ಕೈಗಾರಿಕಾ ಒಪ್ಪಂದದ ಮೂಲಕ ವೇತನ ಪರಿಷ್ಕರಿಸುವ ಪದ್ಧತಿ ಮುಂದುವರಿಸುವಂತೆ ಬೇಡಿಕೆ ಇಟ್ಟಿದ್ದೇವೆ. ಈ ಕುರಿತು ಎಲ್ಲ ಕಾರ್ಮಿಕ ಸಂಘಟನೆಗಳು ಆಕ್ಷೇಪ ದಾಖಲಿಸಿವೆ‘ ಎಂದು ಹೇಳಿದ್ದಾರೆ.

ಮುಷ್ಕರ ಅಂತ್ಯಗೊಳಿಸುವ ಕುರಿತು ಸಾರಿಗೆ ನೌಕರರ ಕೂಟದ ಪ್ರತಿನಿಧಿಗಳ ಜತೆ ಸಚಿವರು ಮಾತುಕತೆ ನಡೆಸಿದ್ದರು. ಮುಷ್ಕರ ಅಂತ್ಯಗೊಳಿಸಲು ಕೂಟದ ಪದಾಧಿಕಾರಿಗಳು ಒಪ್ಪಿಕೊಂಡಿದ್ದರು ಎಂಬ ಮಾಹಿತಿ ಲಭಿಸಿತ್ತು. ಆ ಬಳಿಕ ಅವರು ನಿಲುವು ಬದಲಿಸಿದ್ದಾರೆ. ಮುಷ್ಕರ ಮುಂದುವರಿಸುವ ನಿರ್ಧಾರಕ್ಕೂ ಫೆಡರೇಷನ್‌ಗೂ ಸಂಬಂಧವಿಲ್ಲ. ಸಭೆಯಲ್ಲಿ ನಿರ್ಧಾರವಾದಂತೆ ಎಲ್ಲರೂ ಕೆಲಸಕ್ಕೆ ಹಾಜರಾಗಬೇಕು ಎಂದು ಸಂಘಟನೆಯ ಸದಸ್ಯರಿಗೆ ಸೂಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು