ಭಾನುವಾರ, ಸೆಪ್ಟೆಂಬರ್ 19, 2021
26 °C
ಹಿರೇಮಠ ಬೆಂಬಲಿಗರ ವಿರುದ್ಧ ವಾಗ್ದಾಳಿ

ಒತ್ತುವರಿ ಸಾಬೀತಾದ್ರೆ ತೆರವಿಗೆ ಸಿದ್ಧ: ಶಾಸಕ ಮಂಜುನಾಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ‘ಜೆಡಿಎಸ್ ಕಾರ್ಯಕರ್ತರನ್ನು ನಾಯಿಗೆ ಹೋಲಿಸಿದ್ದೀರಲ್ಲ. ನೀವು ಯಾರ ಕುಮ್ಮಕ್ಕಿನಿಂದ ಬಂದ ನಾಯಿಗಳು' ಎಂದು ಜೆಡಿಎಸ್ ಶಾಸಕ ಎ. ಮಂಜುನಾಥ ಅವರು ಎಸ್.ಆರ್. ಹಿರೇಮಠ ಮತ್ತವರ ಬೆಂಬಲಿಗರ ವಿರುದ್ಧ ಕಿಡಿಕಾರಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಹಿರೇಮಠ ಮತ್ತು ಅವರ ಬೆಂಬಲಿಗರು ಕೇತಗಾನಹಳ್ಳಿಗೆ ಯಾರ ಗಮನಕ್ಕೂ ಬಾರದಂತೆ ಭೇಟಿ ನೀಡಿ, ಅಲ್ಲಿನ ಗ್ರಾಮಸ್ಥರನ್ನು ಗಲಭೆಗೆ ಪ್ರಚೋದಿಸಿದ್ದಾರೆ. ಇದರ ಹಿಂದೆ ಪ್ರಚಾರ ತಂತ್ರ ಅಡಗಿದೆ. ಇವರ ವಿರುದ್ಧ ಬಿಡದಿ ಪೊಲೀಸರಿಗೆ ದೂರು ನೀಡಲಾಗುವುದು' ಎಂದರು.

‘ಕೆಲವರು ನಮ್ಮಿಂದಲೇ ದೇಶ ಉದ್ಧಾರ ಆಗುತ್ತಿದೆ ಎಂದು ಭಾವಿಸಿದ್ದಾರೆ. ಹೀಗೆ ಇರುವವರು ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡಿದ್ದು ಏಕೆ. ಗ್ರಾಮ ಪ್ರವೇಶಕ್ಕೆ ನಿಮಗೆ ಅನುಮತಿ ಕೊಟ್ಟವರು ಯಾರು. ಪೊಲೀಸರನ್ನು ನಾಯಿಗೆ ಹೋಲಿಸುವ ನೀವು ಅವರಿಗೆ ಯಾಕೆ ಮಾಹಿತಿ ನೀಡಲಿಲ್ಲ’ ಎಂದರು.

‘ಕೇತಗಾನಹಳ್ಳಿಯಲ್ಲಿ ಕುಮಾರಸ್ವಾಮಿ ಅವರ 46 ಎಕರೆ, 28 ಗುಂಟೆ ಜಮೀನು ಇದೆ. ಸಾಕಷ್ಟು ಬಾರಿ ತನಿಖೆ ನಡೆದಿದ್ದು, ಯಾವುದೇ ಸರ್ಕಾರಿ ಭೂಮಿ ಒತ್ತುವರಿ ಆಗಿಲ್ಲ. ಒತ್ತುವರಿ ಸಾಬೀತಾದರೆ ಕುಮಾರಸ್ವಾಮಿ ತಾವೇ ಜಮೀನು ಬಿಟ್ಟುಕೊಡುತ್ತಾರೆ' ಎಂದರು.

‘ಅಕ್ರಮ ಪ್ರಶ್ನಿಸಲು ನ್ಯಾಯಾಲಯ, ಕಾನೂನು ಇದೆ. ಅಧಿಕಾರಿಗಳಿಂದ ಮಾಹಿತಿ ಪಡೆಯುವುದನ್ನು ಬಿಟ್ಟು ಏಕಾಏಕಿ ಗ್ರಾಮಕ್ಕೆ ನುಗ್ಗಿ ಅಲ್ಲಿನ ಜನರನ್ನು ಪ್ರಚೋದಿಸಿದ್ದೀರಿ. ಜನರನ್ನು ಕೆಣಕಿದರೆ ಪರಿಸ್ಥಿತಿ ನೆಟ್ಟಗೆ ಇರುವುದಿಲ್ಲ’ ಎಂದು ಎಚ್ಚರಿಸಿದರು.

‘ಕೇತಗಾನಹಳ್ಳಿಯಲ್ಲಿ ಹಿಂದೆ ಕಂದಾಯ ಇಲಾಖೆ ಅಧಿಕಾರಿಗಳು ಸರ್ವೇ ನಡೆಸಿದ್ದು, ಅವರ ವರದಿ ಆಧರಿಸಿ ಡಿ.ಸಿ. ತಮ್ಮಣ್ಣ ನಾಲ್ಕೂವರೆ ಎಕರೆ ಜಮೀನನ್ನು ಬಿಟ್ಟುಕೊಟ್ಟಿದ್ದಾರೆ. ಅದನ್ನು ಬಿಡದಿ ಸ್ಮಶಾನಕ್ಕೆ ಮೀಸಲಿಡಲಾಗಿದೆ. ಕಂದಾಯ ಅಧಿಕಾರಿಗಳು ಎಲ್ಲಿ ಒತ್ತುವರಿ ಆಗಿದೆ ಎಂದು ದಾಖಲೆ ತೋರಿಸಿದರೆ ಅದನ್ನು ಬಿಟ್ಟುಕೊಡಲು ಸಿದ್ಧರಿದ್ದೇವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.