ಸೋಮವಾರ, ಅಕ್ಟೋಬರ್ 18, 2021
25 °C

ಲೋಕಲ್‌ ರಸ್ತೆಯಲ್ಲೂ ದಂಡ ಹಾಕುತ್ತಿರೇಕೆ? ಪ್ರಶ್ನೆಗೆ ಪೊಲೀಸ್‌ ಕಮಿಷನರ್‌ ಉತ್ತರ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Prajavani Photo

ಬೆಂಗಳೂರು: ಕಾನೂನಿನಲ್ಲಿ ಸ್ಥಳೀಯ ರಸ್ತೆ ಮತ್ತು ಮುಖ್ಯ ರಸ್ತೆ ಎಂಬ ವ್ಯತ್ಯಾಸವಿಲ್ಲ. ಪ್ರತಿಯೊಬ್ಬ ಜವಾಬ್ದಾರಿಯುತ ಪ್ರಜೆಯು ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ಎಚ್ಚರಿಸಿದ್ದಾರೆ.

ಟ್ವಿಟರ್‌ನಲ್ಲಿ ಶನಿವಾರ #AskCPBLR ಕಾರ್ಯಕ್ರಮ ನಡೆಸಿಕೊಟ್ಟ ಕಮಲ್‌ ಪಂತ್‌, ಬೆಂಗಳೂರು ನಾಗರಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ಬೆಳಗ್ಗೆ 11ರಿಂದ ಮಧ್ಯಾಹ್ನ 12 ವರೆಗೆ 1 ಗಂಟೆ ಕಾಲ ಟ್ವಿಟರ್‌ನಲ್ಲಿ ಲೈವ್‌ ಪ್ರಶ್ನೋತ್ತರ ನಡೆಸಿಕೊಟ್ಟರು. ನಾಗರಿಕರಿಂದ ದೂರುಗಳು, ಪ್ರಶ್ನೆಗಳನ್ನು ಸ್ವೀಕರಿಸಿ, ತಕ್ಷಣ ಪ್ರತಿಕ್ರಿಯೆ ನೀಡಿದರು. ಸಲಹೆಗಳನ್ನು ಸ್ವೀಕರಿಸಿದರು.

ಈ ಸಂದರ್ಭ ಜತಿನ್‌ ಎಂಬ ಹೆಸರಿನ ಟ್ವಿಟರ್‌ ಖಾತೆಯಿಂದ, 'ದಯವಿಟ್ಟು ಪೊಲೀಸರಿಗೆ ಸ್ಥಳೀಯ ರಸ್ತೆ ಹಾಗೂ ಮುಖ್ಯ ರಸ್ತೆಗಿರುವ ವ್ಯತ್ಯಾಸ ತಿಳಿಸಿಕೊಡಿ. ಕೆಲವು ಸಂದರ್ಭಗಳಲ್ಲಿ ಸ್ಥಳೀಯ ರಸ್ತೆಗಳಲ್ಲಿ ದಂಡ ವಿಧಿಸುತ್ತಾರೆ. ದಯವಿಟ್ಟು ಈ ಬಗ್ಗೆ ಗಮನಹರಿಸಿ' ಎಂಬ ಕೋರಿಕೆ ವ್ಯಕ್ತವಾಯಿತು.

'ನಾನಿಲ್ಲಿ ಒಂದು ಸಂಗತಿಯನ್ನು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ಕಾನೂನಿನ ಪ್ರಕಾರ ಸ್ಥಳೀಯ ರಸ್ತೆ ಮತ್ತು ಮುಖ್ಯ ರಸ್ತೆ ಎಂಬೆಲ್ಲ ವ್ಯತ್ಯಾಸಗಳಿಲ್ಲ. ರಸ್ತೆಗಳಲ್ಲಿ ಓಡಾಡುವ ಪ್ರತಿಯೊಬ್ಬನು ಜವಾಬ್ದಾರಿಯುತ ಪ್ರಜೆಯಾಗಿ ಸಂಚಾರಿ ನಿಯಮಗಳನ್ನು ಪಾಲಿಸಬೇಕು. ಸ್ವಯಂ ಸುರಕ್ಷತೆಗಾಗಿ, ಸಹಪ್ರಯಾಣಿಕರು ಹಾಗೂ ಪಾದಚಾರಿಗಳ ಸುರಕ್ಷತೆಗಾಗಿ ನಿಯಮಗಳನ್ನು ಪಾಲಿಸಬೇಕು' ಎಂದು ಕಮಲ್‌ ಪಂತ್‌ ಕಿವಿ ಹಿಂಡಿದರು.

ಸಂಚಾರಿ ಪೊಲೀಸ್‌ ವಾಹನಗಳ ಹಾರ್ನ್‌ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಆನಂದ್‌ ರಾಘವನ್‌ ಎಂಬುವವರು ಪ್ರಶ್ನಿಸಿದ್ದು, ಮಕ್ಕಳಿಗೆ, ವೃದ್ಧರಿಗೆ ಭಯ ಮತ್ತು ಆತಂಕ ತರಿಸುವಂತಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಿ ಎಂದು ವಿನಂತಿಸಿದರು. ಪ್ರಸ್ತುತ ಇರುವ ಹಾರ್ನ್‌ ಶಬ್ದವನ್ನು ಸಮರ್ಥಿಸಿಕೊಂಡ ಪೊಲೀಸ್‌ ಕಮಿಷನರ್‌, 'ದೀರ್ಘಾವಧಿಗೊಮ್ಮೆ ಅತ್ಯಲ್ಪ ಸಮಯದಲ್ಲಿ ಹಾರ್ನ್‌ ಮಾಡಲಾಗುತ್ತದೆ. ಪೊಲೀಸರು ಗಸ್ತು ತಿರುಗುತ್ತಿದ್ದಾರೆ ಎಂಬುದನ್ನು ನಾಗರಿಕರ ಗಮನಕ್ಕೆ ತರಲು ಇದು ಅನಿವಾರ್ಯ' ಎಂದು ಉತ್ತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು