ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿ ₹733 ಕೋಟಿ ಸಾಲ ಪಡೆದಿದೆ: ಕೋಟ ಶ್ರೀನಿವಾಸ ಪೂಜಾರಿ

Last Updated 24 ಡಿಸೆಂಬರ್ 2021, 20:22 IST
ಅಕ್ಷರ ಗಾತ್ರ

ಬೆಳಗಾವಿ (ಸುವರ್ಣ ವಿಧಾನಸೌಧ): ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) 2017–18ರಿಂದ 2020–21ರವರೆಗೆ ₹ 733.10 ಕೋಟಿ ಸಾಲ ಪಡೆದಿದೆ ಎಂದು ವಿಧಾನ ಪರಿಷತ್‌ನ ಸಭಾ ನಾಯಕರೂ ಆಗಿರುವ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಬಿಜೆಪಿಯ ತುಳಸಿ ಮುನಿರಾಜು ಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ‘ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬಿಎಂಟಿಸಿ 2017–18ರಲ್ಲಿ ₹ 146.35 ಕೋಟಿ, 2018–19ರಲ್ಲಿ ₹ 176.80 ಕೋಟಿ, 2019–20ರಲ್ಲಿ ₹ 160 ಕೋಟಿ ಮತ್ತು 2020–21ರಲ್ಲಿ ₹ 230 ಕೋಟಿ ಸಾಲ ಪಡೆದಿದೆ’ ಎಂದರು.

ಇದೇ ಅವಧಿಯಲ್ಲಿ ಸಂಸ್ಥೆಯು ₹ 116.27 ಕೋಟಿ ಅಸಲು ಮತ್ತು ₹ 79.58 ಕೋಟಿ ಬಡ್ಡಿಯನ್ನು ಮರುಪಾವತಿ ಮಾಡಿದೆ. 2017–18ರಿಂದ 2021ರ ಡಿಸೆಂಬರ್‌ವರೆಗೂ ಬಿಎಂಟಿಸಿ 9,049 ಬಸ್‌ಗಳನ್ನು ಖರೀದಿಸಲು ನಿರ್ಧರಿಸಲಾಗಿತ್ತು. ಆದರೆ, 2,057 ಬಸ್‌ಗಳನ್ನು ಮಾತ್ರ ಖರೀದಿಸಲಾಗಿದೆ. ಹಳೆಯ ಬಸ್‌ಗಳನ್ನು ನಿಷ್ಕ್ರಿಯಗೊಳಿಸಬೇಕಿರುವುದರಿಂದ 643 ಹವಾ ನಿಯಂತ್ರಿತವಲ್ಲದ ಬಸ್‌ಗಳ ಖರೀದಿಗೆ ಟೆಂಡರ್‌ ಅಂತಿಮಗೊಳಿಸಲಾಗಿದೆ ಎಂದು ತಿಳಿಸಿದರು.

ಬಿಎಂಟಿಸಿಯನ್ನು ಖಾಸಗೀಕರಣಗೊಳಿಸುವ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ನಾಲ್ಕು ಕೃಷಿ ವಿವಿ: ಶೇ 50ರಷ್ಟು ಹುದ್ದೆ ಭರ್ತಿಗೆ ಒಪ್ಪಿಗೆ
ಬೆಳಗಾವಿ (ಸುವರ್ಣ ವಿಧಾನಸೌಧ): ರಾಜ್ಯದ ನಾಲ್ಕು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಪೈಕಿ ಶೇಕಡ 50ರಷ್ಟನ್ನು ಭರ್ತಿ ಮಾಡಲು ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದಾರೆ. ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಬಿಜೆಪಿಯ ಎಸ್‌.ವಿ. ಸಂಕನೂರ ಪ್ರಶ್ನೆಗೆ ಉತ್ತರಿಸಿದ ಅವರು, ‘ಆರ್ಥಿಕ ಮಿತಿಯ ಕಾರಣದಿಂದ ಹುದ್ದೆಗಳ ಭರ್ತಿ ವಿಳಂಬವಾಗಿದೆ. ಈಗಾಗಲೇ ಕೆಲವು ಹುದ್ದೆಗಳ ನೇಮಕಾತಿಗೆ ಪ್ರಕ್ರಿಯೆ ಆರಂಭಿಸಲಾಗಿತ್ತು. ಆದರೆ, ನ್ಯಾಯಾಲಯಗಳಿಂದ ಪ್ರತಿಕೂಲ ಆದೇಶಗಳು ಬಂದ ಕಾರಣದಿಂದ ತೊಡಕಾಗಿತ್ತು. ಈಗ ಎಲ್ಲವನ್ನೂ ಸರಿಪಡಿಸಿ, ಪ್ರಕ್ರಿಯೆ ಮುಂದುವರಿಸಲಾಗಿದೆ’ ಎಂದರು.

ಕೆಲವು ವಿಷಯಗಳಲ್ಲಿ ವಿಶ್ವವಿದ್ಯಾಲಯಗಳಿಂದ ಸ್ಪಷ್ಟನೆ ಕೋರಲಾಗಿದೆ. ಕೆಲವು ಮಾಹಿತಿಗಳು ಇನ್ನಷ್ಟೇ ಬರಬೇಕಿದೆ. ಖಾಲಿ ಇರುವ ಹುದ್ದೆಗಳಲ್ಲಿ ಅರ್ಧದಷ್ಟನ್ನು ಆದಷ್ಟು ಬೇಗ ಭರ್ತಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಕೆಆರ್‌ಐಡಿಎಲ್‌: ₹ 2.05 ಕೋಟಿ ವಸೂಲಿ ಬಾಕಿ
ಬೆಳಗಾವಿ: ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದಲ್ಲಿ (ಕೆಆರ್‌ಐಡಿಎಲ್‌) ಅವ್ಯವಹಾರ ನಡೆಸಿದ್ದ ಆರೋಪಕ್ಕೆ ಗುರಿಯಾಗಿರುವ ಅಧಿಕಾರಿಗಳಿಂದ ₹ 2.05 ಕೋಟಿ ವಸೂಲಿ ಮಾಡುವುದು ಬಾಕಿ ಇದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದರು.

ಶುಕ್ರವಾರ ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಆಯನೂರು ಮಂಜುನಾಥ್‌ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘16 ಅಧಿಕಾರಿಗಳಿಂದ ₹ 2.47 ಕೋಟಿ ವಸೂಲಿಗೆ ಆದೇಶ ಹೊರಡಿಸಲಾಗಿತ್ತು. ಈವರೆಗೆ 11 ಅಧಿಕಾರಿಗಳಿಂದ ₹ 41.09 ಲಕ್ಷ ವಸೂಲಿ ಮಾಡಲಾಗಿದೆ. ಐವರಿಂದ ₹ 2.05 ಕೋಟಿ ವಸೂಲಿ ಬಾಕಿ ಇದೆ. ಅವರಲ್ಲಿ ಒಬ್ಬರು 2005ರಲ್ಲಿ ನಿಧನರಾಗಿದ್ದಾರೆ’ ಎಂದರು.

‘ಬಾಕಿ ಇರುವ ಮೊತ್ತವನ್ನು ತ್ವರಿತವಾಗಿ ವಸೂಲಿ ಮಾಡಬೇಕು’ ಎಂದು ಆಯನೂರು ಮಂಜುನಾಥ್‌ ಆಗ್ರಹಿಸಿದರು. ಅದಕ್ಕೆ ಉತ್ತರಿಸಿದ ಸಚಿವರು, ‘ಲೆಕ್ಕಪರಿಶೋಧನಾ ವರದಿ ಆಧಾರದಲ್ಲಿ ₹ 2.47 ಕೋಟಿ ವಸೂಲಿಗೆ ಶಿಫಾರಸು ಮಾಡಲಾಗಿತ್ತು. ಇನ್ನೂ ಹೆಚ್ಚಿನ ಹಣ ವಸೂಲಿ ಅಗತ್ಯವಿರಬಹುದು ಎಂಬ ಅನುಮಾನದಿಂದ ಹೆಚ್ಚಿನ ಪರಿಶೀಲನೆಗೆ ಮತ್ತೊಂದು ಸಮಿತಿ ನೇಮಿಸಲಾಗಿದೆ. ಸಮಿತಿಯ ವರದಿ ಪಡೆದು ಮೂರು ತಿಂಗಳೊಳಗೆ ಬಾಕಿ ವಸೂಲಿಗೆ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

1999ರಿಂದ 2020–21ರವರೆಗೆ ಕೆಆರ್‌ಐಡಿಎಲ್‌ಗೆ ₹ 30,046 ಕೋಟಿ ಅನುದಾನ ಲಭಿಸಿದೆ. ಕಾಮಗಾರಿಗಳನ್ನು ನಿರ್ವಹಿಸಿದ ಬಾಬ್ತು ವಿವಿಧ ಇಲಾಖೆಗಳಿಂದ ₹ 88.11 ಕೋಟಿ ಬಾಕಿ ಇತ್ತು. ಅದರಲ್ಲಿ ₹ 16.13 ಕೋಟಿ ವಸೂಲಿ ಮಾಡಲಾಗಿದೆ. ₹ 65.25 ಕೋಟಿಯನ್ನು ಮನ್ನಾ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT