ಶನಿವಾರ, ಸೆಪ್ಟೆಂಬರ್ 18, 2021
26 °C

ಮೆಟ್ರೊ ಸಂಚಾರ ಅವಧಿ ವಿಸ್ತರಿಸಿ: ಶಾಸಕರ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಗರದಲ್ಲಿ ಮೆಟ್ರೊ ರೈಲು ಸಂಚಾರ ಸಮಯವನ್ನು ವಿಸ್ತರಿಸಬೇಕು ಎಂಬ ಒತ್ತಾಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸಂಚಾರದ ಅವಧಿ ವಿಸ್ತರಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಹಾಗಾಗಿ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕು’ ಎಂದು ಅನೇಕ ಶಾಸಕರು ಒತ್ತಾಯಿಸಿದ್ದಾರೆ.  

ಶಾಸಕರು ಹೇಳುವುದೇನು ? 

‘20 ನಿಮಿಷಗಳಿಗೊಂದು ಮೆಟ್ರೊ ಸಂಚರಿಸಲಿ’

ಪೆಟ್ರೋಲ್‌, ಡೀಸೆಲ್‌ ಬೆಲೆ ಗಗನಕ್ಕೆ ಏರಿದೆ. ಖಾಸಗಿ ವಾಹನಗಳ ಬಳಕೆಯೂ ದುಬಾರಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮೆಟ್ರೊ ರೈಲು ಸಂಚಾರದ ಸಮಯವನ್ನೂ ಕಡಿತಗೊಳಿಸಿರುವುದು ಸರಿಯಲ್ಲ. ವಿದೇಶಗಳಲ್ಲಿ ದಿನದ 24 ಗಂಟೆಯೂ ಮೆಟ್ರೊ ರೈಲು ಸೇವೆ ಇರುತ್ತದೆ. ಬೆಂಗಳೂರಿನಲ್ಲಿ ರಾತ್ರಿ 10ರವರೆಗಾದರೂ ಮೆಟ್ರೊ ರೈಲು ಸೇವೆ ಇಲ್ಲ ಎಂದರೆ ಹೇಗೆ. ರಾತ್ರಿ 8ರಿಂದ 11ರವರೆಗೆ ಕನಿಷ್ಠ 20 ನಿಮಿಷ ಅಥವಾ ಅರ್ಧ ತಾಸಿಗೆ ಒಂದರಂತೆ ರೈಲು ಸಂಚರಿಸಲು ಕ್ರಮ ಕೈಗೊಳ್ಳಬೇಕು 

ಸೌಮ್ಯಾ ರೆಡ್ಡಿ, ಜಯನಗರ ಕ್ಷೇತ್ರ

***

‘2 ತಾಸು ವಿಸ್ತರಿಸಲೇಬೇಕು’

ರಾತ್ರಿ ಕರ್ಫ್ಯೂ ಜಾರಿಯಲ್ಲಿ ಇರುವುದರಿಂದ ಮೆಟ್ರೊ ರೈಲು ಸಂಚಾರ ಸಮಯ ಕಡಿತಗೊಳಿಸಲಾಗಿದೆ. ಆದರೆ, ಈಗ ಜನಜೀವನ ಸಹಜ ಸ್ಥಿತಿಗೆ ಬಂದಿದೆ. ಬಸ್‌, ರೈಲುಗಳು ಮೊದಲಿನಂತೆ ಕಾರ್ಯನಿರ್ವಹಿಸುತ್ತಿರುವುದರಿಂದ ಮೆಟ್ರೊ ರೈಲುಗಳ ಸೇವೆಯನ್ನು ಮೊದಲಿನಂತೆ ನೀಡಬೇಕು. ಕನಿಷ್ಠಪಕ್ಷ ರಾತ್ರಿ 10ರವರೆಗಾದರೂ ಸಂಚಾರ ಸಮಯವನ್ನು ವಿಸ್ತರಿಸಬೇಕು.

ಸತೀಶ್‌ ರೆಡ್ಡಿ, ಬೊಮ್ಮನಹಳ್ಳಿ ಕ್ಷೇತ್ರ

***

‘ಜನರ ಅನುಕೂಲಕ್ಕೆ ಆದ್ಯತೆ ಸಿಗಬೇಕು’

ಸಾರ್ವಜನಿಕ ಸಾರಿಗೆ ಅಥವಾ ಯಾವುದೇ ಸೇವೆ ಜನರಿಗೆ ಅನುಕೂಲಕ್ಕೆ ತಕ್ಕಂತೆ ಇರಬೇಕು. ಮೆಟ್ರೊ ರೈಲು ಸಾರಿಗೆಯೂ ಎಲ್ಲರಿಗೂ ಅನುಕೂಲಕರ. ರಾತ್ರಿ ವೇಳೆಯಲ್ಲಿ, ಸುರಕ್ಷತೆಯ ದೃಷ್ಟಿಯಿಂದಲೂ ಮೆಟ್ರೊ ಸೇವೆ ಅತ್ಯುಪಯುಕ್ತ. 10 ಗಂಟೆಯವರೆಗಾದರೂ ಇದನ್ನು ವಿಸ್ತರಿಸಬೇಕು.

ಉದಯ್ ಗರುಡಾಚಾರ್, ಚಿಕ್ಕಪೇಟೆ ಕ್ಷೇತ್ರ

***

‘ಬಸ್‌, ರೈಲು, ಮೆಟ್ರೊ ನಡುವೆ ಸಮನ್ವಯವಿರಲಿ’

ಸಾರ್ವಜನಿಕ ಸಾರಿಗೆಗಳು ಒಂದಕ್ಕೊಂದು ಪೂರಕವಾಗಿರಬೇಕು. ಬಸ್‌, ರೈಲು ಮತ್ತು ಮೆಟ್ರೊ ರೈಲು ಸೇವೆಗಳ ನಡುವೆ ಸಮನ್ವಯ ಇರಬೇಕು. ವ್ಯಾಪಾರ–ವಹಿವಾಟು, ಆರ್ಥಿಕ ಚಟುವಟಿಕೆಗಳೆಲ್ಲವೂ ಹಿಂದಿನಂತೆಯೇ ನಡೆಯುತ್ತಿವೆ. ಸಾರ್ವಜನಿಕರ ಸಹಜ ಓಡಾಟಕ್ಕೆ ವ್ಯವಸ್ಥೆ ಮಾಡಬೇಕಾದುದು ಸರ್ಕಾರದ ಕರ್ತವ್ಯ. ರಾತ್ರಿ 10.30ರವರೆಗಾದರೂ ಮೆಟ್ರೊ ಸೇವೆ ವಿಸ್ತರಿಸಬೇಕು. 

ರಿಜ್ವಾನ್ ಅರ್ಷದ್, ಶಿವಾಜಿನಗರ ಕ್ಷೇತ್ರ

***

‘ಮೆಟ್ರೊ ವಿಸ್ತರಿಸದಿರುವುದು ಸರಿಯಲ್ಲ’ 

ಹಲವು ಕಚೇರಿಗಳಲ್ಲಿ ಈಗಾಗಲೇ ರಾತ್ರಿ ಪಾಳಿಯ ಕೆಲಸಗಳು ಶುರುವಾಗಿವೆ. ರಾತ್ರಿ 8ರ ನಂತರ ಮೆಟ್ರೊ ರೈಲು ಸೇವೆ ಇರದ ಕಾರಣ ದುಡಿಯುವ ವರ್ಗದವರಿಗೆ ತುಂಬಾ ಅನನುಕೂಲವಾಗುತ್ತಿದೆ. ಎಲ್ಲವೂ ಸಹಜ ಸ್ಥಿತಿಯಲ್ಲಿರುವಾಗ ಮೆಟ್ರೊ ರೈಲು ಸೇವೆ ಮಾತ್ರ ನೀಡುವುದಿಲ್ಲ ಎಂಬುದು ಸರಿಯಲ್ಲ. 

ಬೈರತಿ ಸುರೇಶ್, ಹೆಬ್ಬಾಳ ಕ್ಷೇತ್ರ

***

‘ಸಮಯ ವಿಸ್ತರಿಸಿದರೆ ಕಾರ್ಮಿಕರಿಗೆ ಅನುಕೂಲ’

ನಗರದಲ್ಲಿ ಕೋವಿಡ್‌ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಕೈಗಾರಿಕೆಗಳು ಪೂರ್ಣ ಪ್ರಮಾಣದಲ್ಲಿ ಚಟುವಟಿಕೆ ನಡೆಸುತ್ತಿವೆ. ಕೆಲವು ಕೈಗಾರಿಕೆಗಳು ರಾತ್ರಿ 9 ಗಂಟೆ ವರೆಗೂ ಕಾರ್ಯನಿರ್ವಹಿಸುತ್ತಿವೆ. ಮೆಟ್ರೊ ರೈಲು ಸೇವೆ ರಾತ್ರಿ 8.30ರ ವರೆಗೆ ಮಾತ್ರ ಇರುವುದರಿಂದ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ. ಕನಿಷ್ಠ ರಾತ್ರಿ 10 ಗಂಟೆ ವರೆಗೆ ಮೆಟ್ರೊ ಸೇವೆಯನ್ನು ವಿಸ್ತರಿಸಬೇಕು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಎಂಆರ್‌ಸಿಎಲ್‌ ವ್ಯವಸ್ಥಾ‍ಪಕ ನಿರ್ದೇಶಕ ಅಂಜುಂ ಪರ್ವೇಜ್ ಅವರಿಗೆ ಪತ್ರ ಬರೆದಿದ್ದೇನೆ.  

ಆರ್‌.ಮಂಜುನಾಥ್‌, ದಾಸರಹಳ್ಳಿ ಕ್ಷೇತ್ರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು