‘ಲಿಂಗತ್ವ ಅಲ್ಪಸಂಖ್ಯಾತರಿಗೆ ನೈಜ ಸ್ವಾತಂತ್ರ್ಯ’

7
ಸುಪ್ರೀಂಕೋರ್ಟ್‌ ತೀರ್ಪಿಗೆ ಸಂತಸ * ಸತತ ಹೋರಾಟಕ್ಕೆ ದೊರೆತ ಗೆಲುವು * ಟೌನ್‌ಹಾಲ್‌ ಮುಂದೆ ಸಂಭ್ರಮ

‘ಲಿಂಗತ್ವ ಅಲ್ಪಸಂಖ್ಯಾತರಿಗೆ ನೈಜ ಸ್ವಾತಂತ್ರ್ಯ’

Published:
Updated:
Deccan Herald

ಬೆಂಗಳೂರು: ಸುಪ್ರೀಂ ಕೋರ್ಟ್‌ ಗುರುವಾರ ಪ್ರಕಟಿಸಿರುವ ಐತಿಹಾಸಿಕ ತೀರ್ಪು ಸಂವಿಧಾನದತ್ತವಾದ ಹಕ್ಕುಗಳನ್ನು ತಮಗೆ ದೊರಕಿಸಿಕೊಟ್ಟಿದೆ ಎಂದು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯ ಸಂತಸ ವ್ಯಕ್ತಪಡಿಸಿದೆ.

ಸೀರೆ ಉಟ್ಟರೂ ಬದಲಾಯಿಸಲಾಗದ ಪುರುಷನ ಲಕ್ಷಣಗಳು, ಲುಂಗಿ ಮತ್ತು ಶರ್ಟು ಧರಿಸಿದರೂ ಎದ್ದುಕಾಣುವ ಸ್ತನಗಳು... ಹೆಜ್ಜೆ ಹೆಜ್ಜೆಗೆ ಎದುರಾಗುತ್ತಿದ್ದ ಹೇವರಿಕೆಯ ನೋಟ, ಅಸಹ್ಯ ಅಸಭ್ಯ ಕೀಟಲೆಯ ಮಾತುಗಳು... ಸಿಗ್ನಲ್‌ನಲ್ಲಿ ಭಿಕ್ಷೆ ಹಾಕಿದವರನ್ನೇ ಪ್ರಶ್ನಾರ್ಥವಾಗಿ ನೋಡುವ ಕಣ್ಣುಗಳು, ಮಗಳು, ಮಗಳಲ್ಲ; ಮಗ ಎಂದು ಗೊತ್ತಾಗುತ್ತಲೇ ಹೆತ್ತವರೇ ಒದ್ದು ಹೊರಹಾಕಿದ ಘಟನೆಗಳು...

ಲಿಂಗತ್ವ ಅಲ್ಪಸಂಖ್ಯಾತ ಸಮುದಾಯ ಅನುಭವಿಸಿದ್ದ ಇಂತಹ ಹತ್ತಾರು ಸಮಸ್ಯೆಗಳು ಇನ್ನು ಅಂತ್ಯ ಕಾಣಬಹುದು ಎಂದು ಈ ಸಮುದಾಯ ಆಶಾಭಾವನೆ ವ್ಯಕ್ತಪಡಿಸಿದೆ. 

‘ಮಂಥನ್‌ ಲಾ’ ಎಂಬ ಸಂಘಟನೆಯ ಕಾರ್ಯಕರ್ತೆ, ವಕೀಲೆ ಮೈತ್ರೇಯಿ ಕೃಷ್ಣನ್‌, ‘ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ ದಿನವಿದು’ ಎನ್ನುತ್ತಾರೆ.

‘ಸುದೀರ್ಘ ಹೋರಾಟಕ್ಕೆ ಗೆಲುವು ಸಿಕ್ಕಿದೆ. ನಮಗೂ ಮೂಲಭೂತ ಹಕ್ಕುಗಳು ಸಿಕ್ಕಿದಂತಾಗಿದೆ. ಸಂವಿಧಾನ ರಚನೆಯಾಗಿ ಆರೂವರೆ ದಶಕಗಳ ತನಕವೂ ನಮ್ಮ ಮೂಲಭೂತ ಹಕ್ಕುಗಳನ್ನು ಸಮಾಜ ಕಸಿದುಕೊಂಡಿತ್ತು. ಪೊಲೀಸರ ಕಿರುಕುಳ ನಡೆದೇ ಇದೆ. ಈಗ ದೇಶದ ಸುಪ್ರೀಂಕೋರ್ಟ್‌ ನ್ಯಾಯಾಲಯ ತೀರ್ಪು ನೀಡಿದರೂ ಎಲ್ಲವೂ ಒಂದೇ ಸಲಕ್ಕೆ ಬದಲಾಗುವುದಿಲ್ಲ. ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಮೇಲೆ, ಸಂಘಟಕರು ಮತ್ತು ಹೋರಾಟಗಾರರ ಮೇಲೆ ಹೊಸ ಜವಾಬ್ದಾರಿ ಈಗ ಬಂದಿದೆ. ಈ ತೀರ್ಪು ನೀಡಿರುವ ಸಮಾನತೆಯ ಹಕ್ಕನ್ನು ಅರ್ಥ ಮಾಡಿಕೊಂಡು ನಾವು ಮುನ್ನಡೆಯಬೇಕು. ಇನ್ನು ಯಾರಾದರೂ ನಮ್ಮನ್ನು ಲಿಂಗತ್ವ ಅಲ್ಪಸಂಖ್ಯಾತರು ಎಂದು ಗೇಲಿ ಮಾಡಿದರೆ ಅದು ನ್ಯಾಯಾಂಗ ನಿಂದನೆಯಾಗುತ್ತದೆ’ ಎಂಬುದು ಮೈತ್ರೇಯಿ ಅಭಿಪ್ರಾಯ.

‘ಆಲ್ಟರ್ನೆಟಿವ್‌ ಲಾ ಫೋರಂ’ನ ಕಾರ್ಯಕರ್ತೆ ದೀಪ್ತಾ, ‘ತೀರ್ಪಿನಿಂದ ನಮ್ಮ ಹಕ್ಕುಗಳು ಸಿಗಲಿವೆ’ ಎಂದು ಅಭಿಪ್ರಾಯ ಪಡುತ್ತಾರೆ.

‘ಇಷ್ಟು ದಿನ ನಿಮ್ಮ ಹಕ್ಕುಗಳಿಗಾಗಿ ನೀವು ಕಾಯುವಂತೆ ಮಾಡಿದ್ದಕ್ಕಾಗಿ ಇಡೀ ದೇಶವೇ ನಿಮ್ಮ ಕ್ಷಮೆ ಕೋರಬೇಕು’ ಎಂದು ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಹೇಳಿದ ಮಾತು ಬಹಳ ಮಹತ್ವದ್ದು. ಈ ತೀರ್ಪಿನಿಂದಾಗಿ ನಮಗೂ ಕೌಟುಂಬಿಕ ಹಕ್ಕುಗಳು ಸಿಗಲಿವೆ. ಸಲಿಂಗ ಕಾಮ, ಮದುವೆ, ಕುಟುಂಬ, ಆಸ್ತಿಯ ಹಕ್ಕು ಸೇರಿದಂತೆ ಎಲ್ಲ ನಾಗರಿಕ ಹಕ್ಕುಗಳನ್ನು ನಾವೂ ಇನ್ನು ಅನುಭವಿಸಬಹುದು’ ಎಂದು ಅವರು ಅಭಿಪ್ರಾಯಪಡುತ್ತಾರೆ.

***


ರೂಮಿ ಹರೀಶ್‌

ಅಂಬೇಡ್ಕರ್‌ ಕಾರಣ: ರೂಮಿ ಹರೀಶ್‌
ಹೆಸರಾಂತ ಹಿಂದೂಸ್ತಾನಿ ಗಾಯಕರಾದ ಸುಮತಿ ಮೂರ್ತಿ, ಲಿಂಗ ಪರಿವರ್ತಿತ ಪುರುಷ. ಹೆಸರನ್ನೂ ‘ರೂಮಿ ಹರೀಶ್‌’ ಎಂದು ಬದಲಿಸಿಕೊಂಡಿದ್ದು, ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ತಾನು ಹೆಣ್ಣಲ್ಲ, ಗಂಡು ಎಂದು ಬಹಿರಂಗಪಡಿಸಿದ್ದು ಮೂರು ವರ್ಷಗಳ ಹಿಂದೆ. ಲಿಂಗತ್ವ ಅಲ್ಪಸಂಖ್ಯಾತರೆಂದು ಹೇಳಿಕೊಳ್ಳುವುದು ಸುಲಭದ ಮಾತಲ್ಲ ಎಂಬುದು ಅವರ ಅನುಭವದ ಮಾತು.

‘ಬಿ.ಆರ್. ಅಂಬೇಡ್ಕರ್‌ ಅವರು ಸಂವಿಧಾನ ರಚನೆ ಮಾಡದೇ ಇದ್ದಿದ್ದರೆ ಭಾರತದಂತಹ ದೇಶದಲ್ಲಿ ಇಂತಹ ತೀರ್ಪಿನ ಕನಸು ಕಾಣುವುದೂ ಸಾಧ್ಯವಾಗುತ್ತಿರಲಿಲ್ಲ. ನಮ್ಮ ಸಮುದಾಯ ಅಂಬೇಡ್ಕರ್‌ ವಾದಗಳನ್ನೇ ಪಾಲಿಸುತ್ತದೆ. ಇನ್ನು ಮುಂದೆ ನಾವು ನಮ್ಮ ಕುಟುಂಬ, ಸ್ನೇಹಿತರ ವಲಯ ಮತ್ತು ಸಾಮಾಜಿಕವಾಗಿಯೂ ನಮ್ಮ ಲಿಂಗತ್ವದ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳಬಹುದು. ಆದರೂ ಸುಪ್ರೀಂ ಕೋರ್ಟು ತೀರ್ಪು ನೀಡಿದ ತಕ್ಷಣ ಸಮಾಜ ಬದಲಾಗುತ್ತದೆ ಎಂಬ ನಿರೀಕ್ಷೆಯೇ ನಮಗಿಲ್ಲ’ ಎಂದು ರೂಮಿ ಹೇಳುತ್ತಾರೆ.

**

ಸಂಬಂಧಪಟ್ಟ ಲೇಖನಗಳು

ಸುಪ್ರೀಂ ಕೋರ್ಟ್‌: ಸಾಲುಗಟ್ಟಿವೆ ಮಹತ್ವದ ತೀರ್ಪುಗಳು

ಸಮ್ಮತಿಯ ಸಲಿಂಗಕಾಮ ಅಪರಾಧವಲ್ಲ

‘ಸಮಾನತೆಯ ಲೈಂಗಿಕ ಹಕ್ಕು ಸಿಕ್ಕಿದೆ’ 

ಸಲಿಂಗಕಾಮ ಅಪರಾಧಮುಕ್ತ: ಅವಿತಿದ್ದ ಆಕಾಂಕ್ಷೆಗೆ ಮಳೆಬಿಲ್ಲಿನ ತೋರಣ

‘ನಿರಾಪರಾಧಿಯಾಗಲು ಒಂದೂವರೆ ಶತಮಾನ ಬೇಕಾಯಿತು’

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !