ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ₹ 2 ಕೋಟಿ ನಗದು ವಶ: ಬಿಜೆಪಿ ಕಾರ್ಯದರ್ಶಿ ವಿರುದ್ಧ ಎಫ್‌ಐಆರ್‌

Published 21 ಏಪ್ರಿಲ್ 2024, 15:25 IST
Last Updated 21 ಏಪ್ರಿಲ್ 2024, 15:25 IST
ಅಕ್ಷರ ಗಾತ್ರ

ಬೆಂಗಳೂರು: ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ₹ 2 ಕೋಟಿ ನಗದು ಸಾಗಿಸುತ್ತಿದ್ದುದನ್ನು ಚುನಾವಣಾ ಅಕ್ರಮ ತಡೆ ತಂಡ ಪತ್ತೆಹಚ್ಚಿದ್ದು, ಈ ಸಂಬಂಧ ಬಿಜೆಪಿ ರಾಜ್ಯ ಘಟಕದ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್‌ ಅಂಬೆಕಲ್ಲು ಮತ್ತು ಇತರ ಇಬ್ಬರ ವಿರುದ್ಧ ಕಾಟನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

ಕಾಟನ್‌ಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯ ತನಿಖಾ ಠಾಣೆಯಲ್ಲಿ ಶನಿವಾರ ಸಂಜೆ ಕಾರು ತಪಾಸಣೆ ನಡೆಸಿದಾಗ ₹ 2 ಕೋಟಿ ನಗದು ಪತ್ತೆಯಾಗಿತ್ತು. ಅದು ಬಿಜೆಪಿ ರಾಜ್ಯ ಘಟಕದ ಕಚೇರಿಗೆ ಸೇರಿದ್ದು ಎಂಬುದಾಗಿ ಕಾರಿನಲ್ಲಿದ್ದವರು ದಾಖಲೆ ಒದಗಿಸಿದ್ದರು. ಬಳಿಕ ಚುನಾವಣಾಧಿಕಾರಿಗಳು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ವಶಕ್ಕೆ ನಗದನ್ನು ನೀಡಿ, ಸೂಕ್ತ ಕ್ರಮ ಜರುಗಿಸುವಂತೆ ಕೋರಿದ್ದರು.

ಹಣವನ್ನು ಬ್ಯಾಂಕ್‌ನಿಂದ ನಗದೀಕರಿಸಿರುವ ದಾಖಲೆಗಳಿರುವ ಕಾರಣದಿಂದ ಆದಾಯ ತೆರಿಗೆ (ಐ.ಟಿ) ಕಾಯ್ದೆಯ ಉಲ್ಲಂಘನೆ ಆಗಿಲ್ಲ ಎಂದು ಐ.ಟಿ ಅಧಿಕಾರಿಗಳು ಚುನಾವಣಾಧಿಕಾರಿಗಳಿಗೆ ತಿಳಿಸಿದ್ದರು. ನಗದನ್ನೂ ವಾಪಸ್‌ ಚುನಾವಣಾಧಿಕಾರಿಗಳ ವಶಕ್ಕೆ ಮರಳಿಸಿದ್ದರು. ಕೇಂದ್ರ ಚುನಾವಣಾ ಆಯೋಗದ ನಿರ್ದೇಶನಗಳನ್ನು ಉಲ್ಲಂಘಿಸಿ ನಗದು ಸಾಗಿಸುತ್ತಿದ್ದ ಆರೋಪದ ಮೇಲೆ ನ್ಯಾಯಾಲಯದ ಅನುಮತಿ ಪಡೆದು ಎಫ್‌ಐಆರ್‌ ದಾಖಲಿಸಲಾಗಿದೆ.

‘ನಗದನ್ನು ಬ್ಯಾಂಕ್‌ನಿಂದ ಚೆಕ್‌ ಮೂಲಕ ಡ್ರಾ ಮಾಡಿದ್ದು, ಬಿಜೆಪಿ ಕಾರ್ಯಕರ್ತರಿಗೆ ನೀಡಲು ಕಳುಹಿಸಲಾಗುತ್ತಿದೆ ಎಂದು ಉಲ್ಲೇಖಿಸಿದ್ದ ಬಿಜೆಪಿ ರಾಜ್ಯ ಘಟಕದ ಕಾರ್ಯಾಲಯದ ಪತ್ರ ಕಾರಿನಲ್ಲಿತ್ತು. ಈ ಕುರಿತು ಐ.ಟಿ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಆದಾಯ ತೆರಿಗೆ ವಂಚನೆ ಆಗಿಲ್ಲ ಎಂಬುದು ಕಂಡುಬಂದಿತ್ತು’ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದ್ದಾರೆ.

ಚುನಾವಣೆಯಲ್ಲಿ ಪಕ್ಷದ ಪದಾಧಿಕಾರಿಗಳು ಅಥವಾ ಅಭ್ಯರ್ಥಿಗಳ ಏಜೆಂಟರ ವೆಚ್ಚಕ್ಕೆ ₹ 10,000ಕ್ಕಿಂತ ಹೆಚ್ಚು ಮೊತ್ತವನ್ನು ನಗದು ರೂಪದಲ್ಲಿ ನೀಡುವಂತಿಲ್ಲ ಎಂಬುದು ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಲ್ಲಿದೆ. ಮಿತಿಗಿಂತ ಹೆಚ್ಚು ಮೊತ್ತವನ್ನು ಚೆಕ್‌ ಅಥವಾ ಆನ್‌ಲೈನ್‌ ಮೂಲಕ ಪಾವತಿಸುವುದು ಕಡ್ಡಾಯ. ಆಯೋಗದ ನಿರ್ದೇಶನ ಉಲ್ಲಂಘಿಸಿರುವುದಲ್ಲದೇ, ಹಣ ಪಡೆಯುವವರ ಪಟ್ಟಿಯನ್ನೂ ಒದಗಿಸಿಲ್ಲ. ನಗದನ್ನು ಚುನಾವಣಾ ಅಕ್ರಮಕ್ಕೆ ಬಳಸುವ ಶಂಕೆಯ ಮೇಲೆ ಪ್ರಜಾಪ್ರತಿನಿಧಿ ಕಾಯ್ದೆ ಹಾಗೂ ಭಾರತೀಯ ದಂಡಸಂಹಿತೆ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

‘ಎಫ್‌ಐಆರ್‌ ದಾಖಲಿಸಲು ಅನುಮತಿ ಕೋರಿ ಶನಿವಾರವೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಭಾನುವಾರ ಬೆಳಿಗ್ಗೆ ನ್ಯಾಯಾಲಯದ ಅನುಮತಿ ಲಭಿಸಿತ್ತು. ಲೋಕೇಶ್‌ ಅಂಬೆಕಲ್ಲು, ವಾಹನ ಚಾಲಕ ವೆಂಕಟೇಶ್‌ ಪ್ರಸಾದ್‌ ಮತ್ತು ಸಹ ಪ್ರಯಾಣಿಕ ಗಂಗಾಧರ್ ಎಂಬುವವರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT