ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ: ಇಂದಿನ ಸಿಇಸಿಯಲ್ಲಿ ಟಿಕೆಟ್ ಬಹುತೇಕ ಅಂತಿಮ- ಡಿ.ಕೆ. ಶಿವಕುಮಾರ್

Published 19 ಮಾರ್ಚ್ 2024, 6:20 IST
Last Updated 19 ಮಾರ್ಚ್ 2024, 6:20 IST
ಅಕ್ಷರ ಗಾತ್ರ

ಬೆಂಗಳೂರು: 'ಇವತ್ತು (ಮಂಗಳವಾರ) ದೆಹಲಿಯಲ್ಲಿ ಪಕ್ಷದ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆ ಇದೆ. ಈ ಸಭೆಯ ಬಳಿಕ ಟಿಕೆಟ್ ಹಂಚಿಕೆ ವಿಷಯದಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ' ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಒಂದೆರಡು ಕ್ಷೇತ್ರ ಹೊರತುಪಡಿಸಿ ಇತರ ಎಲ್ಲ ಕ್ಷೇತ್ರಗಳ ವಿಚಾರ ಸಭೆಯಲ್ಲಿ ಸ್ಪಷ್ಟವಾಗುವ ವಿಶ್ವಾಸ ಇದೆ' ಎಂದರು.

ಜೆಡಿಎಸ್ -ಬಿಜೆಪಿ ಮೈತ್ರಿಯಲ್ಲಿ ಬಿರುಕು ವಿಚಾರವಾಗಿ ಕೇಳಿದ ಪ್ರಶ್ನೆಗೆ, 'ಇದು ನನಗೆ ಮೊದಲಿಂದಲೂ ಗೊತ್ತಿರುವ ವಿಚಾರ. ದೇವೇಗೌಡ ಅವರು ಯಾಕೆ ಅಳಿಯನನ್ನು ಬಿಜೆಪಿ ಚಿಹ್ನೆಯಲ್ಲಿ ನಿಲ್ಲಿಸಿದ್ದಾರೆ. ಅದು ಜೆಡಿಎಸ್ ನ ಮೊದಲ ಸೂಸೈಡ್ ಅಟೆಂಪ್ಟ್. ಅದನ್ನು ನಾನು ನಿರೀಕ್ಷೆ ಕೂಡ ಮಾಡಿರಲಿಲ್ಲ.‌ ಇದರಿಂದ ಅವರ ಪಕ್ಷಕ್ಕೆ ಒಂದು ದೊಡ್ಡ ಮಜುಗರ ಉಂಟಾಗಿದೆ. ಅದು ಅವರ ಪಕ್ಷದ ತೀರ್ಮಾನ. ನಾನು ಮಧ್ಯಪ್ರವೇಶ ಮಾಡಲು ಇಷ್ಟಪಡಲ್ಲ' ಎಂದರು.

'ಅವರ ಪಕ್ಷದಲ್ಲಿ ಹಾಲಿ ಶಾಸಕರಿದ್ದಾರೆ, ಸಂಸದರಿದ್ದಾರೆ.‌ ಅವರ ಪಕ್ಷಕ್ಕೆ ಅವರದ್ದೆ ಶಕ್ತಿ ಇದೆ. ಆ ಶಕ್ತಿ ಅವರಿಗೆ ಬೇಕಾಗಿತ್ತು. ಆದರೆ, ಬಿಜೆಪಿಯವರ ಶೈಲಿ ಇರುವುದೇ ಹೀಗೆ. ಇದೊಂದೇ ರಾಜ್ಯ ಅಲ್ಲ, ಬೇರೆ ರಾಜ್ಯಗಳಲ್ಲೂ ಇತರ ಪಕ್ಷಗಳನ್ನು ಅವರು ಹೀಗೆ ನಡೆಸಿಕೊಂಡು ಬರುತ್ತಿದ್ದಾರೆ.‌ ಅದರ ಬಗ್ಗೆ ನಾನು ಹೆಚ್ಚು ಕಮೆಂಟ್ ಮಾಡಲ್ಲ.‌ ಅದು ಅವರ ಪಕ್ಷದ ಅಂತರಿಕ ವಿಚಾರ. ಅವರ ಪಕ್ಷದಲ್ಲಿ ತೀರ್ಮಾನ ಮಾಡಿಕೊಳ್ಳಲಿ' ಎಂದೂ ಹೇಳಿದರು.

ಬಿಜೆಪಿ ಸಂಸದ ಸದಾನಂದಗೌಡ ರಾಜಕೀಯ ತೀರ್ಮಾನದ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್, 'ರಾಜಕಾರಣದಲ್ಲಿ ಯಾರಿಗೆ ಟಿಕೆಟ್ ಸಿಗಲಿಲ್ಲವೋ ಆಗ ಇವೆಲ್ಲಾ ಸಾಮಾನ್ಯ. ಆಯನೂರು ಮಂಜುನಾಥ್ ಟಿಕೆಟ್ ಸಿಗಲಿಲ್ಲವೆಂದು ನಮ್ಮ ಪಕ್ಷಕ್ಕೆ ಬಂದರು‌. ಬಿಜೆಪಿಯಿಂದ ಎಂ.ಪಿ. ಕುಮಾರಸ್ವಾಮಿಗೆ ಟಿಕೆಟ್ ಕೊಡಲಿಲ್ಲ‌. ನಮ್ಮ ಪಾರ್ಟಿಯಿಂದ ಅಖಂಡ ಶ್ರೀನಿವಾಸ್ ಮೂರ್ತಿಗೆ ಕೊಡಲಿಲ್ಲ. ಶೆಟ್ಟರ್ ಗೆ ಬಿಜೆಪಿ ಕೊಡಲಿಲ್ಲ. ನಾವು ಕರೆದುಕೊಂಡು ಬಂದು ನಿಲ್ಲಿಸಿದೆವು. ಸವದಿಗೆ ಕೊಡಲಿಲ್ಲ. ಅವರನ್ನೂ ಕರೆದುಕೊಂಡು ಬಂದು ನಿಲ್ಲಿಸಿದೆವು. ಇದೆಲ್ಲವೂ ರಾಜಕೀಯದ ಸಂದರ್ಭದಲ್ಲಿ ನಡೆಯುತ್ತದೆ' ಎಂದರು.

'ಯಾರ್ಯಾರು ಬರುತ್ತೇವೆ ಎಂದು ಹೇಳುತ್ತಾರೆ, ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಬರುವರು ಬರಲಿ. ನಮ್ಮ ತಂತ್ರಗಾರಿಕೆಯನ್ನು ನಾವು ಬಹಿರಂಗಗೊಳಿಸಲ್ಲ' ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT