ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ: ಸಮರ್ಥ ಅಭ್ಯರ್ಥಿಗೆ ಕಾಂಗ್ರೆಸ್‌ ಶೋಧ

ಸ್ಪರ್ಧೆಗೆ ಆಸಕ್ತಿ ತೋರದ ‘ಕೈ’ ನಾಯಕರು
Published 5 ಜನವರಿ 2024, 0:30 IST
Last Updated 5 ಜನವರಿ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಕೇಂದ್ರ, ಉತ್ತರ ಮತ್ತು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಬಿರುಸಿನ ಚರ್ಚೆ ಆರಂಭವಾಗಿದೆ. ಆದರೆ, ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಚರ್ಚೆ ಇನ್ನೂ ಆರಂಭವಾಗಿಲ್ಲ.

ಹಾಲಿ ಸಂಸದ ಬಿಜೆಪಿಯ ತೇಜಸ್ವಿ ಸೂರ್ಯ ಮತ್ತೊಮ್ಮೆ ಸ್ಪರ್ಧಿಸುವುದು ನಿಶ್ಚಿತವಾಗಿದೆ. ಹೀಗಾಗಿ ಕಮಲ ಪಕ್ಷದಲ್ಲಿ ಬೇರೆ ಪ್ರತಿ ಸ್ಪರ್ಧಿಗಳು ಹುಟ್ಟಿಕೊಂಡಿಲ್ಲ. ಬಿಜೆಪಿಯ ಭದ್ರಕೋಟೆ ಎನಿಸಿರುವ ಇಲ್ಲಿ ಕಾಂಗ್ರೆಸ್‌ನಿಂದ ಯಾವುದೇ ಅಭ್ಯರ್ಥಿಯ ಹೆಸರು ಮುನ್ನೆಲೆಗೆ ಬಂದಿಲ್ಲ. ಕಾಂಗ್ರೆಸ್‌ನ ಯಾವ ನಾಯಕರು ಸ್ಪರ್ಧಿಸುವ ಬಗ್ಗೆ ಆಸಕ್ತಿ ತೋರಿಸಿಲ್ಲ.

ಕಳೆದ ಬಾರಿ ಕಾಂಗ್ರೆಸ್‌ನಿಂದ ಬಿ.ಕೆ.ಹರಿಪ್ರಸಾದ್‌ ಸ್ಪರ್ಧಿಸಿದ್ದರು. ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ, ಮಾಜಿ ಶಾಸಕಿ ಸೌಮ್ಯಾರೆಡ್ಡಿ ಅವರ ಹೆಸರು ಸದ್ಯ ಚಲಾವಣೆಗೆ ಬಂದಿದೆ. ಆದರೆ, ರಾಮಲಿಂಗಾರೆಡ್ಡಿ ಆಗಲಿ, ಸೌಮ್ಯಾರೆಡ್ಡಿ ಅವರಾಗಲಿ ಈ ಕುರಿತು ಅಧಿಕೃತ ಹೇಳಿಕೆ ನೀಡಿಲ್ಲ. 

ಈ ಹಿಂದಿನ ಲೋಕಸಭಾ ಚುನಾವಣೆಗಳಲ್ಲಿ ಜೆಡಿಎಸ್‌ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಈ ಬಾರಿ ಜೆಡಿಎಸ್‌ ಎನ್‌ಡಿಎ ಒಕ್ಕೂಟ ಸೇರಿರುವುದರಿಂದ, ಯಾರನ್ನೂ ಕಣಕ್ಕೆ ಇಳಿಸುವುದಿಲ್ಲ. ಹೀಗಾಗಿ ಬಿಜೆಪಿ– ಕಾಂಗ್ರೆಸ್‌ ಪಕ್ಷಗಳ ಮಧ್ಯೆಯೇ ನೇರ ಹಣಾಹಣಿ ನಡೆಯಲಿದೆ.

‘ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡುವ ಸಂದರ್ಭದಲ್ಲಿ ಆಕಾಂಕ್ಷಿಗಳು ಮುಂದಕ್ಕೆ ಬರಬಹುದು. ಸದ್ಯಕ್ಕಂತೂ ಯಾರೂ ಸ್ಪರ್ಧಿಸುವ ಬಗ್ಗೆ ಆಸಕ್ತಿ ವ್ಯಕ್ತಪಡಿಸಿಲ್ಲ’ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ಈ ಕ್ಷೇತ್ರದಿಂದ ಕಾಂಗ್ರೆಸ್‌ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಬಿಜೆಪಿ ಅಭ್ಯರ್ಥಿಗೆ ಪೈಪೋಟಿ ನೀಡಬಹುದು. ಅಂತಹ ಅಭ್ಯರ್ಥಿಗಳು ಯಾರಿದ್ದಾರೆ ಎಂದು ಪಕ್ಷ ಹುಡುಕಾಟ ನಡೆಸಿದೆ.
ಡಿ.ಕೆ.ಶಿವಕುಮಾರ್‌ ಅವರು ಬಿಜೆಪಿಯಿಂದಲೇ ಯಾರನ್ನಾದರೂ ಸೆಳೆದು ಕಣಕ್ಕೆ ಇಳಿಸಲೂ ಬಹುದು ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ನಡೆದಿದೆ.

ಈ ಕ್ಷೇತ್ರದಲ್ಲಿ ಹಿಂದಿನಿಂದಲೂ ಕಾಂಗ್ರೆಸೇತರ ಪಕ್ಷಗಳೇ ಗೆಲುವು ಸಾಧಿಸಿಕೊಂಡು ಬಂದಿವೆ. 1977 ರಿಂದ ಈಚೆಗೆ ಒಮ್ಮೆ ಮಾತ್ರ ಕಾಂಗ್ರೆಸ್‌ ಗೆದ್ದಿದೆ. ಈ ಕಾರಣಕ್ಕಾಗಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಯಾರೂ ಮುಂದೆ ಬರುತ್ತಿಲ್ಲ. ಚುನಾವಣೆಯಲ್ಲಿ ಕೋಟಿಗಟ್ಟಲೆ ಹಣ ಖರ್ಚು ಮಾಡಬೇಕಾಗುತ್ತದೆ. ಗೆಲುವಿನ ಖಾತರಿ ಇಲ್ಲ. ಆದ್ದರಿಂದ ಸ್ಪರ್ಧೆಯ ಸಹವಾಸವೇ ಬೇಡ ಎಂದು ಹಿಂದೇಟು ಹಾಕುತ್ತಾರೆ ಎಂದು ಮೂಲಗಳು ತಿಳಿಸಿವೆ.

46 ವರ್ಷಗಳಲ್ಲಿ ಕಾಂಗ್ರೆಸ್‌ ಗೆದ್ದಿದ್ದು ಒಂದೇ ಸಲ

ಈ ಕ್ಷೇತ್ರದಲ್ಲಿ 1977 ರಿಂದ 2019 ರ ಅವಧಿಯಲ್ಲಿ ನಡೆದ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷ ಒಮ್ಮೆ ಮಾತ್ರ ಗೆದ್ದಿದ್ದು, 1977 ರಿಂದ 1984 ರ ಅವಧಿಯಲ್ಲಿ ನಡೆದ ಮೂರು ಚುನಾವಣೆಗಳಲ್ಲಿ ಜನತಾಪಕ್ಷದಿಂದ ಕೆ.ಎಸ್.ಹೆಗ್ಡೆ, ಟಿ.ಆರ್‌.ಶಾಮಣ್ಣ ಮತ್ತು ವಿ.ಎಸ್‌.ಕೃಷ್ಣಯ್ಯರ್‌ ಗೆಲುವು ಸಾಧಿಸಿದ್ದರು. 1989 ರಲ್ಲಿ ಮಾತ್ರ ಕಾಂಗ್ರೆಸ್‌ನಿಂದ ಆರ್‌.ಗುಂಡೂರಾವ್‌ ಅವರು ಗೆದ್ದಿದ್ದರು. 1991 ರಲ್ಲಿ ಬಿಜೆಪಿಯಿಂದ ಕೆ.ವೆಂಕಟಗಿರಿಗೌಡ ಅವರು ಚೊಚ್ಚಲ ಗೆಲುವು ಸಾಧಿಸಿದ್ದರು. ಆ ಬಳಿಕ ಅಂದರೆ, 1996 ರಿಂದ 2014 ರವರೆಗೆ ಆರು ಚುನಾವಣೆಗಳಲ್ಲಿ ಬಿಜೆಪಿಯಿಂದ ಅನಂತಕುಮಾರ್‌ ಗೆಲುವು ಸಾಧಿಸಿದ್ದರು. ಅನಂತಕುಮಾರ್ ನಿಧನದ ಬಳಿಕ 2019 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ತೇಜಸ್ವಿ ಸೂರ್ಯ ಅವರು ಗೆಲುವು ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT