ಬೆಂಗಳೂರು: ಗುತ್ತಿಗೆದಾರರಿಗೆ ಬಿಲ್ ಪಾವತಿಸಲು ಕಡತಕ್ಕೆ ಸಹಿ ಮಾಡಲು ₹ 10,000 ಲಂಚ ಪಡೆಯುತ್ತಿದ್ದ ಬಿಬಿಎಂಪಿ ಚಾಮರಾಜಪೇಟೆ ವಾರ್ಡ್‌ನ ಘನ ತ್ಯಾಜ್ಯ ವಿಲೇವಾರಿ ವಿಭಾಗದ ಪ್ರಭಾರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಶಿವಣ್ಣ ಅವರನ್ನು ಲೋಕಾಯುಕ್ತ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಘನ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ಕೆಲಸದ ಗುತ್ತಿಗೆ ಪಡೆದಿರುವ ಡಿ.ಜಿ. ವೆಂಕಟೇಶ್ ಅವರಿಗೆ ಬಿಲ್ ಪಾವತಿ ಬಾಕಿ ಇತ್ತು. ಬಾಕಿ ಮೊತ್ತ ಪಾವತಿಸುವಂತೆ ಅವರು ಎಇಇ ಅವರಲ್ಲಿ ಮನವಿ ಮಾಡಿದ್ದರು. ಬಿಲ್ ಪಾವತಿಯ ಕಡತಕ್ಕೆ ಸಹಿ ಮಾಡಲು ₹ 50,000 ಲಂಚ ನೀಡುವಂತೆ ಶಿವಣ್ಣ ಬೇಡಿಕೆ ಇಟ್ಟಿದ್ದರು. ಈ ಕುರಿತು ವೆಂಕಟೇಶ್ ಅವರು ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್ ಘಟಕಕ್ಕೆ ದೂರು ನೀಡಿದ್ದರು.
ಮಂಗಳವಾರ ಮಧ್ಯಾಹ್ನ ವೆಂಕಟೇಶ್ ಅವರಿಂದ ₹ 10,000 ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು, ಶಿವಣ್ಣ ಅವರನ್ನು ಬಂಧಿಸಿದ್ದಾರೆ. ಆರೋಪಿಯ ವಿಚಾರಣೆ ನಡೆಸುತ್ತಿದ್ದು, ಪ್ರಾಥಮಿಕ ತನಿಖೆಯ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಲೋಕಾಯುಕ್ತದ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಲೋಕಾಯುಕ್ತದ ಬೆಂಗಳೂರು ನಗರ ಘಟಕದ ಎಸ್‌ಪಿ ಕೆ.ವಿ. ಅಶೋಕ್ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಶ್ರೀಕಾಂತ್, ಶಂಕರಪ್ಪ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.