ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Poll: ಬಿಜೆಪಿ 400 ಗೆದ್ದರೆ ಸಂಸದೀಯ ವ್ಯವಸ್ಥೆಗೆ ಧಕ್ಕೆ; ಸುಧೀಂದ್ರ ಕುಲಕರ್ಣಿ

Published 19 ಏಪ್ರಿಲ್ 2024, 16:13 IST
Last Updated 19 ಏಪ್ರಿಲ್ 2024, 16:13 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾರತವು ಸಂಸದೀಯ ವ್ಯವಸ್ಥೆಯನ್ನು ಹೊಂದಿದೆಯೇ ಹೊರತು ವ್ಯಕ್ತಿ ಕೇಂದ್ರಿತ ಅಧ್ಯಕ್ಷೀಯ ಮಾದರಿ ಅಲ್ಲ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ 400 ಸೀಟು ಲಭಿಸಿದರೆ ಸಂಸದೀಯ ವ್ಯವಸ್ಥೆಗೆ ಧಕ್ಕೆ ಬರಲಿದೆ’ ಎಂದು ಸಾಮಾಜಿಕ ಚಿಂತಕ ಸುಧೀಂದ್ರ ಕುಲಕರ್ಣಿ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಶುಕ್ರವಾರ ಆಯೋಜಿಸಿದ್ದ ‘ಜನತಂತ್ರ ವ್ಯವಸ್ಥೆಯಲ್ಲಿ ಮಾಧ್ಯಮ ಹಾಗೂ ಪತ್ರಕರ್ತರು’ ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಿಜೆಪಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮಾಧ್ಯಮ ಸ್ವಾತಂತ್ರ್ಯಕ್ಕೆ ಮತ್ತು ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ಬರಲಿದೆ ಎಂದರು.

ಬಿಜೆಪಿಯ ಪ್ರಣಾಳಿಕೆ ಬಿಡುಗಡೆಯಾಗಿದೆ. ಅದು ಪಕ್ಷದ ಹೆಸರಲ್ಲಿ ಇರಬೇಕಿತ್ತು. ಆದರೆ ‘ಮೋದಿ ಗ್ಯಾರಂಟಿ’ ಎಂದು ಹೆಸರಿಡಲಾಗಿದೆ. ಕಪ್ಪು ಹಣ ತರಲಾಗುವುದು, ವರ್ಷಕ್ಕೆ 2 ಕೋಟಿ ಉದ್ಯೋಗ ನೀಡಲಾಗುವುದು ಎಂದಿದ್ದೆಲ್ಲವೂ ಮೋದಿ ಗ್ಯಾರಂಟಿಗಳೇ ಅಲ್ವ? ಅವುಗಳನ್ನು ಈಡೇರಿಸಿಲ್ಲ. ಈ ಬಗ್ಗೆ ಯುವಜನರು ಮತ ಚಲಾಯಿಸುವ ಮೊದಲು ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.

ಪ್ರಜಾಪ್ರಭುತ್ವ ಉಳಿಯುತ್ತದೆಯೋ? ಇಲ್ಲವೋ? ಎಂಬುದೇ ಈ ಬಾರಿ ಚುನಾವಣೆಯ ಮುಖ್ಯ ವಿಚಾರ. ಕಾಂಗ್ರೆಸ್‌ ಮುಕ್ತ ಭಾರತ ಮಾಡುವುದಷ್ಟೇ ಮೋದಿ ಉದ್ದೇಶವಲ್ಲ, ವಿರೋಧಪಕ್ಷಗಳೇ ಇರದಂತೆ ಮಾಡುವುದು ಅವರ ಉದ್ದೇಶ. ರಾಹುಲ್‌ ಗಾಂಧಿಯ ಸಂಸತ್‌ ಸದಸ್ಯತ್ವವನ್ನೇ ರದ್ದು ಮಾಡಲು ಹೊರಟಿದ್ದು, 150 ಸಂಸದರನ್ನು ಅಮಾನತು ಮಾಡಿದ್ದು, ಚುನಾವಣೆಯ ಹೊಸ್ತಿಲಲ್ಲಿ ದೆಹಲಿ ಮತ್ತು ಜಾರ್ಖಂಡ್‌ ಮುಖ್ಯಮಂತ್ರಿಗಳನ್ನು ಬಂಧಿಸಿರುವುದು, ಅಧಿಕಾರಕ್ಕೆ ಬಂದ ಪಕ್ಷಗಳನ್ನು ಒಡೆದು ಬಿಜೆಪಿ ಅಧಿಕಾರ ಹಿಡಿಯುವುದು ಎಲ್ಲವೂ ಇದರ ಭಾಗ ಎಂದು ಪ್ರತಿಪಾದಿಸಿದರು.

ಸುಪ್ರೀಂಕೋರ್ಟ್‌ ಹೇಳುವವರೆಗೆ ಚುನಾವಣಾ ಬಾಂಡ್‌ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರಿಗೆ ನಿರಾಕರಿಸಲಾಗಿತ್ತು. ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಹಕ್ಕಿಲ್ಲ ಎಂದು ಸರ್ಕಾರದ ಪರ ವಕೀಲರೇ ವಾದಿಸಿದ್ದರು. ಈ ನಡುವೆ ಪಾರದರ್ಶಕ ವ್ಯವಸ್ಥೆಗಾಗಿಯೇ ಚುನಾವಣಾ ಬಾಂಡ್‌ ತರಲಾಗಿದೆ ಎಂದು ನರೇಂದ್ರ ಮೋದಿ ಅವರು ಜನರಿಗೆ ಸುಳ್ಳು ಹೇಳಿದ್ದರು. ಸುಳ್ಳು ಹೇಳುವ ಪ್ರಧಾನಿ ಬೇಕಾ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದಾಗ ಎಲ್ಲವೂ ಸರಿಯಾಗುತ್ತದೆ ಎಂಬ ಭ್ರಮೆ ಬೇಡ. ಕಾಂಗ್ರೆಸ್‌ ಅವನತಿಯತ್ತ ಸಾಗಲು ಅದರ ನಾಯಕತ್ವ ಜನಮನ್ನಣೆ ಗಳಿಸದಿರುವುದು ಒಂದು ಕಾರಣವಾದರೆ, ಸುಧಾರಣೆಗೆ ಒಡ್ಡಿಕೊಳ್ಳದಿರುವುದೂ ಸೇರಿದಂತೆ ಅನೇಕ ಕಾರಣವಿದೆ. ಆದರೆ, ಕಾಂಗ್ರೆಸ್‌ ಆಡಳಿತದ ಕಾಲದಲ್ಲಿ ಈ ರೀತಿಯ ವ್ಯಕ್ತಿ ಕೇಂದ್ರಿತ ರಾಜಕಾರಣ ಇರಲಿಲ್ಲ. ಪ್ರಶ್ನೆ ಮಾಡುವ ಸ್ವಾತಂತ್ರ್ಯ ಇತ್ತು ಎಂದು ವಿಶ್ಲೇಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT