ಮಂಗಳವಾರ, ಏಪ್ರಿಲ್ 20, 2021
26 °C

ಕೊಳಚೆ ನೀರಿನ ತೊಟ್ಟಿಯಾದ ದೊಡ್ಡಗುಬ್ಬಿ ಕೆರೆ

ಹ.ಸ.ಬ್ಯಾಕೊಡ Updated:

ಅಕ್ಷರ ಗಾತ್ರ : | |

Prajavani

ಮಹದೇವಪುರ: ಇಲ್ಲಿನ ದೊಡ್ಡಗುಬ್ಬಿ ಕೆರೆಗೆ ನಿತ್ಯ ಕೊಳಚೆ ನೀರು ಸೇರುತ್ತಿದ್ದು, ಕಟ್ಟಡ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಸೊಳ್ಳೆಗಳ ಹಾವಳಿ ಅತಿಯಾಗಿದ್ದು, ನಿವಾಸಿಗಳು ಹಗಲು ವೇಳೆಯಲ್ಲಿಯೂ ಮನೆಯ ಕಿಟಕಿ, ಬಾಗಿಲುಗಳನ್ನು ಮುಚ್ಚಿಕೊಂಡು ಇರುವಂತಾಗಿದೆ.

ದೊಡ್ಡಗುಬ್ಬಿ ಗ್ರಾಮದ ಸರ್ವೆ ನಂಬರ್ 38ರಲ್ಲಿರುವ ಜಲಮೂಲದ ವಿಸ್ತೀರ್ಣ ಈ ಹಿಂದೆ 105 ಎಕರೆ ಇತ್ತು. ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಒತ್ತುವರಿಯಾಗಿರುವುದರಿಂದ ಕೆರೆಯ ವಿಸ್ತೀರ್ಣ 60 ಎಕರೆಗೆ ಇಳಿದಿದೆ. ಈ ಬಗ್ಗೆ ಹಲವು ಬಾರಿ ಕಂದಾಯ ಇಲಾಖೆಗೆ ಹಾಗೂ ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ನಿವಾಸಿ ರಕ್ಷಕ್‌ ಆರ್. ದೂರಿದರು.

ಸುತ್ತಮುತ್ತಲಿನ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಿಂದ ಜಲಮೂಲಕ್ಕೆ ಕೊಳಚೆ ನೀರು ಹರಿದು ಬರುತ್ತಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ತ್ಯಾಜ್ಯಗಳನ್ನು ಕಾರ್ಮಿಕರು ಕೆರೆಗೆ ಸುರಿದು ಹೋಗುತ್ತಿದ್ದಾರೆ. ಹೀಗಾಗಿ ಕೆರೆ ಕಸದ ತೊಟ್ಟಿಯಂತಾಗಿದೆ ಎಂದು ಅವರು ದೂರಿದರು.

ಕೆಲ ತಿಂಗಳ ಹಿಂದೆ ಕೆರೆಯಲ್ಲಿ ತ್ಯಾಜ್ಯ ಸೇರಿಕೊಂಡಿದ್ದರಿಂದ ಸಾವಿರಾರು ಮೀನುಗಳು ಸತ್ತು ಹೋಗಿವೆ. ಸದ್ಯ ಕೆರೆಯಿಂದ ದುರ್ನಾತ ಹೊರಸೂಸುತ್ತಿದೆ. ಜಲಮೂಲದ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿ ಹಾಗೂ ಕೆರೆ ಅಭಿವೃದ್ಧಿ ಪ್ರಾಧಿಕಾರ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಬೇಲಿ ಕಿತ್ತೆಸೆದ ಕಿಡಿಗೇಡಿಗಳು: ‘ಕೆಲವು ವರ್ಷಗಳ ಹಿಂದೆ ಜಲಮೂಲದ ಸುತ್ತಮುತ್ತ ಹಾಕಲಾಗಿದ್ದ ತಂತಿ ಬೇಲಿಯನ್ನು ಕಿಡಿಗೇಡಿಗಳು ಕಿತ್ತು ಹಾಕಿದ್ದಾರೆ. ಇದರಿಂದಾಗಿ ದಿನವೂ ಕಸವನ್ನು ತಂದು ಸುರಿಯಲು ಅನುಕೂಲ ಮಾಡಿಕೊಟ್ಟಂತಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು. ಸುತ್ತಮುತ್ತ ವ್ಯವಸ್ಥಿತ ತಂತಿ ಬೇಲಿಯನ್ನು ಅಳವಡಿಸಬೇಕು’ ಎಂದು ಸ್ಥಳೀಯರಾದ ರಾಂಪುರ ಮುನಿರಾಜು ಆಗ್ರಹಿಸಿದರು.

ಕೆರೆ ಅಂಚಿನ ದಾರಿ ನಾಪತ್ತೆ: ಕೆಲವರು ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಕೆರೆದಂಡೆಯ ಮೇಲಿದ್ದ ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ತಹಶೀಲ್ದಾರ್‌ ಅವರಿಗೆ ದೂರು ನೀಡಲಾಗಿತ್ತು. ಆದರೆ, ಯಾವುದೇ ಪ್ರಯೋಜನವಾಗಿಲ್ಲ’ ಎಂದು ರಕ್ಷಕ್ ಆರ್. ಆರೋಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು