ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಕ್ಯಾನ್ಸರ್ ಪೀಡಿತರಿಗೆ ಗುಣಮುಖರಿಂದ ಭರವಸೆ

ಮಣಿಪಾಲ್ ಆಸ್ಪತ್ರೆಯಿಂದ ವಿಶ್ವ ಕ್ಯಾನ್ಸರ್ ದಿನ ಆಚರಣೆ
Last Updated 3 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕ್ಯಾನ್ಸರ್ ಕಾಯಿಲೆಯನ್ನು ಎದುರಿಸಲು ಔಷಧ ಹಾಗೂ ಚಿಕಿತ್ಸೆಯ ಜತೆಗೆ ಮಾನಸಿಕ ಶಕ್ತಿ ಅಗತ್ಯ’ ಎಂದು ಕ್ಯಾನ್ಸರ್ ಗೆದ್ದವರು ತಮ್ಮ ಮನದಾಳ ಹಂಚಿಕೊಂಡರು.

ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಮಣಿಪಾಲ್ ಆಸ್ಪತ್ರೆಯು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಚಲನಚಿತ್ರ ನಟಿ ಛವಿ ಮಿತ್ತಲ್, ‘ನಾನು ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡಿ, ಕಾಯಿಲೆಯನ್ನು ಜಯಿಸಿದ್ದೇನೆ. ಶೀಘ್ರ ಚೇತರಿಕೆಗೆ ವೈದ್ಯರು ನಿಗದಿಪಡಿಸಿದ ಚಿಕಿತ್ಸಾ ಕ್ರಮ, ಔಷಧಗಳ ಸೇವನೆ ಅಗತ್ಯ. ರೋಗದ ಬಗ್ಗೆ ಅನಗತ್ಯವಾಗಿ ಭಯಕ್ಕೆ ಒಳಗಾಗಬಾರದು’ ಎಂದು ಹೇಳಿದರು.

ಕ್ಯಾನ್ಸರ್ ಜಯಿಸಿದ ವೈದ್ಯೆ ಡಾ. ವಿನುತಾ ಲಕ್ಷ್ಮಣ್, ‘ಕ್ಯಾನ್ಸರ್ ಪೀಡಿತೆಯಾಗಿರುವುದು ಆರಂಭಿಕ ದಿನಗಳಲ್ಲಿ ತಿಳಿದಿರಲಿಲ್ಲ. ಎಂಆರ್‌ಐ ಪರೀಕ್ಷೆ ಮಾಡಿಸಿಕೊಂಡಾಗ ಕ್ಯಾನ್ಸರ್ ಕಣಗಳು ದೃಢಪಟ್ಟವು. ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆತಿದ್ದರಿಂದ ಚೇತರಿಸಿಕೊಳ್ಳಲು ಸಾಧ್ಯವಾಯಿತು. ಕಾಯಿಲೆಯ ಲಕ್ಷಣಗಳು ಗೋಚರಿಸಿದಾಗ ಮಹಿಳೆಯರು ಸ್ವಯಂಪ್ರೇರಿತರಾಗಿ ಆಸ್ಪತ್ರೆಗೆ ತೆರಳಿ, ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಮಣಿಪಾಲ್ ಆಸ್ಪತ್ರೆಯ ಕ್ಯಾನ್ಸರ್ ತಜ್ಞೆ ಡಾ. ಪೂನಮ್ ಪಾಟೀಲ್, ‘ಸ್ತನ ಕ್ಯಾನ್ಸರ್ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಳವಾಗುತ್ತಿವೆ. ಈ ಕಾಯಿಲೆಯನ್ನು ಬೇಗ ಪತ್ತೆ ಮಾಡಿ, ಚಿಕಿತ್ಸೆ ಒದಗಿಸಿದಲ್ಲಿ ಗುಣಪಡಿಸಲು ಸಾಧ್ಯ. ಮೂರು ಮತ್ತು ನಾಲ್ಕನೇ ಹಂತದಲ್ಲಿ ಆಸ್ಪತ್ರೆಗಳಿಗೆ ಬಂದಲ್ಲಿ ರೋಗವನ್ನು ಗುಣಪಡಿಸುವುದು ಕಷ್ಟ. ಬಹುತೇಕ ಮಹಿಳೆಯರು ತಮ್ಮ ಆರೋಗ್ಯ ಕಡೆಗಣಿಸುತ್ತಾರೆ. ಇದರಿಂದ ಸಮಸ್ಯೆ ಉಲ್ಬಣವಾಗಿ, ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ’ ಎಂದರು.

ರಕ್ತ ರೋಗಶಾಸ್ತ್ರ ಸಲಹಾ ತಜ್ಞ ಡಾ. ಮಲ್ಲಿಕಾರ್ಜುನ್ ಕಾಳಶೆಟ್ಟಿ, ‘ರಕ್ತದ ಕ್ಯಾನ್ಸರ್‌ ಹಾಗೂ ರಕ್ತ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳನ್ನು ಕಾಪಾಡಲು ರಕ್ತದ ಆಕರ ಕೋಶ ಸಹಾಯಕ. ದಾನಿಗಳ ರಕ್ತದಿಂದ ಆಕರ ಕೋಶಗಳನ್ನು ಪಡೆದು, ಅಸ್ಥಿಮಜ್ಜೆ ಹಾಳಾಗಿರುವಂತಹ ರೋಗಿಗಳಿಗೆ ಕಸಿ ಮಾಡಲಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT