ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ರೈಲ್ವೆ ಕೆಳಸೇತುವೆ ನಿರ್ಮಾಣಕ್ಕೆ ಸಮ್ಮತಿ

Published 10 ಜೂನ್ 2024, 20:04 IST
Last Updated 10 ಜೂನ್ 2024, 20:04 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆ ನಡುವೆ ಸಂಪರ್ಕ ಕಲ್ಪಿಸುವ ಪ್ರಮುಖ ಮುಖ್ಯರಸ್ತೆ ನಿರ್ಮಾಣಕ್ಕೆ (ಎಂಎಆರ್) ಇದ್ದ ತಡೆ ನಿವಾರಣೆಯಾಗಿದೆ. ಚಲ್ಲಘಟ್ಟದ ಬಳಿ ರೈಲ್ವೆ ಕೆಳಸೇತುವೆ ನಿರ್ಮಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮ್ಮತಿ ದೊರೆತಿದೆ.

ನಾಡಪ್ರಭು ಕೆಂಪೇಗೌಡ ಬಿಡಿಎ ಬಡಾವಣೆಯಲ್ಲಿ ಹಾದುಹೋಗುವ ಎಂಎಆರ್‌ ಕಾಮಗಾರಿಗೆ ಮೈಸೂರು ರಸ್ತೆ ಸಂಪರ್ಕಿಸುವ ಚಲ್ಲಘಟ್ಟ ಬಳಿ ರೈಲ್ವೆ ಕೆಳಸೇತುವೆ ನಿರ್ಮಿಸಬೇಕಿದೆ. 2019ರಿಂದಲೂ ರೈಲ್ವೆ ಇಲಾಖೆಯಿಂದ ಅನುಮತಿಗೆ ಕಾಯಲಾಗುತ್ತಿತ್ತು. ಇದರಿಂದ ಈ ಭಾಗದಲ್ಲಿ ಕಾಮಗಾರಿ ಬಹುತೇಕ ಸ್ಥಗಿತಗೊಂಡಿತ್ತು.

ಕೆಂಗೇರಿ ಮತ್ತು ಹೆಜ್ಜಾಲ ರೈಲು ನಿಲ್ದಾಣಗಳ ನಡುವೆ ಚಲ್ಲಘಟ್ಟದ ಸಮೀಪ ರೈಲ್ವೆ ಕೆಳಸೇತುವೆಯನ್ನು ನಿರ್ಮಿಸಲು ಬಿಡಿಎ, ರೈಲ್ವೆ ಇಲಾಖೆಯ ಅನುಮತಿ ಕೇಳಿತ್ತು. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಈ ಕಡತಕ್ಕೆ ಮೇ 30ರಂದು ರೈಲ್ವೆ ಇಲಾಖೆ ಸಮ್ಮತಿಸಿದೆ. ಹೀಗಾಗಿ ಇನ್ನು ಕೆಲವೇ ದಿನಗಳಲ್ಲಿ ರೈಲ್ವೆ ಕೆಳಸೇತುವೆ ಕಾಮಗಾರಿ ಆರಂಭವಾಗಲಿದೆ ಎಂದು ಬಿಡಿಎ ಎಂಜಿನಿಯರ್‌ಗಳು ತಿಳಿಸಿದರು.

ನಾಡಪ್ರಭು ಕೆಂಪೇಗೌಡ ಬಿಡಿಎ ಬಡಾವಣೆಯಲ್ಲಿ ಎಂಎಆರ್‌ನಲ್ಲಿ 35 ಕಿರುಸೇತುವೆಗಳಿರಲಿವೆ. ಇದರಲ್ಲಿ ಈಗಾಗಲೇ 15 ಕಿರುಸೇತುವೆಗಳ ಕಾಮಗಾರಿ ಮುಗಿದಿದ್ದು, ಇನ್ನು 10 ಕಿರುಸೇತುವೆಗಳ ಕಾಮಗಾರಿ ಅಂತಿಮಹಂತದಲ್ಲಿದೆ. ಇದೀಗ ಪ್ರಮುಖ ಕೆಳಸೇತುವೆ ಕಾರ್ಯವೂ ಆರಂಭವಾಗುವುದರಿಂದ ಎಂಎಆರ್‌ ನಿರ್ಮಾಣ ಮತ್ತಷ್ಟು ಚುರುಕುಗೊಳ್ಳಲಿದೆ. 

ಎಂಎಆರ್‌ನಲ್ಲಿ 2.90 ಕಿ.ಮೀ, 5.10 ಕಿ.ಮೀ. ಹಾಗೂ 9.70 ಕಿ.ಮೀನಲ್ಲಿ ಅಂಡರ್‌ಪಾಸ್‌ಗಳು ನಿರ್ಮಾಣವಾಗುತ್ತಿದ್ದು, ಇವೆಲ್ಲವುಗಳು ಇನ್ನೊಂದು ವರ್ಷದಲ್ಲಿ ಬಳಕೆಗೆ ಲಭ್ಯವಾಗಲಿವೆ. ಸುಮಾರು 1 ಕಿ.ಮೀ.  ವ್ಯಾಪ್ತಿಯ ಪ್ರದೇಶದ ಭೂಸ್ವಾಧೀನ ಪ್ರಕ್ರಿಯೆ ನ್ಯಾಯಾಲಯದಲ್ಲಿದೆ. ಇನ್ನುಳಿದ ರಸ್ತೆಯ ಕಾಮಗಾರಿ ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಎಂಎಆರ್‌ನಿಂದ ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆಗೆ ಸಂಪರ್ಕ ಸಿಗುವ ಜತೆಗೆ, ಸೂಲಿಕೆರೆ– ರಾಮಸಂದ್ರ, ಕೆಂಚಾಪುರ, ಕನ್ನಹಳ್ಳಿ ಗ್ರಾಮಗಳಿಗೂ ಸಂಪರ್ಕ ಕಲ್ಪಿಸಲಿದೆ. ಇದಲ್ಲದೆ, ನಾಡಪ್ರಭು ಕೆಂಪೇಗೌಡ ಬಡಾವಣೆಯ 56 ರಸ್ತೆಗಳಿಗೆ ಸಂಪರ್ಕ ಒದಗಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT