ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವಿನಹಾಣೆ ಕೆರೆಗೆ ಮರುಜೀವ

ಹೆಬ್ಬಾಳ ಕಣಿವೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಕೊನೆಯ ಕೆರೆ: 6 ತಿಂಗಳಲ್ಲಿ ಸಂಪೂರ್ಣ ಅಭಿವೃದ್ಧಿ
Last Updated 26 ಡಿಸೆಂಬರ್ 2022, 23:00 IST
ಅಕ್ಷರ ಗಾತ್ರ

ಬೆಂಗಳೂರು: ಕಲುಷಿತಗೊಂಡಿದ್ದ 187 ಎಕರೆ ವಿಸ್ತೀರ್ಣದ ರಾಮಪುರ, ಮಾರಗೊಂಡನಹಳ್ಳಿ, ಹೂವಿನಹಾಣೆ ಕೆರೆ ಕೊನೆಗೂ ಪುನರುಜ್ಜೀವನಗೊಳ್ಳುತ್ತಿದ್ದು, ಕಾಮಗಾರಿ ಭರದಿಂದ ಸಾಗಿದೆ.

ಬೆಂಗಳೂರಿನ ಅಂಚಿನಲ್ಲಿರುವ ಈ ಕೆರೆ ಅತ್ಯಂತ ವಿಸ್ತಾರವಾಗಿದೆ. ಹೆಬ್ಬಾಳ ಕಣಿವೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೊನೆಯ ಕೆರೆ ಇದಾಗಿದೆ. ಕೆರೆ ತುಂಬಿದರೆ ಮುಂದೆ ಎಲೆಮಲ್ಲಪ್ಪ ಕೆರೆಗೆ ನೀರು ಹರಿಯಲಿದೆ. ‌‌ಸುತ್ತಮುತ್ತಲ ಹತ್ತಾರು ಗ್ರಾಮಗಳಿಗೆ ಜೀವನಾಡಿಯಾಗಿದ್ದ ಈ ಜಲಕಾಯವು ನಗರ ಬೆಳೆದಂತೆಲ್ಲಾ ಕಲುಷಿತ ನೀರು ಹರಿದು ಹಾಳಾಗಿತ್ತು. ಕೊಳಚೆ ನೀರು ತುಂಬಿಕೊಂಡು ಇಡೀ ಕೆರೆಯ ನೀರು ಮಲಿನವಾಗಿತ್ತು. ಅಲ್ಲದೇ ಗಿಡಗಂಟಿಗಳು ಬೆಳೆದು ಕೆರೆ ಸ್ವರೂಪವೇ ಬದಲಾಗಿತ್ತು.

ಮಾರಗೊಂಡನಹಳ್ಳಿಯ ನಾಗರಾಜ ರೆಡ್ಡಿ ಅವರ ಸತತ ಹೋರಾಟದ ಫಲವಾಗಿ ಈಗ ಈ ಕೆರೆ ಅಭಿವೃದ್ಧಿ ಕಾಣುತ್ತಿದೆ. ಈ ಹಿಂದೆಯೇ ಒತ್ತುವರಿ ತೆರವುಗೊಳಿಸಿದ್ದ ಬಿಬಿಎಂಪಿ ಈಗ ₹35 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ.

ಕೆರೆಗೆ ಸೇರುತ್ತಿದ್ದ ಕೊಳಚೆ ನೀರು ತಪ್ಪಿಸಿ ಮಳೆ ನೀರನಷ್ಟೇ ಹರಿಸುವ ಕಾಮಗಾರಿಯನ್ನು ನಡೆಸುತ್ತಿದೆ. ಕೆರೆಗೆ ಶೌಚ ನೀರು ಹರಿದು ಬರಲು ಸಾಧ್ಯವಿರುವ ಎರಡೂ ಕಡೆಗಳಲ್ಲೂ ಒಳಚರಂಡಿ ನೀರಿನ ಮಾರ್ಗ ಬದಲಿಸಲಾಗುತ್ತಿದೆ. ವಿಸ್ತಾರವಾದ ಈ ಕೆರೆಯ ಸುತ್ತಲೂ ಪಾದಚಾರಿಗಳಿಗೆ ಮತ್ತು ವಾಯುವಿಹಾರಿಗಳಿಗೆ ಅನುಕೂಲ ಆಗುವಂತೆ ನಡಿಗೆ ಪಥ ನಿರ್ಮಿಸಲಾಗುತ್ತಿದೆ. ಕೆರೆಯಲ್ಲಿ ಎರಡು ಕಡೆ ದ್ವೀಪದ ರೀತಿಯ ಎತ್ತರದ ಪ್ರದೇಶಗಳಿದ್ದು, ಅವುಗಳನ್ನೂ ಅಭಿವೃದ್ಧಿಪಡಿಸಿ ಕೆರೆಯ ಸೌಂದರ್ಯ ಹೆಚ್ಚಿಸಲಾಗುತ್ತಿದೆ.

187 ಎಕರೆ ವಿಸ್ತೀರ್ಣದ ಕೆರೆಯಲ್ಲಿ 150 ಎಕರೆಯಷ್ಟು ಜಾಗದಲ್ಲಿ ನೀರು ನಿಲ್ಲಲು ಅವಕಾಶ ಮಾಡಲಾಗಿದೆ. ಉಳಿದ ಜಾಗದಲ್ಲಿ ನಡಿಗೆ ಪಥ ಸೇರಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಕೆರೆ ವಿಭಾಗದ ಎಂಜಿನಿಯರ್‌ ಶಿವಲಿಂಗಪ್ಪ ಸಾಹುಕಾರ್ ಮಾಹಿತಿ ನೀಡಿದರು.

‘ಒಂದು ವರ್ಷದಿಂದ ನಡೆಯುತ್ತಿರುವ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಕನಿಷ್ಠ ಆರು ತಿಂಗಳು ಕಾಲಾವಕಾಶ ಬೇಕಾಗಲಿದೆ. ಸತತ ಮಳೆ ಸುರಿದಿದ್ದರಿಂದ ಕಾಮಗಾರಿ ವಿಳಂಬವಾಗಿದೆ. ಸ್ವಲ್ಪ ಮಳೆ ಬಿದ್ದರೂ ಕೆರೆಯ ಒಡಲಿಗೆ ವಾಹನಗಳಾಗಲಿ, ಯಂತ್ರಗಳಾಗಳನ್ನಾಗಲಿ ಇಳಿಸಲು ಸಾಧ್ಯವಾಗುವುದಿಲ್ಲ. ಮಳೆ ಬಿಡುವು ನೀಡಿದರೆ 6 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಅವರು ವಿವರಿಸಿದರು.

ಅಚಲ ಹೋರಾಟಕ್ಕೆ ದೊರೆತ ಪ್ರತಿಫಲ

ಪ್ರಧಾನ ಮಂತ್ರಿ ಕಚೇರಿ ತನಕ ಪತ್ರ ಬರೆದು ಕಚೇರಿಯಿಂದ ಅಲೆದಾಡಿದ ಸಮಾಜ ಸೇವಕರೊಬ್ಬರ ಪ್ರಯತ್ನದ ಫಲವಾಗಿ ಕೆರೆ ಈಗ ಮರುಜೀವ ಪಡೆದುಕೊಳ್ಳುತ್ತಿದೆ.

ಈ ಕೆರೆಯೊಂದಿಗೆ ಆಡಿ ಬೆಳೆದ ಮಾರಗೊಂಡನಹಳ್ಳಿ ನಾಗರಾಜ ರೆಡ್ಡಿ, ಕೆರೆ ಉಳಿಸುವ ಪ್ರಯತ್ನಕ್ಕೆ ಮುಂದಾದರು. ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ ಲಿಮಿಟೆಡ್‌ನಲ್ಲಿ (ಸ್ಯಾಂಡಲ್ ಸೋಪ್ ಫ್ಯಾಕ್ಟರಿ) ಉದ್ಯೋಗಿಯಾಗಿದ್ದ ಇವರು 2013ರಲ್ಲಿ ನಿವೃತ್ತಿಯಾದ ಬಳಿಕ ಕೆರೆ ಉಳಿಸುವ ಕೆಲಸಕ್ಕೇ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.

ತಹಶೀಲ್ದಾರ್‌ ಕಚೇರಿಯಿಂದ ಆರಂಭವಾಗಿ, ರಾಜ್ಯ ಮಾನವ ಹಕ್ಕುಗಳ ಆಯೋಗ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಕಚೇರಿಗಳನ್ನು ಸಂಪರ್ಕ ಮಾಡಿ ಕೆರೆ ಉಳಿಸುವ ಕಾಯಕವನ್ನು ನಾಗರಾಜ ರೆಡ್ಡಿ ಮಾಡಿದ್ದರು. ಕೆರೆಗೆ ಮರುಜೀವ ಕೊಡಿಸಲೇಬೇಕೆಂದು ಛಲ ತೊಟ್ಟಿದ್ದು, ಇವರು ಕಳೆದ ಒಂಬತ್ತು ವರ್ಷಗಳಿಂದ ಇದೇ ಕಾರ್ಯದಲ್ಲಿ ತೊಡಗಿದ್ದಾರೆ. ಅವರ ಶ್ರಮಕ್ಕೆ ಫಲ ದೊರೆತಿದ್ದು, ಕೆರೆ ಪುನರುಜ್ಜೀವನದ ಅವರ ಕನಸು ನನಸಾಗುವ ಹೊಸ್ತಿಲಿನಲ್ಲಿದೆ.

‘ನಾವು ಆಡಿ ಬೆಳೆದ ಕೆರೆ ನಮ್ಮ ಕಣ್ಣೆದುರಿಗೇ ಹಾಳಾಗಿರುವುದನ್ನು ಕಂಡು ಬೇಸರವಾಯಿತು. ಗ್ರಾಮ ಪಂಚಾಯಿತಿಯಿಂದ ಆದಿಯಾಗಿ ಸಂಬಂಧಿಸಿದ ಎಲ್ಲಾ ಕಚೇರಿಗಳಿಗೂ ಅರ್ಜಿಗಳನ್ನು ಹಿಡಿದು ಓಡಾಡಿದೆ. ಈಗ ಕೆರೆ ಪುನರುಜ್ಜೀವನಗೊಳ್ಳುತ್ತಿರುವುದು ಸಂತಸದ ವಿಷಯ. ರೈತನ ಮಗನಾಗಿ ಕೆರೆ ಉಳಿಸಿದ ಸಾರ್ಥಕ ಭಾವ ನನ್ನಲ್ಲಿ ಉಳಿದಿದೆ. ಪ್ರಕೃತಿಯನ್ನು ನಾವು ಸಂರಕ್ಷಿಸಿದರೆ ಪ್ರಕೃತಿ ನಮ್ಮನ್ನು ಸಂರಕ್ಷಿಸುತ್ತದೆ ಎಂಬುದನ್ನು ನಂಬಿದ್ದೇನೆ. ಆದ್ದರಿಂದಲೇ ಈ ಹೋರಾಟ ನಡೆಸಿದೆ’ ಎಂದು ನಾಗರಾಜ ರೆಡ್ಡಿ ಹೇಳುತ್ತಾರೆ.

ಅಂಕಿ–ಅಂಶ

187 ಎಕರೆ
ಕೆರೆಯ ವಿಸ್ತೀರ್ಣ

₹35 ಕೋಟಿ
ಕೆರೆ ಅಭಿವೃದ್ಧಿಗೆ ಬಿಬಿಎಂಪಿ ಮಾಡುತ್ತಿರುವ ವೆಚ್ಚ

150 ಎಕರೆ
ಕೆರೆಯಲ್ಲಿ ನೀರು ನಿಲ್ಲುವ ಪ್ರದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT