ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ದುರಸ್ತಿಗೆ ಕರ್ತವ್ಯನಿರತರ ಪರದಾಟ

ಗ್ಯಾರೇಜ್‌ ತೆರೆಯಲು ಅನುಮತಿ ನೀಡುವಂತೆ ಮಾಲೀಕರ ಒತ್ತಾಯ
Last Updated 23 ಮೇ 2021, 20:51 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‌ಡೌನ್‌ ಜಾರಿಯಲ್ಲಿರುವ ಕಾರಣಕ್ಕೆ ನಗರದ ಗ್ಯಾರೇಜ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಕೋವಿಡ್‌ ಕರ್ತವ್ಯದಡಿ ಹಾಗೂ ಅಗತ್ಯ ಸೇವೆಯಡಿ ಕಾರ್ಯನಿರ್ವಹಿಸುತ್ತಿರುವ ಬಹುತೇಕರು ಸ್ವಂತ ವಾಹನಗಳಲ್ಲೇ ಸಂಚರಿಸುತ್ತಿದ್ದು, ಮಾರ್ಗಮಧ್ಯೆ ಕೆಟ್ಟು ನಿಲ್ಲುವ ವಾಹನಗಳ ದುರಸ್ತಿಗೆ ಗ್ಯಾರೇಜ್‌ಗಳು ಲಭ್ಯವಿಲ್ಲದೇ ಸಮಸ್ಯೆ ಎದುರಿಸಬೇಕಾಗಿದೆ.

ಲಾಕ್‌ಡೌನ್‌ನಿಂದಾಗಿ ಸಾರ್ವಜನಿಕ ಬಸ್‌ ಸೇವೆ, ಆಟೊ ಹಾಗೂ ಕ್ಯಾಬ್‌ ಸೇವೆಗಳ್ಯಾವುವೂ ಲಭ್ಯ ಇಲ್ಲ. ಸರ್ಕಾರಿ ಸಿಬ್ಬಂದಿಗೆ ವಾಹನ ವ್ಯವಸ್ಥೆ ಮಾಡಲಾಗಿರುತ್ತದೆ. ಉಳಿದೆಲ್ಲರೂ ಸ್ವಂತ ವಾಹನಗಳನ್ನೇ ಅವಲಂಬಿಸಿದ್ದಾರೆ. ಕೋವಿಡ್‌ ಸೇವೆಗೆ ನಿಯೋಜನೆಗೊಂಡಿರುವ ವೈದ್ಯಕೀಯ ಸಿಬ್ಬಂದಿ, ವೈದ್ಯಕೀಯ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ, ಗುತ್ತಿಗೆ ಸಿಬ್ಬಂದಿ, ಪೊಲೀಸರು, ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುವವರು, ಅಗತ್ಯ ಸೇವೆಯಡಿ ಜಲಮಂಡಳಿ, ಬೆಸ್ಕಾಂ ಸಿಬ್ಬಂದಿ, ಆಹಾರ ವಿತರಣೆ ಹಾಗೂ ಇ–ಕಾಮರ್ಸ್‌ ಸಿಬ್ಬಂದಿ ತಮ್ಮ ವಾಹನಗಳಲ್ಲೇ ಕರ್ತವ್ಯಕ್ಕೆ ತೆರಳುತ್ತಿದ್ದಾರೆ.

ವಾಹನಗಳನ್ನು ಕಾಲಕಾಲಕ್ಕೆ ನಿರ್ವಹಣೆ ಮಾಡಿದರೆ ಮಾತ್ರ ಅದು ಸುಸ್ಥಿತಿಯಲ್ಲಿರುತ್ತದೆ. ತಿಂಗಳಿಂದ ಗ್ಯಾರೇಜ್‌ಗಳೆಲ್ಲ ಮುಚ್ಚಿರುವ ಕಾರಣಕ್ಕೆ ವಾಹನಗಳ ಸ್ಥಿತಿಯನ್ನು ತಪಾಸಣೆಗೆ ಒಳಪಡಿಸಲೂ ಸಾಧ್ಯವಾಗುತ್ತಿಲ್ಲ. ಮಾರ್ಗಮಧ್ಯೆ ವಾಹನಗಳು ಕೆಟ್ಟು ನಿಲ್ಲುತ್ತಿವೆ. ದುರಸ್ತಿ ಮಾಡಲು ಮೆಕ್ಯಾನಿಕ್ ಸಿಗದೆ ಜನ ಪಡಿಪಾಟಲು ಎದುರಿಸಬೇಕಾಗಿದೆ.

‘ಎರಡು ತಿಂಗಳಿನಿಂದ ಕೋವಿಡ್‌ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದೇನೆ. ಪ್ರತಿದಿನ ಸ್ಕೂಟರ್‌ನಲ್ಲೇ ಕೆಲಸಕ್ಕೆ ತೆರಳುತ್ತಿದ್ದೆ. ಕಳೆದ ವಾರ ಮಾರ್ಗಮಧ್ಯೆ ಸ್ಕೂಟರ್ ಕೆಟ್ಟು ನಿಂತಿತು. ಹತ್ತಿರದಲ್ಲಿ ಯಾವುದೇ ಗ್ಯಾರೇಜ್ ತೆರೆದಿರಲಿಲ್ಲ. ಕೊನೆಗೆ ಪತಿಯನ್ನು ಕರೆಸಿಕೊಂಡು, ಕೆಲಸದ ಸ್ಥಳಕ್ಕೆ ತೆರಳಿದೆ’ ಎಂದು ಕೋವಿಡ್‌ ಕರ್ತವ್ಯದಲ್ಲಿರುವ ಶಿಕ್ಷಕಿ ಗೀತಾ ತಮಗಾದ ಪರಿಸ್ಥಿತಿಯನ್ನು ಹೇಳಿಕೊಂಡಿದರು.

‘ಸಂಚಾರಕ್ಕೆ ಸಾರಿಗೆ ವ್ಯವಸ್ಥೆಗಳಿಲ್ಲ. ನನಗೆ ಪಾಸ್‌ ಇರುವುದರಿಂದ ಸಂಚಾರಕ್ಕೆ ಸಮಸ್ಯೆಯಿಲ್ಲ. ಪತಿಯೊಂದಿಗೆ ವಾಹನದಲ್ಲಿ ತೆರಳಲು ಪೊಲೀಸರು ಬಿಡುವುದಿಲ್ಲ. ಗ್ಯಾರೇಜ್‌ಗಳು ಲಭ್ಯವಿದ್ದರೆ, ಇಂತಹ ಫಜೀತಿಗಳು ಎದುರಾಗುವುದಿಲ್ಲ’ ಎಂದು ಸಲಹೆ ನೀಡಿದರು.

‘ಲಾಕ್‌ಡೌನ್‌ ಇರುವುದರಿಂದ ಆನ್‌ಲೈನ್ ಮೂಲಕ ಆಹಾರ ತರಿಸಿಕೊಳ್ಳುವ ಪ್ರಮಾಣ ಹೆಚ್ಚಾಗಿದೆ. ಬೆಳಿಗ್ಗೆ 9ರಿಂದ ರಾತ್ರಿವರೆಗೂ ಬೈಕ್‌ನಲ್ಲೇ ತೆರಳಿ ಗ್ರಾಹಕರಿಗೆ ಆಹಾರ ವಿತರಿಸುತ್ತೇನೆ. ಈಗ ಬೈಕ್‌ ಅನ್ನು ಸರ್ವೀಸ್‌ಗೆ ಬಿಡಬೇಕಿತ್ತು. ಆದರೆ, ಯಾವುದೇ ಗ್ಯಾರೇಜ್ ಹಾಗೂ ಸರ್ವೀಸ್ ಕೇಂದ್ರಗಳು ತೆರೆದಿಲ್ಲ. ಗಾಡಿ ಎಲ್ಲಿ ನಿಂತುಬಿಡುತ್ತದೆಯೋ ಎಂಬ ಆತಂಕದಲ್ಲೇ ಸಂಚರಿಸುತ್ತಿದ್ದೇನೆ’ ಎನ್ನುತ್ತಾರೆ ಆಹಾರ ಪೂರೈಸುವ ಡೆಲಿವರಿ ಸಿಬ್ಬಂದಿ ಪ್ರೀತಮ್‌.

‘ನಗರದ ವಿವಿಧೆಡೆ ಕರ್ತವ್ಯಕ್ಕೆ ನಿಯೋಜಿಸುತ್ತಾರೆ. ಬೈಕ್‌ ಸರ್ವೀಸ್ ವಿಳಂಬವಾಯಿತು. ಸಣ್ಣಪುಟ್ಟ ರಿಪೇರಿಯೂ ಇದೆ. ಗ್ಯಾರೇಜ್‌ಗಳು ಇಲ್ಲದಿರುವುದರಿಂದ ರಸ್ತೆಯಲ್ಲಿ ಹೋಗುವ ವಾಹನಗಳನ್ನು ಅಡ್ಡಗಟ್ಟಿ, ಅವರ ವಾಹನದಲ್ಲೇ ಸಂಚರಿಸುತ್ತಿದ್ದೇನೆ’ ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸ್ ಕಾನ್‌ಸ್ಟೆಬಲ್‌ ಒಬ್ಬರು ಸಂಕಟ ಹೇಳಿಕೊಂಡರು.

‘ಜೀವನ ನಿರ್ವಹಣೆಗೆ ಸಮಸ್ಯೆ’
‘ಗ್ಯಾರೇಜ್‌ಗಳಲ್ಲಿ ಹೆಚ್ಚೆಂದರೆ ಮೂರು ಜನ ಕಾರ್ಯನಿರ್ವಹಿಸುತ್ತಾರೆ. ತುರ್ತು ಅಗತ್ಯವಿದ್ದವರಿಗೆ ವಾಹನ ರಿಪೇರಿ ಮಾಡುವುದಕ್ಕಾದರೂಸರ್ಕಾರ ಗ್ಯಾರೇಜ್‌ಗಳು ಕಾರ್ಯನಿರ್ವಹಿಸಲು ಅನುಮತಿ ನೀಡಬೇಕು’ ಎಂದುಕರ್ನಾಟಕ ದ್ವಿಚಕ್ರ ವಾಹನ ಕಾರ್ಯಗಾರ ಮಾಲೀಕರ ಮತ್ತು ತಂತ್ರಜ್ಞರ ಸಂಘದ ಅಧ್ಯಕ್ಷ ಕೆ.ಎಸ್.ಪ್ರಸನ್ನ ಕುಮಾರ್‌ ಒತ್ತಾಯಿಸಿದರು.

‘ರಾಜ್ಯದಲ್ಲಿ ಸುಮಾರು ನಾಲ್ಕು ಲಕ್ಷ ಗ್ಯಾರೇಜ್‌ಗಳಿವೆ. ಬೆಂಗಳೂರಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಗ್ಯಾರೇಜ್‌ಗಳನ್ನು ನಡೆಸುತ್ತಿದ್ದಾರೆ. ಲಾಕ್‌ಡೌನ್‌ನಿಂದಾಗಿ ಇವರಿಗೆ ಜೀವನ ನಿರ್ವಹಣೆ ಕಷ್ಟವಾಗಿದೆ. ಕೋವಿಡ್‌ ಕರ್ತವ್ಯಗಳಿಗೆ ವಾಹನಗಳಲ್ಲಿ ತೆರಳುವ ಸಿಬ್ಬಂದಿಗೂ ಗ್ಯಾರೇಜ್‌ಗಳ ಅಗತ್ಯವಿದೆ. ಸರ್ಕಾರ ಅನುಮತಿ ನೀಡಿದರೆ, ಇವರಿಗೂ ಅನುಕೂಲ. ಮೆಕ್ಯಾನಿಕ್‌ಗಳ ಹೊಟ್ಟೆಯೂ ತುಂಬುತ್ತದೆ’ ಎಂದು ಹೇಳಿದರು.

‘ಪೊಲೀಸರುಕಳೆದ ಲಾಕ್‌ಡೌನ್‌ನಲ್ಲಿ ವಾಹನ ರಿಪೇರಿಗೆ ಅವಕಾಶ ನೀಡಿದ್ದರು. ಈಗಲೂ ಅವಕಾಶ ನೀಡಿದರೆ, ಸೇವೆ ನೀಡಲು ಸಿದ್ಧ. ಸಂಜೆಯವರೆಗೆ ಕೆಲಸ ಮಾಡಲು ಅನುವು ಮಾಡಿಕೊಡಬೇಕು. ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಎಲ್ಲ ಮೆಕ್ಯಾನಿಕ್‌ಗಳಿಗೆ ಸರ್ಕಾರ ಉಚಿತ ಲಸಿಕೆ, ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ನೀಡಬೇಕು’ ಎಂದರು.

***

ವಾಹನ ರಿಪೇರಿಗಾಗಿ ಹಲವರು ಕರೆ ಮಾಡುತ್ತಾರೆ. ಗ್ಯಾರೇಜ್‌ ತೆರೆಯಲು ಅವಕಾಶ ಇಲ್ಲದಿರುವುದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ.
-ಮಂಜುನಾಥ್,ಗ್ಯಾರೇಜ್ ಮಾಲೀಕ, ಕತ್ರಿಗುಪ್ಪೆ

***

ಆನ್‌ಲೈನ್‌ ಮೂಲಕ ವಸ್ತುಗಳ ಖರೀದಿ ಹೆಚ್ಚಾಗಿದೆ. ಬೈಕ್‌ ರಿಪೇರಿಗೆ ಬಂದಿದೆ. ಗ್ಯಾರೇಜ್‌ಗಳನ್ನು ತೆರೆದರೆ, ಬೈಕ್‌ ಸುಸ್ಥಿತಿಯಲ್ಲಿಡಬಹುದು.
-ಪ್ರತಾಪ್‌, ಇ–ಕಾಮರ್ಸ್‌ ಸಿಬ್ಬಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT