ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ವೆಚ್ಚ: ₹1.84 ಕೋಟಿ ಹೊರೆ, ₹4.65 ಲಕ್ಷ ಮರುಪಾವತಿ ಪಡೆದ ಶ್ರೀರಾಮುಲು

Last Updated 14 ಅಕ್ಟೋಬರ್ 2020, 20:51 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭಾ ಸದಸ್ಯರ ಮತ್ತು ಅವರ ಕುಟುಂಬದವರ, ಮಾಜಿ ಶಾಸಕರ ವೈದ್ಯಕೀಯ ವೆಚ್ಚ ಮರುಪಾವತಿ ಮಾಡಲು ವಿಧಾನಸಭೆ ಸಚಿವಾಲಯದ ಬೊಕ್ಕಸದಿಂದ ಮೂರು ವರ್ಷಗಳಲ್ಲಿ ₹1.84 ಕೋಟಿ ಭರಿಸಲಾಗಿದೆ. ಒಟ್ಟು 87 ಶಾಸಕರು ಹಾಗೂ ಮಾಜಿ ಶಾಸಕರು ವೈದ್ಯಕೀಯ ವೆಚ್ಚದ ಬಿಲ್‌ ಸಲ್ಲಿಸಿ ಹಣ ಪಡೆದಿದ್ದಾರೆ.

ಕೋವಿಡ್‌ ಕಾಣಿಸಿಕೊಂಡ ಬಳಿಕ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟು ಅನೇಕ ಯೋಜನೆಗಳನ್ನು ಸ್ಥಗಿತಗೊಳಿಸುವ ಪರಿಸ್ಥಿತಿಯನ್ನು ಸರ್ಕಾರ ಎದುರಿಸುತ್ತಿದೆ. ಇಂತಹ ಸ್ಥಿತಿಯಲ್ಲೂ ಶಾಸಕರು ಮರುಪಾವತಿಗಾಗಿ ವೈದ್ಯಕೀಯ ವೆಚ್ಚದ ಬಿಲ್‌ ಸಲ್ಲಿಸುವುದನ್ನು ಬಿಟ್ಟಿಲ್ಲ. 2020ರಲ್ಲಿ ಏಪ್ರಿಲ್‌ನಿಂದ ಇದುವರೆಗೆ 13 ಶಾಸಕರಿಗೆ ಒಟ್ಟು ₹ 24,82,355 ಪಾವತಿಸಲಾಗಿದೆ. 2018–19ನೇ ಸಾಲಿನಲ್ಲಿ 37 ಶಾಸಕರಿಗೆ ₹ 98,95,315 ಹಾಗೂ 2019–20ನೇ ಸಾಲಿನಲ್ಲಿ ₹ 60,54,159 ಹಣ ಬಿಡುಗಡೆ ಮಾಡಲಾಗಿದೆ. ಸಾಮಾಜಿಕ ಕಾರ್ಯಕರ್ತ ಎಚ್‌.ಎಂ.ವೆಂಕಟೇಶ್‌ ಅವರು ಮಾಹಿತಿ ಹಕ್ಕಿನಡಿ ಈ ಕುರಿತ ದಾಖಲೆಗಳನ್ನು ಪಡೆದಿದ್ದಾರೆ.

2018–19ರಲ್ಲಿ ಗರಿಷ್ಠ ಹಣ (₹ 23.85 ಲಕ್ಷ) ಮರುಪಾವತಿ ಮಾಡಿರುವುದು ಖನೀಜ್‌ ಫಾತಿಮಾ ಅವರಿಗೆ. ಇದರಲ್ಲಿ ಅವರ ಪತಿ, ಮಾಜಿ ಶಾಸಕ ಖಮರುಲ್‌ ಇಸ್ಲಾಂ ಅವರ ವೈದ್ಯಕೀಯ ವೆಚ್ಚದ ಮರುಪಾವತಿಯೂ ಸೇರಿದೆ. ಈ ಸಾಲಿನಲ್ಲಿ ಮಹೇಶ್‌ ಕುಮಠಳ್ಳಿ ಅವರಿಗೆ ₹12,287 ಮರುಪಾವತಿ ಮಾಡಿರುವುದು ಕನಿಷ್ಠ ಮೊತ್ತ.

2019–20ರಲ್ಲಿ ಎನ್‌.ಲಿಂಗಣ್ಣ ಅವರಿಗೆ (₹ 11.31 ಲಕ್ಷ) ಗರಿಷ್ಠ ಮೊತ್ತ ಮರುಪಾವತಿಯಾಗಿದೆ. ಕೆ.ಬಿ.ಅಶೋಕ ನಾಯ್ಕ ಅವರಿಗೆ ₹ 4,815 ಮರುಪಾವತಿ ಮಾಡಿರುವುದು ಈ ಸಾಲಿನ ಕನಿಷ್ಠ ಮೊತ್ತ. 2020ರಲ್ಲಿ ನರಸಿಂಹ ನಾಯಕ್‌ (ರಾಜೂಗೌಡ) ಅವರಿಗೆ ₹ 12.89 ಲಕ್ಷ ಮರುಪಾವತಿ ಮಾಡಿರುವುದು ಗರಿಷ್ಠ ಮೊತ್ತ. ದೇವಾನಂದ ಚೌಹಾಣ್‌ ಅವರಿಗೆ ₹ 2,875 ಮರುಪಾವತಿ ಮಾಡಿರುವುದು ಕನಿಷ್ಠ ಮೊತ್ತ. 2019–20ನೇ ಸಾಲಿನಲ್ಲಿ ಸಚಿವ ಶ್ರೀರಾಮುಲು ಅವರಿಗೂ ₹ 4.65 ಲಕ್ಷ ಮರುಪಾವತಿ ಮಾಡಲಾಗಿದೆ.

‘ಪ್ರಧಾನಿ ನರೇಂದ್ರ ಮೋದಿ ಅವರು ಅಡುಗೆ ಅನಿಲ ಸಿಲಿಂಡರ್‌ಗಳ ಮೇಲಿನ ಸಬ್ಸಿಡಿಯನ್ನು ತೊರೆಯಿರಿ ಎಂದು ಜನರಲ್ಲಿ ಮನವಿ ಮಾಡುತ್ತಾರೆ. ಪ್ರವಾಹದಿಂದ ಹಾಗೂ ಕೋವಿಡ್‌ನಿಂದ ರಾಜ್ಯ ತತ್ತರಿಸುತ್ತಿರುವಾಗ ಅವರದೇ ಪಕ್ಷದವರೂ ಸೇರಿದಂತೆ ವಿವಿಧ ಶಾಸಕರು ಲಕ್ಷಾಂತರ ರೂಪಾಯಿಯನ್ನು ತಮ್ಮ ಹಾಗೂ ಕುಟುಂಬದವರ ವೈದ್ಯಕೀಯ ವೆಚ್ಚಕ್ಕಾಗಿ ಸರ್ಕಾರದ ಬೊಕ್ಕಸದಿಂದ ಪಡೆಯುತ್ತಾರೆ. ಶಾಸಕರಿಗೆ ವೈದ್ಯಕೀಯ ವೆಚ್ಚ ಪಡೆಯುವುದು ಹಕ್ಕು ಇರಬಹುದು. ಆದರೆ, ಅವರು ಸಂದರ್ಭವನ್ನೂ ನೋಡಬೇಕು. ಐಷಾರಾಮಿ ಕಾರುಗಳಲ್ಲಿ ಓಡಾಡುವವರು ಈ ರೀತಿ ಮಾಡುವುದು ಸರಿಯೇ’ ಎಂದು ವೆಂಕಟೇಶ್‌ ಪ್ರಶ್ನಿಸಿದರು.

‘ಶಾಸಕರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಅದಕ್ಕೆ ಸರ್ಕಾರಿ ಆಸ್ಪತ್ರೆಯಲ್ಲಿ ತಗಲುವ ವೆಚ್ಚದಷ್ಟೇ ಮೊತ್ತವನ್ನು ಮರುಪಾವತಿ ಮಾಡಲಾಗುತ್ತದೆ. ವಿಮೆಯಿಂದ ಅವರಿಗೆ ಈ ಮೊತ್ತ ಮರುಪಾವತಿ ಆಗಿಲ್ಲ ಎಂಬುದನ್ನು ಖಾತರಿ ಪಡಿಸಿಕೊಳ್ಳುತ್ತೇವೆ. ವೈದ್ಯಕೀಯ ವೆಚ್ಚ ಮರುಪಾವತಿಗೆ ಮುನ್ನ ಶಾಸಕರು ಸಲ್ಲಿಸಿದ ಬಿಲ್‌ಗಳನ್ನು ಆರೋಗ್ಯ ಸೇವೆಗಳ ನಿರ್ದೇಶನಾಲಯಕ್ಕೆ ಕಳುಹಿಸಿ ಪರಿಶೀಲಿಸುತ್ತೇವೆ. ನಿರ್ದೇಶನಾಲಯವು ಶಿಫಾರಸು ಮಾಡಿದಷ್ಟು ಅರ್ಹ ಮೊತ್ತವನ್ನು ಮಾತ್ರ ಮರುಪಾವತಿ ಮಾಡಲಾಗುತ್ತದೆ’ ಎಂದು ವಿಧಾನ ಸಭೆ ಸಚಿವಾಲಯದ ಕಾರ್ಯದರ್ಶಿ ವಿಶಾಲಾಕ್ಷಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

₹ 5 ಲಕ್ಷಕ್ಕಿಂತ ಹೆಚ್ಚು ಮರುಪಾವತಿ ವಿವರ

ಹೆಸರು; ಮೊತ್ತ (₹ ಲಕ್ಷಗಳಲ್ಲಿ)

ಖನೀಜ್ ಫಾತಿಮಾ; 23.84

ಸಾಂಬಾಜಿ ಲಕ್ಷ್ಮಣ ಪಾಟೀಲ; 11.43

ರಾಜೇಶ್‌ ಎಚ್‌.ಪಿ; 8.20

ಎಚ್‌.ವೈ. ಮೇಟಿ; 5.98

ಜಯಮ್ಮ; 8.45

ಎನ್‌.ಲಿಂಗಣ್ಣ; 11.31

ತನ್ವೀರ್‌ ಸೇಠ್‌; 6.70

ನರಸಿಂಹ ನಾಯಕ್‌ (ರಾಜೂಗೌಡ); 12.89

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT