ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ವೈದ್ಯಕೀಯ ಕಾಲೇಜು ಆರಂಭಕ್ಕೆ ಬಿಬಿಎಂಪಿ ಯೋಜನೆ

ಗೋವಿಂದರಾಜನಗರದ ‘ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ’ಯನ್ನು ಪರಿವರ್ತಿಸಲು ಯೋಜನೆ
Published 31 ಜನವರಿ 2024, 23:30 IST
Last Updated 31 ಜನವರಿ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ ಮೊದಲ ವೈದ್ಯಕೀಯ ಕಾಲೇಜನ್ನು ತೆರೆಯಲು ಯೋಜಿಸಿದೆ.

ಗೋವಿಂದರಾಜನಗರದ ಎಂ.ಸಿ ಬಡಾವಣೆಯಲ್ಲಿ ₹106 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ‘ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ’ಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲಾಗುತ್ತಿದೆ.

‘ಪ್ರಸ್ತಾವ ಪ್ರಾರಂಭಿಕ ಹಂತದಲ್ಲಿದ್ದು, ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲಾಗುತ್ತಿದೆ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 300 ಹಾಸಿಗೆಗಳ ಸೌಲಭ್ಯವಿದ್ದು, ವೈದ್ಯಕೀಯ ಕಾಲೇಜು ಸ್ಥಾಪನೆಗೆ ಬೇಕಾದ ಅಗತ್ಯವನ್ನು ಪೂರೈಸಲಿದೆ’ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್‌ ಕಿಶೋರ್‌ ತಿಳಿಸಿದರು.

‘ಮುಂದಿನ ಬಜೆಟ್‌ನಲ್ಲಿ ₹500 ಕೋಟಿ ಅನುದಾನ ನೀಡುವಂತೆ ಆರೋಗ್ಯ ವಿಭಾಗ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸುಸಜ್ಜಿತ ವೈದ್ಯ ಸೌಲಭ್ಯಗಳಿದ್ದರೂ, ಸಿಬ್ಬಂದಿಯ ಕೊರತೆ ಇದೆ. ಇದರಿಂದ ಹಲವು ಸೌಲಭ್ಯಗಳು ಇನ್ನೂ ಕಾರ್ಯಾರಂಭವಾಗಿಲ್ಲ. ವೈದ್ಯಕೀಯ ಕಾಲೇಜಿಗೆ ಹೆಚ್ಚಿನ ಸಿಬ್ಬಂದಿಯ ಅಗತ್ಯವಿರುತ್ತದೆ’ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದರು.

ಫೆಬ್ರುವರಿ 2023ರಲ್ಲಿ ಆರಂಭವಾದ ಈ ‘ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ’ಯಲ್ಲಿ ಪ್ರಯೋಗಾಲಯ, ರೆಡಿಯಾಲಜಿ, ಶಿಶುಆರೈಕೆ ಕೇಂದ್ರ, ಕಿಮೊಥೆರಪಿ, ರಕ್ತ ಸಂಗ್ರಹ, ತುರ್ತುನಿಗಾ ಘಟಕ, ಶಸ್ತ್ರಚಿಕಿತ್ಸಾ ಕೇಂದ್ರ, ಮೂಳೆ, ದಂತ ಚಿಕಿತ್ಸಾ ಸೇವೆಗಳು ಸೇರಿದಂತೆ ಹೆರಿಗೆ ಕೇಂದ್ರಗಳ ಸೌಲಭ್ಯವಿದೆ.

ಇ ಆಸ್ಪತ್ರೆ: ರೆಫೆರಲ್‌ ಆಸ್ಪತ್ರೆಗಳು, ಹೆರಿಗೆ ಕೇಂದ್ರಗಳು, ಹೊಸ ಜನರಲ್‌ ಆಸ್ಪತ್ರೆಗಳನ್ನು ಇ–ಆಸ್ಪತ್ರೆಗಳನ್ನಾಗಿ ಮಾರ್ಪಡಿಸುವ ಪ್ರಸ್ತಾವವನ್ನು ಬಿಬಿಎಂಪಿ ಆರೋಗ್ಯ ವಿಭಾಗ ಸರ್ಕಾರಕ್ಕೆ ಸಲ್ಲಿಸಿದೆ. ಇ– ಆಸ್ಪತ್ರೆಗಳು ಆನ್‌ಲೈನ್‌ನಲ್ಲಿ ಕಾಯ್ದಿರಿಸುವಿಕೆ, ಪ್ರಯೋಗಾಲಯದ ವರದಿ ನೀಡುವ ಸೌಲಭ್ಯಗಳನ್ನು ಹೊಂದಲಿವೆ. ಈ ಯೋಜನೆಗೆ ₹8 ಕೋಟಿ ಅನುದಾನ ನೀಡಬೇಕೆಂದು ಮನವಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT