ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಶಿಲ್ಪ ಉದ್ಯಾನದಲ್ಲಿ ಕಲಾಕೃತಿಗಳ ಸೊಬಗು

ಬೆಂಗಳೂರು ಆರ್ಟ್‌ ಪಾರ್ಕ್‌ನ ‘ಮೀಟ್‌ ದಿ ಆರ್ಟಿಸ್ಟ್‌’ ಕಾರ್ಯಕ್ರಮ
Published : 3 ಸೆಪ್ಟೆಂಬರ್ 2023, 15:39 IST
Last Updated : 3 ಸೆಪ್ಟೆಂಬರ್ 2023, 15:39 IST
ಫಾಲೋ ಮಾಡಿ
Comments

ಬೆಂಗಳೂರು: ಕಲಾವಿದರ ಕಲ್ಪನೆಯಲ್ಲಿ ಸ್ಥಳದಲ್ಲೇ ಅರಳಿದ ಹಲವು ಬಗೆಯ ಕಲಾಕೃತಿಗಳು, ಕಲಾವಿದರ ಜತೆಗೆ ಒಂದಷ್ಟು ಸಂವಾದ, ಕಲೆಗಳ ವರ್ಣನೆ...

–ಇದು ‘ಬೆಂಗಳೂರು ಆರ್ಟ್‌ ಪಾರ್ಕ್’ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಶಿಲ್ಪ ಉದ್ಯಾನದಲ್ಲಿ ಭಾನುವಾರ ಆಯೋಜಿಸಿದ್ದ ‘ಮೀಟ್‌ ದಿ ಆರ್ಟಿಸ್ಟ್‌’ ಕಾರ್ಯಕ್ರಮದ ನೋಟಗಳು.

ಜಲವರ್ಣ, ತೈಲವರ್ಣ, ಆ್ಯಕ್ರಿಲಿಕ್‌, ಡಿಜಿಟಲ್‌ ಪೇಯಿಂಟಿಂಗ್‌, ಸಮಕಾಲೀನ ಚಿತ್ರಕಲೆ, ಅಮೂರ್ತ ಕಲೆ... ಹೀಗೆ ನಾನಾ ಕಲಾಕೃತಿಗಳು ಕಲಾವಿದರ ಕೈಚಳಕದಲ್ಲಿ ಅನಾವರಣಗೊಂಡಿದ್ದವು. ಇಡೀ ದಿನ ನಡೆದ ಪ್ರದರ್ಶನದಲ್ಲಿ ಕಲಾಸಕ್ತರು ಕಲೆಗಳನ್ನು ಕಣ್ತುಂಬಿಕೊಂಡು ಅವುಗಳ ಮಾಹಿತಿ ಪಡೆದರು.

ಪುರಭವನ, ರವೀಂದ್ರ ಕಲಾಕ್ಷೇತ್ರ, ಕನ್ನಡಭವನಕ್ಕೆ ಬಂದವರೂ ಇತ್ತ ಕಣ್ಣು ಹಾಯಿಸಿ ಕಲಾಕೃತಿಗಳನ್ನು ಆಸ್ವಾದಿಸಿದರು. ಕಲಾವಿದರ ಕೈಯಲ್ಲಿ ನಾಡಿನ ಇತಿಹಾಸ, ಪ್ರಕೃತಿಯ ರಮಣೀಯತೆ, ಸಂಸ್ಕೃತಿ, ಗ್ರಾಮೀಣ ಸೊಗಡಿನ ಕಲಾಕೃತಿಗಳು ಅನಾವರಣಗೊಂಡಿದ್ದವು. ಬೆಳಿಗ್ಗೆ 11ರಿಂದ ಸಂಜೆ 5ರ ತನಕ ಪ್ರದರ್ಶನ, ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.

‘ನಗರ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಿಂದ ಕಲಾವಿದರು ಪ್ರದರ್ಶನಕ್ಕೆ ಬಂದಿದ್ದಾರೆ. ಸ್ಥಳದಲ್ಲೇ ಕಲಾಕೃತಿ ರಚಿಸಿ ನೀಡುವ ಉದ್ದೇಶದಿಂದ ಪ್ರತಿ ತಿಂಗಳ ಮೊದಲ ವಾರ ಕಾರ್ಯಕ್ರಮ ನಡೆಸಲಾಗುತ್ತಿದೆ’ ಎಂದು ಆರ್ಟ್‌ ಪಾರ್ಕ್ ಅಧ್ಯಕ್ಷ ಜಿ. ಜಯಕುಮಾರ್ ಹೇಳಿದರು.

‘ನಮಗೆ ವಾಣಿಜ್ಯ ಉದ್ದೇಶ ಇಲ್ಲ. ಕಲಾವಿದರಿಗೆ ವೇದಿಕೆ ಕಲ್ಪಿಸುವುದು, ಪ್ರೇಕ್ಷಕರ ಜತೆಗೆ ಸಂವಾದ ನಡೆಸುವ ಏಕೈಕ ಉದ್ದೇಶದಿಂದ ಮೀಟ್‌ ದಿ ಆರ್ಟಿಸ್ಟ್‌ ಕಾರ್ಯಕ್ರಮ ರೂಪಿಸಲಾಗಿದೆ. ಕಡಿಮೆ ದರಕ್ಕೆ ಕಲಾಕೃತಿಗಳು ಲಭಿಸುತ್ತವೆ’ ಎಂದು ಹೇಳಿದರು.

‘ಜಗತ್ತನ್ನು ಕಂಡುಕೊಳ್ಳಲು ಕಲೆ, ಸಾಹಿತ್ಯವೊಂದು ಅಭಿವ್ಯಕ್ತಿ ಮಾಧ್ಯಮ. ಕಲಾವಿದರಿಗೆ ವೇದಿಕೆ ಅಗತ್ಯವಿದೆ’ ಎಂದು ಹೇಳಿದರು. ಭೂಮಿಜಾದ ವ್ಯವಸ್ಥಾಪಕ ಟ್ರಸ್ಟಿ ಗಾಯತ್ರಿ ಕೃಷ್ಣ ಪ್ರದರ್ಶನ ಉದ್ಘಾಟಿಸಿದರು. 25ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡಿದ್ದರು.

ಮನೆ ಮನೆಗೂ ಚಿತ್ರಕಲೆಗಳನ್ನು ತಲುಪಿಸುವ ಉದ್ದೇಶದಿಂದ ಪ್ರದರ್ಶನ ಆಯೋಜಿಸಲಾಗುತ್ತಿದೆ. ಚಿತ್ರಸಂತೆಗಿಂತ ಕಡಿಮೆ ದರಕ್ಕೆ ಇಲ್ಲಿ ಕಲಾಕೃತಿಗಳು ಲಭಿಸುತ್ತವೆ.
-ಮಂಜುನಾಥ್‌ ವಾಲಿ, ಕಲಾವಿದ
ಚಿತ್ರಸಂತೆಗೆ ಹವ್ಯಾಸಿ ಕಲಾವಿದರೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆರ್ಟ್‌ ಪಾರ್ಕ್‌ ಆಯೋಜಿಸುವ ಈ ಕಾರ್ಯಕ್ರಮದಲ್ಲಿ ವೃತ್ತಿಪರ ಕಲಾವಿದರಿಗೆ ಆದ್ಯತೆ ಇರುತ್ತದೆ.
-ಮಹಾವೀರ್, ಕಲಾಸಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT