ಸೋಮವಾರ, ಅಕ್ಟೋಬರ್ 18, 2021
24 °C
ಎರಡು ಕಡೆ ಉರುಳಿಬಿದ್ದ ಮರ; ರಸ್ತೆಯಲ್ಲಿ ಹೊಳೆಯಂತೆ ಹರಿದ ನೀರು

ಕೇಂದ್ರ, ಪೂರ್ವ ಭಾಗದಲ್ಲಿ ಧಾರಾಕಾರ ಮಳೆ; ವಿಧಾನಸೌಧದೊಳಕ್ಕೆ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಕೇಂದ್ರ ಭಾಗ ಹಾಗೂ ಪೂರ್ವ ಭಾಗಗಳಲ್ಲಿ ಸೋಮವಾರ ಮಧ್ಯಾಹ್ನ ಅಬ್ಬರದ ಮಳೆ ಆಗಿದ್ದು, ಉಳಿದ ಪ್ರದೇಶಗಳಲ್ಲಿ ಸಾಧಾರಣ ಮಳೆ ಸುರಿಯಿತು.

ನಗರದಲ್ಲಿ ಹಲವು ದಿನಗಳಿಂದ ಮೋಡ ಕವಿದ ವಾತಾವರಣವಿದೆ. ಆಗಾಗ ಬಿಸಿಲು ಕಾಣಿಸಿಕೊಳ್ಳುತ್ತಿದೆ. ಭಾನುವಾರ ತಡರಾತ್ರಿಯೂ ಜೋರು ಮಳೆಯಾಗಿ, ಹಲವೆಡೆ ನೀರು ಧಾರಾಕಾರವಾಗಿ ಹರಿದಿತ್ತು. ಸೋಮವಾರ ಬೆಳಿಗ್ಗೆ ಪುನಃ ಬಿಸಿಲು ಕಾಣಿಸಿಕೊಂಡಿತ್ತು. ಮಧ್ಯಾಹ್ನ ಮೋಡ ಕವಿದ ವಾತಾವರಣ ಕಾಣಿಸಿಕೊಂಡು, ಜಿಟಿ ಜಿಟಿ ಮಳೆ ಸುರಿಯಲಾರಂಭಿಸಿತು. ಕೆಲ ನಿಮಿಷಗಳಲ್ಲೇ ಮಳೆ ಅಬ್ಬರ ಜೋರಾಯಿತು. ಮಳೆಯ ದೊಡ್ಡ ಹನಿಗಳು ನೆಲಕ್ಕೆ ಅಪ್ಪಳಿಸಿದವು. ರಸ್ತೆಯಲ್ಲಿ ಹೊಳೆಯಂತೆ ನೀರು ಹರಿಯಿತು.

ಮಳೆಯಿಂದ ತಪ್ಪಿಸಿಕೊಳ್ಳಲು ಕೆಲವರು, ರಸ್ತೆಯ ಪಕ್ಕ–ಪಕ್ಕದ ಮಳಿಗೆಗಳಲ್ಲಿ ಆಶ್ರಯ ಪಡೆದರು. ಕೆಲವರು ಸುರಿವ ಮಳೆಯಲ್ಲೇ ವಾಹನಗಳನ್ನು ಚಲಾಯಿಸಿಕೊಂಡು ಹೋದರು. ಬೆಂಗಳೂರು ಕೇಂದ್ರ ಹಾಗೂ ಪೂರ್ವ ಭಾಗದ ಪ್ರಮುಖ ರಸ್ತೆಗಳ ಕೆಳಸೇತುವೆಗಳು ಹಾಗೂ ಕಾಲುವೆಗಳಲ್ಲಿ ನೀರು ರಭಸವಾಗಿ ಹರಿಯುತ್ತಿದ್ದ ದೃಶ್ಯ ಕಂಡುಬಂತು. ಹರಿಯುವ ನೀರಿನಲ್ಲೇ ವಾಹನ ಚಲಾಯಿಸಿಕೊಂಡು ಹೋಗಲು ಯತ್ನಿಸಿದ್ದರಿಂದ ಕೆಲವು ವಾಹನಗಳು ಕೆಟ್ಟು ನಿಂತವು. ವಾಹನಗಳನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಲು ಸ್ಥಳೀಯರು ನೆರವಾದರು.

ಮೆಜೆಸ್ಟಿಕ್, ಶೇಷಾದ್ರಿಪುರ, ವಿಧಾನಸೌಧ, ಶಿವಾಜಿನಗರ, ಇಂದಿರಾನಗರ, ಎಂ.ಜಿ. ರಸ್ತೆ, ಹಲಸೂರು, ವಿಲ್ಸನ್ ಗಾರ್ಡನ್, ಶಾಂತಿನಗರ, ವೈಟ್‌ಫೀಲ್ಡ್, ಬೆಳ್ಳಂದೂರು, ಈಜಿಪುರ, ಕೆ.ಆರ್. ಪುರ, ನಾಗವಾರ, ಹೆಬ್ಬಾಳ, ಸಂಜಯನಗರ, ಆರ್‌.ಟಿ. ನಗರ ಹಾಗೂ ಸುತ್ತಮುತ್ತ ಮಳೆ ಅಬ್ಬರ ಜೋರಾಗಿತ್ತು.

ಚಾಮರಾಜಪೇಟೆ, ಜಯನಗರ, ಹನುಮಂತನಗರ, ಗಿರಿನಗರ, ಬಸವನಗುಡಿ, ವಿಜಯನಗರ, ಬಸವೇಶ್ವರನಗರ, ರಾಜಾಜಿನಗರ, ಯಶವಂತಪುರ, ಮತ್ತೀಕೆರೆ, ಪೀಣ್ಯ, ವಿದ್ಯಾರಣ್ಯಪುರ, ಜಾಲಹಳ್ಳಿ, ಯಲಹಂಕ,  ಕೋರಮಂಗಲ, ಮಡಿವಾಳ, ಎಚ್‌ಎಸ್‌ಆರ್ ಲೇಔಟ್‌ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲೂ ಮಳೆ ಇತ್ತು.

ಬಳ್ಳಾರಿ ರಸ್ತೆ, ತುಮಕೂರು ರಸ್ತೆ, ಹೊಸೂರು ರಸ್ತೆ, ಕನಕಪುರ ರಸ್ತೆಯಲ್ಲಿ ನೀರು ಹೆಚ್ಚು ಹರಿಯಿತು. ಈ ಭಾಗದ ರಸ್ತೆಗಳಲ್ಲಿ ವಾಹನಗಳು ನಿಧಾನಗತಿಯಲ್ಲಿ ಸಾಗಿದವು. ಕೆಲ ಚಾಲಕರು ವಾಹನಗಳನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿದ್ದರಿಂದ ಇತರೆ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ವಾಹನಗಳ ದಟ್ಟಣೆಯೂ ಕಂಡುಬಂತು.

ಉರುಳಿಬಿದ್ದ ಮರಗಳು: ಮಳೆ ಸುರಿಯುತ್ತಿದ್ದ ಸಂದರ್ಭದಲ್ಲಿ ಗಾಳಿಯೂ ಜೋರಾಗಿ ಬೀಸಿತು. ವೈಟ್‌ಫೀಲ್ಡ್ ಹಾಗೂ ರಾಜಭವನ ರಸ್ತೆಯಲ್ಲಿ ಮರಗಳು ಉರುಳಿಬಿದ್ದಿದ್ದವು. ಇದರಿಂದ ವಾಹನಗಳ ಸಂಚಾರಕ್ಕೆ ಕೆಲ ಹೊತ್ತು ಅಡಚಣೆ ಉಂಟಾಗಿತ್ತು.

ಪೊಲೀಸರು ಹಾಗೂ ಬಿಬಿಎಂಪಿ ಅರಣ್ಯ ವಿಭಾಗದ ಸಿಬ್ಬಂದಿ, ಮರ ತೆರವು ಮಾಡಿ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.

ರಸ್ತೆ, ಕಾಲುವೆಗಳು ಭರ್ತಿ: ‘ಕಬ್ಬನ್ ಪಾರ್ಕ್ ಸುತ್ತಮುತ್ತಲ ಪ್ರದೇಶಗಳಲ್ಲಿ ಜೋರು ಮಳೆ ಆಗಿದೆ. ಪ್ರಮುಖ ರಸ್ತೆಗಳು ಹಾಗೂ ಕಾಲುವೆಗಳು ನೀರಿನಿಂದ ಭರ್ತಿಯಾಗಿದ್ದವು’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.

‘ವಲಯವಾರು ಸಿಬ್ಬಂದಿ, ದೂರು ಬಂದ ಸ್ಥಳಕ್ಕೆ ಹೋಗಿ ಮಳೆ ನೀರು ತೆರವು ಕಾರ್ಯಾಚರಣೆ ಮಾಡಿದರು. ಮರ ಬಿದ್ದ ಹಾಗೂ ರಸ್ತೆಯಲ್ಲಿ ನೀರು ಹರಿದ ದೂರುಗಳು ಬಿಟ್ಟರೆ, ಬೇರೆ ಯಾವ ದೂರುಗಳೂ ಬಂದಿಲ್ಲ’ ಎಂದೂ ಅವರು ತಿಳಿಸಿದರು.

‘ವಿಧಾನಸೌಧದೊಳಗೆ ನೀರು’
ಧಾರಾಕಾರ ಮಳೆಯಿಂದಾಗಿ ವಿಧಾನಸೌಧ ಕಟ್ಟಡದೊಳಗೆ ನೀರು ನುಗ್ಗಿತ್ತು. ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಜೋರು ಮಳೆ ಆಯಿತು. ಕಟ್ಟಡದ ಕಾರಿಡಾರ್‌ನಲ್ಲಿ ನೀರು ನಿಂತುಕೊಂಡಿತ್ತು. ಮಳೆ ನಿಂತ ನಂತರ ಸ್ವಚ್ಛತಾ ಸಿಬ್ಬಂದಿ ನೀರು ತೆರವುಗೊಳಿಸಿ, ನೆಲವನ್ನು ಸ್ವಚ್ಛಗೊಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು