ಒಳವರ್ತುಲ ರಸ್ತೆಯಲ್ಲೂ ಮೆಟ್ರೊ?

ಭಾನುವಾರ, ಜೂಲೈ 21, 2019
27 °C
ಕಾರ್ಯಸಾಧ್ಯತೆ ಅಧ್ಯಯನ ನಡೆಸುವಂತೆ ಬಿಎಂಆರ್‌ಸಿ ಕೋರಿಕೆ

ಒಳವರ್ತುಲ ರಸ್ತೆಯಲ್ಲೂ ಮೆಟ್ರೊ?

Published:
Updated:

ಬೆಂಗಳೂರು: ಭವಿಷ್ಯದಲ್ಲಿ ನಗರದ ಒಳ ವರ್ತುಲ ರಸ್ತೆಯಲ್ಲೂ ‘ನಮ್ಮ ಮೆಟ್ರೊ’ ಜಾಲವನ್ನು ಹೊಂದುವ ಸಾಧ್ಯತೆ ಇದೆ. ನಗರದ ಕೇಂದ್ರ ಪ್ರದೇಶದಲ್ಲಿ ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ, ಈ ಕುರಿತು ಅಧ್ಯಯನ ನಡೆಸಲು ಸಿದ್ಧತೆ ನಡೆದಿದೆ. 

ಈ ಕುರಿತು ಪ್ರಸ್ತಾವ ಸಿದ್ಧಪಡಿಸಿದ್ದ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ನಗರ ಸಾರಿಗೆ ತಜ್ಞರು ನಗರಾಭಿವೃದ್ಧಿ ಇಲಾಖೆ ಅಧಿಕಾ ರಿಗಳ ಮುಂದೆ ಸೋಮವಾರ ಪ್ರಾತ್ಯಕ್ಷಿಕೆ ನೀಡಿದ್ದರು. ಈ ಪ್ರಸ್ತಾವವನ್ನು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಒಪ್ಪಿ ಕೊಂಡಿದ್ದು, ಕಾರ್ಯಸಾಧ್ಯತಾ ವರದಿ ತಯಾರಿಸುವಂತೆ ಕೋರಿದೆ.

‘ಸುಮಾರು 35 ಕಿ.ಮೀ ಉದ್ದದ ಮೆಟ್ರೊ ಸುರಂಗಮಾರ್ಗ ಒಳ ವರ್ತುಲ ರಸ್ತೆಯಲ್ಲಿ ವೃತ್ತಾಕಾರದಲ್ಲಿ ನಿರ್ಮಾಣವಾಗಲಿದೆ. ಸ್ಯಾಂಡಲ್‌ ಸೋಪ್‌ ಕಾರ್ಖಾನೆ ಮತ್ತು ಹಲಸೂರನ್ನು ಸಂಪರ್ಕಿಸುವ ಈ ಮಾರ್ಗ ಸಿ.ವಿ.ರಾಮನ್‌ ರಸ್ತೆ– ಜಯಮಹಲ್‌ ರಸ್ತೆ ಮಾರ್ಗವಾಗಿ ಸಾಗಲಿದೆ. ನಂತರ ಮುಂದುವರಿದು ದೊಮ್ಮಲೂರು ಮೂಲಕ ವಿಲ್ಸನ್‌ ಗಾರ್ಡನ್‌ ತಲುಪಲಿದೆ. ಈ ವರ್ತುಲ ಮಾರ್ಗದ ಉಳಿದರ್ಧವು ಶ್ರೀನಗರದ ಬಳಿ ಬಲಕ್ಕೆ ತಿರುಗಿ ಕಾರ್ಡ್‌ ರಸ್ತೆಯನ್ನು ಸೇರಲಿದೆ’ ಎಂದು ಮೂಲಗಳು ತಿಳಿಸಿವೆ.

ಈ ಪ್ರಸ್ತಾವದ ಕುರಿತು ಪ್ರತಿಕ್ರಿಯಿಸಿದ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌, ‘ನಗರದ ಕೇಂದ್ರ ಪ್ರದೇಶಕ್ಕೆ ಮೆಟ್ರೊ ಸಾರಿಗೆ ಒಂದೇ ಪರಿಹಾರವಾಗಲಾಗದು. ಸಂಚಾರ ದಟ್ಟಣೆಯ ಸ್ಥಿತಿಗತಿ ಹಾಗೂ ಮೆಟ್ರೊ ಯೋಜನೆಯ ಕಾರ್ಯಸಾಧ್ಯತೆಯ ಅಧ್ಯಯನದ ಬಳಿಕ ಈ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ’ ಎಂದರು.

‘ನಗರ ಕೇಂದ್ರ ಪ್ರದೇಶದ ಸಾರಿಗೆ ವ್ಯವಸ್ಥೆ ಹಾಗೂ ಒಳ ವರ್ತುಲ ರಸ್ತೆಯಲ್ಲಿ ಮೆಟ್ರೊ ನಿರ್ಮಿಸುವುದರ ಪ್ರಯೋಜನಗಳನ್ನು ಇನ್ನಷ್ಟೇ ಅಧ್ಯಯನ ನಡೆಸಬೇಕಿದೆ. ಇಲ್ಲಿ ಎತ್ತರಿಸಿದ ಮಾರ್ಗವನ್ನು ನಿರ್ಮಿಸುವುದು ಕಷ್ಟಸಾಧ್ಯ.  ಹೊರ ವರ್ತುಲ ರಸ್ತೆಯ ಒಳಗಿನ ಪ್ರದೇಶದಲ್ಲಿ ನಾವು ಸಮೂಹ ಸಾರಿಗೆಯ ಇತರ ಆಯ್ಕೆಗಳನ್ನೂ ಪರಿಶೀಲಿಸುತ್ತಿದ್ದೇವೆ’ ಎಂದರು.

‘ನಮ್ಮ ಮೆಟ್ರೊ ಎರಡನೇ ಹಂತದ ಯೋಜನೆ, ಹೊರ ವರ್ತುಲ ರಸ್ತೆಯ ಮೆಟ್ರೊ ಮಾರ್ಗ (ಸಿಲ್ಕ್‌ಬೋರ್ಡ್‌–ಕೆ.ಆರ್‌.ಪುರ) ಮತ್ತು ವಿಮಾನನಿಲ್ದಾಣಕ್ಕೆ ಮೆಟ್ರೊ ಸಂಪರ್ಕಿಸುವ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಸದ್ಯ ನಮ್ಮ ಮುಂದಿರುವ ಗುರಿ. ಬಿಎಂಆರ್‌ಸಿಎಲ್‌ ಹಾಗೂ ನಗರ ಭೂಸಾರಿಗೆ ನಿರ್ದೇಶ
ನಾಲಯ (ಡಿಯುಎಲ್‌ಟಿ) ಸೇರಿ ಸಿದ್ಧಪಡಿಸುತ್ತಿರುವ ಸಮಗ್ರ ಸಂಚಾರ ಯೋಜನೆಯಡಿ ಮೆಟ್ರೊ ಸಂಪರ್ಕ ಸಾಧ್ಯವಿಲ್ಲದ ಪ್ರದೇಶಗಳಲ್ಲಿ ಬಸ್‌ ತ್ವರಿತ ಸಾರಿಗೆ ವ್ಯವಸ್ಥೆಯೂ ಸೇರಿದಂತೆ ಸಮೂಹ ಸಾರಿಗೆ ಕಾರಿಡಾರ್‌ಗಳನ್ನು ನಿರ್ಮಾಣದ ಸಾಧ್ಯತೆಗಳನ್ನು ಪರಿಗಣಿಸಬೇಕಾಗುತ್ತದೆ’ ಎಂದರು.

‘ಬೇರೆ ಬೇರೆ ಮಾದರಿಗಳನ್ನು ಪರಿಗಣಿಸಿದಾಗ, ಪ್ರಸ್ತಾವಿತ ಮೆಟ್ರೊ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಎಷ್ಟು ಇರುತ್ತದೆ ಎಂಬ ಬಗ್ಗೆ ಸಂಚಾರ ಸ್ಥಿತಿಗತಿಯ ಅಧ್ಯಯನದ ವೇಳೆ ಗಮನ ನೀಡುತ್ತೇವೆ’ ಎಂದು ಐಐಎಸ್ಸಿಯ ತಜ್ಞರು ತಿಳಿಸಿದರು.

‘ಕಾಲಾನುಕ್ರಮೇಣ, ರಸ್ತೆ ಸಾರಿಗೆ ಪೂರ್ಣ ಸಾಮರ್ಥ್ಯವನ್ನು ತಲುಪಿದಾಗ ಸಮೂಹ ತ್ವರಿತ ಸಾರಿಗೆಯೊಂದೇ ಆಯ್ಕೆಯಾಗಿ ಉಳಿಯುತ್ತದೆ. ಜಾಗತಿಕ ನಗರಗಳ ಕೇಂದ್ರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ವರ್ತುಲಾಕಾರದ ಹಾಗೂ ಕೇಂದ್ರ ಪ್ರದೇಶದಿಂದ ಹೊರ ಚದುರುವಂತಹ ಮೆಟ್ರೊ ಜಾಲವನ್ನು ಹೊಂದಿರುತ್ತವೆ. ಭವಿಷ್ಯದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆಗೊಳಿಸುವಲ್ಲಿ ವರ್ತುಲಾಕಾರದಲ್ಲಿ ಮೆಟ್ರೊ ಸುರಂಗ ಮಾರ್ಗ ಅತ್ಯುಪಯುಕ್ತವಾಗಲಿದೆ’ ಎಂದು ಐಐಎಸ್ಸಿ ಸಾರಿಗೆ ಎಂಜಿನಿಯರಿಂಗ್‌ ವಿಭಾ ಗದ ಪ್ರಾಧ್ಯಾಪಕ ಪ್ರೊ. ಆಶಿಷ್‌ ವರ್ಮ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !