ಗುರುವಾರ , ಜನವರಿ 20, 2022
15 °C
ಎನ್‌ಸಿಸಿ ಕಂಪನಿಗೆ ಗುತ್ತಿಗೆ

ವಿಮಾನ ನಿಲ್ದಾಣಕ್ಕೆ ಮೆಟ್ರೊ: ಕಾಮಗಾರಿಗೆ ಟೆಂಡರ್; 3 ತಿಂಗಳಲ್ಲಿ ಕಾಮಗಾರಿ ಆರಂಭ

ವಿಜಯಕುಮಾರ್ ಎಸ್‌.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೊ ರೈಲು ಸಂಪರ್ಕ ಕಲ್ಪಿಸುವ ಬಹು ಬೇಡಿಕೆಯ ಕಾಮಗಾರಿ  ಮೂರು ತಿಂಗಳಲ್ಲಿ ಆರಂಭವಾಗಲಿದ್ದು, ಸಿವಿಲ್ ಕಾಮಗಾರಿ ಗುತ್ತಿಗೆಯನ್ನು ಎನ್‌ಸಿಸಿ (ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪನಿ) ಪಡೆದುಕೊಂಡಿದೆ.

2ಬಿ ಮಾರ್ಗದ ಕಾಮಗಾರಿಯನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದ್ದು, ಎಲ್ಲ ಪ್ಯಾಕೇಜ್‌ಗಳನ್ನೂ ಎನ್‌ಸಿಸಿಗೆ ನೀಡಲಾಗಿದೆ. ಕಾಮಗಾರಿ ಸಂಬಂಧ ಮಾಡಿಕೊಂಡಿರುವ ಒಪ್ಪಂದ ಪತ್ರವನ್ನು ಎನ್‌ಸಿಸಿಗೆ ಬೆಂಗಳೂರು ಮೆಟ್ರೊ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಬುಧವಾರ ಹಸ್ತಾಂತರಿಸಿದೆ.

ಕೆ.ಆರ್.‍ಪುರದಿಂದ ವಿಮಾನ ನಿಲ್ದಾಣದ ತನಕ 38.44 ಕಿ.ಮೀ. ಉದ್ದದ ಎತ್ತರಿಸಿದ ಮೆಟ್ರೊ ರೈಲು ಮಾರ್ಗದ ಕಾಮಗಾರಿಗೆ ಒಟ್ಟು ₹2,200 ಕೋಟಿ ಮೊತ್ತ ನಿಗದಿ ಮಾಡಲಾಗಿದೆ.

ಕೋವಿಡ್ ಕಾರಣದಿಂದ ಒಂದೂವರೆ ವರ್ಷದಲ್ಲಿ ಹಲವು ಬಾರಿ ಟೆಂಡರ್ ಪ್ರಕ್ರಿಯೆ ಮುಂದೂಡಿಕೆಯಾಗಿತ್ತು. ಹೊರವರ್ತುಲ ರಸ್ತೆ ಮತ್ತು ವಿಮಾನ ನಿಲ್ದಾಣ ಮಾರ್ಗ ಸೇರಿ ₹14,788 ಕೋಟಿ ಮೊತ್ತಕ್ಕೆ ಕೇಂದ್ರ ಸಚಿವ ಸಂಪುಟ 2021ರ ಏಪ್ರಿಲ್‌ನಲ್ಲಿ ಅನುಮೋದನೆ ನೀಡಿತ್ತು. 2021ರ ಜೂನ್‌ನಲ್ಲಿ ತೆರೆಯಲಾಗಿದ್ದ ತಾಂತ್ರಿಕ ಬಿಡ್‌ಗಳಲ್ಲಿ ಐದು ಕಂಪನಿಗಳು ಅರ್ಹತೆ ಪಡೆದಿದ್ದವು.

ಸೆಪ್ಟೆಂಬರ್ 14ರಂದು ಬಿಡ್‌ ತೆರೆದಾಗ ಕಡಿಮೆ ದರ ನಮೂದಿಸಿರುವ ಬಿಡ್ಡುದಾರರಾಗಿ ಎನ್‌ಸಿಸಿ ಹೊರಹೊಮ್ಮಿದೆ. ಯಲಚೇನಹಳ್ಳಿಯಿಂದ ರೇಷ್ಮೆ ಸಂಸ್ಥೆ ತನಕದ ಎರಡನೇ ಹಂತದ ಮೆಟ್ರೊ ರೈಲು ಮಾರ್ಗದ ಸಿವಿಲ್ ಕಾಮಗಾರಿಯನ್ನು ಎನ್‌ಸಿಸಿ ಕಂಪನಿ ಈ ಹಿಂದೆ ನಿರ್ವಹಿಸಿತ್ತು.

‘ವಿಮಾನ ನಿಲ್ದಾಣ ಮಾರ್ಗಕ್ಕೆ ಅಗತ್ಯ ಇರುವ ಭೂಸ್ವಾಧೀನ ಪ್ರಕ್ರಿಯೆಯೂ ಬಹುತೇಕ ಮುಗಿದಿದೆ. ಅಗತ್ಯ ಇರುವ ಒಟ್ಟು 3,13,367 ಚದರ ಮೀಟರ್‌ನಲ್ಲಿ ಈವರೆಗೆ 2,91,470 ಚದರ ಮೀಟರ್‌ ಭೂಮಿ ಸ್ವಾಧೀನ ಪ್ರಕ್ರಿಯೆ ಮುಗಿದಿದೆ. ಮರ ಕಡಿಯುವ ಮತ್ತು ಸ್ಥಳಾಂತರ ಮಾಡುವ ಕಾರ್ಯ ಬಾಕಿ ಇದೆ’ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದರು.

3 ಲಕ್ಷಕ್ಕೆ ಏರಿದ ಪ್ರಯಾಣಿಕರ ಸಂಖ್ಯೆ

ಕೋವಿಡ್‌ ಬಳಿಕ ಇದೇ ಮೊದಲ ಬಾರಿಗೆ ಮೆಟ್ರೊ ರೈಲು ಪ್ರಯಾಣಿಕರ ಸಂಖ್ಯೆ 3 ಲಕ್ಷದ ಗಡಿ ದಾಟಿದೆ. ನ.15ರಂದು 3,15,554 ಜನರು ಪ್ರಯಾಣ ಮಾಡಿದ್ದಾರೆ.

ಕೋವಿಡ್‌ಗೂ ಮುನ್ನ ನಿತ್ಯ ಸರಾಸರಿ 4.5 ಲಕ್ಷ ಜನ ಪ್ರಯಾಣಿಸುತ್ತಿದ್ದರು. ಕೋವಿಡ್‌ ಲಾಕ್‌ಡೌನ್ ಸಂದರ್ಭದಲ್ಲಿ ಮೆಟ್ರೊ ರೈಲು ಸಂಚಾರ ಸಂಪೂರ್ಣ ನಿಲ್ಲಿಸಲಾಗಿತ್ತು. ಲಾಕ್‌ಡೌನ್ ತೆರವಾದ ಬಳಿಕ ರಾತ್ರಿ 9ರ ತನಕ ಮಾತ್ರ ರೈಲುಗಳ ಸಂಚಾರ ಇತ್ತು. ಕೆಲ ದಿನಗಳ ಬಳಿಕ 10 ಗಂಟೆ ತನಕ ವಿಸ್ತರಣೆ ಮಾಡಲಾಗಿತ್ತು. ಗುರುವಾರದಿಂದ ರಾತ್ರಿ 11ರ ತನಕ ಮೆಟ್ರೊ ರೈಲು ಸಂಚಾರವನ್ನು ವಿಸ್ತರಿಸಲಾಗಿದೆ. ಪ್ರಯಾಣಿಕರ ಸಂಖ್ಯೆ ಮುಂದಿನ ದಿನಗಳಲ್ಲಿ ಏರಿಕೆಯಾಗುವ ನಿರೀಕ್ಷೆಯನ್ನು ಬಿಎಂಆರ್‌ಸಿಎಲ್ ಹೊಂದಿದೆ.

ಮೂರು ಪ್ಯಾಕೇಜ್‌

ಪ್ಯಾಕೇಜ್–1; ಬೆನ್ನಿಗಾನಹಳ್ಳಿ, ಹೊರಮಾವು, ಎಚ್‌ಆರ್‌ಬಿಆರ್ ಲೇಔಟ್, ಕಲ್ಯಾಣನಗರ, ಎಚ್‌ಬಿಆರ್ ಲೇಔಟ್, ನಾಗವಾರ, ವೀರಣ್ಣಪಾಳ್ಯ ಮತ್ತು ಕೆಂಪಾಪುರ ಒಳಗೊಂಡು ಬೈಯಪ್ಪನಹಳ್ಳಿ ಸಂಪರ್ಕಿಸುವ 11 ಕಿಲೋ ಮೀಟರ್ ಉದ್ದದ ಮಾರ್ಗ.

ಪ್ಯಾಕೇಜ್–2; ಹೆಬ್ಬಾಳ, ಕೊಡಿಗೇಹಳ್ಳಿ, ಜಕ್ಕೂರು ಕ್ರಾಸ್, ಯಲಹಂಕ, ಬಾಗಲೂರು ಕ್ರಾಸ್ ತನಕದ 11.67 ಕಿ.ಮೀ ಉದ್ದದ ಮಾರ್ಗ.

ಪ್ಯಾಕೇಜ್–3; ಬೆಟ್ಟಹಲಸೂರು, ದೊಡ್ಡಜಾಲ, ವಿಮಾನ ನಿಲ್ದಾಣ ತನಕದ 15 ಕಿ.ಮೀ ಉದ್ದ ಮಾರ್ಗ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು