ಬೆಂಗಳೂರು: ಮೆಟ್ರೊ ರೈಲು ಸಂಚಾರ ಅವಧಿಯನ್ನು ವಿಸ್ತರಿಸಬೇಕು ಎಂಬ ಒತ್ತಾಯ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಆಟೊ, ಟ್ಯಾಕ್ಸಿ, ಬಸ್, ರೈಲುಗಳ ಸಂಚಾರಕ್ಕೆ ಇಲ್ಲದ ನಿರ್ಬಂಧ ಮೆಟ್ರೊ ರೈಲು ಸಂಚಾರಕ್ಕೆ ಮಾತ್ರವೇಕೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯಸರ್ಕಾರವು ರಾತ್ರಿ 9ರಿಂದ ಬೆಳಿಗ್ಗೆ 5ರವರೆಗೆ ರಾತ್ರಿ ಕರ್ಫ್ಯೂ ಜಾರಿ ಮಾಡಿರುವುದರಿಂದ ಮೆಟ್ರೊ ರೈಲು ಸಂಚಾರ ಸಮಯವನ್ನು ಕಡಿತಗೊಳಿಸಲಾಗಿದೆ. ಸದ್ಯ, ಬೆಳಿಗ್ಗೆ 7ರಿಂದ ರಾತ್ರಿ 8ರವರೆಗೆ ಮಾತ್ರ ಮೆಟ್ರೊ ರೈಲುಗಳು ಸಂಚರಿಸುತ್ತಿವೆ. ಶಾಲಾ–ಕಾಲೇಜು ಮತ್ತು ಕಚೇರಿಗಳು ಕಾರ್ಯಾರಂಭ ಮಾಡಿರುವುದರಿಂದ ಈ ಮೊದಲಿನಂತೆ ಬೆಳಿಗ್ಗೆ 5ರಿಂದ ರಾತ್ರಿ 11ರವರೆಗೆ ಮೆಟ್ರೊ ರೈಲು ಸೇವೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
‘ಮಧ್ಯರಾತ್ರಿ ತೊಂದರೆ’
ನಾನು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಾಗ ಹೋಗಬೇಕಾಗುತ್ತದೆ. ಸುಮಾರು ಆರು ತಾಸುಗಳ ಪ್ರಯಾಣ. ರಾತ್ರಿ 8 ಗಂಟೆಗೆ ಮೆಟ್ರೊ ರೈಲಿಗೆ ಹೋಗಿ, 9ಕ್ಕೆ ಬಸ್‌ನಲ್ಲಿ ಪ್ರಯಾಣ ಆರಂಭಿಸಿದರೂ, ಮಧ್ಯರಾತ್ರಿ 2 ಅಥವಾ 3 ಗಂಟೆಗೆ ಶಿವಮೊಗ್ಗದಲ್ಲಿ ಇರಬೇಕಾಗುತ್ತದೆ. ಆಗ ಆಟೊದವರು, ಟ್ಯಾಕ್ಸಿಯವರು ದುಪ್ಪಟ್ಟು ಹಣ ಕೇಳುತ್ತಾರೆ. ಬೆಂಗಳೂರಿನಿಂದಲೇ ರಾತ್ರಿ 11ಕ್ಕೆ ಮನೆಯಿಂದ ಹೊರಟರೂ, ಇಲ್ಲಿಯೂ ಓಲಾ, ಉಬರ್‌ನವರು ಶೇ 150ರಷ್ಟು ದುಡ್ಡು ಹೆಚ್ಚು ಕೇಳುತ್ತಾರೆ. ಮೊದಲಿನಂತೆ ರಾತ್ರಿ 11ರವರೆಗೆ ಮೆಟ್ರೊ ರೈಲು ಸೇವೆ ನೀಡಿದರೆ ಅನುಕೂಲವಾಗುತ್ತದೆ
- ಬಿ.ಎಸ್. ರವಿಶಂಕರ್, ಉದ್ಯಮಿ
***
‘ಆಟೊ, ಬಸ್‌ಗಳಲ್ಲಿಯೂ ಅಂತರವಿರುವುದಿಲ್ಲ’
ಕೋವಿಡ್ ಕಾರಣದಿಂದ ಮೆಟ್ರೊ ರೈಲು ಸಂಚಾರ ಸಮಯವನ್ನು ಕಡಿತಗೊಳಿಸಲಾಗಿದೆ ಎನ್ನುತ್ತಿದ್ದಾರೆ. ಮೆಟ್ರೊ ಬದಲು, ಟ್ಯಾಕ್ಸಿ, ಆಟೊ ಅಥವಾ ಬಸ್‌ಗಳಲ್ಲಿಯೂ ಅಂತರವಿರುವುದಿಲ್ಲ. ಮೆಟ್ರೊ ರೈಲಿನ ಸಮಯ ಮಾತ್ರ ಕಡಿತಗೊಳಿಸಿರುವುದಕ್ಕೆ ಅರ್ಥವೇ ಇಲ್ಲ. ಮೆಟ್ರೊ ರೈಲಿನ ಬದಲು ಸ್ವಂತ ವಾಹನಗಳನ್ನು, ಆಟೊ–ಕ್ಯಾಬ್‌ಗಳನ್ನು ಹೆಚ್ಚು ಜನ ಬಳಸುವ ಕಾರಣದಿಂದ ಸಂಚಾರ ದಟ್ಟಣೆ ಹೆಚ್ಚುವುದಲ್ಲದೆ ವಾಯುಮಾಲಿನ್ಯ, ಶಬ್ದ ಮಾಲಿನ್ಯವೂ ಹೆಚ್ಚುತ್ತದೆ
- ಆಶಾ, ಖಾಸಗಿ ಕಂಪನಿ ಉದ್ಯೋಗಿ
***
‘ಲಸಿಕೆ ಪಡೆದಿರುವುದರಿಂದ ಆತಂಕವಿಲ್ಲ’
ಲಸಿಕೆ ಪಡೆದಿರುವವರ ಪ್ರಮಾಣ ಬೆಂಗಳೂರಿನಲ್ಲಿಯೇ ಹೆಚ್ಚಾಗಿದೆ. ಬಹುತೇಕರು ಕನಿಷ್ಠ ಒಂದು ಡೋಸ್ ಆದರೂ ಲಸಿಕೆ ಪಡೆದಿದ್ದಾರೆ. ಈಗಾಗಲೇ ಮೆಟ್ರೊ ರೈಲಿನಲ್ಲಿ ನಿಂತು ಪ್ರಯಾಣಿಸುವಷ್ಟು ಜನಸಂದಣಿ ಇದೆ. ಯಾವುದೇ ಅಂತರವನ್ನು ಕಾಪಾಡಿಕೊಳ್ಳಲೂ ಆಗುವುದಿಲ್ಲ. ಬೆಳಿಗ್ಗೆ 7ರಿಂದ ರಾತ್ರಿ 8ರವರೆಗೆ ಹರಡದ ಸೋಂಕು, ನಂತರ ಮಾತ್ರ ಹರಡುತ್ತದೆಯೇ ? ರಾತ್ರಿಯ ವೇಳೆ ಆಟೊ, ಟ್ಯಾಕ್ಸಿಗಳವರು ಕೇಳುವ ಬಾಡಿಗೆ ಕೇಳಿದರೆ ತಲೆ ತಿರುಗುತ್ತದೆ. ಮೊದಲಿನ ವೇಳಾಪಟ್ಟಿಯಂತೆಯೇ ನಿಗಮವು ಮೆಟ್ರೊ ರೈಲು ಸಂಚಾರ ಆರಂಭಿಸಬೇಕು.
- ಮಹೇಶ್ವರ ಶಾಸ್ತ್ರಿ, ಖಾಸಗಿ ಕಂಪನಿ ಉದ್ಯೋಗಿ
***
‘ಅರ್ಧ ತಾಸಿಗೊಮ್ಮೆಯಾದರೂ ಸಂಚರಿಸಲಿ’
ದುಡಿಯುವ ವರ್ಗ ಮತ್ತು ರಾತ್ರಿ ದೂರದ ಊರಿಗೆ ಹೋಗುವವರಿಗೆ ಮೆಟ್ರೊ ರೈಲಿಗಿಂತ ಉತ್ತಮವಾದ ಮತ್ತೊಂದು ಸಾರಿಗೆ ಸೌಲಭ್ಯವಿಲ್ಲ. ನೇರಳೆ ಮತ್ತು ಹಸಿರು ಮಾರ್ಗದಲ್ಲಿ ರಾತ್ರಿ 9ರಿಂದ ಕನಿಷ್ಠ ಅರ್ಧ ಗಂಟೆಗೆ ಒಮ್ಮೆಯಾದರೂ ಒಂದೆರಡು ರೈಲುಗಳು ಸಂಚರಿಸುವಂತಾಗಬೇಕು. 11ರವರೆಗೆ ಮೆಟ್ರೊ ಸೇವೆ ದೊರೆತರೆ ತುಂಬಾ ಅನುಕೂಲವಾಗುತ್ತದೆ. ಈಗ ಕೋವಿಡ್ ಪ್ರಕರಣಗಳ ಸಂಖ್ಯೆಯೂ ಕಡಿಮೆ ಇದೆ. ಮೂರನೇ ಅಲೆ ಕಾಣಿಸಿಕೊಂಡ ನಂತರ ಬೇಕಾದರೆ ಸಂಚಾರ ನಿರ್ಬಂಧ ಇರಲಿ. ಈಗ ಶಾಲಾ–ಕಾಲೇಜು, ಕಚೇರಿ ಮತ್ತು ಇನ್ನಿತರೆ ಎಲ್ಲ ಚಟುವಟಿಕೆಗಳು ಸರಾಗವಾಗಿ ನಡೆಯುತ್ತಿರುವ ಈ ಸಂದರ್ಭದಲ್ಲಿ ಮೆಟ್ರೊ ರೈಲು ಸಂಚಾರ ಸಮಯ ಮಾತ್ರ ಕಡಿತಗೊಳಿಸಿರುವುದು ಸರಿಯಲ್ಲ.
- ಅನಿತಾ ರಂಗರಾಜ್, ಸರ್ಕಾರಿ ಉದ್ಯೋಗಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.