ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರದಿಂದ ಸಾಗಿರುವ ಮೆಟ್ರೊ ರೈಲು ಕಾಮಗಾರಿ ಶಿವಾಜಿನಗರಕ್ಕೆ ಹೊಸ ಖದರ್‌!

Last Updated 8 ಡಿಸೆಂಬರ್ 2019, 20:45 IST
ಅಕ್ಷರ ಗಾತ್ರ

ಕ್ವೀನ್ಸ್ ರಸ್ತೆ, ಜಹಾಂಗೀರ್ ಕೊಠಾರಿ ಬಿಲ್ಡಿಂಗ್ ದಾಟಿ ದಂಡು ಮಾರಿಯಮ್ಮನ ದೇವಸ್ಥಾನ ಮುಂದಿನ ಸರ್ಕಲ್‌ ಬಂತು ಅಂದರೆ ಶಿವಾಜಿನಗರ ತಲುಪಿದೆವು ಎಂದರ್ಥ. ಇಲ್ಲಿನ ಬಸ್‌ ನಿಲ್ದಾಣಕ್ಕೆ ಹೊಂದಿಕೊಂಡಂತೆ ಇರುವ ಕಾರ್ಪೊರೇಷನ್‌ ಶಾಪಿಂಗ್‌ ಕಾಂಪ್ಲೆಕ್ಸ್‌, ರಸ್ತೆಯ ಇಕ್ಕೆಲಗಳಲ್ಲಿ ಅಂಗಡಿಗಳ ಸಾಲು. ಟೀ ಸ್ಟಾಲ್‌ನಿಂದ ಫರ್ನಿಚರ್‌ ಅಂಗಡಿಗಳವರೆಗೆ ಚಿಕ್ಕ ಬಜಾರ್‌ ಎಂದು ಕರೆಯಲ್ಪಡುವ ಈ ರಸ್ತೆಯಲ್ಲಿ ಎಲ್ಲ ವಿಧದ ವ್ಯಾಪಾರ ನಡೆಯುತ್ತಿತ್ತು. ಸದಾ ಜನನಿಬಿಡ ಪ್ರದೇಶ. ಇದೀಗ ಮೆಟ್ರೊ ಕಾಮಗಾರಿಯಿಂದ ಇದರ ಸ್ವರೂಪವೇ ಬದಲಾಗುತ್ತಿದೆ.

ಒಂದು ಕಾಲಕ್ಕೆ ಚಿಕ್ಕ ಬಜಾರ್‌ ರಸ್ತೆ ಭರ್ಜರಿ ವ್ಯಾಪಾರ ವಹಿವಾಟು ನಡೆಯುತ್ತಿದ್ದ ಪ್ರದೇಶ. ದಂಡು ಮಾರಿಯಮ್ಮನ ದೇವಸ್ಥಾನದಿಂದ ಕೆಳಗೆ ಶಿವಾಜಿ ರಸ್ತೆ ಇದೆ. ನೂರು ವರ್ಷಗಳ ಹಿಂದಿನ ಎಲ್ಜಿನ್‌ ಟಾಕೀಸ್‌ (ಈಗದು ಎಲ್ಜಿನ್‌ ಪ್ಯಾಲೇಸ್‌ ಹಾಲ್‌ ಆಗಿದೆ) ಕಟ್ಟಡ ಸೇರಿದಂತೆ ಉದ್ದಕ್ಕೂ ಇಲ್ಲಿ ಅಂಗಡಿಗಳಿವೆ. ದೇವಸ್ಥಾನದ ಎದುರಿಗಿನ ಕಿರಿದಾದ ಚಾಂದನಿ ಚೌಕ್‌ ರಸ್ತೆಯಿಂದ ಸಾಗಿದರೆ ಮೀನಾಕ್ಷಿ ಕೊವಿಲ್‌ ರಸ್ತೆ ಮತ್ತು ರಸೆಲ್‌ ಮಾರ್ಕೆಟ್‌ ಸೇರಬಹುದು. ಇದೀಗ ದೇವಸ್ಥಾನದ ಮುಂದಿನ ಜಾಗ ಮತ್ತು ಶಿವಾಜಿನಗರ ಬಸ್‌ ನಿಲ್ದಾಣಕ್ಕೆ ಹೊಂದಿಕೊಂಡ ಕಾರ್ಪೊರೇಷನ್‌ ಶಾಪಿಂಗ್‌ ಕಾಂಪ್ಲೆಕ್ಸ್‌ ನೆಲಸಮಗೊಂಡು ಅಲ್ಲಿ ಮೆಟ್ರೊ ರೈಲು ನಿಲ್ದಾಣ ಕಾಮಗಾರಿ ಭರದಿಂದ ಸಾಗುತ್ತಿದೆ.

ಕಳೆದ ಕೆಲ ದಿನಗಳ ಹಿಂದೆ ಇದ್ದ ಇಲ್ಲಿನ ಒಂದು ಪುಟ್ಟ ಜಗತ್ತನ್ನು ಜೆಸಿಬಿ ಯಂತ್ರಗಳು ಮುಕ್ಕಿವೆ. ಇಲ್ಲಿ ಬದುಕು ಕಟ್ಟಿಕೊಂಡಿದ್ದ ವ್ಯಾಪಾರಿ ಗಳಿಗೆ ತಾತ್ಕಾಲಿಕವಾಗಿ ಪಾರ್ಕ್‌ ರಸ್ತೆಯಲ್ಲಿ ರೂಪಿಸಿದ ಶಾಪಿಂಗ್‌ ಕಾಂಪ್ಲೆಕ್ಸ್‌ನಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಅಭಿವೃದ್ಧಿ ಇಲ್ಲಿನ ಹಲವರಿಗೆ ದೈತ್ಯವೆನಿಸಿದರೆ, ಹೊಸ ಕನಸಿನವರಿಗೆ ಇಲ್ಲೊಂದು ಮಾಯಾಲೋಕದ ನಿರೀಕ್ಷೆ.

ಮೆಟ್ರೊ ಕಾಮಗಾರಿ ಶುರುವಾಗಿ ತಿಂಗಳುಗಳೇ ಕಳೆದಿವೆ. ಕಾಂಪ್ಲೆಕ್ಸ್‌ ಹಿಂದಿನ ಜಾಗದಲ್ಲಿ ವಿಶಾಲ ಖಾಲಿ ಪ್ರದೇಶ ಇತ್ತು. ಇಲ್ಲಿ ಹಲವು ಸಾಮುದಾಯಿಕ ಕಾರ್ಯಕ್ರಮಗಳು ಆಯೋಜಿಸಲ್ಪಡುತ್ತಿದ್ದವು. ಸಾರ್ವಜನಿಕ ಸಭೆಗಳು, ಸಾಮಾಜಿಕ ಸಮಾರಂಭಗಳು, ಉರ್ದು ಮುಶಾಯರಾಗಳು ನಡೆಯುತ್ತಿದ್ದವು. ಇದು ಜನಸಮುದಾಯದ ಸೋಶಿಯಲ್‌ ಲೈಫ್‌ಗೆ ಒಂದು ಸ್ಪೇಸ್‌ನಂತಿತ್ತು.

‘ಹತ್ತಾರು ಅಂಗಡಿಗಳು ನೂರಾರು ವ್ಯಾಪಾರಿಗಳು ಮತ್ತು ಗಿರಾಕಿಗಳಿಂದ ತುಂಬಿ ತುಳುಕುತ್ತಿದ್ದ ಚಿಕ್ಕ ಬಜಾರ್‌ ರಸ್ತೆ ಹಲವರಿಗೆ ಬದುಕಿನ ಆಶ್ರಯವಾಗಿತ್ತು. ಈ ಮೆಟ್ರೊ ಕಾಮಗಾರಿಯಿಂದ ನಮ್ಮ ವ್ಯಾಪಾರ ಕುಸಿದು ಹೋದಂತಾಗಿದೆ. ಈ ರೈಲು ಬಂದಲ್ಲೆಲ್ಲ ಎಷ್ಟೋ ಸಣ್ಣ ವ್ಯಾಪಾರಿಗಳ ಬದುಕೇ ಮುಗಿದುಹೋಗುತ್ತಿದೆ. ಆದರೆ, ಬದಲಾವಣೆ ಯಾರಿಂದ ತಡೆಯೋಕಾಗುತ್ತೆ?’ ಎನ್ನುತ್ತಾರೆ ಶಿವಾಜಿನಗರ ಬಸ್‌ ನಿಲ್ದಾಣದ ಎದುರಿನ ರಾಮಾಂಜನೇಯ ದೇವಸ್ಥಾನದ ಕಾಂಪ್ಲೆಕ್ಸ್‌ ಅಂಗಡಿಯೊಂದರ ವ್ಯಾಪಾರಿ.

‘ಈ ಕಾರ್ಪೊರೇಷನ್‌ ಕಾಂಪ್ಲೆಕ್ಸ್‌ನಲ್ಲಿ ನಮ್ಮ ಫರ್ನಿಚರ್‌ ವ್ಯಾಪಾರ ಚೆನ್ನಾಗಿತ್ತು. ಬೆತ್ತದ ಪೀಠೋಪಕರಣಗಳು ಬೇಕು ಅಂದರೆ ಜನ ಹುಡುಕಿಕೊಂಡು ಬರುತ್ತಿದ್ದ ಪ್ರದೇಶ ಇದಾಗಿತ್ತು’ ಎಂದು ಗತವೈಭವವನ್ನು ಮೆಲುಕು ಹಾಕುತ್ತಾರೆ ಫರ್ನಿಚರ್‌ ಅಂಗಡಿಯ ಒಬ್ಬ ಕುಶಲಕರ್ಮಿ.

ಶಿವಾಜಿನಗರ ಬಸ್‌ ನಿಲ್ದಾಣದ ಪಾರ್ಕಿಂಗ್‌ ಕಾಂಪ್ಲೆಕ್ಸ್‌ನ ಎರಡನೇ ಮಹಡಿಯಿಂದ ನೋಡಿದರೆ ಮೆಟ್ರೊ ರೈಲು ನಿಲ್ದಾಣ ನಿರ್ಮಾಣಕ್ಕೆ ನೆಲ ಅಗೆಯುತ್ತಿರುವ ಕಾಮಗಾರಿಯ ಸಮಗ್ರ ಚಿತ್ರಣ ದಕ್ಕುತ್ತದೆ. ತುಂಬ ಆಳಕ್ಕೆ ಅಗೆದ ನೆಲದಿಂದ ಕೆಂಪು ಮಣ್ಣು ಗುಡ್ಡೆ, ಅಲ್ಲಲ್ಲಿ ತೂರಿದಂತಿರುವ ಬೃಹತ್‌ ಕಬ್ಬಿಣದ ಕಂಬಗಳು, ಹಗಲು ರಾತ್ರಿಯಿಡಿ ಜೆಸಿಬಿ ಮತ್ತು ನೆಲದೊಳಗೆ ಬಂಡೆಗಳನ್ನು ಕೊರೆಯುವ ಬೃಹತ್‌ ಮಶೀನ್‌ಗಳ ಭರಾಟೆ ಕಾಣಿಸುತ್ತದೆ. ಇಡೀ ವಾತಾವರಣ ಯಾವುದೋ ಹೊಸ ಲೋಕ ಸೃಷ್ಟಿಗೆ ಮನುಷ್ಯನ ಯತ್ನವನ್ನು ಕಟ್ಟಿಕೊಡುವಂತಿದೆ. ಮತ್ತೊಂದೆಡೆ ಈಗಾಗಲೇ ಇದ್ದ ಕೆಲವರ ಬದುಕಿನ ನೆಮ್ಮದಿಯನ್ನು ಕಿತ್ತುಕೊಂಡಂತೆಯೂ ಅನಿಸುತ್ತದೆ.

‘ಈಗಿರುವುದಾಗಲಿ ಮತ್ತು ನಾಳೆಯ ಕನಸಿಗಾಗಿ ನಿರ್ಮಾಣಗೊಳ್ಳುತ್ತಿರುವುದಾಗಲಿ ಯಾವುದೂ ಶಾಶ್ವತವಲ್ಲ. ಹಬ್ಬುತ್ತಿರುವ ನಗರದಲ್ಲಿ ಏರುತ್ತಲೇ ಇರುವ ಜನಸಂಖ್ಯೆ ಮತ್ತು ವಾಹನಗಳ ದಟ್ಟಣೆ ಗಮನಿಸಿದರೆ ಮೆಟ್ರೊ ರೈಲು ಕಾಮಗಾರಿಯಂಥ ಕ್ರಮದ ಅನಿವಾರ್ಯತೆ ಮನದಟ್ಟಾಗುತ್ತದೆ. ಶಿವಾಜಿನಗರದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ಮೆಟ್ರೊ ಮೂಲಕ ಸಂಪರ್ಕ ಸಿಗುತ್ತದೆ. ಈತನಕ ಈ ಮಾರ್ಗದಲ್ಲಿ ಏಕೈಕ ಸಂಪರ್ಕ ಸಾಧನದಂತಿದ್ದ ಬಿಎಂಟಿಸಿಗೆ ಒಂದಷ್ಟು ಹೊರೆ ಕಮ್ಮಿಯಾಗುತ್ತದಲ್ಲ..’ ಎನ್ನುತ್ತಾರೆ ರಾಮಾಂಜನೇಯ ದೇವಸ್ಥಾನ ಕಾಂಪ್ಲೆಕ್ಸ್‌ನ ಬ್ರೈಟ್‌ ಟೀ ಅಂಗಡಿಯ ಮ್ಯಾನೇಜರ್‌.

‘ಇನ್ನು ಕೆಲವೇ ವರ್ಷಗಳಲ್ಲಿ ಶಿವಾಜಿನಗರಕ್ಕೂ ಮೆಟ್ರೊ ಬರುವುದನ್ನು ಕಾತರದಿಂದ ಕಾಯುತ್ತಿ ರುವ ಹಲವರಿದ್ದಾರೆ. ಶಿವಾಜಿನಗರದ ಬೃಹತ್‌ ಬಸ್‌ ನಿಲ್ದಾಣ, ಪಕ್ಕದಲ್ಲಿಯೇ ಅಷ್ಟೇ ಬೃಹತ್‌ ಮೆಟ್ರೊ ರೈಲು ನಿಲ್ದಾಣ ಇಡೀ ಪ್ರದೇಶದ ಖದರನ್ನೇ ಬದಲಾಯಿಸುತ್ತದೆ. ಇನ್ನು ಇಲ್ಲಿನ ವ್ಯಾಪಾರ ವಹಿವಾಟು, ಶಾಪಿಂಗ್‌ ಏರಿಯಾಗಳ ನಿರ್ಮಾಣದ ಭರಾಟೆ ಬೇರೆಯದೇ ಸ್ವರೂಪದಲ್ಲಿರುತ್ತದೆ. ಶೋರೂಂ, ಸೂಪರ್‌ಮಾರ್ಕೆಟ್‌, ಮಾಲ್‌ ಇತ್ಯಾದಿ ವಿಭಿನ್ನ ಸ್ವರೂಪದ ಹೊಸ ಲೋಕವೇ ಸೃಷ್ಟಿಯಾಗಬಹುದು ಎಂಬ ನಿರೀಕ್ಷೆ ಎಲ್ಲರದು’ ಎನ್ನುತ್ತಾರೆ ಶಿವಾಜಿನಗರದ ಯುವಕ ರೆಹಮತ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT