ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಚುನಾವಣೆ ಕನಿಷ್ಠ 8 ತಿಂಗಳು ಮುಂದಕ್ಕೆ?

ಮತ್ತೆ ಮರುವಿಂಗಡಣೆ, ಮತದಾರರ ಪಟ್ಟಿ ಪರಿಷ್ಕರಣೆಗೆ ಬೇಕಿದೆ ಕಾಲಾವಕಾಶ
Last Updated 6 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಲು ಸರ್ಕಾರ ಮುಂದಾಗಿದೆ. ಈ ನಿರ್ಧಾರ ಜಾರಿಯಾಗಿದ್ದೇ ಆದಲ್ಲಿ ಬಿಬಿಎಂಪಿ ಚುನಾವಣೆ ಏನಿಲ್ಲವೆಂದರೂ ಕನಿಷ್ಠ 8 ತಿಂಗಳು ಮುಂದಕ್ಕೆ ಹೋಗಲಿದೆ.

2011ರ ಜನಗಣತಿ ಪ್ರಕಾರ ವಾರ್ಡ್‌ಗಳನ್ನು ಮರುವಿಂಗಡಣೆ ಮಾಡಿ ಸರ್ಕಾರ ಮಾ.2ರಂದು ಕರಡು ಅಧಿಸೂಚನೆ ಪ್ರಕಟಿಸಿತ್ತು. 2020ರ ಜೂನ್‌ 23ರಂದು ಅಂತಿಮ ಅಧಿಸೂಚನೆ ಹೊರಡಿಸಿತ್ತು. ಇದಾಗಿ ಮೂರು ತಿಂಗಳಲ್ಲೇ ಮತ್ತೆ ವಾರ್ಡ್‌ ಸಂಖ್ಯೆ ಹೆಚ್ಚಿಸಲು ಸರ್ಕಾರ ನಿರ್ಣಯ ಕೈಗೊಂಡಿದೆ. ಈ ಸಲುವಾಗಿಯೇ 1976ರ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತಂದು ವಾರ್ಡ್‌ಗಳ ಸಂಖ್ಯೆಯನ್ನು ಗರಿಷ್ಠ 250ಕ್ಕೆ ಹೆಚ್ಚಿಸಲು ಅವಕಾಶ ಕಲ್ಪಿಸಿದೆ. ಈ ಕುರಿತು ಅ.3ರಂದು ರಾಜ್ಯಪತ್ರದಲ್ಲಿ ಅಧಿಸೂಚನೆಯೂ ಪ್ರಕಟವಾಗಿದೆ.

ವಾರ್ಡ್ ಮರುವಿಂಗಡಣೆಯಾದ ಬಳಿಕ 198 ವಾರ್ಡ್‌ಗಳಲ್ಲಿ 188 ವಾರ್ಡ್‌ಗಳ ಮತದಾರರ ಪಟ್ಟಿಯನ್ನು ಪರಿಷ್ಕರಿಸಲಾಗುತ್ತಿದೆ. 2020ರ ಫೆ.7ರಂದು ಪ್ರಕಟಿಸಿರುವ ಮತದಾರರ ಪಟ್ಟಿಯ ಆಧಾರದಲ್ಲಿ ರೂಪಿಸುತ್ತಿರುವ ಪರಿಷ್ಕೃತ ಪಟ್ಟಿಯ ಕರಡನ್ನು ಅ.19ರಂದು ಪ್ರಕಟಿಸಲು ಪಾಲಿಕೆ ತಯಾರಿ ನಡೆಸಿದೆ. ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿ ನ. 30ರ ಒಳಗೆ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಬೇಕಿದೆ. ಮತ್ತೆ ವಾರ್ಡ್‌ ಮರುವಿಂಗಡಣೆ ಮಾಡಿದರೆ ಇದುವರೆಗೆ ಬಿಬಿಎಂಪಿ ಅಧಿಕಾರಿಗಳು ಪಟ್ಟಿರುವ ಶ್ರಮ ವ್ಯರ್ಥವಾಗಲಿದೆ.

ಮರುವಿಂಗಡಣೆ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಮತ್ತೆ ನಡೆಸುವುದಿದ್ದರೆ ಈ ಅದಕ್ಕೆ ಏನಿಲ್ಲವೆಂದರೂ ಆರು ತಿಂಗಳು ಕಾಲಾವಕಾಶ ಬೇಕು. ಅದಾಗಿ ನಂತರ ಚುನಾವಣೆ ನಡೆಸಲು ಮತ್ತೆರಡು ತಿಂಗಳು ಬೇಕು ಎಂದು ಹಿರಿಯ ಐಎಎಸ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಸ್ತುತ ಪ್ರತಿ ವಾರ್ಡ್‌ನಲ್ಲಿ ಸರಾಸರಿ 42,645 ಜನಸಂಖ್ಯೆ ಹೊಂದುವ ಮಾನದಂಡದ ಪ್ರಕಾರ ಮರುವಿಂಗಡಣೆ ಪ್ರಕ್ರಿಯೆ ನಡೆಸಲಾಗಿದೆ. ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಿದರೆ ಪ್ರತಿ ವಾರ್ಡ್‌ಗೆ 35ಸಾವಿರ ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಅವುಗಳನ್ನು ಮರುರೂಪಿಸಬೇಕು. ಅಂದರೆ ಹೆಚ್ಚೂ ಕಡಿಮೆ ಎಲ್ಲ ವಾರ್ಡ್‌ಗಳ ಪರಿಮಿತಿ ಹಾಗೂ ಜನಸಂಖ್ಯೆಯಲ್ಲಿ ವ್ಯತ್ಯಯವಾಗಲಿದೆ. ಅಷ್ಟೂ ವಾರ್ಡ್‌ಗಳ ಮತದಾರರ ಪಟ್ಟಿಯನ್ನು ಮಾರ್ಪಾಡು ಮಾಡಬೇಕು’ ಎಂದು ಅವರು ವಿವರಿಸಿದರು.

‘ವಾರ್ಡ್‌ ಮರುವಿಂಗಡಣೆಯ ಕರಡನ್ನು ಪ್ರಕಟಿಸಿ, ಸಾರ್ವಜನಿಕರಿಂದ ಸಲಹೆ ಹಾಗೂ ಆಕ್ಷೇಪಣೆಗಳನ್ನು ಆಹ್ವಾನಿಸಬೇಕು. ಇದಕ್ಕೆ ಏನಿಲ್ಲವೆಂದರೂ 30 ದಿನ ಕಾಲಾವಕಾಶ ನೀಡಬೇಕು. ವಾರ್ಡ್‌ಗಳ ಮತದಾರರ ಪಟ್ಟಿ ಪರಿಷ್ಕರಿಸಿದ ಬಳಿಕ ಅದರ ಕರಡನ್ನು ಪ್ರಕಟಿಸಿ ಅದಕ್ಕೂ ಸಲಹೆ ಅಥವಾ ಆಕ್ಷೇಪಣೆ ಸಲ್ಲಿಸಲು ಕನಿಷ್ಠ 30 ದಿನಗಳ ಕಾಲಾವಕಾಶ ನೀಡಬೇಕು. ನಂತರವಷ್ಟೇ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಬಹುದು’ ಎಂದು ಅವರು ತಿಳಿಸಿದರು.

‘ಬಿಬಿಎಂಪಿಯ ವ್ಯಾಪ್ತಿಯನ್ನು ಈಗಿರುವಷ್ಟೇ ಉಳಿಸಿಕೊಂಡು ವಾರ್ಡ್‌ಗಳ ಸಂಖ್ಯೆ ಹೆಚ್ಚಿಸುವುದಕ್ಕೆ ಕಡಿಮೆ ಸಮಯ ಸಾಕು. ಆದರೆ, ಪಾಲಿಕೆಗೆ ಹೊರವಲಯದ ಹೊಸ ಪ್ರದೇಶಗಳನ್ನು ಸೇರ್ಪಡೆಗೊಳಿಸುವುದಾದರೆ ಈ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಲಿದೆ’ ಎಂದು ಅವರು ಹೇಳಿದರು.

ಹೈಕೋರ್ಟ್‌ ಅಂಗಳದಲ್ಲಿ ಪಾಲಿಕೆ ಚುನಾವಣಾ ಭವಿಷ್ಯ

ಬಿಬಿಎಂಪಿ ಚುನಾವಣೆ ವಿಳಂಬವಾಗಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಅ.12ರಂದು ನಡೆಯಲಿದೆ.

ಈಗ ಸಿದ್ಧಪಡಿಸುತ್ತಿರುವ ಮತದಾರರ ಪಟ್ಟಿಯ ಪ್ರಕಾರವೇ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗವು ಹೈಕೋರ್ಟ್‌ಗೆ ಕೋರಿಕೆ ಸಲ್ಲಿಸಬಹುದು. ವಾರ್ಡ್‌ಗಳನ್ನು ಮತ್ತೆ ಮರುವಿಂಗಡಣೆಗೆ ಮಾಡಲು ನಿರ್ಧರಿಸಿರುವುದರಿಂದ ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕವೇ ಚುನಾವಣೆ ನಡೆಸುವಂತೆ ಸರ್ಕಾರ ಕೋರಸಬಹುದು. ಈ ಕುರಿತು ಹೈಕೋರ್ಟ್‌ ನೀಡುವ ತೀರ್ಮಾನವೇ ಅಂತಿಮವಾಗಲಿದೆ.

‘ಸಂವಿಧಾನಕ್ಕೆ 74ನೇ ತಿದ್ದುಪಡಿ ಜಾರಿಗೆ ತಂದ ಬಳಿಕ ಯಾವುದೇ ಕೌನ್ಸಿಲ್‌ ವಿಸರ್ಜನೆಗೊಂಡ ಆರು ತಿಂಗಳ ಒಳಗೆ ಹೊಸ ಚುನಾಯಿತ ಕೌನ್ಸಿಲ್‌ ಅಧಿಕಾರಕ್ಕೆ ಬರಲೇಬೇಕು. ಇದೇ ಅಂಶವನ್ನು ಮುಂದಿಟ್ಟುಕೊಂಡು ಹೈಕೋರ್ಟ್‌ ಈಗ ಸಿದ್ಧಪಡಿಸುತ್ತಿರುವ ಮತದಾರರ ಪಟ್ಟಿಯ ಪ್ರಕಾರವೇ ಚುನಾವಣೆ ನಡೆಸಲು ಸೂಚಿಸುವ ಸಾಧ್ಯತೆ ಹೆಚ್ಚು. ಈ ಹಿಂದೆಯೂ ಹೈಕೋರ್ಟ್‌ ತ್ವರಿತವಾಗಿ ಚುನಾವಣೆ ನಡೆಸಲು ಆದೇಶ ಮಾಡಿರುವ ಉದಾಹರಣೆಗಳಿವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ವಾರ್ಡ್‌ ಮರುವಿಂಗಡಣೆ ವಿಚಾರದಲ್ಲಿ ಸರ್ಕಾರದ ತೀರ್ಮಾನವೇ ಅಂತಿಮ. ಹಾಗಾಗಿ ಮತ್ತೆ ಮರುವಿಂಗಡಣೆ ನಡೆಸಲು ಹೈಕೋರ್ಟ್‌ ಅವಕಾಶ ಕಲ್ಪಿಸುವ ಸಾಧ್ಯತೆ ಹೆಚ್ಚು. ಒಂದು ವೇಳೆ ಈಗಾಗಲೇ ನಡೆಸಿರುವ ಮರುವಿಂಗಡಣೆಯ ಆಧಾರದಲ್ಲೇ ಚುನಾವಣೆ ನಡೆಸುವಂತೆ ಹೈಕೋರ್ಟ್‌ ಆದೇಶ ಮಾಡಿದರೂ, ಆ ಚುನಾಯಿತ ಕೌನ್ಸಿಲನ್ನು ವಿಸರ್ಜಿಸಿ, ಮತ್ತೆ ಮರುವಿಂಗಡಣೆ ಮಾಡುವ ಅಧಿಕಾರ ಸರ್ಕಾರಕ್ಕಿದೆ’ ಎಂದು ಇನ್ನೊಬ್ಬ ಅಧಿಕಾರಿ ಅಭಿಪ್ರಾಯಪಟ್ಟರು.

ಬಿಬಿಎಂಪಿ ವ್ಯಾಪ್ತಿ ಹೆಚ್ಚಳ ಇಲ್ಲ: ರಘು

‘ಬಿಬಿಎಂಪಿಯ ವ್ಯಾಪ್ತಿಯನ್ನು ಹೆಚ್ಚಿಸುವಂತೆ ಅನೇಕ ಶಾಸಕರು ಒತ್ತಾಯಿಸುತ್ತಿದ್ದಾರೆ. ಬಿಬಿಎಂಪಿಗೆ ದಶಕದ ಹಿಂದೆ ಹೊಸತಾಗಿ ಸೇರ್ಪಡೆಗಿಂಡ 110 ಹಳ್ಳಿಗಳಿಗೆ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ಹಾಗಾಗಿ ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಿದರೂ ಬಿಬಿಎಂಪಿಯ ವ್ಯಾಪ್ತಿಯನ್ನು ಹೆಚ್ಚಿಸುವುದಿಲ್ಲ. ಹೊಸ ಗ್ರಾಮಗಳನ್ನು ಸೇರಿಸುವುದಿಲ್ಲ. ಇದಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೂ ಒಪ್ಪಿದ್ದಾರೆ’ ಎಂದು ಬಿಬಿಎಂಪಿ ಮಸೂದೆಯ ಪರಿಶೀಲನೆಗಾಗಿ ರಚಿಸಿದ್ದ ಜಂಟಿ ಸಲಹಾ ಸಮಿತಿ ಅಧ್ಯಕ್ಷ ಎಸ್‌.ರಘು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT