ಬುಧವಾರ, ಜುಲೈ 28, 2021
28 °C
ಪರಿಶಿಷ್ಟರ ಮೀಸಲು ಹಣದಲ್ಲಿ ಕಾಮಗಾರಿ ಮಾಡಿಸದ 73 ಶಾಸಕರು, 36 ಪರಿಷತ್ ಸದಸ್ಯರು

ಶಾಸಕರ ನಿಧಿ: ₹ 668.93 ಕೋಟಿ ಉಳಿಕೆ

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 2019–20ನೇ ಸಾಲಿನಲ್ಲಿ ಕೇವಲ ಶೇ 48 ರಷ್ಟು ಅನುದಾನ ಮಾತ್ರ ಖರ್ಚು ಮಾಡಲಾಗಿದ್ದು, ಉಳಿದ ₹668.93 ಕೋಟಿ ಬಳಕೆ ಮಾಡದ ಕಾರಣ ಆ ಮೊತ್ತ ಜಿಲ್ಲಾಧಿಕಾರಿಗಳ ಪಿ.ಡಿ (ವೈಯಕ್ತಿಕ ಠೇವಣಿ) ಖಾತೆಯಲ್ಲೇ ಉಳಿದಿದೆ!

ಅಲ್ಲದೆ, ಈ ಸಾಲಿನಲ್ಲಿ ಈ ಯೋಜನೆಯಡಿ ವಿಶೇಷ ಘಟಕ ಯೋಜನೆ (ಎಸ್‌ಸಿಪಿ) ಮತ್ತು ಗಿರಿಜನ ಉಪ ಯೋಜನೆ (ಟಿಎಸ್‌ಪಿ) ಅಡಿ 11 ಜಿಲ್ಲೆಗಳಲ್ಲಿ 73 ವಿಧಾನಸಭಾ ಕ್ಷೇತ್ರಗಳ ಶಾಸಕರು ಮತ್ತು 16 ಜಿಲ್ಲೆಗಳಲ್ಲಿ 36 ವಿಧಾನಪರಿಷತ್‌ ಸದಸ್ಯರು ಯಾವುದೇ ಕಾಮಗಾರಿ ಕೈಗೊಂಡಿಲ್ಲ. ಇದು ‘ಪರಿಶಿಷ್ಟ ಜಾತಿಗಳ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ ಕಾಯ್ದೆ–2013’ರ ಉಲ್ಲಂಘನೆಯಾಗಿದೆ.

ಈ ಕುರಿತು ಎಲ್ಲ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡಿರುವ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌, ‘ಎಸ್‌ಸಿಪಿ, ಟಿಎಸ್‌ಪಿ ಅಡಿ ತಪ್ಪದೆ ಕಾಮಗಾರಿಗಳನ್ನು ಕೈಗೊಳ್ಳಬೇಕು. ಅಲ್ಲದೆ, 2020–21 ಸಾಲಿನಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಎಲ್ಲ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಗತಿ ಸಾಧಿಸಬೇಕು’ ಎಂದು ಸೂಚಿಸಿದ್ದಾರೆ.

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಗೆ ಸರ್ಕಾರ ವಾರ್ಷಿಕ ₹ 2 ಕೋಟಿ ಬಿಡುಗಡೆ ಮಾಡುತ್ತದೆ. ತಮ್ಮ ಪಾಲಿನ ನಿಧಿ ಬಿಡುಗಡೆ ಆಗಿಲ್ಲ ಎಂದು ವಿಧಾನಮಂಡಲದ ಅಧಿವೇಶನಗಳಲ್ಲಿ ಪಕ್ಷಾತೀತವಾಗಿ ಆಕ್ರೋಶ ವ್ಯಕ್ತಪಡಿಸುವ ಶಾಸಕರು, ಅದನ್ನು ವಿನಿಯೋಗಿಸು
ವಲ್ಲಿ ತೋರಿಸುತ್ತಿರುವ ನಿರ್ಲಕ್ಷ್ಯಕ್ಕೆ ಈ ಅಂಕಿಅಂಶಗಳು ಕನ್ನಡಿ ಹಿಡಿಯುತ್ತವೆ.

‘ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಕಾಮಗಾರಿಗಳನ್ನು ಜಿಲ್ಲಾಧಿಕಾರಿಗಳಿಂದ ಉಪ ವಿಭಾಗಾಧಿಕಾರಿಗಳಿಗೆ ವರ್ಗಾಯಿಸಿ 2020 ಜ.30ರಂದು ಆದೇಶ ಹೊರಡಿಸಲಾಗಿದೆ. ಹೀಗಾಗಿ, ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಯಲ್ಲಿರುವ ವಿಧಾನಸಭಾ ಸದಸ್ಯರ ಅನುದಾನವನ್ನು ಕಾಮಗಾರಿಗಳಿಗೆ ಅನುಗುಣವಾಗಿ ಉಪ ವಿಭಾಗಾಧಿಕಾರಿಗಳಿಗೆ ವಿಂಗಡಿಸಿ ವರ್ಗಾಯಿಸಬೇಕು. ಆದರೆ, ವಿಧಾನಪರಿಷತ್‌ ಸದಸ್ಯರ ಕಾಮಗಾರಿಗಳನ್ನು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (ಎಂಪಿ ಲ್ಯಾಡ್ಸ್‌) ಜೊತೆಗೆ ಜಿಲ್ಲಾಧಿಕಾರಿಗಳೇ ನಿರ್ವಹಿಸಬೇಕು’ ಎಂದೂ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು