ಬೆಂಗಳೂರು: ಯಲಹಂಕ ತಾಲ್ಲೂಕಿನ ಹೆಸರಘಟ್ಟ ಮತ್ತು ಯಲಹಂಕ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿರುವ 731 ಕಂದಾಯ ನಿವೇಶನಗಳನ್ನು ಗ್ರಾಮ
ಪಂಚಾಯಿತಿಯ ಇ–ಸ್ವತ್ತು ದಾಖಲೆ ಇಲ್ಲದೇ ಕಾಚರಕನಹಳ್ಳಿ ಉಪ ನೋಂದಣಿ ಕಚೇರಿಯಲ್ಲಿ ಅಕ್ರಮವಾಗಿ ನೋಂದಣಿ ಮಾಡಿರುವುದು ಪತ್ತೆಯಾಗಿದೆ.
ಕಾಚರಕನಹಳ್ಳಿ ಉಪ ನೋಂದಣಿ ಕಚೇರಿಯಲ್ಲಿ ಅಕ್ರಮವಾಗಿ ನಿವೇಶನಗಳ ನೋಂದಣಿ ನಡೆಸುತ್ತಿರುವ ಆರೋಪ ಕುರಿತು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಗಾಂಧಿನಗರ ಜಿಲ್ಲಾ ನೋಂದಣಾಧಿಕಾರಿ ಎ.ಎನ್. ಭಾರತಿ ತನಿಖೆ ನಡೆಸಿದ್ದರು. ‘ಉಪ ನೋಂದಣಾ
ಧಿಕಾರಿಗಳಾದ ರೂಪಾ ಮತ್ತು ರಾಘವೇಂದ್ರ ಒಡೆಯರ್ ಕಂದಾಯ ನಿವೇಶನಗಳ ನೋಂದಣಿಯಲ್ಲಿ ಕಾನೂನು ಉಲ್ಲಂಘಿಸಿರುವುದು ಪತ್ತೆಯಾಗಿದೆ’ ಎಂದು ಇಲಾಖೆಯ ಆಯುಕ್ತರಿಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದ್ದಾರೆ.
ಗ್ರಾಮ ಠಾಣಾ ವ್ಯಾಪ್ತಿಯಲ್ಲಿರುವ ಕಂದಾಯ ನಿವೇಶನಗಳನ್ನು ನೋಂದಣಿ
ಮಾಡುವಾಗ ಗ್ರಾಮ ಪಂಚಾಯಿತಿಯಿಂದ ನಮೂನೆ–9 ಮತ್ತು ನಮೂನೆ– 11–ಎ ಅಥವಾ 11–ಬಿ ಪಡೆಯುವುದನ್ನು ಕಡ್ಡಾಯಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 2013 ಹಾಗೂ 2014ರಲ್ಲಿ ಆದೇಶ ಹೊರಡಿಸಿತ್ತು. ಇ–ಸ್ವತ್ತು (ನಮೂನೆ–9, ನಮೂನೆ– 11–ಎ ಅಥವಾ 11–ಬಿ) ದಾಖಲೆಗಳಿಲ್ಲದೇ ಗ್ರಾಮ ಠಾಣಾ ನಿವೇಶನಗಳ ನೋಂದಣಿ ಮಾಡುವಂತಿಲ್ಲ.
‘ಕಾಚರಕನಹಳ್ಳಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ, 2021ರ ಜೂನ್ 28ರಿಂದ ಜುಲೈ 5ರ ಅವಧಿ
ಯಲ್ಲಿ 731 ಕಂದಾಯ ನಿವೇಶನಗಳನ್ನು ಗ್ರಾಮ ಪಂಚಾಯಿತಿಗಳಿಂದ ಪಡೆದ ಇ–ಸ್ವತ್ತು ದಾಖಲೆ ಇಲ್ಲದೇ ನೋಂದಣಿ ಮಾಡಲಾಗಿದೆ. ಈ ಎಲ್ಲ ನೋಂದಣಿಗಳು ಅಕ್ರಮ’ ಎಂದು ಜಿಲ್ಲಾ ನೋಂದಣಾಧಿಕಾರಿ ತನಿಖಾ ವರದಿಯಲ್ಲಿ ತಿಳಿಸಿದ್ದಾರೆ.
ಇದೇ ಕಚೇರಿಯಲ್ಲಿ 2021ರ ಮಾರ್ಚ್ 1ರಿಂದ ಜೂನ್ 21ರವರೆಗಿನ ಅವಧಿಯಲ್ಲಿ 18 ಸಂಖ್ಯೆಗಳುಳ್ಳ ಇ–ಖಾತಾ ಇಲ್ಲದೇ 256 ಆಸ್ತಿಗಳನ್ನು ನೋಂದಣಿ ಮಾಡಿರುವುದು ಕಂಡು
ಬಂದಿದೆ. ಈ ಎಲ್ಲ ನೋಂದಣಿಗಳನ್ನೂ ಅಮಾನತಿನಲ್ಲಿಡಲಾಗಿದೆ. ಸಾರ್ವಜನಿಕರಿಂದ ಬಂದ ದೂರನ್ನು ಆಧರಿಸಿ ತನಿಖೆ ನಡೆಸಿದಾಗ ಈ ಎಲ್ಲ ಅಕ್ರಮಗಳೂ ಪತ್ತೆಯಾಗಿವೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
‘ಇಬ್ಬರೂ ಅಧಿಕಾರಿಗಳು ನಿಯಮಉಲ್ಲಂಘಿಸಿ ಕಂದಾಯ ನಿವೇಶನಗಳ
ನೋಂದಣಿ ಮಾಡಿರುವುದು ಪತ್ತೆಯಾಗಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಸರ್ಕಾರಕ್ಕೆ ಯಾವುದೇ ನಷ್ಟವಾಗಿಲ್ಲ’ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ನಿಯಮ ಉಲ್ಲಂಘನೆ ಆರೋಪದ ಮೇಲೆ ಇಬ್ಬರ ವಿರುದ್ಧವೂ ಕ್ರಮಕ್ಕೆ ಶಿಫಾರಸು ಮಾಡಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.