ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಆರೈಕೆಗೆ ಬೆಂಗಳೂರು ಜನತೆ ಒಲವು

Last Updated 24 ಜುಲೈ 2020, 20:02 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಮಸ್ಯೆ ಉಂಟಾಗಲಿದೆ ಎಂಬ ಕಾರಣಕ್ಕೆ ಕೋವಿಡ್‌ ರೋಗಿಗಳ ಮನೆ ಆರೈಕೆಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಇದರಿಂದಾಗಿ ನಗರದ ಜನತೆ ಮನೆ ಆರೈಕೆಗೆ ಆದ್ಯತೆ ನೀಡುತ್ತಿದ್ದು, 10,319 ಮಂದಿ ಮನೆಯಲ್ಲಿಯೇ ಅಗತ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಗರದಲ್ಲಿ ನಾಲ್ಕನೇ ಹಂತದ ಲಾಕ್‌ಡೌನ್ ಅಂತ್ಯವಾಗುವ ವೇಳೆ 3,221 ಪ್ರಕರಣಗಳು ವರದಿಯಾಗಿದ್ದವು. ಲಾಕ್ ಡೌನ್ ಸಡಿಲಿಸಿದ ಬಳಿಕ ಸೋಂಕಿತರ ಸಂಖ್ಯೆ ಏಕಾಏಕಿ ಹೆಚ್ಚಳವಾಯಿತು. ಇದರಿಂದಾಗಿ ಕೋವಿಡ್ ಆಸ್ಪತ್ರೆಗಳಾದ ವಿಕ್ಟೋರಿಯಾ ಹಾಗೂ ಬೌರಿಂಗ್‌ನಲ್ಲಿ ಬಹುತೇಕ ಹಾಸಿಗೆಗಳು ಭರ್ತಿಯಾಗಿದ್ದವು. ಉಳಿದ ಸರ್ಕಾರಿ ಆಸ್ಪತ್ರೆಗಳಲ್ಲೂ ಹಾಸಿಗೆಗಳ ಸಮಸ್ಯೆ ಉಂಟಾಗಿತ್ತು. ಮನೆ ಆರೈಕೆಗೆ ಅವಕಾಶ ಮಾಡಿಕೊಟ್ಟ ಬಳಿಕ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆಯಾಗಿದೆ.

ಸದ್ಯ ಚಿಕಿತ್ಸೆ ಪಡೆಯುತ್ತಿರುವ ಬಹುತೇಕ ಕೋವಿಡ್ ಪೀಡಿತರಲ್ಲಿ ಸೋಂಕಿನ ಲಕ್ಷಣಗಳು ಬಹಿರಂಗವಾಗಿ ಗೋಚರಿಸುತ್ತಿಲ್ಲ. ಸಕ್ರಿಯ ಪ್ರಕರಣಗಳಲ್ಲಿ 20,370 ಮಂದಿ 50 ವರ್ಷದೊಳಗಿನವರು. ಸೋಂಕು ಲಕ್ಷಣಗಳು ಅಷ್ಟಾಗಿ ಗೋಚರಿಸದ ಹಾಗೂ ಬೇರೆ ಯಾವುದೇ ಕಾಯಿಲೆ ಇಲ್ಲದವರು ಮನೆ ಆರೈಕೆಗೆ ಒಳಗಾಗಿದ್ದಾರೆ. ಮನೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲದಿದ್ದಲ್ಲಿ ಸ್ವಯಂ ಪ್ರೇರಿತರಾಗಿ ಕೋವಿಡ್ ಆರೈಕೆ ಕೇಂದ್ರಗಳಿಗೆ ತೆರಳಿ, ದಾಖಲಾಗಲು ಅವಕಾಶ ನೀಡಲಾಗಿದೆ. ಸೋಂಕು ಲಕ್ಷಣಗಳು ಅಷ್ಟಾಗಿ ಗೋಚರಿಸದ 2,452 ಮಂದಿ ಕೋವಿಡ್‌ ಆರೈಕೆ ಕೇಂದ್ರಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ವೆಚ್ಚಕ್ಕೆ ಕಡಿವಾಣ: ಮನೆ ಆರೈಕೆಗೆ ಅವಕಾಶ ಕಲ್ಪಿಸಿದ ಪರಿಣಾಮ ಸರ್ಕಾರದ ಬೊಕ್ಕಸಕ್ಕೆ ಕೂಡ ಹೊರೆ ಇಳಿಕೆಯಾಗಿದೆ. ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯ ಫಲಾನುಭವಿಗಳು ಖಾಸಗಿ ಆಸ್ಪತ್ರೆಗೆ ದಾಖಲಾದಲ್ಲಿ ಸರ್ಕಾರವೇ ದಿನಕ್ಕೆ
₹ 5,200 ಪಾವತಿಸಬೇಕಾಗಿತ್ತು. ವೈದ್ಯರು, ಶುಶ್ರೂಷಕರು ಹಾಗೂ ಆರೋಗ್ಯ ಸಿಬ್ಬಂದಿಯ ಮೇಲಿನ ಒತ್ತಡ ಕೂಡ ಇಳಿಕೆಯಾಗಿದೆ.

‘ಮನೆಯಲ್ಲಿ ಸೂಕ್ತ ವ್ಯವಸ್ಥೆಯಿದ್ದಲ್ಲಿ ಮನೆ ಆರೈಕೆಗೆ ಒಳಗಾಗುವುದು ಉತ್ತಮ. ಸೋಂಕು ದುರ್ಬಲವಾಗುತ್ತಿದೆ. ಇದರಿಂದಾಗಿ ರೋಗಿಗಳಲ್ಲಿ ಉಸಿರಾಟದ ಸಮಸ್ಯೆ ಹಾಗೂ ಜ್ವರ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಮುಂದಿನ ದಿನಗಳಲ್ಲಿ ಸಾವಿನ ಪ್ರಮಾಣ ಕೂಡ ಕಡಿಮೆ ಆಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಮನೆ ಆರೈಕೆಗೆ ಒಳಪಡುತ್ತಿರುವ ಪರಿಣಾಮ ಗಂಭೀರವಾಗಿ ಅಸ್ವಸ್ಥರಾದ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ಒದಗಿಸಲು ಸಾಧ್ಯವಾಗುತ್ತಿದೆ’‌ ಎಂದು ಬೆಂಗಳೂರು ನಗರ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಅನ್ಸರ್ ಅಹಮದ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT